ಮುಪ್ಪಿನ ಚಿಂತೆ ನೀವೂ ಪಡೆಯಿರಿ ಪಿಂಚಣಿ

ಸೋಮವಾರ, ಮೇ 20, 2019
33 °C

ಮುಪ್ಪಿನ ಚಿಂತೆ ನೀವೂ ಪಡೆಯಿರಿ ಪಿಂಚಣಿ

Published:
Updated:

`ಹಣ ಉಳಿಸಿದರೆ ಕಷ್ಟ ಕಾಲದಲ್ಲಿ ಅದೇ ಹಣ ನಮ್ಮನ್ನು ಉಳಿಸುತ್ತದೆ~ ಎನ್ನುವ ಗಾದೆ ಮಾತು ನಿಜವಾಗಿಯೂ ವೇದಕ್ಕೆ ಸಮಾನವಾಗಿದೆ.ಯಾವುದೇ ವ್ಯಕ್ತಿ ಜೀವನದ ಕೊನೆಯವರೆಗೂ ದುಡಿಯಲಾರ. ಅಲ್ಲದೇ ಮಾನವನ ಜೀವಿತಾವಧಿ ವಿಚಾರದಲ್ಲಿ ಕೂಡಾ ಯಾರಿಂದಲೂ ಭವಿಷ್ಯ ನುಡಿಯಲು ಸಾಧ್ಯವಿಲ್ಲ. ಇಂದು ಪ್ರಪಂಚದ ಬಹುಭಾಗ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವುದರಿಂದ, ನೌಕರಿ, ಸ್ವಂತ ಉದ್ಯೋಗ ಇವೆರಡರಲ್ಲಿಯೂ ಯಾವುದೇ ಸ್ಥಿರತೆ ಕಂಡುಕೊಳ್ಳುವುದು ಬಹಳ ಕಠಿಣ ವಿಚಾರ.ಸಾಮಾನ್ಯವಾಗಿ ಹೆಚ್ಚಿನ ವೆಚ್ಚ ಬರುವುದೇ ಮುಪ್ಪಿನ ಕಾಲದಲ್ಲಿ. ಔಷಧೋಪಚಾರ, ಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆ ಇವೆಲ್ಲವೂ ಜೀವನದ ಮುಸ್ಸಂಜೆಯಲ್ಲಿಯೇ ಬರುವುದರಿಂದ ಇಂತಹ ಖರ್ಚುಗಳನ್ನು ಎದುರಿಸಲು, ಪ್ರತಿ ವ್ಯಕ್ತಿಯೂ ವೃತ್ತಿ ಬದುಕಿನ ಆರಂಭದಿಂದಲೇ, ಅಂದರೆ ದುಡಿಯಲು ಆರಂಭಿಸಿದಾಗಲೇ ಆರ್ಥಿಕವಾಗಿ ಒಂದು ದೀರ್ಘಾವಧಿ ಯೋಜನೆ ಹಾಕಿಕೊಳ್ಳಬೇಕು ಹಾಗೂ ಅದರಂತೆ ನಡೆದುಕೊಳ್ಳಬೇಕು. ಒಬ್ಬ ವ್ಯಕ್ತಿ ನಿರ್ದಿಷ್ಟ ವಯಸ್ಸಿನವರೆಗೆ ಅಥವಾ ವಯಸ್ಸಿನ ಮಿತಿಯಿಂದ ನಿವೃತ್ತನಾಗುತ್ತಾನೆ ಎನ್ನುವ ಮಾತು ಕೂಡಾ ಇಂದಿನ ಪರಿಸ್ಥಿತಿಯಲ್ಲಿ ನಂಬಲು ಬರುವುದಿಲ್ಲ.ಬಹಳಷ್ಟು ಜನರನ್ನು ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಂಡು ಅವಧಿ ಮುಗಿಯುತ್ತಲೇ ಕೆಲಸದಿಂದ ಬಿಡುಗಡೆ ಮಾಡುತ್ತಾರೆ. ದುರ್ಬಲ ಅಥವಾ ಅನೂರ್ಜಿತಗೊಂಡಾಗ, ವಜಾ ಮಾಡುವುದರಿಂದ, ಸ್ವಯಂ ನಿವೃತ್ತಿಯಿಂದ ಹಾಗೂ ವ್ಯಕ್ತಿಯ ಸಾವಿನಿಂದ ಕೂಡಾ ದುಡಿಮೆ ಸ್ಥಗಿತಗೊಳ್ಳುತ್ತದೆ.ಒಟ್ಟಿನಲ್ಲಿ ಜೀವನದ ಸಂಜೆ ಸುಖಮಯವಾಗಲು ಹಾಗೂ ಎಲ್ಲಾ ವರ್ಗದ ಜನರ ಬಾಳು ಹಸನಾಗಲು ಕೇಂದ್ರ ಸರ್ಕಾರ `ಹೊಸ ಪಿಂಚಣಿ ಯೋಜನೆ~ಯನ್ನು ಸಾದರಪಡಿಸಿದೆ.ಈ ಹಿಂದೆ ಸರ್ಕಾರಿ ನೌಕರಿಯಲ್ಲಿ ಪಿಂಚಣಿ ಸೌಲಭ್ಯವಿದ್ದು, 2004ರ ಜನವರಿ 1ರ ನಂತರ ಸೇರಿದ ನೌಕರರಿಗೆ ಈ ಸೌಲಭ್ಯ ಇರುವುದಿಲ್ಲ. ಒಟ್ಟಿನಲ್ಲಿ ಪಿಂಚಣಿ ಸೌಲಭ್ಯ ಎನ್ನುವುದು ಮುಂದಿನ ಜನಾಂಗಕ್ಕೆ ದೊರೆಯಲಾರದು.ಈ ವಿಚಾರವನ್ನು ಮನಗಂಡ ಕೇಂದ್ರ ಸರ್ಕಾರ ತಾ. 2003ರ ಆಕ್ಟೋಬರ್ 10ರಂದು `ಪೆನ್ಫನ್ ಫಂಡ್ ರೆಗ್ಯುಲಾರಟಿ ಅಂಡ್ ಡೆವಲಪ್‌ಮೆಂಟ್ ಅಥಾರಿಟಿ~ ಎಂಬ ಸಂಸ್ಥೆಯನ್ನು ಆರಂಭಿಸಿತು. ಪ್ರಾರಂಭದಲ್ಲಿ ಈ ಯೋಜನೆ ಸರ್ಕಾರಿ ನೌಕರಿಗೆ ಮಾತ್ರ ಸೀಮಿತವಾಗಿದ್ದು, ನಂತರ 2009ರ ಮೇ 1ರಿಂದ ಈ ಯೋಜನೆ ಭಾರತದ ಎಲ್ಲಾ ಪ್ರಜೆಗಳಿಗೂ ಲಭ್ಯವಾಗಿರುತ್ತದೆ. 
ಫಲಾನುಭವಿಯೊಬ್ಬರ ಪ್ರತಿಕ್ರಿಯೆ`ನಾನು ಎನ್.ಪಿ.ಎಸ್. ಯೋಜನೆ ಪ್ರಾರಂಭವಾಗುತ್ತಲೇ ಅಂದರೆ 2009ರ ಸೆಪ್ಟೆಂಬರ್‌ದಲ್ಲಿ ಎಸ್.ಬಿ.ಐ.ನಲ್ಲಿ ಈ ಯೋಜನೆಗೆ ಸೇರಿಕೊಂಡೆ. ನಾನು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಪಿಂಚಣಿ ಇರುವುದಿಲ್ಲ.ಎನ್.ಪಿ.ಎಸ್. ಖಾತೆಗೆ ಪ್ರತಿ ವರ್ಷ ರೂ. 25,000 ತುಂಬುತ್ತಾ ಬಂದಿದ್ದೇನೆ. ಖಾತೆ ಆರಂಭಿಸುವಾಗ ನನಗೆ 40 ವರ್ಷ.ಈಗ 44 ವರ್ಷ. ನನ್ನ ಒಟ್ಟು ಹೂಡಿಕೆ ರೂ. ಒಂದು ಲಕ್ಷವಾಗಿದೆ. ನನ್ನ ವಯಸ್ಸಿಗನುಗುಣವಾಗಿ ಪೆನ್ಷನ್ ಫಂಡ್‌ನವರು ಷೇರು ಮಾರುಕಟ್ಟೆಯಲ್ಲಿ ಶೇ 40ರಿಂದ ಪ್ರಾರಂಭಿಸಿ ಶೇ 32ರಂತೆ ಹಣ ಹೂಡಿರುತ್ತಾರೆ.ನಾನು ಯು.ಟಿ.ಐ. ರಿಟೈರ್‌ಮೆಂಟ್ ಸಲ್ಯೂಷನ್ಸ್ ಆರಿಸಿಕೊಂಡಿದ್ದೇನೆ. ಕಳೆದ 3-4 ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ತುಂಬಾ ಏರುಪೇರು ಕಂಡು ಬಂದಿರುವುದರಿಂದ ಈ ಭಾಗದಲ್ಲಿ ಹೂಡಿದ ಹಣಕ್ಕೆ ಉತ್ತಮ ವರಮಾನ ಬಂದಂತೆ ಕಾಣುತ್ತಿಲ್ಲ.ಆದರೆ ಸರ್ಕಾರೇತರ ಹಾಗೂ ಸರ್ಕಾರಿ ಬಾಂಡ್‌ಗಳಲ್ಲಿ ನಿಶ್ಚಿತ ವರಮಾನ ಬಂದಿರುವುದರಿಂದ ನನ್ನ ಒಟ್ಟು ಹೂಡಿಕೆಗೆ ಶೇ 9ರಷ್ಟು ವರಮಾನ ಬಂದಂತಿದೆ.ಸಂವೇದಿ ಸೂಚ್ಯಂಕ ಮೇಲಕ್ಕೆ ಹೋಗಬಹುದು ಹಾಗೂ ಇಲ್ಲಿ ಮುಂದಿನ ಹೂಡಿಕೆ ಕಡಿಮೆಯಾಗುತ್ತಾ ಬಂದು, ನಿಶ್ಚಿತ ವರಮಾನದ ಹೂಡಿಕೆ ಹೆಚ್ಚಾಗುವುದರಿಂದ ಸರಾಸರಿ ವಾರ್ಷಿಕ ಶೇ 10ರಷ್ಟು ನನ್ನ ಹೂಡಿಕೆಯಿಂದ ಬಂದೇ ಬರುತ್ತದೆ ಎನ್ನುವ ನಂಬಿಕೆ ನನಗಿದೆ~.

