ಭಾನುವಾರ, ಮೇ 22, 2022
21 °C

ಮುದ್ದಾಪುರದ ಬಸಿ ಸಮಸ್ಯೆ ನಿವಾರಣೆ ಕ್ರಮ: ಬೆಳ್ಳುಬ್ಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಸವುಳು-ಜವುಳು ಸಮಸ್ಯೆಯಿಂದ ನರಳುತ್ತಿರುವ ಮುದ್ದಾಪುರ ಗ್ರಾಮಕ್ಕೆ ಬಸಿ ಮುಕ್ತ ಗ್ರಾಮವನ್ನಾಗಿ ಮಾಡಲು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಾಸಕ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.ಮುದ್ದಾಪುರ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, `ಮುದ್ದಾಪುರದ ಸಮಸ್ಯೆ ನನಗೆ ಅರಿವಾಗಿದ್ದು, ಈ ಗ್ರಾಮ ನನ್ನ ಮತಕ್ಷೇತ್ರಕ್ಕೆ ಬಾರದಿದ್ದರೂ, ಈ ಗ್ರಾಮದ ಸಮಸ್ಯೆ ಅರಿತು ಅದನ್ನು ಬಗೆಹರಿಸಲು ಗ್ರಾಮಕ್ಕೆ ಭೇಟಿ ನೀಡಿದ್ದೇನೆ~ ಎಂದರು.ಈಗಾಗಲೇ ಇಲ್ಲಿನ ಸಮಸ್ಯೆ ಕುರಿತು ಜಿ.ಪಂ. ಸದಸ್ಯ ಶಿವಾನಂದ ಅವಟಿ ಅವರು ತಮಗೆ ಮತ್ತು ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳಿಗೆ ತಿಳಿಸಿದ್ದು, ಅದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬೆಳ್ಳುಬ್ಬಿ ಹೇಳಿದರು.ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಅವಟಿ, ಈ ಗ್ರಾಮದ ಸಮಸ್ಯೆಯ ಬಗ್ಗೆ ಕೃಷ್ಣಾ ಭಾಗ್ಯ ಜಲ ನಿಗಮದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅಧಿಕಾರಿಗಳ ಗಮನ ಸೆಳೆದಿದ್ದೇನೆ. ಕೃಷ್ಣಾ ಕಾಡಾ ವತಿಯಿಂದ ಕೇಂದ್ರ ಸರಕಾರದ ಅನುದಾನದಲ್ಲಿ ಸವುಳು ಮುಕ್ತ ಗ್ರಾಮವನ್ನಾಗಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಕೇಂದ್ರದ ತಂಡ ಈ ಯೋಜನೆಗೆ ಅನುಮತಿ ನೀಡಿಲ್ಲ. ಹೀಗಾಗಿ ಇಲ್ಲಿಯ ಬಸಿ ಸಮಸ್ಯೆ ನಿವಾರಣೆಗೆ ಕೃಷ್ಣಾ ಭಾಗ್ಯ ಜಲ ನಿಗಮದಿಂದಲೇ ಅನುದಾನ ಪಡೆದು ಕಾಮಗಾರಿ ಪ್ರಾರಂಭಿಸಬೇಕಿದೆ. ಈ ಕುರಿತು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮೋಯಿ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ವೀರಭದ್ರಪ್ಪ ದಳವಾಯಿ, ರಮೇಶ ಬಿರಾದಾರ, ಬಸವರಾಜ ದಂಡಿನ, ಪ್ರದೀಪ ಪಾರಶೆಟ್ಟಿ, ಅಶೋಕ ಚಳ್ಳಮರದ,  ಬಸಯ್ಯ ಸಾಲಿಮಠ, ಭೀಮನಗೌಡ ಪಾಟೀಲ , ಸಂಗಪ್ಪ ವಂದಾಲ, ಚಿದಾನಂದ ಅಂಗಡಿ, ನಿತ್ಯಾನಂದ ಸ್ವಾಮಿ  ಮೊದಲಾದವರಿದ್ದರು.ಸಮಸ್ಯೆಯ ಆಗರ ಮುದ್ದಾಪುರ: ಆಲಮಟ್ಟಿ ಎಡದಂಡೆ ಕಾಲುವೆಯ ಕಳಪೆ ಕಾಮಗಾರಿ, ಹೆಚ್ಚುವರಿ ನೀರು ಇವೆಲ್ಲ ಸೇರಿ ಬಸಿ ಹಿಡಿದು ಇಡೀ ಗ್ರಾಮ ಹಾಗೂ ನೂರಾರು ಎಕರೆ ಹೊಲಗಳು ಹಾಗೂ ತೋಟಗಳ ತುಂಬೆಲ್ಲಾ ಬಸಿ ನೀರು ವ್ಯಾಪಿಸುತ್ತಿದೆ. ಜನರ ಜೀವನ ಅಸ್ತವ್ಯಸ್ತವಾಗಿರುವುದು ಸಮೀಪದ ಮುದ್ದಾಪುರ ಗ್ರಾಮದಲ್ಲಿ ಕಂಡುಬರುತ್ತಿದೆ.ಆಲಮಟ್ಟಿ ಎಡದಂಡೆ ಕಾಲುವೆಯ ನೀರಿನಿಂದ ಈ ಭಾಗವೆಲ್ಲಾ ನೀರಾವರಿಆಗಿರುವುದರಿಂದ ಜನತೆಯ್ಲ್ಲೆಲ ಸಂತಸದಿಂದ ಇದ್ದರು. ಆದರೆ ಈ ಸಂತೋಷ ಬಹಳ ದಿನ ಇಲ್ಲ ಎಂದು ಈ ಭಾಗದ ಜನತೆ ಮಾತನಾಡುತ್ತಿರುವುದು ವಿಷಾದನೀಯ. ಈ ಕಾಲುವೆಯಿಂದ ನೀರು ಬಸಿದು ಮುದ್ದಾಪುರ ಗ್ರಾಮ ಹಾಗೂ ನಿಡಗುಂದಿ, ಇಟಗಿ, ಹುಲ್ಲೂರ ಬಳಿಯ ನೂರಾರು ಎಕರೆ ಜಮೀನಿನಲ್ಲಿ ಈ ಬಸಿ ನೀರು ಹರಿದು ಇಡೀ ಜಮೀನು ಜವುಳು ಹಿಡಿಯುತ್ತಿದೆ. ಜಮೀನಿನಲ್ಲಿ ಬೆಳೆದ ಬೆಳೆಗಳು ಹಾಳಾಗಿವೆ. ಸಮರ್ಪಕ ಕಾಲುವೆ ದುರಸ್ತಿ ಕಾರ್ಯ ಕೈಗೊಳ್ಳದೆ ಹಾಗೂ ಸರಿಯಾಗಿ ನೀರು ಬಿಡುಗಡೆ ಮಾಡದ್ದರಿಂದ ಈ ಸಮಸ್ಯೆ ಎದುರಾಗಿದೆ.  ಮುದ್ದಾಪುರದಲ್ಲಿ ಈ ಬಸಿ ನೀರು ಹರಿದು ಗ್ರಾಮದ ಮುಖ್ಯ ರಸ್ತೆಯೂ ಸೇರಿದಂತೆ ಎಲ್ಲ ರಸ್ತೆ ಹದಗೆಟ್ಟಿದ್ದು, ನಡೆದಾಡಲು ತೊಂದರೆಯಾಗುತ್ತಿದೆ. ಇದರಿಂದ ಗ್ರಾಮದ ಜನತೆಗೆ ತೀವ್ರ ತೊಂದರೆಯಾಗಿದೆ. ಗ್ರಾಮದ ಬಹುತೇಕ ಮನೆಯ ಕೆಳಗಡೆಯಿಂದ ನೀರು ಹರಿದು ಬರುತ್ತಿದೆ. ಕೆಲ ಮನೆಯ ಒಳಗಡೆಯೂ ನೀರು ಹರಿಯುತ್ತಿದೆ.