ಮುದ್ದು ಮಗುವಿನ ಕೀಟಲೆಗೆ ಮದ್ದೇನು?

7

ಮುದ್ದು ಮಗುವಿನ ಕೀಟಲೆಗೆ ಮದ್ದೇನು?

Published:
Updated:
ಮುದ್ದು ಮಗುವಿನ ಕೀಟಲೆಗೆ ಮದ್ದೇನು?

ಮಕ್ಕಳಿರಲವ್ವ ಮನೆ ತುಂಬ ಎಂಬುದು ಹಳೆಯ ಮಾತು. ಇರುವ ಒಂದೇ ಒಂದು ಮಗುವನ್ನು ಸಲಹುವುದು ಹೇಗೆ ಎಂಬುದು ಈಗಿನವರ ಮುಂದಿರುವ ಬಹುದೊಡ್ಡ ಸವಾಲು. ಒಂದು ಮನೆಯಾಗಿರಲಿ, ನರ್ಸರಿ, ಪ್ಲೇ ಹೋಂ ಅಥವಾ ಶಾಲೆಯಾಗಿರಲಿ ಮಕ್ಕಳ ನಿರ್ವಹಣೆ ಇಂದು ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯ.ಮಕ್ಕಳನ್ನು ದಂಡಿಸುವುದರಿಂದ ಎರಡು ರೀತಿಯ ತೊಂದರೆಗಳು ಎದುರಾಗಬಹುದು. ಇದು ಅವರನ್ನು ಜರ್ಜರಿತರನ್ನಾಗಿ ಮಾಡಿ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು ಅಥವಾ ಅವರಲ್ಲಿ ಮತ್ತಷ್ಟು ಒರಟುತನ, ತಿರುಗಿ ಬೀಳುವ ಮನೋಭಾವದ ಅಪಾಯವನ್ನು ಹೆಚ್ಚಿಸಬಹುದು.ಹೆತ್ತವರ ಮೇಲೇ ಪೊಲೀಸ್ ದೂರು ನೀಡುವ ಪ್ರವೃತ್ತಿ ವಿದೇಶಗಳಲ್ಲಿ ನಡೆಯುತ್ತಿದ್ದರೆ, ಮಕ್ಕಳನ್ನು ತಿದ್ದಲು ಹೋಗಿ ನೌಕರಿ ಕಳೆದುಕೊಳ್ಳುತ್ತಿರುವ ಶಿಕ್ಷಕರ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಿದೆ. ಹತ್ತಾರು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಮಕ್ಕಳನ್ನು ಹತೋಟಿಯಲ್ಲಿಡಲು, ಶಿಸ್ತು ಕಲಿಸಲು ಪಾಲಕರು/ ಶಿಕ್ಷಕರು ಶಿಕ್ಷೆಯನ್ನೇ ನಂಬಿದ್ದ ಕಾಲ ಅದು. ಆದರೆ ಅಂತಹ ಪಾಲಕರ ವಿರುದ್ಧ ಠಾಣೆಗಳಲ್ಲಿ ದೂರು ದಾಖಲಾಗುತ್ತಿರಲಿಲ್ಲ, ಶಿಕ್ಷಕರು ನೌಕರಿ ಕಳೆದುಕೊಂಡು ಮನೆ ಕಡೆ ಮುಖ ಮಾಡುತ್ತಿರಲಿಲ್ಲ.ಆದರೆ ಈಗ ಈ ಸಮಸ್ಯೆ ಬೆಳೆದು ನಿಂತಿದೆ. ಹೀಗಾಗಿ, ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಬೇಕು, ತಂತ್ರಗಳನ್ನು ಗುರುತಿಸಬೇಕು, ಮಾರ್ಗಗಳನ್ನು ಹುಡುಕಿಕೊಳ್ಳಲೇಬೇಕು ಎನ್ನುತ್ತಾರೆ ತಜ್ಞರು.ಪಾಲಕರ ದೋಷ

ಇದನ್ನು  ಪೇರೆಂಟಿಂಗ್ ಪ್ರಾಬ್ಲಮ್ ಎನ್ನುತ್ತೇವೆ. ಅಂದರೆ ಸಮಸ್ಯೆ ಇರುವುದು ಮಕ್ಕಳಲ್ಲಿ ಅಲ್ಲ, ದೊಡ್ಡವರಲ್ಲಿ.

