ಮುನ್ಸೂಚನಾ ವ್ಯವಸ್ಥೆ ಅಳವಡಿಕೆ ವಿಳಂಬ

7

ಮುನ್ಸೂಚನಾ ವ್ಯವಸ್ಥೆ ಅಳವಡಿಕೆ ವಿಳಂಬ

Published:
Updated:

 ನವದೆಹಲಿ (ಪಿಟಿಐ): ಸಿಗ್ನಲ್ ತೊಂದರೆಯಿಂದ ಪದೇಪದೇ ರೈಲು ಅಪಘಾತಗಳು ಸಂಭವಿಸುತ್ತಿದ್ದರೂ ರೈಲ್ವೆ ಇಲಾಖೆ ಯೂರೋಪ್ ಮಾದರಿಯ ಅತ್ಯಾಧುನಿಕ ರೈಲು ಸುರಕ್ಷಾ ಹಾಗೂ ಮುನ್ಸೂಚನಾ ವ್ಯವಸ್ಥೆ (ಟಿಪಿಡಬ್ಲುಎಸ್) ಅಳವಡಿಕೆ ಮುಂದಕ್ಕೆ ಹಾಕುತ್ತಿದೆ.`ಟಿಪಿಡಬ್ಲುಎಸ್~ ತಂತ್ರಜ್ಞಾನ ಅಳವಡಿಸಿದಾಗ ರೈಲಿನ ಚಾಲಕ ಕೆಂಪು ಸಿಗ್ನಲ್ ಉಲ್ಲಂಘಿಸಿ ಮುಂದೆ ನಡೆದರೂ ರೈಲಿಗೆ ಸ್ವಯಂಚಾಲಿತವಾಗಿ ತುರ್ತು ಬ್ರೇಕ್ ಬೀಳುತ್ತದೆ. ಮುಂದುವರಿದ ದೇಶಗಳಲ್ಲಿ ರೈಲು ಮಾರ್ಗಗಳಲ್ಲಿ ಕಡ್ಡಾಯವಾಗಿ ಈ ವ್ಯವಸ್ಥೆ ಅಳವಡಿಸಲಾಗುತ್ತದೆ.2012-13ನೇ ಸಾಲಿನಲ್ಲಿ 800 ಕಿ.ಮೀ. ಉದ್ದದ ರೈಲು ಮಾರ್ಗದಲ್ಲಿ `ಟಿಪಿಡಬ್ಲುಎಸ್~ ಅಳವಡಿಸುವ ಪ್ರಸ್ತಾಪ ರೈಲ್ವೆ ಇಲಾಖೆಯ ಮುಂದಿದ್ದರೂ ಅದಕ್ಕಾಗಿ ಈವರೆಗೆ ಟೆಂಡರ್ ಪ್ರಕ್ರಿಯೆ ಆರಂಭಿಸಿಲ್ಲ. `ಟಿಪಿಡಬ್ಲುಎಸ್~ ಅಳವಡಿಕೆಗೆ ಪ್ರತಿ ಕಿ.ಮೀ.ಗೆ ರೂ 50 ಲಕ್ಷ  ವೆಚ್ಚವಾಗುವ ನಿರೀಕ್ಷೆಯಿದೆ.ಈ ಮೊದಲು ವಲಯ ರೈಲ್ವೆ ಕಚೇರಿಗಳಿಗೆ ಈ ತಂತ್ರಜ್ಞಾನ ಅಳವಡಿಸಲು ಸೂಚಿಸಲಾಗಿತ್ತು. ಆನಂತರ ರೈಲ್ವೆ ಮಂಡಳಿಯಿಂದಲೇ ಟೆಂಡರ್ ಕರೆಯಲು ನಿರ್ಧರಿಸಲಾಯಿತು. ಇದರಿಂದಾಗಿ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.12ನೇ ಪಂಚವಾರ್ಷಿಕ ಯೋಜನೆಯನ್ವಯ ದೇಶದಾದ್ಯಂತ 3,200 ಕಿ.ಮೀ. ಉದ್ದದ ಮಾರ್ಗದಲ್ಲಿ ರೂ 3,200 ಕೋಟಿ  ವೆಚ್ಚದಲ್ಲಿ `ಟಿಪಿಡಬ್ಲುಎಸ್~ ಅಳವಡಿಸಲಾಗುವುದು.ಲಭ್ಯ ಅಂಕಿ-ಅಂಶಗಳ ಪ್ರಕಾರ 2000ದಿಂದ 2010ರವರೆಗೆ 2,763 ರೈಲ್ವೆ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ ಅರ್ಧದಷ್ಟು ರೈಲ್ವೆ ಸಿಬ್ಬಂದಿಯ ಅಜಾಗರೂಕತೆಯಿಂದ ಸಂಭವಿಸಿವೆ.ಚಾಲಕ ಕೆಂಪು ಸಿಗ್ನಲ್ ಉಲ್ಲಂಘಿಸಿದ್ದೇ ಮಂಗಳವಾರ ಬೆಳಗಿನ ಜಾವ ಪೆನುಕೊಂಡದಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry