ಮುದ್ದಾಪುರ ಸೌಲಭ್ಯಗಳ ಆಗರ

7

ಮುದ್ದಾಪುರ ಸೌಲಭ್ಯಗಳ ಆಗರ

Published:
Updated:

ರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಖಾಸಗಿ ಶಾಲೆಗಳಂತೆ ಇಲ್ಲಿ ಸೌಲಭ್ಯಗಳೇ ಇಲ್ಲ ಎನ್ನುವವರೇ ಜಾಸ್ತಿ. ಆದರೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮುದ್ದಾಪುರ ಎಂಬ ಕುಗ್ರಾಮದಲ್ಲಿರುವ ಸರ್ಕಾರಿ ಶಾಲೆ ಇದಕ್ಕೆ ವ್ಯತಿರಿಕ್ತವಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳೂ ಇವೆ.

ಬಿಸಿಯೂಟಕ್ಕೆ ಡೈನಿಂಗ್ ಟೇಬಲ್, ಪಾಠ ಕೇಳಲು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕುರ್ಚಿ, ಟೇಬಲ್, ನಲಿ-–ಕಲಿ ವಿಷಯಗಳಿಗೆ ಪ್ರತ್ಯೇಕ ಟೇಬಲ್, ಕುಡಿಯಲು ಫಿಲ್ಟರ್ ನೀರು, ಕಲಿಕೆಗೆ ರಾಶಿ ರಾಶಿ ಪಾಠೋಪಕರಣಗಳು...  ಹೀಗೆ ಎಲ್ಲವೂ ಇಲ್ಲಿವೆ. ಕೇವಲ 45 ಕುಟುಂಬಗಳಿರುವ ಈ ಗ್ರಾಮದಲ್ಲಿ ಮಕ್ಕಳಿಗೆ ಇಷ್ಟೆಲ್ಲ ಸೌಕರ್ಯ ನೀಡಿ, ಅವರನ್ನು ಶೈಕ್ಷಣಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಪಣ ತೊಟ್ಟವರು ಶಿಕ್ಷಕರಾದ ಶ್ರೀಕಾಂತರಾವ್ ಮತ್ತು ಸಂಪತ್‌ಕುಮಾರ್.ಈ ಗ್ರಾಮದಲ್ಲಿ ಪರಿಶಿಷ್ಟ ಕುಟುಂಬಗಳೇ ಹೆಚ್ಚು. ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಮೂರು ಜಿಲ್ಲೆಗಳ ಅಂತ್ಯದಲ್ಲಿರುವ ಈ ಕುಗ್ರಾಮ ತಾಲ್ಲೂಕು ಕೇಂದ್ರದಿಂದ 35 ಕಿ.ಮೀ ದೂರದಲ್ಲಿದೆ. ಸುತ್ತ ಯಾವುದೇ ಪಟ್ಟಣ ತಲುಪಬೇಕೆಂದರೂ 40 ಕಿ.ಮೀ ಹೋಗಬೇಕು. ಮೂಲೆಯಲ್ಲಿರುವ ಈ ಗ್ರಾಮಕ್ಕೆ ಸಾರಿಗೆ ಸೌಲಭ್ಯವೂ ಇಲ್ಲ.ಇಂತಹ ಏನೂ ಇಲ್ಲದ ಶಾಲೆಗೆ ಬಂದ ಈ ಶ್ರೀಕಾಂತ ರಾವ್ ಅವರಿಗೆ ಏನಾದರೊಂದು ಸಾಧನೆ ಮಾಡಬೇಕು ಎನ್ನಿಸಿತು. ಸರ್ಕಾರದ ಅನುದಾನಕ್ಕೆ ಕಾದು ಕೂರದೆ, ದಾನಿಗಳನ್ನು ಹಿಡಿದು ಶಾಲೆಗೆ ಪೀಠೋಪಕರಣ ತಂದರು. ಖಾಸಗಿ ಶಾಲೆಯಲ್ಲಿನ ವ್ಯವಸ್ಥೆಗಳಿಗಿಂತ ಹೆಚ್ಚು ಸೌಲಭ್ಯಗಳನ್ನು ಒದಗಿಸಿದರು.ಮಕ್ಕಳಿಗೆ ವಿವಿಧ ತರಬೇತಿ

ಕೇವಲ ಭೌತಿಕ ಸೌಲಭ್ಯಗಳಷ್ಟೇ ಅಲ್ಲ, ಮಕ್ಕಳನ್ನೂ ತರಬೇತಿಗೊಳಿಸಿದರು. ಸಾವಿರಾರು ರೂಪಾಯಿ ಖರ್ಚು ಮಾಡಿ ವೈವಿಧ್ಯಮಯ ಪಾಠೋಪಕರಣಗಳನ್ನು ತಯಾರಿಸಿದರು. ವಿರಾಮದ ವೇಳೆಯಲ್ಲಿ ಮಕ್ಕಳು ಓದಲು ಅನುಕೂಲ ಆಗುವಂತೆ ‘ಲರ್ನಿಂಗ್‌ಕಾರ್ನರ್’ ತಯಾರಿಸಿದರು.ಜಲಚರಗಳ ಪರಿಚಯ ಮಾಡಿಸಲು ತೊಟ್ಟಿ ಮಾಡಿ, ನೀರು ತುಂಬಿಸಿ ಆಮೆ, ಕಪ್ಪೆ, ಮೀನು, ಏಡಿ ಮತ್ತಿತರ ಪ್ರಾಣಿಗಳನ್ನೂ ಸಾಕಿದರು. ಸಸ್ಯಗಳ ಪರಿಚಯಕ್ಕಾಗಿ ವಿವಿಧ ಜಾತಿಯ ಆಯುರ್ವೇದ ಸಸ್ಯಗಳನ್ನೂ ಬೆಳೆಸಿದರು. ಬಿಸಿಯೂಟಕ್ಕೆ ಕೈತೋಟ ಮಾಡಿ ತರಕಾರಿ ಬೆಳೆದರು. ಇದರಿಂದಾಗಿ 2012-–13 ರಲ್ಲಿ ಶಾಲೆಗೆ ‘ಎ ಗ್ರೇಡ್’ ಸ್ಥಾನ ಸಿಕ್ಕಿತು.ಶಿಕ್ಷಕ ಶ್ರೀಕಾಂತ ರಾವ್ ಕ್ರಿಯಾಶೀಲ ಶಿಕ್ಷಕ. ಸುಮಾರು 3ಸಾವಿರ ಅಂಚೆ ಚೀಟಿಗಳನ್ನು ಸಂಗ್ರಹಿಸಿದ್ದಾರೆ. ನೂರಾರು ಹಳೇ ಕಾಲದ ನಾಣ್ಯಗಳನ್ನು ಸಂಗ್ರಹಿಸಿ, ಮಕ್ಕಳಿಗೆ ಪರಿಚಯಿಸಿದ್ದಾರೆ. ಪಾಠೋಪಕರಣ ತಯಾರಿಸುವಲ್ಲಿ ಇವರು ಎತ್ತಿದ ಕೈ. ಜಿಲ್ಲಾ ಮಟ್ಟದ ಕಲಿಕಾ ಸಾಮಗ್ರಿ ತಯಾರಿಕೆ ಮೇಳದಲ್ಲಿ ಭಾಗವಹಿಸಿ ಮೂರು ಬಾರಿ ಪ್ರಶಸ್ತಿ ಪಡೆದಿದ್ದಾರೆ.

ಮಕ್ಕಳ ಕವನಗಳನ್ನೂ ಬರೆಯುವ ಹವ್ಯಾಸ ಇದ್ದು, ಶಿಕ್ಷಣ ವಾರ್ತೆಯಲ್ಲಿ ಅನೇಕ ಕವನಗಳೂ ಪ್ರಕಟವಾಗಿವೆ. 5ನೇ ತರಗತಿಗೆ ರೇಡಿಯೊ ಪಾಠವನ್ನೂ ಮಾಡಿಕೊಟ್ಟಿದ್ದ ಇವರು, 2007ರಲ್ಲಿ ಆಗ ಮುಖ್ಯಮಂತ್ರಿಗಳಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನೂ ಪಡೆದಿದ್ದರು. ಶ್ರೀಕಾಂತ ರಾವ್ ಅವರ ಸಂಪಕರ್ಕ್ಕೆ– 9900366292

-ಸಾಂತೇನಹಳ್ಳಿ ಕಾಂತರಾಜ್ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry