ಮಂಗಳವಾರ, ಮೇ 18, 2021
31 °C

ಮುದನೂರಿನಲ್ಲಿ ಕಾಣದ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಭಾವಿ: ಆದ್ಯ ವಚನಕಾರ ದೇವರ ದಾಸಿಮಯ್ಯನವರ ಸಹಸ್ರಮಾನೋತ್ಸವ ಸಮಾರಂಭದಿಂದಾಗಿ ರಾಜ್ಯದ ಗಮನ ಸೆಳೆದ ಸಮೀಪದ ಮುದನೂರು ಗ್ರಾಮದಲ್ಲಿ ಸುಧಾರಣೆ ಗಾಳಿ ಇನ್ನೂ ಬೀಸುತ್ತಿಲ್ಲ. ಆದ್ಯ ವಚನಕಾರನ ಸ್ಮರಣೆಗಾಗಿ ಸರ್ಕಾರವೇ ಮುಂದೆ ನಿಂತು ಸಹಸ್ರಮಾನೋತ್ಸವ ಆಚರಿಸಿತು. ಆದರೆ ಆಚರಣೆ ಮುಗಿದ ಮೇಲೆ, ಮತ್ತೆ ಮುದನೂರಿನತ್ತ ಯಾರೊಬ್ಬರೂ ಗಮನ ನೀಡುತ್ತಿಲ್ಲ ಎಂಬ ನೋವು ಗ್ರಾಮಸ್ಥರದ್ದಾಗಿದೆ.ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಸಹಸ್ರಮಾನೋತ್ಸವ ಸಮಾರಂಭ ಉದ್ಘಾಟಿಸಿ, ಗ್ರಾಮದ ಅಭಿವೃದ್ಧಿಗೆ ರೂ. 5 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಕಾರ್ಯಕ್ರಮ ಮುಗಿದು ಸುಮಾರು ಐದು ತಿಂಗಳು ಕಳೆದಿದ್ದು, ಈಗಲೂ ಗ್ರಾಮದಲ್ಲಿ ಯಾವೊಂದು ಬದಲಾವಣೆಯೂ ಕಾಣುತ್ತಿಲ್ಲ.ರಾಜ್ಯ ಮಟ್ಟದ ಕಾರ್ಯಕ್ರಮ ನಡೆದ ನಂತರ ಈ ಗ್ರಾಮದ ಬಹುತೇಕ ಜನರು ಕೆಲವೇ ದಿನಗಳಲ್ಲಿ ಇದೊಂದು ದೊಡ್ಡ ಪ್ರವಾಸಿ ತಾಣವಾಗಲಿದೆ ಎಂಬ ಕನಸು ಕಂಡಿದ್ದರು. ಆದರೆ ಅದಿನ್ನೂ ಕನಸಾಗಿಯೇ ಉಳಿಯುವಂತಾಗಿದೆ.ಪ್ರಥಮ ವಚನಕಾರ ಎಂಬ ಹೆಗ್ಗಳಿಕೆ ಪಾತ್ರರಾದ ದೇವರ ದಾಸಿಮಯ್ಯನವರ ಆರಾಧ್ಯ ದೈವ ರಾಮನಾಥನ ದೇವಾಲಯ ಸೇರಿದಂತೆ ನೂರಾರು ದೇವಸ್ಥಾನಗಳು ಇಲ್ಲಿವೆ. ಕೆಲವೊಂದು ದೇವಸ್ಥಾನಗಳು ಶಿಥಿಲಗೊಂಡಿವೆ.ಅಪರೂಪದ ಶಿಲ್ಪಕಲೆ, ವೈಭವಗಳೆಲ್ಲವೂ ಮಣ್ಣಿನಲ್ಲಿ ಹುದುಗಿ ಹೋಗುತ್ತಿವೆ. ಇಂತಹ ಅನನ್ಯವಾದ ತಾಣವನ್ನು ಅಭಿವೃದ್ಧಿ ಪಡಿಸುವುದಾಗಿ ನೀಡಿದ ಆಶ್ವಾಸನೆ ಇನ್ನೂ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.ದೇವಾಲಯಗಳ ಅಭಿವೃದ್ಧಿ, ವಸ್ತು ಸಂಗ್ರಹಾಲಯ, ಪಂಚ ತೀರ್ಥಗಳ ಅಭಿವೃದ್ದಿ, ದೇವಸ್ಥಾನದ ಮೇಲಿರುವ ಮನೆಗಳ ಸ್ಥಳಾಂತರ, ದೇವಸ್ಥಾನದ ನವೀಕರಣ ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡಲು ಸರ್ಕಾರ ಉದ್ದೇಶಿಸಿದೆ. ದೇವರ ದಾಸಿಮಯ್ಯನ ಅಧ್ಯಯನಕ್ಕೆ ವಿಶೇಷ ಪ್ರಾಧಿಕಾರ ರಚಿಸಿ ಹಣ ಬಿಡುಗಡೆ ಮಾಡುವ ಭರವಸೆಯನ್ನೂ ಅಂದಿನ ಮುಖ್ಯಮಂತ್ರಿಗಳು ನೀಡಿದ್ದರು.ಇಂತಹ ಪವಿತ್ರ ಹಾಗೂ ಇತಿಹಾಸ ಹೊಂದಿರುವ ಮುದನೂರು ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ಬೇಗನೆ ಕಾರ್ಯರೂಪಕ್ಕೆ ಬರಬೇಕು. ರಾಜ್ಯದ ಜನರಿಗೆ ಇದೊಂದು ಪ್ರವಾಸಿ ತಾಣವಾಗಿ ಕಂಗೊಳಿಸಬೇಕು ಎಂಬುದು ಗ್ರಾಮಸ್ಥರ ಮನವಿಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.