ಸೋಮವಾರ, ಏಪ್ರಿಲ್ 19, 2021
32 °C

ಮುದ ನೀಡಿದ ಬಣ್ಣದೋಕುಳಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಹೋಳಿ ಈ ಬಾರಿಯು ಜನರಲ್ಲಿ ಸಂತಸ ಮುಡಿಸಿದೆ. ಬಣ್ಣದೋಕುಳಿ ಪರಸ್ಪರ ಎರಚುತ್ತಾ ಜಿಲ್ಲೆಯ ಜನರೆಲ್ಲ ಸಂಭ್ರಮದಿಂದ ಹೋಳಿ ಆಚರಿಸಿದರು. ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧೆಡೆ ರಂಜನೀಯವಾಗಿ ಆಚರಿಸಲ್ಪಟ್ಟ ಹನ್ನದ ವರದಿ ಇಲ್ಲಿದೆಸಿಂಧನೂರು ವರದಿ

 ನಗರದ ವಿವಿಧ ವಾರ್ಡ್‌ಗಳಲ್ಲಿ ಓಕುಳಿಯಾಡುವ ಮೂಲಕ ಹೋಳಿ ಹಬ್ಬವನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ವಿಶೇಷವಾಗಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಶಾಸಕ ವೆಂಕಟರಾವ್ ನಾಡಗೌಡ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ಕರಿಯಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ದೊಡ್ಡಬಸವರಾಜ ಮತ್ತಿತರ ಗಣ್ಯರು ಓಕುಳಿಯಾಡಿ ಸಂತಸ ಹಂಚಿಕೊಂಡದ್ದು ವಿಶೇಷವಾಗಿತ್ತು.  ವೆಂಕಟೇಶ ಕಾಲೊನಿ ಮತ್ತು ಗಂಗಾನಗರದ ಮಧ್ಯದಲ್ಲಿರುವ ಅಮರೇಶ ಮೈಲಾರ ಮನೆಯ ಹತ್ತಿರ ನೂರಾರು ಯುವಕರು ಗುಂಪುಗೂಡಿ ಪಿರಮಿಡ್ ಆಕಾರದಲ್ಲಿ ಒಬ್ಬರ ಮೇಲೊಬ್ಬರು ನಿಂತು ಸುಮಾರು 20 ಅಡಿ ಎತ್ತರದಲ್ಲಿ ಕಟ್ಟಲಾದ ಬಣ್ಣದ ಗಡಿಗೆಯನ್ನು ಒಡೆದು ಸಂಭ್ರಮಿಸಿದರು. ಮಹೆಬೂಬಿಯಾ ಕಾಲೊನಿ, ಸುಕಾಲಪೇಟೆ, ಬಡಿಬೇಸ, ನಟರಾಜ ಕಾಲೊನಿ, ಆದರ್ಶ ಕಾಲೊನಿ ಮತ್ತಿತರ ಕಡೆಗಳಲ್ಲಿ ಯುವಕರು, ಮಹಿಳೆಯರು ಓಕುಳಿಯಾಟದಲ್ಲಿ ತೊಡಗಿರುವುದು ಕಂಡುಬಂದಿತು.ಬೆಳಗಿನ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ನಗರದ ಎಲ್ಲೆಡೆಯಲ್ಲಿಯೂ ಬಣ್ಣದಲ್ಲಿ ಮಿಂದ ಜನರೇ ಕಾಣುತ್ತಿದ್ದರು. ಆಯಾ ವಯಸ್ಸಿನ ಜನರು ಒಂದೆಡೆ ಸೇರಿ ಒಬ್ಬರಿಗೊಬ್ಬರು ಬಣ್ಣ ಹಚ್ಚಿಕೊಂಡು ಸಂತಸಪಟ್ಟರು. ಸಣ್ಣಮಕ್ಕಳು ತಮ್ಮ ಓರಿಗೆಯ ಹುಡುಗರೊಂದಿಗೆ ಗುಂಪು ಗುಂಪಾಗಿ ತಿರುಗುತ್ತಾ ರಸ್ತೆಯಲ್ಲಿ ಬರುವ ಸಾರ್ವಜನಿಕರಲ್ಲಿ ದೇಣಿಗೆ ಕೇಳುವುದು ಸಾಮಾನ್ಯವಾಗಿತ್ತು.ಹಣ ಕೊಟ್ಟರೆ ಬಣ್ಣ ಹಾಕುವುದಿಲ್ಲ ಎಂದು ಹೇಳುವ ಹುಡುಗರು, ಹಣ ಕೊಟ್ಟುವ ಹೋಗುವ ವ್ಯಕ್ತಿಗಳಿಗೆ ಬಣ್ಣ ಎರಚಿ ಓಡಿ ಹೋಗುವುದು ಸಹ ಅಷ್ಟೆ ತಮಾಷೆಯಾಗಿ ಕಾಣುತ್ತಿತ್ತು. ಮಾನ್ವಿ ವರದಿ

ಪಟ್ಟಣದಲ್ಲಿ ಭಾನುವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿವಿಧೆಡೆ ಯುವಕರು, ಮಕ್ಕಳು ಗುಂಪು ಗುಂಪಾಗಿ ಪರಸ್ಪರ ಬಣ್ಣ ಎರಚಿಕೊಂಡು ಸಂತಸಪಟ್ಟರು. ಯುವಕರು ಬೈಕ್‌ಗಳಲ್ಲಿ ತಂಡೋಪತಂಡವಾಗಿ  ತಮ್ಮ ಗೆಳೆಯರ ಮನೆಗಳಿಗೆ ಹೋಗಿ ಬಣ್ಣ ಹಾಕುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಹೋಳಿ ಹಬ್ಬದ ನಿಮಿತ್ಯ ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜನಜಾಗೃತಿ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಹಳೆ ಎಲ್‌ಐಸಿ ಕಾಂಪ್ಲೆಕ್ಸ್ ಅವರಣದಲ್ಲಿ ‘ಮೊಸರು ಗಡಿಗೆ ಒಡೆಯುವ ಪಂದ್ಯ’ ಏರ್ಪಡಿಸಲಾಗಿತ್ತು. ಈ ಪಂದ್ಯದಲ್ಲಿ ಪಟ್ಟಣದ 15ತಂಡಗಳು ಭಾಗವಹಿಸಿದ್ದವು. ಪಂದ್ಯದಲ್ಲಿ ಅಂತಿಮವಾಗಿ ಇಂದಿರಾನಗರದ  ಸಿದ್ದು ನೇತೃತ್ವದ ತಂಡ ಪ್ರಥಮ ಸ್ಥಾನ ಪಡೆಯಿತು. ಐ.ಬಿ.ರಸ್ತೆಯ ವಿಶ್ವ ನೇತೃತ್ವದ ತಂಡ ದ್ವಿತೀಯ ಹಾಗೂ ಮಂಡಾಳಬಟ್ಟಿ ಅಂಜಿ ನೇತೃತ್ವದ ತಂಡ ತೃತೀಯ ಸ್ಥಾನ ಪಡೆದವು.  ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶನಿವಾರದಿಂದಲೇ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.