ಬುಧವಾರ, ನವೆಂಬರ್ 20, 2019
27 °C

ಮುದ ನೀಡಿದ ಐ ಲೀಗ್ ಹಬ್ಬ

Published:
Updated:
ಮುದ ನೀಡಿದ ಐ ಲೀಗ್ ಹಬ್ಬ

ಉರಿಬಿಸಿಲಿನಲ್ಲಿಯೂ ಐಪಿಎಲ್ ಪಂದ್ಯಗಳನ್ನು ನೋಡಲು ಟಿಕೆಟ್ ಖರೀದಿಸುವ ಧಾವಂತ, ಜೊತೆಗೆ ಬೆಂಗಳೂರಿನಲ್ಲಿ ಬಿದ್ದ ಬಾಂಬ್‌ಗೆ ಎಲ್ಲೆಡೆ ಜನಮನದಲ್ಲಿ ಆತಂಕ. ಈ ಎಲ್ಲಾ ಅಬ್ಬರದ ನಡುವೆ ಇಂಡಿಯನ್ ಲೀಗ್ (ಐ ಲೀಗ್) ಫುಟ್‌ಬಾಲ್ ಎರಡನೇ ಡಿವಿಷನ್ ಟೂರ್ನಿ ಮಂಕಾಗಿ ಹೋಯಿತೇ?ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವ ವೇಳೆ ಫುಟ್‌ಬಾಲ್ ಪ್ರೇಮಿಯ ಮುಂದೆ ಈ ಪ್ರಶ್ನೆ ಇಟ್ಟಾಗ `ಖಂಡಿತಾ ಇಲ್ಲ' ಎನ್ನುವ ಉತ್ತರ. ಇದೇ ಉತ್ತರವನ್ನು ರಾಜ್ಯ ಫುಟ್‌ಬಾಲ್ ಸಂಸ್ಥೆ ಸಹ ನೀಡಿತು.ಉದ್ಯಾನನಗರಿಯಲ್ಲಿ ಒಂದು ತಿಂಗಳು ನಡೆದ     ಐ ಲೀಗ್ ಎರಡನೇ ಡಿವಿಷನ್ ಎಲ್ಲಾ ಅಬ್ಬರಗಳ ನಡುವೆಯೂ ವಿಜೃಂಭಿಸಿತು. ಇಂದು (ಸೋಮವಾರ) ಮುಕ್ತಾಯಗೊಳ್ಳಲಿರುವ ಈ ಟೂರ್ನಿ ಚುಟುಕು ಆಟದ ನಡುವೆಯೂ ಕ್ರಿಕೆಟ್ ಪ್ರಿಯರನ್ನು ಫುಟ್‌ಬಾಲ್ ಕ್ರೀಡಾಂಗಣದತ್ತ ಸೆಳೆಯಿತು.ಗುಂಪು ವಿಭಾಗದ ಪಂದ್ಯಗಳಲ್ಲಿ ಎಂಟು ತಂಡಗಳು ಹಾಗೂ ಅಂತಿಮ ಸುತ್ತಿನ ಎರಡೂ ಲೆಗ್‌ಗಳಲ್ಲಿ ಆರು ತಂಡಗಳು ಪೈಪೋಟಿ ನಡೆಸಿದವು. ಗುಂಪಿನ ಹಣಾಹಣಿಯಲ್ಲಿ ಸೌತ್ ಯುನೈಟೆಡ್ ಮಾತ್ರ ತವರಿನ ತಂಡವಾಗಿತ್ತು. ಆದರೆ, ಈ ವಿಷಯ ಫುಟ್‌ಬಾಲ್ ಪ್ರಿಯರಿಗೆ ದೊಡ್ಡದಾಗಿ ಕಾಣಿಸಲಿಲ್ಲ. ತವರಿನ ತಂಡ ಗುಂಪು ಹಂತದಲ್ಲಿ ಸೋತು ಹೋದದ್ದಕ್ಕೂ ಪ್ರೇಕ್ಷಕರು ನಿರಾಸೆಗೊಳ್ಳಲಿಲ್ಲ!