ಬುಧವಾರ, ನವೆಂಬರ್ 20, 2019
20 °C

ಮುನಿರಾಜು ಸಾವಿಗೆ ಮಾಲಿನ್ಯವೇ ಕಾರಣ?

Published:
Updated:

ಬೆಂಗಳೂರು: ಯಲಹಂಕ ಸಮೀಪದ ಮಾವಳ್ಳಿಪುರದ ಬಳಿ ತ್ಯಾಜ್ಯದ ಅಸಮರ್ಪಕ ನಿರ್ವಹಣೆ ಯಿಂದ ಅಲ್ಲಿನ ಜನರ ಬದುಕು ದುಸ್ತರವಾಗಿದೆ. ತ್ಯಾಜ್ಯದ ಸಮರ್ಪಕ ನಿರ್ವಹಣೆಯ ವ್ಯತಿರಿಕ್ತ ಪರಿಣಾಮದಿಂದಲೇ ಗ್ರಾಮದ ನಿವಾಸಿ ಮುನಿರಾಜು (36) ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ ಆರು ವರ್ಷಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮುನಿರಾಜು ಎರಡು ವಾರಗಳ ಹಿಂದೆ ಮೃತಪಟ್ಟಿದ್ದಾರೆ. ಅವರ ಕುಟುಂಬ ಸದಸ್ಯರು ಕೂಡ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿದ್ದಾರೆ.`ತಂದೆಯ ಮೂತ್ರಪಿಂಡ ವೈಫಲ್ಯಕ್ಕೆ ಕಲುಷಿತ ವಾತಾವರಣವೇ ಕಾರಣ ಎಂದು ವೈದ್ಯರು ಹೇಳಿದ್ದಾರೆ. ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯ ಗುತ್ತಿಗೆ ಪಡೆದಿರುವ `ರಾಮ್ಕಿ~ ಕಂಪೆನಿಯು ಆರು ವರ್ಷಗಳಿಂದ ಈ ಜಾಗದಲ್ಲಿ ಕಸ ವಿಲೇವಾರಿ ಮಾಡುತ್ತಿದೆ.

 

ಪರಿಣಾಮ ಸುತ್ತಮುತ್ತಲಿನ ವಾತಾವರಣ ಹಾಳಾಗಿದೆ. ಅಂತರ್ಜಲ ಕೂಡ ಮಲಿನಗೊಂಡಿದೆ. ಮಾವಳ್ಳಿಪುರ ಕೆರೆ ಕಲುಷಿತಗೊಂಡಿರುವುದರಿಂದ ನೀರು ಕುಡಿಯಲು ಯೋಗ್ಯವಾಗಿಲ್ಲ~ ಎಂದು ಮುನಿರಾಜು ಅವರ ಪುತ್ರಿ ಮಂಜುಳಾ ದೂರಿದ್ದಾರೆ.`ತಂದೆಯ ಚಿಕಿತ್ಸೆಗೆ ಯಾರೂ ನೆರವು ನೀಡಲಿಲ್ಲ. ಆರು ವರ್ಷಗಳಿಂದ ತಂದೆಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯಬೇಕಾಯಿತು. ನೂರು ಕುರಿಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ತಂದೆಗೆ ಚಿಕಿತ್ಸೆ ಕೊಡಿಸಿದೆವು. ಆದರೂ ತಂದೆ ಬದುಕುಳಿಯಲಿಲ್ಲ~ ಎಂದು ಮಂಜುಳಾ ಅಳಲು ತೋಡಿಕೊಂಡರು.`ಮುನಿರಾಜು ಅವರಂತೆ ಮಾವಳ್ಳಿಪುರ ಗ್ರಾಮದ ಸುತ್ತಮುತ್ತಲ ಪ್ರದೇಶದ ಜನ ಆರು ವರ್ಷಗಳಿಂದ ಮೂತ್ರಪಿಂಡ ವೈಫಲ್ಯ ಸೇರಿದಂತೆ ಹಲವು ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಕುಟುಂಬದ ಆಧಾರವಾಗಿದ್ದ ಏಳು ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಆದರೂ ರಾಮ್ಕಿ ಕಂಪೆನಿಯು ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಲೇ ಇದೆ~ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಆರೋಪಿಸಿದರು.`ಜಲಮಂಡಳಿಯಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದ ಕಾರಣ, ಇಲ್ಲಿನ 250 ಕುಟುಂಬಗಳು ನೀರಿನ ಮೂಲ ಹುಡುಕಬೇಕಾಗಿದೆ. ಇದರಿಂದ ಕೆರೆ ನೀರು ಕುಡಿಯುವ ಅನಿವಾರ್ಯತೆ ಎದುರಾಗಿದೆ~ ಎಂದರು.`ತ್ಯಾಜ್ಯದಿಂದ ಮಾವಳ್ಳಿಪುರ ಮಾತ್ರವಲ್ಲದೇ ಪಕ್ಕದ ರಾಮೋಹಳ್ಳಿಯ ಜನರ ಬದುಕು ಸಹ ದುಸ್ತರವಾಗಿದೆ. ಈ ಭಾಗದಲ್ಲಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ನಿಲ್ಲಿಸುವವರೆಗೂ ಪ್ರತಿಭಟನೆ ಮಾಡುತ್ತೇವೆ~ ಎಂದು ಶ್ರೀನಿವಾಸ್ ಎಚ್ಚರಿಕೆ ನೀಡಿದರು.

 

ಪ್ರತಿಕ್ರಿಯಿಸಿ (+)