ಇದರಿಂದ ಮನೆ ಬೀಳುವ ಭೀತಿಯಲ್ಲಿ ಅಲ್ಲಿಯ ಜನತೆ ವಾಸಿಸುವ ಪರಿಸ್ಥಿತಿ ಉಂಟಾಗಿದೆ. ಮಳೆಗಾಲ ಹಾಗೂ ಕಾಲುವೆಗೆ ನೀರು ಬಿಟ್ಟಾಗಲಂತೂ ಈ ಗ್ರಾಮದ ಜನತೆಯ ಬದುಕು ಅಕ್ಷರಶಃ ನರಕ. ಈ ಬಸಿನೀರು ಆ ಗ್ರಾಮದಲ್ಲಿ ಎಲ್ಲೆಡೆಯೂ ಮಳೆ ನೀರು ಹರಿದಂತೆ ಹರಿಯುತ್ತಿದೆ. ಹುಲ್ಲೂರ ಅಕ್ವಾಡೆಕ್ ಬಳಿಯಿರುವ ಈ ಗ್ರಾಮ ಸ್ವಲ್ಪಮಟ್ಟಿಗೆ ಇಳಿಜಾರಿನಲ್ಲಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.ಕೈಗೊಳ್ಳಬೇಕಾದ ಕ್ರಮಗಳು: ಕೃಷ್ಣಾ ಕಾಡಾ ವತಿಯಿಂದ ಈ ಗ್ರಾಮದ ಸುತ್ತಲೂ ಸಬ್‌ಸರ್‌ಫೇಸ್ ಡ್ರೈನೇಜ್ ನಿರ್ಮಿಸುವುದು ಅಗತ್ಯವಾಗಿದೆ. ಈ ಗ್ರಾಮದ ಪರಿಸ್ಥಿತಿ ಕುರಿತು ಅರಿತ ಕೃಷ್ಣಾ ಕಾಡಾ ಅಧಿಕಾರಿಗಳು ಬಸಿಗಾಲುವೆ ನಿರ್ಮಿಸಿದ್ದಾರೆ. ಅದರಿಂದ ಯಾವುದೇ ಪರಿಹಾರವಾಗಿಲ್ಲ. ಸಬ್‌ಸರಫೇಸ್ ಡ್ರೈನೇಜ್ ನಿರ್ಮಿಸಿ ಸುಮಾರು ರೂ. 83 ಲಕ್ಷ ವೆಚ್ಚದ ಕಾಮಗಾರಿಯ ಯೋಜನಾ ವರದಿ ತಯಾರಿಸಿದ್ದಾರೆ. ಆದರೆ, ಅದನ್ನು ಕೇಂದ್ರದ ಸಿ.ಡಬ್ಲ್ಯೂ.ಸಿ. ತಂಡ ತಿರಸ್ಕರಿಸಿದೆ. ಈಗ ಈ ಸಮಸ್ಯೆ ರಾಜ್ಯ ಸರಕಾರದ ಅನುದಾನದಲ್ಲಿ ಕಾಮಗಾರಿ ಕೈಗೊಂಡು ಈ ಸಮಸ್ಯೆ ಬಗೆಹರಿಸಬೇಕಾಗಿದೆ.  ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ಸಮಸ್ಯೆಯ ಬಗ್ಗೆ ಚರ್ಚೆ ನಡೆದಾಗ ಕೆ.ಬಿ.ಜೆ.ಎನ್.ಎಲ್‌ನ ಆಗಿನ ಎಂ. ಡಿ. ಬಸವರಾಜು ಈ ಕಾಮಗಾರಿಯನ್ನು ಕೆ.ಬಿ.ಜೆ.ಎನ್.ಎಲ್. ಅನುದಾನದಿಂದಲೇ ವತಿಯಿಂದಲೇ ಕೈಗೊಳ್ಳಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಅದು ಇನ್ನೂ ಜಾರಿ ಆಗಿಲ್ಲ. ಇದರಿಂದಾಗಿ ಇವರ ಸಮಸ್ಯೆ, ಇನ್ನೂ ಬಗೆಹರಿದಿಲ್ಲ.  ಈ ರೀತಿಯ ಸಂಕಷ್ಟವನ್ನು ಇಲ್ಲಿನ ಜನತೆ ಸುಮಾರು ಐದಾರು ವರ್ಷಗಳಿಂದ ಅನುಭವಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.