ಗುರುವಾರ , ನವೆಂಬರ್ 21, 2019
20 °C

ಮುದ್ರಣ ಮಾಧ್ಯಮಗಳ ಮೇಲೆ ಬಿಸಿಸಿಐ ನಿರ್ಬಂಧ

Published:
Updated:

ನವದೆಹಲಿ: `ನ್ಯಾಯಯುತ ವ್ಯಾಪಾರ ನಿಯಂತ್ರಣ ಸ್ಪರ್ಧಾ ಆಯೋಗ'ದ (ಸಿಸಿಐ) ಸೂಚನೆ ಹೊರತಾಗಿಯೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತೊಮ್ಮೆ ತಪ್ಪು ಹೆಜ್ಜೆ ಇಟ್ಟಿದೆ. ಐಪಿಎಲ್  ಸುದ್ದಿಗಳಲ್ಲಿ ಟೂರ್ನಿಗೆ ಸಂಬಂಧಪಡದವರ ಲಾಂಛನ ಹಾಗೂ ಪ್ರಾಯೋಜಕರ ಹೆಸರು ಬಳಸದಿರುವಂತೆ ಮುದ್ರಣ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಿದ್ದು, ಟೀಕೆಗೆ ಗುರಿಯಾಗಿದೆ.ಸ್ಪರ್ಧೆ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ ಎಂದಿದ್ದ ಸಿಸಿಐ, ಫೆಬ್ರುವರಿ 8ರಂದು ಬಿಸಿಸಿಐಗೆ ರೂ. 52.24 ಕೋಟಿ ದಂಡ ವಿಧಿಸಿತ್ತು. `ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿರುವ ಬಿಸಿಸಿಐ ಹಣಬಲ ಹಾಗೂ ಖ್ಯಾತಿಯಿಂದ ಮಾರುಕಟ್ಟೆ ಮೇಲೆ ಏಕಸ್ವಾಮ್ಯ ಸಾಧಿಸಿದೆ. ಮಾತ್ರವಲ್ಲ; ತನ್ನ ಸ್ಪರ್ಧಿಗಳಿಗೆ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸುವ ಅವಕಾಶ ನಿರಾಕರಿಸಿದೆ' ಎಂದು ಸ್ಪರ್ಧಾ ಆಯೋಗ ತಿಳಿಸಿತ್ತು. ಭವಿಷ್ಯದಲ್ಲಿ ಈ ರೀತಿ ತಪ್ಪು ಮಾಡಬಾರದು ಎಂದು ಎಚ್ಚರಿಕೆ ನೀಡಿತ್ತು.ಆದರೆ ಅದನ್ನು ಬಿಸಿಸಿಐ ಪಾಲಿಸಿಲ್ಲ. ಈಗ ಚುಟುಕು ಕ್ರಿಕೆಟ್‌ನ ಸುದ್ದಿಗಳಿಗೆ ಸಂಬಂಧಿಸಿದಂತೆ ಟೂರ್ನಿಯ ಪ್ರಾಯೋಜಕರು, ಲಾಂಛನ ಹೊರತುಪಡಿಸಿ ಉಳಿದ ಪ್ರಾಯೋಜಕರ ಹೆಸರನ್ನು ಬಳಸದಂತೆ ಐಪಿಎಲ್ ಆಡಳಿತವು ಮುದ್ರಣ ಮಾಧ್ಯಮಗಳಿಗೆ ಅಧಿಸೂಚನೆ ಹೊರಡಿಸಿದೆ.`ಐಪಿಎಲ್‌ಗೆ ಸಂಬಂಧಿಸಿದ ಲೇಖನ, ಸುದ್ದಿಗಳೊಂದಿಗೆ ಟೂರ್ನಿಗೆ ಸಂಬಂಧಪಡದ ಜಾಹೀರಾತು, ಹೆಸರು, ಲಾಂಛನವನ್ನು ಬಳಸುವಂತಿಲ್ಲ. ಪರವಾನಗಿ ಇಲ್ಲದೇ ಐಪಿಎಲ್ ಹೆಸರು, ಇನ್ನಿತರ ವಿಷಯಗಳ ಜೊತೆ ಬೇರೆಯ ಜಾಹೀರಾತುಗಳನ್ನು ಹಾಕುವಂತಿಲ್ಲ' ಎಂದು ಮಾರ್ಚ್ 29ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಹೇಳಲಾಗಿದೆ.

ಪ್ರತಿಕ್ರಿಯಿಸಿ (+)