ಮಂಗಳವಾರ, ಮೇ 24, 2022
29 °C

ಮುದ ನೀಡಿದ ಸಂಗೀತ: ತಲೆದೂಗಿದ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಾಥಪುರ: ರುದ್ರಪಟ್ಟಣದಲ್ಲಿ ಜೀರ್ಣೋದ್ಧಾರಗೊಂಡಿರುವ ಕಾಡು ಮಲ್ಲೇಶ್ವರ ದೇವಸ್ಥಾನದ ಲೋಕಾರ್ಪಣೆ ಅಂಗವಾಗಿ ಗುರುವಾರ ರಾತ್ರಿ ಪದ್ಮಭೂಷಣ ಡಾ. ಆರ್.ಕೆ. ಶ್ರೀಕಂಠನ್ ಮತ್ತು ಸಂಗೀತ ಕಲಾ ಭೂಷಣ ಆರ್.ಕೆ. ಪದ್ಮನಾಭ ಸೇರಿದಂತೆ ಪ್ರಸಿದ್ಧ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ಡಾ. ಆರ್.ಕೆ. ಶ್ರೀಕಂಠನ್ ಅವರು `ಪಾರ್ವತಿ ಪತಿಂ~ ಹಂಸಧ್ವನಿ, ಆದಿತಾಳ, ತ್ಯಾಗರಾಜರ ರೂಪಕ, ಪಂತುವರಾಳಿ ರಾಗದಲ್ಲಿ `ಶಂಭೋ ಮಹಾದೇವ, ಪ್ರತಾಪ ವರಾಳಿ ಆದಿತಾಳದಲ್ಲಿ ಭೂರಿ ಭಾಗ್ಯಲಹರಿ ಎಂಬ ಹಾಡು ಹಾಡಿದರು. ಅವರ ಪುತ್ರ ವಿದ್ವಾನ್ ಎಸ್. ರಮಾಕಾಂತ್ ವಯೋಲಿನ್ ಹಾಗೂ ಆರ್. ರೇಣುಕಾ ಪ್ರಸಾದ್ ಮೃದಂಗ ನುಡಿಸಿದರು.ಸಂಗೀತ ವಿದ್ವಾನ್ ಆರ್.ಕೆ. ಪದ್ಮನಾಭ `ನಿನ್ನ ಧ್ಯಾನದ ಶಕ್ತಿ ಕೊಡು ಅನ್ಯರಲ್ಲಿ ವಿರಕ್ತಿಯ ಕೊಡು ಮಹಾದೇವ, ನಿನ್ನ ಪಾಡಿ ಪೊಗಳುವ ಭಕ್ತಿಯ ಕೊಡು ವಿಠಲ, ಈ ಭವದ ಕತ್ತಲೆಯ ತೊಳೆಯೋ ಹಯವದನ ಹರಿಯೇ... ಈ ಭಾವಾಲಯದ ಗುರುವೇ... ಸತ್ಯಸುನಾದದ ಚಿಲಕವ ಸರಿಸಿ ಇತ್ಯಾದಿ ಸುಮಧುರ ಹಾಡುಹಾಡಿ ಜನರ ಮನ ಸೂರೆಗೊಂಡರು. ಅವರ ಗಾಯನಕ್ಕೆ ತಕ್ಕಂತೆ ವಿದ್ವಾನ್ ಹೊಸಹಳ್ಳಿ ರಘುರಾಮ್ ವೈಯಲಿನ್ ಹಾಗೂ ಆರ್. ರೇಣುಕಾ ಪ್ರಸಾದ್ ಅವರು ನುಡಿಸಿದ ಮೃದಂಗದ ಮೋಡಿಗೆ ಜನರು ತಲೆದೂಗಿದರು.ರುದ್ರಪಟ್ಟಣ ಸಹೋದರರಾದ ವಿದ್ವಾನ್ ಆರ್.ಎನ್. ತ್ಯಾಗರಾಜನ್, ವಿದ್ವಾನ್ ಡಾ. ಆರ್.ಎನ್. ತಾರಾನಾಥನ್ ಅವರು ಪ್ರಸ್ತುತ ಪಡಿಸಿದ `ಯುಗಳ ಗಾಯನ~ ಕಾರ್ಯಕ್ರಮವು ಜನರ ಮನಸ್ಸಿಗೆ ಮುದ ನೀಡಿತು.ಡಾ. ಆರ್.ಕೆ. ಶ್ರೀಕಂಠನ್ ಅವರ ಪುತ್ರಿ ರತ್ನಮಾಲಾ ಪ್ರಕಾಶ್ ಮತ್ತು ಮಾಲತಿ ಶರ್ಮಾ ವೃಂದವರು ಭಕ್ತಿಗೀತೆಗಳನ್ನು ಹಾಡಿ ಸಂಗೀತದ ಹೊನಲು ಹರಿಸಿದರು. ಅವುಗಳಲ್ಲಿ ಪುರಂದರದಾಸರ ಕೃತಿ `ದಾರಿ ಯಾವುದಯ್ಯಾ ವೈಕುಂಠಕೆ ದಾರಿ ತೋರಿಸಯ್ಯಾ...., ರಾಷ್ಟ್ರಕವಿ ಕುವೆಂಪು ಅವರ ಎಲ್ಲಾದರು ಇರು ಎಂತಾದರೂ ಇರು ನೀ ಎಂದೆಂದಿಗೂ ಕನ್ನಡವಾಗಿರು... ಬಸವಣ್ಣನವರ ವಚನ `ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು ಕೂಡಲ ಸಂಗಮ ದೇವಾ..., ಡಾ. ಕೆ.ಎಸ್. ನರಸಿಂಹಸ್ವಾಮಿ ಅವರ `ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು ನಿದ್ದೆ ಬರುವುದು ಹೊದ್ದು ಮಲಗು ಮಗುವೇ ಹಾಗೂ ಡಾ. ಪು.ತಿ. ನರಸಿಂಹಾಚಾರ್ ಅವರ `ಕೃಷ್ಣನ ಕೊರಳಿನ ಕಲೆ ಆಲಿಸಿ~ ಎಂಬಿತ್ಯಾದಿ ಸುಮಧುರ ಹಾಡುಗಳನ್ನು ಹಾಡಿ ಪ್ರೇಕ್ಷಕರಿಗೆ ಸಂಗೀತದ ರಸದೌತಣ ಉಣಬಡಿಸಿದರು.ಕಡೆಯದಾಗಿ ಕಲಾವಿದೆ ಸುನೀತ ಅವರು ಹಾಡಿದ `ಎಲ್ಲೋ ಜೋಗಪ್ಪ ನಿನ್ನ ಅರಮನೆ~ ಎಂಬ ಜನಪದ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.