ಮುದ್ರಣ ಅಳಿಸಲು ಅನ್‌ಪ್ರಿಂಟ್!

7

ಮುದ್ರಣ ಅಳಿಸಲು ಅನ್‌ಪ್ರಿಂಟ್!

Published:
Updated:
ಮುದ್ರಣ ಅಳಿಸಲು ಅನ್‌ಪ್ರಿಂಟ್!

ಹಿಂದೆ ಪುಟ್ಟ ಮಕ್ಕಳು ಕಪ್ಪು ಸ್ಲೇಟಿನ ಮೇಲೆ ಗೀಚಿದ ಬಳಪದ ಗೆರೆಗಳನ್ನು ಅಳಿಸಲು ಎಂಜಲನ್ನೋ, ತುಂಡು ಒದ್ದೆ ಬಟ್ಟೆಯನ್ನೋ, ಅವರದೇ ಅಂಗಿಯ ಚುಂಗನ್ನೋ ಬಳಸುತ್ತಿದ್ದರು.ಶಾಲೆ-ಕಾಲೇಜಿನಲ್ಲಿ ಕಪ್ಪು ಅಥವಾ ಹಸಿರು ಹಲಗೆಯ ಮೇಲೆ ಮೇಷ್ಟ್ರು /ಉಪನ್ಯಾಸಕರು ಬಿಳಿಯ ಸೀಮೆಸುಣ್ಣದಿಂದ ಬರೆದದ್ದನ್ನು ಒರೆಸಿಹಾಕಲು ಡಸ್ಟರ್ ಉಪಯೋಗಿಸುತ್ತಿದ್ದಾರೆ. ಕಾಗದದ ಮೇಲೆ ಪೆನ್ಸಿಲ್‌ನಿಂದ ಬರೆದದ್ದನ್ನು 1 ರೂಪಾಯಿಯ ಪುಟ್ಟ ರಬ್ಬರ್ ಬಳಸಿ ಅಳಿಸಿ ಹಾಕಬಹುದಾಗಿದೆ.ಆದರೆ, ಕಾಗದದ ಮೇಲೆ ಇಂಕ್ ಪೆನ್‌ನಿಂದ ಬರೆದದ್ದು, ಬಣ್ಣದಲ್ಲಿ ಮುದ್ರಿಸಿದ್ದನ್ನು ಅಳಿಸಿ ಹಾಕಲು ಸಾಧ್ಯವೇ ಇಲ್ಲ. ಹೆಚ್ಚೆಂದರೆ ಬೇಡವಾದ ಅಕ್ಷರದ ಮೇಲೆ `ವೈಟನರ್~ (ಬಿಳಿಯ ಬಣ್ಣ) ಹಚ್ಚಿ ಅಕ್ಷರ ಕಾಣದಂತೆ ಮಾಡಬಹುದು. ಹೀಗೊಂದು ನಂಬಿಕೆ ಈವರೆಗೂ ಇದೆ. ಮುಂದೆಯೂ ಇರಲಿದೆ.ಇಲ್ಲ, ಆ ನಂಬಿಕೆ ಈಗ ಲಂಡನ್‌ನಲ್ಲಿ ಸುಳ್ಳಾಗಿದೆ. ಶಾಯಿಯಲ್ಲಿ ಬರೆದಿರುವುದೇ ಇರಲಿ, ಮುದ್ರಣವೇ ಆಗಿರಲಿ ಸಣ್ಣ ಗುರುತೂ ಇಲ್ಲದಂತೆ ಅಳಿಸಿ ಹಾಕುವ ಸಮಯ (ತಂತ್ರಜ್ಞಾನ) ಬಂದಿದೆ. ಇಂಥದೊಂದು `ಅಕ್ಷರ ಮಾಯ~ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವುದು ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕ ತಂಡ. ಈ ತಂಡದ ಮುಖ್ಯಸ್ಥ ಜುಲಿಯನ್ ಆಲ್‌ವುಡ್!ಕಾಗದ ಮೇಲಿನ ಮುದ್ರಣವನ್ನು ಲೇಸರ್ ಕಿರಣಗಳನ್ನು ಬಳಸಿ ಕ್ಷಣ ಮಾತ್ರದಲ್ಲಿ ಅಳಿಸಿ ಹಾಕಬಹುದು ಎಂಬುದನ್ನು ಹಲವು ಪ್ರಯೋಗಗಳ ಮೂಲಕ ಕಂಡುಕೊಂಡಿದೆ ಆಲ್‌ವುಡ್ ತಂಡ. ಆ ಮೂಲಕ `ವುಡ್~ (ಮರ) ಸಾಕಷ್ಟು ಪ್ರಮಾಣದಲ್ಲಿ ಉಳಿಸುವ `ಪರಿಸರ ರಕ್ಷಣೆ~ ಕೆಲಸಕ್ಕೂ ಶ್ರೀಕಾರ ಹಾಕಿದೆ.ಆಲವುಡ್ ನೇತೃತ್ವದ ಎಂಜಿನಿಯರ್‌ಗಳ ಸಂಶೋಧಕ ತಂಡ ಹಸಿರು ಲೇಸರ್ ಕಿರಣಗಳನ್ನು ಕಾಗದದ ಮೇಲೆ ಹಾಯಿಸಿ ಮುದ್ರಣ ಅಕ್ಷರಗಳನ್ನು ಅಳಿಸಿ ಹಾಕಿದ ನಂತರ ಅದೇ ಕಾಗದವನ್ನು ಮತ್ತೆ ಮುದ್ರಣಕ್ಕೆ ಬಳಸಿ ತೋರಿಸಿದೆ. ಈ ತಂತ್ರಜ್ಞಾನ ಅದೆಷ್ಟು ಸೂಕ್ಷ್ಮ ಸ್ವರೂಪದಲ್ಲಿ `ಅಳಿಸುವ~ ಕೆಲಸ ಮಾಡುತ್ತದೆ ಎಂದರೆ ಕಾಗದವನ್ನು ಮುದ್ರಣಕ್ಕೂ ಮೊದಲು ಇದ್ದ `ಗರಿ ಗರಿ ಹಾಳೆ~ ಸ್ಥಿತಿಗೇ ತರುತ್ತದೆ.`ಈ ಕಾಗದದ ಮೇಲೆ ಈ ಮೊದಲೇ ಅಕ್ಷರಗಳು-ಚಿತ್ರಗಳು ಮೂಡಿದ್ದವು~ ಎಂದು ಹೇಳಲು ಸಾಧ್ಯವೇ ಇಲ್ಲದಷ್ಟು ಅಚ್ಚುಕಟ್ಟಾಗಿ ಹಸಿರು ಬಣ್ಣದ ಲೇಸರ್ ಕಿರಣಗಳು ಮುದ್ರಣವನ್ನು ಅಳಿಸಿ ಬಿಡುತ್ತವೆ. ಅಷ್ಟೇ ಅಲ್ಲ, ಕಾಗದದಲ್ಲಿ ಸಣ್ಣ ಸುಕ್ಕೂ ಬಾರದಂತೆ, ಹೊಸ ಕಾಗದವೇನೋ ಎನ್ನುವಂತೆ ಮಾಡಿಬಿಡುತ್ತದೆ ಎನ್ನುತ್ತಾರೆ ಆಲ್‌ವುಡ್ ಮತ್ತು ಸಂಶೋಧಕ ಮಿತ್ರರು.ಹೀಗೆ ಲೇಸರ್ ಕಿರಣ ಬಳಸಿ ಅಕ್ಷರ ಅಳಿಸಿದ ನಂತರ ಈ ಕಾಗದವನ್ನು ಮತ್ತೆ ಮುದ್ರಣಕ್ಕೂ, ಜೆರಾಕ್ಸ್ ತೆಗೆಯಲು, ಬರೆಯಲು... ಯಾವುದಕ್ಕೆ ಬೇಕಾದರೂ `ಹೊಸ ಕಾಗದ~ದಂತೆಯೇ ಬಳಸಬಹುದು. ಇದರಿಂದಾಗಿ ಕಾಗದದ ಉತ್ಪಾದನೆ ಪ್ರಮಾಣ ಕಡಿಮೆ ಮಾಡಬಹುದು. ಆ ಮೂಲಕ ಮರ ಹನನವನ್ನೂ ತಗ್ಗಿಸಬಹುದು.ಈ ಸಂಶೋಧಕರು ತಮ್ಮ ಆವಿಷ್ಕಾರವನ್ನು ಸದ್ಯಕ್ಕೆ `ಅನ್‌ಪ್ರಿಂಟ್~ ಎಂದು ಕರೆದಿದ್ದಾರೆ. ಹಸಿರು ವರ್ಣದ ಲೇಸರ್ ಕಿರಣಗಳನ್ನು ಬಲು ಚಿಕ್ಕ ಬೆಳಕಿನ ಕೋಲುಗಳಂತೆ ಅಕ್ಷರ ಅಥವಾ ಚಿತ್ರದ ಮೇಲೆ ಹಾಯಿಸಲಾಗುತ್ತದೆ.ಆ ಕಿರಣಗಳು ಅಕ್ಷರ ಅಥವಾ ಚಿತ್ರದ ಗೆರೆಗಳನ್ನು ಬಹಳ ಮೃದುವಾಗಿ ಬಿಸಿ ಮಾಡಿ ಆವಿಯಾಗಿಸುತ್ತವೆ. ಈ ಕಿರಣಗಳ ಬಿಸಿ ಅದೆಷ್ಟು ಮೃದು ಹಾಗೂ ಸೂಕ್ಷ್ಮ ಎಂದರೆ ಕಾಗದಕ್ಕೆ ಚೂರೂ ಹಾನಿಯಾಗುವುದಿಲ್ಲ!ಅನ್ ಪ್ರಿಂಟ್~ ತಂತ್ರಜ್ಞಾನ ಆವಿಷ್ಕಾರವಾಯಿತು. ಮುಂದಿನ ಹೆಜ್ಜೆ?ಈ ತಂತ್ರಜ್ಞಾನ ಆಧಾರಿತ ಹೊಸ ಸಾಧನವನ್ನು ಸದ್ಯ ಮಾರುಕಟ್ಟೆಗೆ ಬರುತ್ತಿರುವ ಲೇಸರ್ ಪ್ರಿಂಟರ್‌ಗಳಿಗೇ ಇನ್ನೊಂದು ಮಗ್ಗಲಲ್ಲಿ ಅಳವಡಿಸಿದರಾಯಿತು ಅಷ್ಟೆ. ಆಗ ಲೇಸರ್ ಪ್ರಿಂಟರ್‌ನಲ್ಲಿ ಒಂದೆಡೆ ಮುದ್ರಿಸಿರಿ, ಇನ್ನೊಂದೆಡೆ ಅಳಿಸಿರಿ!

ಸುಮ್ಮನೆ ಊಹಿಸಿಕೊಳ್ಳಿ..ಕಚೇರಿ ಕೆಲಸದ ಗಡಿಬಿಡಿ, ಒತ್ತಡದಲ್ಲಿ ಕಂಪ್ಯೂಟರ್‌ನಿಂದ ಪ್ರಿಂಟ್‌ಗೆ ನೀಡಬೇಕಾಗಿದ್ದಕ್ಕೆ ಬದಲು ಬೇರಾವುದನ್ನೋ ಮುದ್ರಿಸಲು `ಓಕೆ~ ಕೊಟ್ಟಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಕ್ಯಾನ್ಸಲ್ ಬಟನ್ ಒತ್ತುವ ಮೊದಲೇ ಮುದ್ರಣವಾಗಿಯೇ ಬಿಟ್ಟಿತು. `ಛೆ ಕಾಗದ ವ್ಯರ್ಥವಾಯಿತಲ್ಲಾ~ ಎಂದು ಬೇಸರ ಪಡಬೇಕಿಲ್ಲ.

 

ಆ ಮುದ್ರಿತ ಕಾಗದವನ್ನು ಅದೇ ಯಂತ್ರದ ಇನ್ನೊಂದು ಬದಿಯಲ್ಲಿರುವ `ಅನ್‌ಪ್ರಿಂಟ್~ ಕಿಂಡಿಯಲ್ಲಿ ತೂರಿಸಿರಿ. ಆ ಕಡೆಯಿಂದ ಬಿಳಿಯ ಶುಭ್ರ ಕಾಗದ ಹೊರಬರುತ್ತದೆ. ಅದೇ ಕಾಗದ ಬಳಸಿ ನಿಮಗೆ ಅಗತ್ಯವಾಗಿರುವ `ಪ್ರಿಂಟ್~ ನೀಡಿದರಾಯಿತು.ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಈ `ಅನ್ ಪ್ರಿಂಟ್~ ಸಾಧನ ತಯಾರಿಸಲು 19 ಸಾವಿರ ಪೌಂಡ್ ವೆಚ್ಚವಾಗಿದೆ. ಈ ತಂತ್ರಜ್ಞಾನವನ್ನೇ ಬಳಸಿ ದೊಡ್ಡ ಪ್ರಮಾಣದಲ್ಲಿ ಯಂತ್ರಗಳನ್ನು ತಯಾರಿಸಲಾರಂಭಿಸಿದರೆ ಈ ಅಪರೂಪದ ಸಾಧನ ತಯಾರಿಕೆ ವೆಚ್ಚವೂ(16000 ಪೌಂಡ್‌ಗೆ) ತಗ್ಗುತ್ತದೆ ಎನ್ನುತ್ತಾರೆ ಆಲ್‌ವುಡ್.ಅಕ್ಷರ-ಚಿತ್ರ ಅಳಿಸುವ ಕ್ರಿಯೆಗೆ ಕಣ್ಣಿಗೆ ಗೋಚರಿಸದ ಅಲ್ಟ್ರಾವಾಯ್ಲೆಟ್ (ಅತಿನೇರಳೆ) ಮತ್ತು ಇನ್‌ಫ್ರಾರೆಡ್ ಕಿರಣಗಳನ್ನೂ ಬಳಸಬಹುದು. ಆದರೆ ಕಣ್ಣಿಗೆ ಗೋಚರಿಸುವಂತಹ ಹಸಿರು ಲೇಸರ್ ಕಿರಣಗಳು ಈ ಅಳಿಸುವ ಕೆಲಸವನ್ನು ಬಹಳ ಉತ್ತಮವಾಗಿ ಮಾಡುತ್ತವೆ. ಅಲ್ಲದೆ ಈ ಹಸಿರು ಕಿರಣಗಳು ಕಾಗದಕ್ಕೆ ಯಾವುದೇ ಹಾನಿ ಮಾಡುವುದಿಲ್ಲ ಎಂಬುದನ್ನೂ ಈ ಸಂಶೋಧಕರ ತಂಡ ಕಂಡುಕೊಂಡಿದೆ.ಮುದ್ರಣ ಅಳಿಸುವ ವೇಳೆ ಕಾಗದದಿಂದ ಶಾಯಿ ಅಥವಾ ಬಣ್ಣ ಹಬೆಯಂತೆ ಮೇಲೇಳುತ್ತದೆ. ಈ ಹಬೆಯನ್ನೂ ಎಳೆದುಕೊಂಡು ಒಂದೆಡೆ ಸಂಗ್ರಹಿಸಲು ಫಿಲ್ಟರ್‌ಗಳನ್ನೂ ಬಳಸಬಹುದು ಎನ್ನುತ್ತಾರೆ ಸಂಶೋಧಕರು.ಈ ತಂತ್ರಜ್ಞಾನದ ವಿವರ ಕೇಳಿಕೊಂಡು ಬಹಳಷ್ಟು ಕಂಪೆನಿಗಳನ್ನು ಆಲ್‌ವುಡ್ ಅವರನ್ನು ಈಗಾಗಲೇ ಸಂಪರ್ಕಿಸಿವೆ. 

                    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry