ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದುಡಿದ ನಿರೀಕ್ಷೆ; ಮೂಡಿದ ನಿರಾಸೆ

Last Updated 23 ಫೆಬ್ರವರಿ 2011, 9:45 IST
ಅಕ್ಷರ ಗಾತ್ರ

ಹಾವೇರಿ: ಹೊಸ ಕನಸು, ಹೊಸ ಹುಮ್ಮಸ್ಸು ಹಾಗೂ ಹೊಸ ಆಶಾವಾದದೊಂದಿಗೆ ನಡೆಯಬೇಕಿದ್ದ ಜಿಲ್ಲಾ ಪಂಚಾಯಿತಿ ಪ್ರಥಮ ಸಭೆ  ನಿರಾಶಾದಾಯಕ ಆರಂಭ ಪಡೆದುಕೊಂಡಿತು.
ಹುಮ್ಮಸ್ಸಿನಿಂದ ಪಾಲ್ಗೊಳ್ಳಬೇಕಿದ್ದ ಜಿ.ಪಂ. ಅಧ್ಯಕ್ಷರು ಹಾಗೂ ಸದಸ್ಯರು, ತಮಗೆ ಯಾವುದೇ ಆಸಕ್ತಿ ಎಂಬುದನ್ನು ಪ್ರಥಮ ಸಭೆಯಲ್ಲಿಯೇ ಸಾಬೀತುಪಡಿಸಿದರು.ಪ್ರಥಮ ಜಿ.ಪಂ. ಸಾಮಾನ್ಯ ಸಭೆ ನಿರೀಕ್ಷೆಯ ಮೂಟೆ ಗಳನ್ನು ಹೊತ್ತು ತಂದಿತ್ತು. ಹೊಸ ಸದಸ್ಯರು, ಹೊಸ ಅಧ್ಯಕ್ಷರು ಜಿಲ್ಲೆಯ ಬಗ್ಗೆ ಇಟ್ಟುಕೊಂಡ ಕನಸುಗಳನ್ನು ಸಭೆಯ ಮೂಲಕ ಜನತೆಗೆ ತಿಳಿಸಲಿದ್ದಾರೆ ಎಂಬ ಸಹಜವಾದ ನಿರೀಕ್ಷೆ ಜನರಲ್ಲಿತ್ತು. ಆದರೆ ನಿರಾಶೆಯೇ ಹೆಚ್ಚಾಗಿ ಕಂಡು ಬಂತು.

ಮಂಗಳವಾರ ಬೆಳಿಗ್ಗೆ 10.30ಕ್ಕೆ ನಡೆಯಬೇಕಿದ್ದ ಸಭೆ ಮಧ್ಯಾಹ್ನ 12.30 ಆದರೂ ಆರಂಭವಾಗಲಿಲ್ಲ. ಕಾಂಗ್ರೆಸ್‌ನ ಮೂವರು ಸದಸ್ಯರು, ಒಬ್ಬ ಪಕ್ಷೇತರ ಸದಸ್ಯನನ್ನು ಬಿಟ್ಟು ಆಡಳಿತ ಪಕ್ಷದ ಒಬ್ಬನೇ ಒಬ್ಬ ಸಭೆಗೆ ಆಗಮಿಸಿರಲಿಲ್ಲ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸಭೆಗೆ ಏಕೆ ಆಗಮಿಸಿಲ್ಲ ಎಂಬುದರ ಬಗ್ಗೆ ಸ್ವತಃ ಜಿ.ಪಂ.ಅಧಿಕಾರಿಗಳಿಗೂ ಮಾಹಿತಿ ಇರಲಿಲ್ಲ. ಇನ್ನೇನು ಬರಲಿದ್ದಾರೆ ಎಂಬ ಉತ್ತರ ಮಾತ್ರ ಅವರಿಂದ ಹೊರಬರುತ್ತಿತ್ತು.

ಇನ್ನೂ ಪ್ರಥಮ ಸಭೆ ಎಂದುಕೊಂಡು ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಜಿಲ್ಲೆಯ ಸಮಗ್ರ ಮಾಹಿತಿಯನ್ನು ಇಟ್ಟುಕೊಂಡು 10.30 ಗಂಟೆಯಿಂದ 12.30 ರ ವರೆಗೆ ಕಾಯುತ್ತಾ ಕುಳಿತುಕೊಳ್ಳಬೇಕಾಯಿತು.

ಸಚಿವರಿಗಾಗಿ ವಿಳಂಬ: ಇತ್ತ ಅಧಿಕಾರಿಗಳು, ಪತ್ರಕರ್ತರು ಸಭೆಗಾಗಿ ಕಾಯುತ್ತಿದ್ದರೆ, ಜಿ.ಪಂ.ಅಧ್ಯಕ್ಷ, ಉಪಾಧ್ಯಕ್ಷರು, ಆಡಳಿತ ಪಕ್ಷದ ಎಲ್ಲ ಸದಸ್ಯರು ಪ್ರವಾಸಿ ಮಂದಿರದಲ್ಲಿ ಉಪಾಹಾರ ಹಾಗೂ ಸ್ಥಾಯಿ ಸಮಿತಿ ರಚನೆ ಕುರಿತು ಚರ್ಚೆ ಮಾಡುತ್ತಿದ್ದರು. ಇಲ್ಲಿಗೆ ಜಿಲ್ಲಾ ಉಸ್ತುವಾರಿ ಸಚಿವರು ಬರುವವರಿದ್ದಾರೆ. ಅವರು ಬಂದ ನಂತರವೇ ಎಲ್ಲರೂ ಸೇರಿ ಸಭೆಗೆ ಹೋಗುವ ನಿರ್ಧಾರ ತೆಗೆದುಕೊಂಡಿದ್ದರು. ಅದಕ್ಕಾಗಿಯೇ ಬೆಳಿಗ್ಗೆ 10.30ಕ್ಕೆ ಸಭೆ ಕರೆದ ಅಧ್ಯಕ್ಷರು ಸಹ ಸಮಯ ಪ್ರಜ್ಞೆಯನ್ನು ಮರೆತು ಸದಸ್ಯರೊಂದಿಗೆ ಮಧ್ಯಾಹ್ನ 12 ಗಂಟೆವರೆಗೆ ಅಲ್ಲಿಯೇ ಕಾಲಹರಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಾಸಕರು, ವಿಧಾನ ಸಭಾ ಸದಸ್ಯರು ಸಹ ಅಲ್ಲಿ ಹಾಜರಿದ್ದುದು ವಿಶೇಷ.

ಸಚಿವರ ಆಗಮನಕ್ಕಾಗಿ ಎರಡುವರೆ ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳನ್ನು, ಕೆಲ ಸದಸ್ಯರನ್ನು ಹಾಗೂ ಪತ್ರಕರ್ತರನ್ನು ಕಾಯಿಸಿದ್ದು ಮಾತ್ರ ಬಹುತೇಕ ಸಭೆಗೆ ಸೇರಿದ ಎಲ್ಲರಲ್ಲಿಯೂ ಬೇಸರವನ್ನುಂಟು ಮಾಡಿತು.

ಆಕ್ರೋಶ
ಪ್ರಥಮ ಸಭೆಯಲ್ಲಿಯೇ ಸಮಯ ಪ್ರಜ್ಞೆ ಮರೆತು ವರ್ತಿಸಿದ ಜಿ.ಪಂ. ಅಧ್ಯಕ್ಷರು ಹಾಗೂ ಸದಸ್ಯರ ವಿರುದ್ಧ ಕಾಂಗ್ರೆಸ್‌ನ ಮೂವರು ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಭೆಯನ್ನು ಹೇಳಿದ ಸಮಯಕ್ಕೆ ಆರಂಭಿಸದ ಹಾಗೂ ಸಮಯಕ್ಕೆ ಸರಿಯಾಗಿ ಬರದ ಇಂಥವರ ಆಡಳಿತದಿಂದ ಎಂತಹ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ ಎಂದು ನೆರೆಗಲ್ಲ ಜಿ.ಪಂ.ಕ್ಷೇತ್ರದ ಸದಸ್ಯೆ ಅಬಿದಾಬಿ ನದಾಫ್ ಪ್ರಶ್ನಿಸಿದರು.

