ಗುರುವಾರ , ಮೇ 6, 2021
23 °C

ಮುನಿದ ವರುಣದೇವ; ಚಿಂತೆಯಲ್ಲಿ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುನಿದ ವರುಣದೇವ; ಚಿಂತೆಯಲ್ಲಿ ರೈತ

ಬೆಳಗಾವಿ: ಸಕ್ಕರೆ ಜಿಲ್ಲೆಯ ರೈತರಿಗೆ ಸಿಹಿ ಎನ್ನುವುದು ಸದ್ಯ ಮರೀಚಿಕೆಯಾದಂತಿದೆ. ಜಿಲ್ಲೆಯ ಧರೆಯಲ್ಲಿ ಧಗೆ ಧಗೆ ಮುಂದುವರಿದಿದೆ. ಹನಿ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ವರುಣನ ಬರುವಿಕೆಗಾಗಿ ರೈತ ಸಮುದಾಯ ಆಕಾಶದತ್ತ ಮುಖ ಮಾಡಿದೆ.ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆ ಇಲ್ಲದಿದ್ದರೂ ಮಳೆಯ ಅಭಾವ ಕಾಡುತ್ತಿದೆ. ವಾಡಿಕೆಯಂತೆ ಜೂನ್ ಆರಂಭಕ್ಕೆ ಮಳೆ ಆಗಬೇಕು. ಸಂಜೆಯ ಹೊತ್ತಿನಲ್ಲಿ ಆಕಾಶದಲ್ಲಿ ಕಾರ್ಮೋಡಗಳು ಕಂಡರೂ ಸಹ ನಾಲ್ಕು ಹನಿ ನೀರು ಚೆಲ್ಲದೆ ಮುಂದೆ ಹೋಗುತ್ತಿವೆ. ಮುಂಗಾರು ಮುನ್ಸೂಚನೆಯಂತೂ ಕಾಣುತ್ತಿಲ್ಲ ಎಂಬ ಚಿಂತೆಯ ನೆರಳು ಆವರಿಸಿದೆ.ಹೊಲಗಳ ಹದ ಮಾಡಿಕೊಂಡಿರುವ ರೈತರು, ಒಂದೆರಡು ಮಳೆ ಬಿದ್ದರೆ ಬಿತ್ತನೆ ಆರಂಭಿಸಲಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ವಾಡಿಕೆಯಂತೆ 111 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, ಕೇವಲ 57 ಮಿ.ಮೀ. ಮಳೆ ಆಗಿದೆ. ಇದರಿಂದ ರೈತ ಸಮುದಾಯ ಚಿಂತೆಯಲ್ಲಿ ಮುಳುಗಿದೆ.`ಭೂಮಿ ಹದ ಮಾಡೇವಿ, ಮಳೆ ಬಂದ್ರ ಮುಂದಿನ ಕೆಲಸ. ಈಗ ಬಿತ್ತಿದರ ಬೀಜ ಎಲ್ಲ ಗುಬ್ಬಿಗಳ ತಿಂದ ಬಿಡ್ತಾವ. ಮೇ ತಿಂಗಳದಾಗ ಮಳೆ ಆಗ್ತಿತ್ರಿ, ಆದ್ರ ಈಗ ಎಲ್ಲ ಬದಲಾಗೇತ್ರಿ. ಹಿಂಗ ಮುಂದುವರಿದ್ರ ನಮ್ಮ ಬಾಳ ಕಷ್ಟದಾಗ ಹೋಕ್ಕೇತ್ರಿ' ಎಂದು ಮೂರು ಎಕರೆ ಭೂಮಿ ಹೊಂದಿರುವ ಬಾಳೆಕುಂದ್ರಿ ಗ್ರಾಮದ ರೈತ ಬಸವಣ್ಣಿ ಹೇಳುತ್ತಾರೆ.`ಹೊಲ ಮಾಡೋದ ಈಗ ಮೊದಲಿನಂಗ ಇಲ್ರಿ. ಕಾರ್ಖಾನೆ ಇದ್ರ ಕೆಲಸಕ್ಕ ಹೋಗ್ತಿದ್ವಿ, ಇದ್ಯಾಕ ನಮಗ ಬೇಕು ಅನಿಸಿಬಿಟ್ಟೇತ್ರಿ. ಶಾಲೆಗೆ ಹೋಗುವ ಮಕ್ಕಳ ಫೀ ತುಂಬೋದ ಕಷ್ಟ ಆಗೇತ್ರಿ. ಸಾಲ ಮಾಡಿ ಹೊಲಕ್ಕ ಸುರಿಯೋದ ಆಗೇತ್ರಿ' ಎಂದು 70 ವರ್ಷ ವಯಸ್ಸಿನ ರೈತ ಮಹಿಳೆ ನೀಲವ್ವನ ಮಾತು, ಇಡೀ ರೈತ ಸಮುದಾಯದ ಸಂಕಷ್ಟವನ್ನೇ ಕಣ್ಣೆದುರಿಗಿಡುತ್ತದೆ.`ಜೂನ್ 2 ರಂದೇ ಮುಂಗಾರು ಮಳೆ ಆಗಲಿದೆ ಎಂದು ಪೇಪರನ್ಯಾಗ್ ಬರೆದಿದ್ದರು. ಆದರೆ, ಈವರೆಗೂ ಹನಿ ನೀರು ಬಿದ್ದಿಲ್ಲ. ಆದ್ರ ನಾವ ಬಿತ್ತನೆಗೆ ಹೊಲ ಸಜ್ಜ ಮಾಡೇವಿ. ಒಂದೆರಡ ಮಳಿ ಬಿದ್ರ ಬಿತ್ತಾಕ ಶುರು ಮಾಡ್ತೇವಿ' ಎಂದು ಬಸವನ ಕುಡಚಿ ಗ್ರಾಮದ ಹರಾಚಂದ ಚೌಗಲೆ ಹೇಳುತ್ತಾರೆ.`ರೈತರು ಭೂಮಿ ಹದ ಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದಾರೆ. ಮೇ ಅಂತ್ಯದಲ್ಲಿಯೇ ಈ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿತ್ತು. ಕೊಳವೆ ಬಾವಿಗಳಲ್ಲಿಯೂ ನೀರಿಲ್ಲ. ಅಂತರ್ಜಲ ಮಟ್ಟ ಕುಸಿದಿದೆ' ಎನ್ನುತ್ತಾರೆ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪಾಸಾಹೇಬ ದೇಸಾಯಿ.`ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 6.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ 2.33 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯ, 39 ಸಾವಿರ ಹೆಕ್ಟೇರ್‌ನಲ್ಲಿ ದ್ವಿದಳ, 1.35 ಲಕ್ಷ ಹೆಕ್ಟೇರ್‌ನಲ್ಲಿ ಎಣ್ಣೆ ಕಾಳು ಹಾಗೂ 2.54 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, ಹತ್ತಿ, ತಂಬಾಕು ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ.96 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೊಯಾಬಿನ್ ಬಿತ್ತನೆ ಗುರಿ ಹೊಂದಲಾಗಿದ್ದು, ಇದಕ್ಕಾಗಿ 45 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಬೇಕಾಗುತ್ತದೆ. ಈ ಪೈಕಿ ಈಗಾಗಲೇ 32 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಇದೆ. 3,000 ಕ್ವಿಂಟಲ್ ಭತ್ತ, 18,000 ಕ್ವಿಂಟಲ್ ಮೆಕ್ಕೆ ಜೋಳ ಸೇರಿದಂತೆ ಯಾವುದೇ ಬಿತ್ತನೆ ಬೀಜದ ಕೊರತೆ ಇಲ್ಲ' ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಜೆ.ಪಾಟೀಲ `ಪ್ರಜಾವಾಣಿ'ಗೆ ತಿಳಿಸಿದರು.`ಗೊಬ್ಬರದ ಕೊರತೆ ಇಲ್ಲ, ಸದ್ಯ ಕರ್ನಾಟಕ ಸಹಕಾರ ಮಾರುಕಟ್ಟೆ ಮಹಾಮಂಡಳದಲ್ಲಿ 51,255 ಮೆಟ್ರಿಕ್ ಟನ್ ಮತ್ತು ಖಾಸಗಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ 36,292 ಮೆಟ್ರಿಕ್ ಟನ್ ಗೊಬ್ಬರ ಸಂಗ್ರಹವಿದೆ. ಮಹಾಮಂಡಳದಲ್ಲಿ 10,341 ಮೆಟ್ರಿಕ್ ಟನ್ ಡಿಎಪಿ, 19,147 ಮೆಟ್ರಿಕ್ ಟನ್ ಯೂರಿಯಾ, 6,013 ಮೆಟ್ರಿಕ್ ಟನ್ ಎಂಒಪಿ, 15,574 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ಗೊಬ್ಬರ ಸಂಗ್ರಹವಿದೆ. ಖಾಸಗಿ ಮತ್ತು ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ 7,401 ಮೆಟ್ರಿಕ್ ಟನ್ ಡಿಎಪಿ, 13,678 ಮೆಟ್ರಿಕ್ ಟನ್ ಯೂರಿಯಾ, 4,399 ಮೆಟ್ರಿಕ್ ಟನ್ ಎಂಒಪಿ ಹಾಗೂ 10,814 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ಗೊಬ್ಬರ ಸಂಗ್ರಹವಿದೆ. ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆ ಇಲ್ಲ' ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.