ತವರಿನ ತಂಡ ಅಥವಾ ಯಾವುದೇ ತಂಡವಾಗಲಿ ಫುಟ್‌ಬಾಲ್ ನೋಡಬೇಕು, ಆಟಗಾರರಿಗೆ ಬೆಂಬಲ ನೀಡಬೇಕೆನ್ನುವುದಷ್ಟೇ ನಮ್ಮ ಕೆಲಸ ಎನ್ನುವುದು ಫುಟ್‌ಬಾಲ್ ಪ್ರಿಯರ ಮನದಾಸೆ. ಮೊದಲ ಲೆಗ್‌ನ ಪಂದ್ಯಗಳು ನಡೆದಾಗ ಅಪಾರ ಸಂಖ್ಯೆಯಲ್ಲಿ ಕ್ರೀಡಾಪ್ರೇಮಿಗಳು ಸೇರಿದ್ದೇ ಇದಕ್ಕೆ ಸಾಕ್ಷಿ.30 ದಿನಗಳ ಅವಧಿಯಲ್ಲಿ 108 (`ಸಿ' ಗುಂಪಿನ ಟೂರ್ನಿಯಲ್ಲಿ 48 ಪಂದ್ಯಗಳು, ಮೊದಲ ಹಾಗೂ ಅಂತಿಮ ಲೆಗ್ ಸೇರಿದಂತೆ 60) ಪಂದ್ಯಗಳು ನಡೆದವು. ವೃತ್ತಿಪರ ಆಟಗಾರರನ್ನು ತಯಾರು ಮಾಡುವ ನಿಟ್ಟಿನಲ್ಲಿ ಐ ಲೀಗ್‌ಗೆ ಅಗ್ರಸ್ಥಾನ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಬೇಕಾದರೆ, ದೇಶಿಯ ಟೂರ್ನಿಯಲ್ಲಿ ನೀಡುವ ಪ್ರದರ್ಶನ ಪ್ರಮುಖವಾಗುತ್ತದೆ. ಆದ್ದರಿಂದ ಐ ಲೀಗ್‌ಗೆ ಹೆಚ್ಚಿನ ಮಹತ್ವ. ಈ ಮಾತನ್ನು ಭಾರತ ತಂಡದ ಮಿಡ್‌ಫೀಲ್ಡರ್ ಬೆಂಗಳೂರಿನ ಷಣ್ಮುಗಂ ವೆಂಕಟೇಶ್ ಕೂಡಾ ಒಪ್ಪಿಕೊಳ್ಳುತ್ತಾರೆ.`ಪ್ರತಿಭೆಗಳನ್ನು ಗುರುತಿಸಲು ಐ ಲೀಗ್ ಪ್ರಮುಖ ವೇದಿಕೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಎಲ್ಲಾ ಆಟಗಾರರಿಗೆ ಸಮಾನ ಅವಕಾಶ ಸಿಗುವುದಿಲ್ಲ. ಕಠಿಣ ಪೈಪೋಟಿ ಇರುವ ಕಾರಣ ಪ್ರಬಲ ತಂಡಗಳಿಗಷ್ಟೇ ಇಲ್ಲಿ ಆಡುವ ಅವಕಾಶ. ಆದರೆ, ವೃತ್ತಿಪರ ಆಟಗಾರರನ್ನು ತಯಾರು ಮಾಡಲು ಈ ಟೂರ್ನಿಗಿಂತ ಉತ್ತಮ ವೇದಿಕೆ ಇನ್ನೊಂದಿಲ್ಲ' ಎನ್ನುತ್ತಾರೆ ಸದ್ಯಕ್ಕೆ ಪುಣೆ ಕ್ಲಬ್ ಆಡುತ್ತಿರುವ ವೆಂಕಟೇಶ್.`ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿರುವ ಮಿಡ್‌ಫೀಲ್ಡರ್‌ಗಳಾದ ಪೊಲೀಸ್ ಸಂಪತ್ ಕುಮಾರ್, ದಕ್ಷಿಣ ಮೂರ್ತಿ ಹಾಗೂ ನಿಕ್ಸನ್ ಅವರೆಲ್ಲರೂ ಬೆಂಗಳೂರಿನಲ್ಲಿಯೇ ತರಬೇತಿ ಪಡೆದ ವೃತ್ತಿಪರ ಆಟಗಾರರು' ಎನ್ನುವುದು ವೆಂಕಟೇಶ್ ಅಭಿಪ್ರಾಯ. ಇವರೆಲ್ಲರೂ ಐ ಲೀಗ್‌ನಲ್ಲಿ ಆಡಿದ್ದಾರೆ ಎನ್ನುವುದನ್ನೂ ಮರೆಯುವಂತಿಲ್ಲ.ಕನ್ನಡಿಗರ ಕಮಾಲ್

ಈ ಟೂರ್ನಿಯಲ್ಲಿ ಕರ್ನಾಟಕದ ಸೌತ್ ಯುನೈಟೆಡ್ ತಂಡ ಸಾಮರ್ಥ್ಯ ಮೆರೆಯುವಲ್ಲಿ ವಿಫಲವಾದರೂ, ಕನ್ನಡಿಗರು ರಾಷ್ಟ್ರದ ಹಲವು ಕ್ಲಬ್‌ಗಳಲ್ಲಿ ಮಿಂಚುತ್ತಿದ್ದಾರೆ. ಅದರಲ್ಲಿ ಕೆಲ ಆಟಗಾರರು ತವರೂರ ಅಂಗಣದಲ್ಲಿ ಪಂದ್ಯಗಳನ್ನು ಆಡಿ ಖುಷಿ ಪಟ್ಟರು.ಕರ್ನಾಟಕದ ಆಟಗಾರರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರಲ್ಲವೇ ಎನ್ನುವ ಪ್ರಶ್ನೆಗೆ, `ಸಾಕಷ್ಟು ಸೌಲಭ್ಯ ಹಾಗೂ ಅತ್ಯುತ್ತಮ ಕ್ರೀಡಾಂಗಣವನ್ನು ಬೆಂಗಳೂರು ಹೊಂದಿದೆ. ಬೇರೆ ರಾಜ್ಯದ ಸಾಕಷ್ಟು ಆಟಗಾರರೂ ಉದ್ಯಾನನಗರಿಗೆ ಬರುವುದನ್ನು ಮರೆಯಬೇಡಿ' ಎನ್ನುತ್ತಾರೆ ವೆಂಕಟೇಶ್.ಯುವ ಪ್ರತಿಭೆ ಆಸ್ಟಿನ್ ಟೌನ್‌ನ ಅರುಣ್ ಪಾಂಡೆ (ಭಾವನಿಪುರೆ), ದಾದಾ ನಭಿ (ಮುಂಬೈ ಟೈಗರ್ಸ್), ಪ್ರಸಾದ್ (ಕೋಲ್ಕತ್ತದ ಮಹ್ಮಮ್ಮಡನ್ ಸ್ಫೋರ್ಟಿಂಗ್ ಕ್ಲಬ್), ಮುರಳಿ (ವಾಸ್ಕೊ) ಹೀಗೆ ಅನೇಕ ಕನ್ನಡಿಗರು 2013ರ ಐ ಲೀಗ್ ಎರಡನೇ ಡಿವಿಷನ್‌ನಲ್ಲಿ ಆಡಿದರು. ಈ ಆಟಗಾರರಿಗೆ ತಮ್ಮೂರ ಕ್ರೀಡಾಭಿಮಾನಿಗಳ ಎದುರು ಸಾಮರ್ಥ್ಯ ತೋರುವ ಅವಕಾಶ ಲಭಿಸಿತ್ತು. ಇದಕ್ಕಿಂತ ಖುಷಿಯ ವಿಚಾರ ಇನ್ನೇನಿದೆ?ಖುಷಿ ನೀಡಿದೆ: `ಐ ಲೀಗ್ ಟೂರ್ನಿಯ ಎರಡನೇ ಡಿವಿಷನ್‌ನಲ್ಲಿ ಅಡಲು ಅವಕಾಶ ಸಿಕ್ಕಿದ್ದರಿಂದ ತುಂಬಾ ಖುಷಿಯಾಗಿದೆ. ನಮ್ಮಲ್ಲಿರುವ ಪ್ರತಿಭೆಯನ್ನು ತೋರಿಸಲು ಈ ಟೂರ್ನಿ ವೇದಿಕೆಯಾಯಿತು. ಲೀಗ್ ಹಂತದಲ್ಲಿ ಸೋಲು ಕಂಡರೂ, ಆಡಿದ ಪಂದ್ಯಗಳಿಂದ ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ ಎಂದು ಸೌತ್ ಯುನೈಟೆಡ್ ತಂಡದ ಆಟಗಾರ ವಿಘ್ನೇಶ್ `ಪ್ರಜಾವಾಣಿ' ಜೊತೆ ಅನಿಸಿಕೆ ಹಂಚಿಕೊಂಡರು.`ಬೇರೆ ರಾಜ್ಯಗಳ ತಂಡಗಳೊಂದಿಗಿನ ಅನುಭವ, ಚುರುಕುತನ, ಕೌಶಲಗಳನ್ನು ಕಲೆಯಲು ಈ ಟೂರ್ನಿ ಮಹತ್ವವಾಗಿದೆ. ಬೇರೆ ಕ್ಲಬ್‌ಗಳ ಆಟಗಾರರ ಹಾಗೆ ಪಾದರಸದಂತೆ ನಾವೂ ಸಜ್ಜುಗೊಳ್ಳಬೇಕಿದೆ' ಎಂದೂ ಅವರು ನುಡಿದರು.ಐ ಲೀಗ್ ಏನು? ಹೇಗೆ?

ದೇಶದ ಬಲಿಷ್ಠ ಕ್ಲಬ್‌ಗಳ ನಡುವೆ ನಡೆಯುವ ಐ ಲೀಗ್ ಟೂರ್ನಿಗೆ ಅರ್ಹತೆ ಪಡೆಯಲು ಎರಡನೇ ಡಿವಿಷನ್ ಮಾನದಂಡ. ಈ ಡಿವಿಷನ್‌ನಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಮೊದಲ ಡಿವಿಷನ್‌ಗೆ ಅರ್ಹತೆ ಪಡೆದುಕೊಳ್ಳಲಿವೆ.ಎರಡನೇ ಡಿವಿಷನ್ 2008ರಲ್ಲಿ ಮೊದಲ ಸಲ ನಡೆಯಿತು. ಈ ಟೂರ್ನಿ ಮೊದಲು ನ್ಯಾಷನಲ್ ಫುಟ್‌ಬಾಲ್ ಲೀಗ್ ಎರಡನೇ ಡಿವಿಷನ್ ಎನ್ನುವ ಹೆಸರು ಹೊಂದಿತ್ತು. 2008ರ ಮಾರ್ಚ್ 25ರಂದು ಮಹಮ್ಮಡನ್ ಹಾಗೂ ಅಮಿಟಿ ಯುನೈಟೆಡ್ ನಡುವೆ ಮೊದಲ ಪಂದ್ಯ ನಡೆಯಿತು.ಈ ಟೂರ್ನಿ ಪ್ರತಿ ವರ್ಷವೂ ತಟಸ್ಥ ಸ್ಥಳದಲ್ಲಿ ನಡೆಯುತ್ತದೆ ಎನ್ನುವುದು ವಿಶೇಷ. ಡಬಲ್ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಟೂರ್ನಿ ಆಯೋಜನೆಯಾಗುತ್ತದೆ.

 

ಪ್ರತಿಕ್ರಿಯಿಸಿ (+)