ಇತ್ತ ಸವಣೂರು ಭೇಟಿಗೆ ತೆರಳಿದ್ದ ಜಿಲ್ಲಾ ಉಸ್ತುವಾರಿ ಸಚಿವರು ನೇರವಾಗಿ ಮಧ್ಯಾಹ್ನ 12.15ಕ್ಕೆ ಜಿ.ಪಂ. ಸಭಾ ಭವನಕ್ಕೆ ಆಗಮಿಸಿದರು. ಆದರೆ, ಜಿ.ಪಂ.ಅಧ್ಯಕ್ಷರು ಹಾಗೂ ಸದಸ್ಯರು ಯಾರು ಇರಲಿಲ್ಲ. ಸಚಿವರು ಬಂದ ಸುದ್ದಿ ತಿಳಿದ ನಂತರ ಅಧ್ಯಕ್ಷರು ಹಾಗೂ ಸದಸ್ಯರು ಪ್ರವಾಸಿ ಮಂದಿರದಿಂದ ನೇರವಾಗಿ ಸಭೆಗೆ ಆಗಮಿಸಿದರು. ಅವಾಗಗಲೇ ಸಮಯ 12.30 ದಾಟಿತ್ತು. ಬಂದವರೇ ಅವಸರವಸರವಾಗಿ ಸಭೆ ಆರಂಭಿಸಿದರು.

ಸಚಿವರ ಸಮಯ ಪಾಠ
ಬೆಳಿಗ್ಗೆ ಆರಂಭವಾಗಬೇಕಿದ್ದ ಸಭೆ ಮಧ್ಯಾಹ್ನ 12 ಗಂಟೆಯಾದರೂ ಆರಂಭವಾಗದ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ಅವರು, ಇದೇನು ಹೊಸದಲ್ಲವಲ್ಲ. ಹಿಂದೆಯೂ ಈ ರೀತಿ ವಿಳಂಬವಾಗಿವೆ. ಇದೆಲ್ಲ ಮಾಮೂಲಿ ಎಂದು ಹೇಳಿದರು.

26 ರಂದು ಸಿಎಂ ಮಣ್ಣೂರಿಗೆ
ಹಾವೇರಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಫೆ. 26ರಂದು ಜಿಲ್ಲೆಯ ಹಾವೇರಿ ತಾಲ್ಲೂಕಿನ ಮಣ್ಣೂರು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರ ಮಾಡಲಿದ್ದಾರೆ.ಅಂದು ಬೆಳಿಗ್ಗೆ 8 ಘಂಟೆಗೆ ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹೊರಟು ಹಾವೇರಿ ತಾಲೂಕ ಮಣ್ಣೂರು ಗ್ರಾಮಕ್ಕೆ 9.30ಕ್ಕೆ ಆಗಮಿಸಲಿದ್ದಾರೆ.

ನಂತರ ಟಾಟಾ ಸ್ಟೀಲ್ ಪುನರ್ವಸತಿ ಸಮಿತಿಯವರು ನೆರೆ ಸಂತ್ರಸ್ಥರಿಗಾಗಿ ‘ಆಸರೆ’ ಯೋಜನೆಯಡಿ ಮಣ್ಣೂರು ಗ್ರಾಮದಲಿ ್ಲನಿರ್ಮಿಸಿರುವ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಮುಖ್ಯಮಂತ್ರಿಗಳು 10.30ಕ್ಕೆ ಮಣ್ಣೂರಿನಿಂದ  ಹೆಲಿಕಾಪ್ಟರ್‌ನಲ್ಲಿ ಹೊರಟು, 11ಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗೆ ತೆರಳಿ ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ) ಎರಡನೇ ಶಾಖೆ ಪ್ರತಿಭಾ ವಿಕಾಸ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನಂತರ ಚಳ್ಳಕೆರೆ ಕ್ಯಾಂಪಸ್‌ನಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT