ಸೋಮವಾರ, ಆಗಸ್ಟ್ 26, 2019
20 °C

ಮುದ್ರೆಮನೆ: ಅರಣ್ಯ ಸೇರಿದ ಕಾಡಾನೆ ತಂಡ

Published:
Updated:

ಮೂಡಿಗೆರೆ: ತಾಲ್ಲೂಕಿನ ಜೇನುಬೈಲು ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಶುಕ್ರವಾರ ಮುಂಜಾನೆ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ರಮನೆ ಗ್ರಾಮಕ್ಕೆ ಬಂದಿದ್ದು, ಈ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 234 ರ ವಿಲ್ಲುಪುರಂ- ಮಂಗಳೂರು ರಸ್ತೆಯನ್ನು ದಾಟಿ ಮುದ್ರೆಮನೆ ಬಳಿಯಿರುವ ಮೀಸಲು ಅರಣ್ಯವನ್ನು ಸೇರಿವೆ.ಮತ್ತೊಮೆ ಹೆದ್ದಾರಿಯನ್ನು ದಾಟಿ ಹಿಂತಿರುಗದಿದ್ದರೆ ಮುತ್ತಿಗೆಪುರ, ಹಳಸೆ, ಕುನ್ನಹಳ್ಳಿ, ಬೀಜೊಳ್ಳಿ ಮಾರ್ಗವಾಗಿ ಪಟ್ಟಣಕ್ಕೆ ಆಗಮಿಸುವ ಅಪಾಯವಿದ್ದು, ಪಟ್ಟಣಕ್ಕೆ ದಾಳಿ ನಡೆಸಿದರೆ ಅನಾವುತ ಸಂಭವಿಸುವ ಅಪಾಯವಿದ್ದು ಕೂಡಲೇ ಆನೆಗಳನ್ನು ಹಿಂತಿರುಗಿಸುವ ಕೆಲಸ ನಡೆಯಬೇಕಾಗಿದೆ.ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಒಂದುವರೆ ವಾರದಿಂದ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡಿನಿಂದಾಗಿ, ಜೇನುಬೈಲು, ಅಣಜೂರು, ಹಂಡಗುಳಿ, ಸಚ್ಚಿನ್‌ನಗರ, ಹಾಲೂರು ಭಾಗಗಳಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಶೀಘ್ರವಾಗಿ ಅರಣ್ಯಕ್ಕೆ ಅಟ್ಟುವ ಕಾರ್ಯ ನಡೆಯದಿದ್ದರೆ, ಗದ್ದೆ ನಾಟಿ ಪೂರ್ಣವಾದ ನಂತರ ಓಡಿಸಲು ಪ್ರಯತ್ನಿಸಿದರೆ ಇನ್ನಷ್ಟು ನಷ್ಟವಾಗುವಾಗುತ್ತದೆ ಎಂದು ರೈತರು ಆರೋಪಿಸಿದ್ದಾರೆ.ಕಾಡಿಗಟ್ಟಲು ಒತ್ತಾಯ: ಕಳೆದ ಹದಿನೈದು ದಿನಗಳಿಂದ ತಾಲ್ಲೂಕಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸದೇ ಇರುವುದರಿಂದ ಬೆಳೆ ಹಾನಿಯಾಗುತ್ತಿದೆ. ಗುಂಪಿನಲ್ಲಿರುವ ಒಂದು ಆನೆ, ಮನುಷ್ಯ ಮತ್ತು ಪ್ರಾಣಿಗಳನ್ನು ಅಟ್ಟಿಸಿಕೊಂಡು ಬರುತ್ತಿರುವುದು ರೊಚ್ಚಿಗೆದ್ದಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಈ ಭಾಗದಲ್ಲಿ ಜೀವ ಹಾನಿ ಸಂಭವಿಸುವ ಮೊದಲು ಕಾಡಾನೆಗಳನ್ನು ಶೀಘ್ರವಾಗಿ ಕಾಡಿಗಟ್ಟಲು ಒತ್ತಾಯಿಸಲಾಗಿದೆ.

Post Comments (+)