ಮಕ್ಕಳನ್ನು ಒಬ್ಬ ರೋಗಿಯ ಸ್ಥಾನದಲ್ಲಿಟ್ಟು ನೋಡುತ್ತೇವೆ. ಅಂದರೆ ಅವರು ತೊಂದರೆಯಲ್ಲಿರುತ್ತಾರೆ. ಮೊದಲನೆಯದು, ಅವರಿಗೆ ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿದಿರುವುದಿಲ್ಲ. ತಿಳಿವಳಿಕೆಯೂ ಕಡಿಮೆ. ತಮ್ಮಂದಿಗೆ ಪಾಲಕರು ಮತ್ತು ಶಿಕ್ಷಕರು ಯಾಕೆ ಹೀಗೆ ವರ್ತಿಸುತ್ತಾರೆ ಎಂದು ಅವರು ಆಲೋಚಿಸುತ್ತಿರುತ್ತಾರೆ. ಹಾಗೆಯೇ ದೊಡ್ಡವರನ್ನು ವೈದ್ಯರ ಸ್ಥಾನದಲ್ಲಿ ಇಡುತ್ತೇವೆ. ಮಕ್ಕಳ ಸಮಸ್ಯೆ ಏನು ಎನ್ನುವುದನ್ನು ಮೊದಲು ಅವರು ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ಏನು ಪರಿಹಾರ ಎನ್ನುವುದನ್ನು ಕಂಡುಕೊಳ್ಳಬೇಕು. ಅವರ ತೊಂದರೆಯನ್ನು ನಿವಾರಿಸುವಲ್ಲಿ ಕಾರ್ಯ ನಿರ್ವಹಿಸಬೇಕು.ಸಮಸ್ಯೆ ಹುಟ್ಟು ಇಲ್ಲಿದೆ...

ಇಂದಿನ ಆಧುನಿಕ ಜೀವನ ಪದ್ಧತಿಯಲ್ಲಿ ಎಲ್ಲವೂ ವಿಭಕ್ತ ಕುಟುಂಬಗಳೇ. ಅಮ್ಮ- ಅಪ್ಪ ಮತ್ತು ಮಗು. ಕುಟುಂಬದ ಆರ್ಥಿಕ ಸುಸ್ಥಿತಿಯನ್ನು ಕಾಪಾಡಲು ಬಹುತೇಕ ಕುಟುಂಬಗಳಲ್ಲಿ ಅಮ್ಮ-ಅಪ್ಪ ಇಬ್ಬರೂ ದುಡಿಯಲು ಹೋಗುತ್ತಾರೆ. ದಿನದ ಕನಿಷ್ಠ 12 ಗಂಟೆಯನ್ನು ಮಗು ಪುಸ್ತಕ, ಆಟಿಕೆ, ಟಿ.ವಿ, ಕಂಪ್ಯೂಟರ್ ಹಾಗೂ ಕೆಲಸದವರ ಜೊತೆ ಕಳೆಯುತ್ತದೆ.ಆಗ ತಂದೆ-ತಾಯಿಯ ಪ್ರೀತ್ಯಾದರ ಪಡೆಯುವ ವಯೋಸಹಜ ಹಂಬಲ ದಿನ ದಿನವೂ ಸೋಲುತ್ತಾ ಹೋಗುತ್ತದೆ. ಬೇಸರ, ಆತಂಕ, ನಿರಾಸೆಯ ಮನೋಭಾವಗಳು ಬೆಳೆಯುತ್ತವೆ. ಇಂತಹ ಭಾವನೆಗಳನ್ನು ವ್ಯಕ್ತಪಡಿಸುವ ಭಾಷಾ ಜ್ಞಾನವೂ ಇಲ್ಲದ ಮಕ್ಕಳು ಅದನ್ನು ಹೊರಹಾಕಲು ಅನ್ಯ ಮಾರ್ಗಗಳನ್ನು ಹುಡುಕುತ್ತಾರೆ. ಅವರಿಗೆ ಸುಲಭವಾಗಿ ಸಾಧ್ಯವಾಗುವಂತಹ ಹಟ ಮಾಡುವುದು, ರಚ್ಚೆ ಹಿಡಿಯುವುದು, ವಸ್ತುಗಳನ್ನು ನಾಶ ಮಾಡುವುದು ಮುಂತಾದ ವರ್ತನೆಗಳನ್ನು ತೋರುತ್ತಾರೆ.ನಿಯಂತ್ರಣ ಹೇಗೆ?

ಎಳೆಯ ಮಕ್ಕಳನ್ನು ಯಾವುದೇ ಶಿಕ್ಷೆ ಅಥವಾ ದಂಡನೆಗಳಿಂದ ನಿಯಂತ್ರಿಸುವುದು ಸಾಧ್ಯವಿಲ್ಲ. ಇಂತಹ ಮಕ್ಕಳನ್ನು ಪ್ರೀತಿ- ವಿಶ್ವಾಸ, ಅಕ್ಕರೆಗಳಿಂದಲೇ ಗೆಲ್ಲಬೇಕು.ತಾಳ್ಮೆಯಿಂದ ವರ್ತಿಸಿ

ಮಕ್ಕಳು ಏನು ಹೇಳಲು ಹೊರಟಿದ್ದಾರೆ, ಅವರಿಗೆ ಯಾವುದರ ಅವಶ್ಯಕತೆ ಇದೆ, ಅದನ್ನು ಹೇಗೆ ಬಗೆಹರಿಸಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅಂತಹ ಮಕ್ಕಳೊಂದಿಗೆ ತಾಳ್ಮೆಯಿಂದ ವರ್ತಿಸುವುದು ಮುಖ್ಯ. ಕಚೇರಿ ಕೆಲಸ ಅಥವಾ ಇನ್ನಾವುದೇ ಬೇಸರವನ್ನು ಮಕ್ಕಳ ಮೇಲೆ ತೋರಿಸುವುದು ಅತ್ಯಂತ ಅಪಾಯಕಾರಿ.ವರ್ತನೆಯ ಮೋಡಿ

ಋಣಾತ್ಮಕ- ಗುಣಾತ್ಮಕ ವರ್ತನೆಯ ಮೋಡಿಯಿಂದ ಮಕ್ಕಳ ವರ್ತನೆಯಲ್ಲಿ ಹೇಗೆ ಪರಿಣಾಮಕಾರಿ ವ್ಯತ್ಯಾಸವನ್ನು ಗುರುತಿಸಬಹುದು ಎಂಬ ಸೂತ್ರಗಳ ವಿವರ ಇಲ್ಲಿದೆ:- ಎಲ್ಲದಕ್ಕೂ ಶಿಕ್ಷೆಯೊಂದೇ ಪರಿಹಾರವಲ್ಲ. ನಿಮ್ಮ ಋಣಾತ್ಮಕ ಅಥವಾ ಗುಣಾತ್ಮಕ ಪ್ರತಿಕ್ರಿಯೆಗಳು ಮಕ್ಕಳ ವರ್ತನೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಈ ಸೂತ್ರವನ್ನು ಶಾಲೆಯಲ್ಲಿ ಶಿಕ್ಷಕರು/ ಮನೆಯಲ್ಲಿ ಪಾಲಕರು ಪಾಲಿಸಬಹುದು.ಹೀಗೆ ಮಾಡಿ: ಮಗುವಿನ ನೋಟ್‌ಬುಕ್‌ನಲ್ಲಿ ಎರಡು ಹಾಳೆಗಳನ್ನು ಇದಕ್ಕೆಂದೇ ಇಡಿ. ಒಂದು ಹಾಳೆಯನ್ನು ಬ್ಲ್ಯಾಕ್ ಸ್ಟಾರ್ (ಕಪ್ಪು ನಕ್ಷತ್ರ  * ) ಹಾಕಲು, ಇನ್ನೊಂದು ಹಾಳೆಯನ್ನು ರೆಡ್ ಸ್ಟಾರ್ (ಕೆಂಪು ನಕ್ಷತ್ರ *) ಹಾಕಲು ಇಡಿ. ಮಗುವಿಗೆ ಅದನ್ನು ತೋರಿಸಿ ಹೀಗೆ ಹೇಳಿ- ನೋಡು ನೀನು ತಪ್ಪು ಮಾಡಿದಾಗ ಈ ಹಾಳೆಯ ಮೇಲೆ ಒಂದು ಕಪ್ಪು ಸ್ಟಾರ್ ಬೀಳುತ್ತದೆ ಮತ್ತು ನೀನು ಉತ್ತಮ ಕೆಲಸ ಮಾಡಿದಾಗೊಮ್ಮೆ ಈ ಹಾಳೆಯ ಮೇಲೆ ಒಂದು ಕೆಂಪು ಸ್ಟಾರ್ ಸಿಗುತ್ತದೆ. ಒಂದು ವಾರದಲ್ಲಿ ನೀನು ಕಪ್ಪು ಸ್ಟಾರ್‌ಗಳನ್ನು ಹೆಚ್ಚು ಪಡೆಯುತ್ತೀಯೋ, ಕೆಂಪು ಸ್ಟಾರ್‌ಗಳನ್ನೋ ನೋಡೋಣ ಎಂದು ಹೇಳಿ.ಮಗು ಹಟ ಮಾಡಿದಾಗ, ಹೇಳಿದ ಮಾತು ಕೇಳದೇ ಇದ್ದಾಗ, ಹೋಂವರ್ಕ್ ಮಾಡಲು ಸೋಮಾರಿತನ ತೋರಿಸಿದಾಗ ದೈಹಿಕ ಶಿಕ್ಷೆ, ಬೈಗುಳಗಳ ಬದಲು ಅದರ ಮುಂದೆಯೇ ಪುಟದಲ್ಲಿ ಕಪ್ಪು ಸ್ಟಾರ್‌ಗಳನ್ನು ಇಡುತ್ತಾ ಹೋಗಿ. ಹಾಗೆಯೇ ಮಗು ನಿಮ್ಮ ನಿರೀಕ್ಷೆಗೆ ತಕ್ಕಂತೆ ವರ್ತಿಸಿದಾಗ ಕೆಂಪು ಸ್ಟಾರ್ ನೀಡಿ, ಭೇಷ್ ಹೇಳುತ್ತಾ ಹೋಗಿ. ಇದರ ಜೊತೆಗೆ ಕಪ್ಪು ಸ್ಟಾರ್ ಕೊಡುವಾಗ ಬೇಸರ, ತಾತ್ಸಾರ ಭಾವನೆಯನ್ನು ವ್ಯಕ್ತಪಡಿಸಿ.ಇದರ ಜೊತೆಗೆ ಇನ್ನೊಂದು ಚಟುವಟಿಕೆ- ಉತ್ತಮ ವರ್ತನೆ ತೋರಿಸಿದಾಗೆಲ್ಲ ಅವರಿಗೆ ಒಂದು ಸಿಹಿ, ಅವರಿಷ್ಟದ ಆಟಿಕೆ ಏನಾದರೂ ಉಡುಗೊರೆ ಕೊಡಿ. ಅವರು ಇಷ್ಟಪಡುವ ಆಟ ಆಡಿಸುವುದು, ಸಾಧ್ಯವಿದ್ದರೆ ಉದ್ಯಾನಕ್ಕೆ ಕರೆದುಕೊಂಡು ಹೋಗಿ. ಹಾಗೆಯೇ ಕಠಿಣ ವರ್ತನೆ ತೋರಿದಾಗೆಲ್ಲ ಅವರಿಂದ ಅವರಿಷ್ಟದ ವಸ್ತುಗಳನ್ನು ದೂರ ಇಡುವ ಮೂಲಕ, ನೀನು ಹೀಗೆ ಮಾಡಿದ್ದಕ್ಕೆ ಇದುವೇ ಶಿಕ್ಷೆ ಎಂದು ಸಮಾಧಾನದಿಂದಲೇ ತಿಳಿಸಿ ಹೇಳಿ.ಇದರಿಂದ ಮಕ್ಕಳಿಗೆ ತಮ್ಮ ಉತ್ತಮ ವರ್ತನೆ ಹಾಗೂ ಕೆಟ್ಟ ವರ್ತನೆಗಳ ಫಲಿತಾಂಶ ಅಲ್ಲಿಯೇ ಸಿಗುತ್ತದೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ವರ್ತಿಸಿದಾಗ ಸಿಗುವ ಪ್ರೀತಿ, ಮೆಚ್ಚುಗೆ, ಲಾಭಗಳು ಅವರನ್ನು ಅಂಥದೇ ವರ್ತನೆಯನ್ನು ತೋರಿಸಲು ಪ್ರೇರೇಪಿಸುತ್ತವೆ. ತಾನು ಕಪ್ಪು ಸ್ಟಾರ್‌ಗಿಂತ ಕೆಂಪು ಸ್ಟಾರ್‌ಗಳನ್ನೇ ಹೆಚ್ಚು ಪಡೆಯಬೇಕು ಎಂಬ ಹಂಬಲ ಬೆಳೆಯುತ್ತದೆ. ಇದರಿಂದ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಕಾಣಬಹುದು.ಮಕ್ಕಳ ಪೋಷಣೆಯ ಜವಾಬ್ದಾರಿ ಬಹಳ ದೊಡ್ಡದು. ನಾವು ಎಂತಹ ಪಾಲಕರು ಎಂಬ ಸಂಗತಿ ನಾಳೆ ನಮ್ಮ ಮಕ್ಕಳು ಏನಾಗುತ್ತಾರೆ, ಅವರ ಭವಿಷ್ಯವೇನು, ಎಂತಹ ವ್ಯಕ್ತಿತ್ವ ಬೆಳೆಸಿಕೊಳ್ಳುತ್ತಾರೆ, ಸಮಾಜದಲ್ಲಿ ಎಂತಹ ಸ್ಥಾನ ಪಡೆದುಕೊಳ್ಳುತ್ತಾರೆ ಎಂಬ ಅಂಶಗಳನ್ನು ನಿರ್ಧರಿಸುತ್ತದೆ.ಇಂದಿನ ಮಕ್ಕಳಿಗೂ ಒತ್ತಡದ ಬದುಕು

ಮಕ್ಕಳಿಗಾಗಿ ನಾವು ರಾತ್ರಿ ಹಗಲೂ ದುಡಿಯುತ್ತೇವೆ. ಲಕ್ಷಾಂತರ ಡೊನೇಶನ್, ತಿಂಗಳು-ತಿಂಗಳೂ ಸಾವಿರಾರು ರೂಪಾಯಿ ಶುಲ್ಕ ಪಾವತಿಸಿ ಉತ್ತಮ ಶಾಲೆಗೆ ಸೇರಿಸುತ್ತೇವೆ. ಪಠ್ಯೇತರ ಚಟುವಟಿಕೆಯೂ ಇರಲಿ ಎಂದು ಮ್ಯೂಸಿಕ್, ಕರಾಟೆ, ಸ್ಕೇಟಿಂಗ್ ಕ್ಲಾಸುಗಳೂ ನಡೆಯುತ್ತವೆ. ನಾವು ಚಿಕ್ಕವರಿದ್ದಾಗ ನಮಗೆ ಇಷ್ಟು ಅನುಕೂಲ ಇರಲಿಲ್ಲ. ಇವರಿಗೆ ಕೇಳಿದ್ದನ್ನೇನೂ ಇಲ್ಲ ಎನ್ನುವುದಿಲ್ಲ, ಆದರೂ ಚೆನ್ನಾಗಿ ಓದಿಕೊಂಡು ಜಾಣರಾಗಿರಲು ಇವರಿಗೇನು ಕಷ್ಟ?

-ವೈದ್ಯರ ಬಳಿ ಬರುವ ಬಹುತೇಕ ಪಾಲಕರ ವಾದ ಇದು. ಆದರೆ ನಿಮಗೆ ತಿಳಿದಿರಲಿ, ಇಂದಿನ ಮಕ್ಕಳಿಗೂ ಅವರದೇ ಆದ ಸಮಸ್ಯೆಗಳಿವೆ. ಎಳೆಯ ಮನಸ್ಸುಗಳು ಹೆಚ್ಚಿನ ಹೊರೆಯಿಂದ ತತ್ತರಿಸುತ್ತಿವೆ. ಅವರಿಗೂ ಒತ್ತಡವಿದೆ, ಕ್ಷಣ ಕ್ಷಣವೂ ಆತಂಕವಿದೆ.ಅದನ್ನೆಲ್ಲ ಅವರು ನಿಮ್ಮೆದುರಲ್ಲದೇ ಬೇರೆ ಯಾರಲ್ಲಿ ತೋರಿಸಿಕೊಳ್ಳಬೇಕು? ಅವರಿಗೆ ವೈದ್ಯರ ಚಿಕಿತ್ಸೆ, ಔಷಧಕ್ಕಿಂತ ಹೆಚ್ಚಾಗಿ ನಿಮ್ಮ ಪ್ರೀತಿ ಸಾಂತ್ವನವೇ ಮುಖ್ಯ. ಮಕ್ಕಳು ನಿಮ್ಮನ್ನು ಅರ್ಥಮಾಡಿಕೊಳ್ಳಬೇಕು ಎನ್ನುವುದನ್ನು ಬಿಡಿ. ಮಕ್ಕಳನ್ನು ನೀವು ಎಷ್ಟು ಅರ್ಥ ಮಾಡಿಕೊಂಡಿದ್ದೀರಿ ಎನ್ನುವುದು ಗಮನಿಸಿಕೊಳ್ಳಿ. ನಿಮ್ಮ ಸಾಮೀಪ್ಯವೂ ಅವರಲ್ಲಿ ಮಹತ್ತರವಾದ ಬದಲಾವಣೆಯನ್ನು ತರಬಲ್ಲದು ಎಂಬುದನ್ನು ನೆನಪಿನಲ್ಲಿಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry