ಶನಿವಾರ, ಮೇ 8, 2021
26 °C

`ಮುದ್ಲಾಪುರ ರಸ್ತೆಗೊಂದು ಸೇತುವೆ ನಿರ್ಮಿಸಿ'

ಪ್ರಜಾವಾಣಿ ವಾರ್ತೆ / ಶರತ್ ಹೆಗ್ಡೆ Updated:

ಅಕ್ಷರ ಗಾತ್ರ : | |

`ಮುದ್ಲಾಪುರ ರಸ್ತೆಗೊಂದು ಸೇತುವೆ ನಿರ್ಮಿಸಿ'

ಕೊಪ್ಪಳ: ಕಿನ್ನಾಳ-ಮುದ್ಲಾಪುರ ಸಂಪರ್ಕಿಸುವ ರಸ್ತೆಯ ಹಿರೇಹಳ್ಳದ ತಾತ್ಕಾಲಿಕ ರಸ್ತೆ ಸಮರ್ಪಕವಾಗಿರದೇ ಮುದ್ಲಾಪುರ ಆಸುಪಾಸಿನ ನೂರಾರು ಗ್ರಾಮಸ್ಥರು ಬವಣೆ ಅನುಭವಿಸುವಂತಾಗಿದೆ.ಇಲ್ಲಿನ ಸುಮಾರು 150 ಕುಟುಂಬಗಳ 500ಕ್ಕೂ ಹೆಚ್ಚುಮಂದಿ ಓಡಾಡಲು ಇದೇ ರಸ್ತೆಯನ್ನು ಅವಲಂಬಿಸಬೇಕಿದೆ. ಆದರೆ ಹಳ್ಳದ ಹರಿವಿಗೆ ಅಡ್ಡಲಾಗಿ ನಿರ್ಮಿಸಲಾದ ತಾತ್ಕಾಲಿಕ ರಸ್ತೆ ಪ್ರತಿವರ್ಷ ಕುಸಿಯುವುದು, ಮುದ್ಲಾಪುರ ಗ್ರಾಮ ಅಕ್ಷರಶಃ ದ್ವೀಪವಾಗುವುದು ಸಾಮಾನ್ಯ ಸಂಗತಿ.ಮುದ್ಲಾಪುರ ಸ್ಥಳಾಂತರಗೊಳ್ಳಲಿರುವ ಗ್ರಾಮ ಎಂಬ ಅಸಡ್ಡೆ ಒಂದೆಡೆಯಾದರೆ, ಸೇತುವೆಗೆ ಕೋಟ್ಯಂತರ ವೆಚ್ಚವಾಗುತ್ತದೆ ಎಂಬುದು ಜಲಾನಯನ ಇಲಾಖೆಯ ಲೆಕ್ಕಾಚಾರ.ಹಳ್ಳದ ಹರಿವಿಗೆ ಹಾಕಿರುವ ತೂಬುಗಳಲ್ಲೇ ಹೂಳು ತುಂಬಿದೆ. ಜೊಂಡು ಹುಲ್ಲು ಬೆಳೆದು ನೀರಿನ ಹರಿವಿಗೆ ತಡೆಯಾಗಿದೆ. ಹಳ್ಳ ತುಂಬಿದಾಗ ಅಣೆಕಟ್ಟೆಯ ಗೇಟು ತೆರೆದರೆ ಹರಿಯುವ ನೀರಿನ ರಭಸಕ್ಕೆ ರಸ್ತೆಯ ಮೇಲಿನ ಮಣ್ಣೆಲ್ಲಾ ಕೊಚ್ಚಿಹೋಗುತ್ತದೆ. ರಸ್ತೆ ಸರಿಯಾಗುವವರೆಗೆ ಎರಡು ಊರಿನ ಸಂಪರ್ಕ ಬಂದ್ ಆಗುತ್ತದೆ. ಈಗಾಗಲೇ ತಾತ್ಕಾಲಿಕ ರಸ್ತೆಯ ಎರಡೂ ಭಾಗದ ಮಣ್ಣು ಕುಸಿದಿದೆ. ಬಹಳ ಹಿಂದೆ ನಿರ್ಮಿಸಲಾದ ಕಿರು ಸೇತುವೆ ಕೊಚ್ಚಿಹೋದ ಕುರುಹು ಇನ್ನೂ ಇದೆ. ನೀವೇ ನೋಡಿ ಗ್ರಾಮಕ್ಕೆ ಬರುವ ರಸ್ತೆಗೆ ಪೂರ್ಣ ಪ್ರಮಾಣದಲ್ಲಿ ಡಾಂಬರೀಕರಣ ಆಗಿಲ್ಲ ಎನ್ನುತ್ತಾರೆ ಗ್ರಾಮಸ್ಥ ಫಕೀರಪ್ಪ ಎತ್ತಿನಮನಿ.ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು, ಎತ್ತು, ಕೃಷಿ ಪರಿಕರ ಒಯ್ಯುವ ರೈತರು ಮುದ್ಲಾಪುರದಿಂದ ಹಿರೇಹಳ್ಳ ಅಣೆಕಟ್ಟೆಯ ಮೇಲ್ಭಾಗದಿಂದ ನಡೆದುಕೊಂಡು ಬರಬೇಕು. ಅಲ್ಲಿ ವಾಹನ ಸಂಚರಿಸಲು ಆಗದು. ಕುಗ್ರಾಮವಾಗಿರುವ ಮುದ್ಲಾಪುರಕ್ಕೆ ಬಸ್ ಸೌಲಭ್ಯ ಇಲ್ಲ. ಏನಿದ್ದರೂ ಟಾಟಾ ಏಸ್, ಆಪೆ ಆಟೋಗಳೇ ಗತಿ. ಇಲ್ಲವಾದರೆ ಸಿಕ್ಕಿದ ಬೈಕ್, ಬೈಸಿಕಲ್ ಹತ್ತಿ ಸಾಗಬೇಕು ಎನ್ನುತ್ತಾರೆ ಗ್ರಾಮಸ್ಥ ಷಣ್ಮುಖಪ್ಪ ಎತ್ತಿನಮನಿ.ಹಿರೇಹಳ್ಳ ಯೋಜನೆಯಿಂದ ನಮ್ಮ ಊರಿಗೇನೂ ಪ್ರಯೋಜನ ಆಗಿಲ್ಲ. ಆದರೆ, ನಮ್ಮೂರು ಇದರಿಂದ ಸಮಸ್ಯೆ ಎದುರಿಸುತ್ತಿದೆ.  ಪ್ರತಿ ವರ್ಷ ಮಣ್ಣುಹಾಕಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗುತ್ತದೆ. ಆದರೆ ಮಳೆಗಾಲದಲ್ಲಿ ಗೋಳು ತಪ್ಪಿದ್ದಲ್ಲ ಎಂದರು ದೇವಪ್ಪ ಎತ್ತಿನಮನಿ.ಗಂಗಾವತಿ ವಿಧಾನಸಭಾ ಕ್ಷೇತ್ರದ ಕೊನೆಯ ಗ್ರಾಮವೇ ಮುದ್ಲಾಪುರ. 500 ಮತದಾರರಿರುವ ಈ ಊರು ಮೂಲಸೌಲಭ್ಯದಿಂದ ವಂಚಿತವಾಗಿದೆ. ಶಾಸಕ ಇಕ್ಬಾಲ್ ಅನ್ಸಾರಿ ಇಲ್ಲಿನ ಸಮಸ್ಯೆಗಳತ್ತ ಗಮನಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.