ಶನಿವಾರ, ನವೆಂಬರ್ 23, 2019
18 °C
ಜೆಡಿಎಸ್ `ಮಹಾ ನಾಟಕ'ಕ್ಕೆ ತೆರೆ

ಮುದ್ದಹನುಮೇಗೌಡರಿಗೆ ಕೊಕ್, ನಗರದಲ್ಲಿ ಕಣ್ಣಾಮುಚ್ಚಾಲೆ

Published:
Updated:

ತುಮಕೂರು: ಎಂಥವರೂ ನಾಚುವಂತಹ ಜೆಡಿಎಸ್ `ನಾಟಕ'ಕ್ಕೆ ತೆರೆ ಬಿತ್ತು. ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾದ ಬುಧವಾರ ಪೂರಾ ಜೆಡಿಎಸ್ ಪಾಳೆಯದೇ ಸುದ್ದಿ.ಮುಂಜಾನೆ ಸೂರ್ಯ ಕಣ್ಣು ಬಿಡುವ ಹೊತ್ತಿಗಾಗಲೇ ತುಮಕೂರು ನಗರದ ಅಭ್ಯರ್ಥಿ ಗೋವಿಂದರಾಜು ಬದಲಿಸಿ ಕೋಳಾಲದ ಜಿ.ಪಂ. ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಪಿ.ಎನ್.ಕೃಷ್ಣಮೂರ್ತಿ ಅವರಿಗೆ ಸಿ-ಫಾರಂ ನೀಡಿ ಕಣಕ್ಕಿಳಿಸಲಾಗುತ್ತದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಮಿಂಚಿನ ಸಂಚಾರಕ್ಕೆ ಕಾರಣವಾಯಿತು. ಮಧ್ಯಾಹ್ನ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಖುದ್ದು ತುಮಕೂರಿಗೆ ಬರಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತು.ತುಮಕೂರು ನಗರದ ಗೊಂದಲದ ನಡುವೆಯೇ ಕುಣಿಗಲ್‌ನಲ್ಲಿ ಜೆಡಿಎಸ್ ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡ ಅವರಿಗೆ ಸರಿಯಾಗಿಯೇ ಕೈ ಕೊಟ್ಟಿತು. ಮಧ್ಯಾಹ್ನ 2.45ಕ್ಕೆ ಬೆಂಗಳೂರಿನಿಂದ ಎಚ್.ಡಿ.ದೇವೇಗೌಡ ಅವರ ಕೈ ಬಹರ ಹೊತ್ತ ಸಿ-ಫಾರಂ ಮಾಜಿ ಸಚಿವ ಡಿ.ನಾಗರಾಜಯ್ಯ ಕೈ ಸೇರಿತು. ತಕ್ಷಣವೇ ಜೆಡಿಎಸ್ ಅಭ್ಯರ್ಥಿಯಾಗಿ ಮತ್ತೆ ನಾಮಪತ್ರ ಸಲ್ಲಿಸಿದರು. ಇದನ್ನು ನಿರೀಕ್ಷಿಸದೆ ಪ್ರಚಾರದಲ್ಲಿದ್ದ ಎಸ್.ಪಿ.ಮುದ್ದಹನುಮೇಗೌಡ ನಿರಾಶೆಗೊಳಗಾದರು. ಪ್ರಚಾರ ನಿಲ್ಲಿಸಿ ಸೀದಾ ಹೆಬ್ಬೂರಿನ ಅವರ ಫಾರ್ಮ್ ಹೌಸ್ ಕಡೆಗೆ ನಡೆದರು.ಇತ್ತ ತುಮಕೂರು ನಗರದಲ್ಲಿ ಸಿ-ಫಾರಂನೊಂದಿಗೆ ಕೃಷ್ಣಮೂರ್ತಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಸುದ್ದಿ ತಿಳಿದ ಗೋವಿಂದರಾಜು ತಮ್ಮ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಕಾದು ನಿಂತಿದ್ದರು. ನಾಮಪತ್ರ ಸಲ್ಲಿಸಲು ಪತ್ನಿ, ಹಿಂಬಾಲಕರೊಂದಿಗೆ ಕೃಷ್ಣಮೂರ್ತಿ ಜಿಲ್ಲಾಧಿಕಾರಿ ಕಚೇರಿ ಬಳಿ ಬರುತ್ತಲೇ ಅವರ ಕೈ ಹಿಡಿದುಕೊಂಡ ಗೋವಿಂದರಾಜು ನಾಮಪತ್ರ ಸಲ್ಲಿಸದಂತೆ ಪರಿಪರಿಯಾಗಿ ಬೇಡಿಕೊಂಡರು. ಆದರೆ ಅದಕ್ಕೆ ಸ್ಪಂದಿಸದ ಕೃಷ್ಣಮೂರ್ತಿ ನಾಮಪತ್ರ ಸಲ್ಲಿಸುವುದು ಖಂಡಿತ ಎಂದರು. ಆಗ ಕಾರ್ಯಕರ್ತರು ತಮ್ಮತಮ್ಮ ಮುಖಂಡರ ಪರ ಘೋಷಣೆ ಕೂಗ ತೊಡಗಿದರು. ಇನ್ನೇನು ಕಾರ್ಯಕರ್ತರ ನಡುವೆ ಮುಖಾಮುಖಿಯಾಗಬೇಕು ಎನ್ನುವಷ್ಟರಲ್ಲಿ ಇಬ್ಬರು ಮುಖಂಡರನ್ನು ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಒಳಗೆ ಕಳುಹಿಸಿದರು.ಪಿ.ಎನ್.ಕೃಷ್ಣಮೂರ್ತಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಆದರೆ ಕೃಷ್ಣಮೂರ್ತಿ ಬಳಿ ಸಿ-ಫಾರಂ ಇದೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರಬಹುದು ಎಂದು ಭಯ ಬಿದ್ದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು, ಕೊನೆ ಕ್ಷಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಂದು ನಾಮಪತ್ರ ಸಲ್ಲಿಸಿದರು.ನಾಮಪತ್ರ ಸಲ್ಲಿಸಿದ ಇಬ್ಬರೂ ನಂತರ ಹೊರ ನಡೆದರು. ಇಬ್ಬರಲ್ಲೂ ಮಾತಿರಲಿಲ್ಲ. ಕಾರ್ಯಕರ್ತರು ಪಕ್ಷ ಬಿಟ್ಟು ಇಬ್ಬರ ನಾಯಕರ ಹೆಸರು ಹಿಡಿದು ಘೋಷಣೆ ಕೂಗ ತೊಡಗಿದರು.ಬಂಡಾಯದ ಬಿರುಸು

ಗೋವಿಂದರಾಜು ಹಾಗೂ ಪಿ.ಎನ್.ಕೃಷ್ಣಮೂರ್ತಿ ಇಬ್ಬರ ನಡುವಿನ ಕಣ್ಣಾಮುಚ್ಚಾಲೆ ನಡುವೆಯೇ ಜೆಡಿಎಸ್ ಮೂಲ ಕಾರ್ಯಕರ್ತರ ಗುಂಪು ಬಂಡಾಯ ಅಭ್ಯರ್ಥಿಯಾಗಿ ಗುತ್ತಿಗೆದಾರ ನರಸೇಗೌಡ ಅವರನ್ನು ಕಣಕ್ಕಿಳಿಸಿತು.ಸಾವಿರಾರು ಬೆಂಬಲಿಗರೊಂದಿಗೆ ಬಂದ ನರಸೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಜತೆಯಲ್ಲಿ ಜೆಡಿಎಸ್ ಬಂಡಾಯ ಗುಂಪಿನ ನಾಯಕರಾದ ಕೆ.ಬಿ.ಬೋರೇಗೌಡ, ವಿಜಯಪ್ರಕಾಶ್ ಮಿರ್ಜಿ, ಬೆಳ್ಳಿಲೋಕೇಶ್, ಟಿ.ಎಚ್.ಕೃಷ್ಣಪ್ಪ, ಟಿ.ಜೆ.ನರಸಿಂಹರಾಜು ಇದ್ದರು.`ಪಕ್ಷದ ಮೂಲ ಕಾರ್ಯಕರ್ತರನ್ನು ಪಕ್ಷ ಗೌರವಿಸಲಿದೆ ಎಂಬ ನಂಬಿಕೆ ಇತ್ತು. ಆದರೆ ಅದು ನಿಜವಾಗದ ಕಾರಣ ಒಮ್ಮತದಿಂದ ನರಸೇಗೌಡ ಅವರನ್ನು ಕಣಕ್ಕಿಳಿಸಿದ್ದೇವೆ. ಮೂಲ ನಿಷ್ಠಾವಂತ ಕಾರ್ಯಕರ್ತರು, ಮುಖಂಡರ ಬೆಂಬಲಿತ ಅಭ್ಯರ್ಥಿಯಾಗಿ ನರಸೇಗೌಡ ಕಣದಲ್ಲಿದ್ದಾರೆ' ಎಂದು ಬೆಳ್ಳಿ ಲೋಕೇಶ್ ಪ್ರತಿಕ್ರಿಯಿಸಿದರು.ಇದೆಲ್ಲರ ನಡುವೆ ಗುಬ್ಬಿ ಜೆಡಿಎಸ್‌ನಲ್ಲೂ ಬಂಡಾಯದ ಸಣ್ಣ ಹೊಗೆ ಕಾಣಿಸಿಕೊಂಡಿದ್ದು, ಜೆಡಿಎಸ್ ಯುವ ಮುಖಂಡ, ತಿಗಳ ಸಮುದಾಯದ ಟಿ.ಎಚ್.ಕುಮಾರ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ಟಿ.ಎಚ್.ಕೃಷ್ಣಪ್ಪ ಸಹೋದರಾದ ಕುಮಾರ್‌ಗೆ ಜಿಲ್ಲಾ ತಿಗಳರ ವೇದಿಕೆ ಬೆಂಬಲ ವ್ಯಕ್ತಪಡಿಸಿದೆ ಎಂದು ಹೇಳಲಾಗಿದೆ.

ಪ್ರತಿಕ್ರಿಯಿಸಿ (+)