-ಶಂಕರ ಶರ್ಮಾ,

ಎನ್.ಆರ್.ಕಾಲೊನಿ, ಬೆಂಗಳೂರು

ಈ ಹೊಸ ಪಿಂಚಣಿ ಯೋಜನೆಯಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ.

1. ಹಣವನ್ನು ಕ್ರಮವಾಗಿ ಪ್ರತಿವರ್ಷ ಯೋಜನೆಯಲ್ಲಿ ಹೂಡುತ್ತಾ ಬಂದು ನಿವೃತ್ತಿ ನಂತರ ಪ್ರತಿ ತಿಂಗಳೂ ಪಿಂಚಣಿ ರೂಪದಲ್ಲಿ ಪಡೆಯುವುದು.2. ಹಣವನ್ನು ಕ್ರಮವಾಗಿ ಪ್ರತಿವರ್ಷ ಯೋಜನೆಯಲ್ಲಿ ಹೂಡುತ್ತಾ ಬಂದು ಮಧ್ಯದಲ್ಲಿ ನಿಲ್ಲಿಸಿ, ಯಾವಾಗಬೇಕಾದರೂ ಹಣ ವಾಪಸ್ ಪಡೆಯಬಹುದು.ಎರಡನೇ ಯೋಜನೆ `ಪಿಂಚಣಿ~ ತತ್ವಕ್ಕೆ ಹೊರತಾಗಿದ್ದು, ಹಣ ಉಳಿಸಲು ಒಂದು ಮಾರ್ಗ ಎಂದು ಪರಿಗಣಿಸಬಹುದು.ಒಂದನೇ ಯೋಜನೆಯನ್ವಯ ಹಾಗೂ ಎರಡನೇ ಯೋಜನೆಯನ್ವಯ ಯಾವುದೇ ಭಾರತದ ಪ್ರಜೆ 18ರಿಂದ 55 ವರ್ಷಗಳ ವಯೋಮಿತಿಯಲ್ಲಿ ಹೊಸ ಪಿಂಚಣಿ ಯೋಜನೆಗೆ ಸೇರಿಕೊಳ್ಳಬಹುದು.ಈ ಖಾತೆ ಆರಂಭಿಸಲು ಕೆ.ವೈ.ಸಿ.(ನೊ ಯುವರ್ ಕಸ್ಟಮರ್) ನಿಯಮದಂತೆ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ಪ್ರಾರಂಭಿಸುವಾಗ ಪಡೆಯುವ, ವಿಳಾಸದ ಪುರಾವೆ, ಭಾವಚಿತ್ರದ ಪುರಾವೆ (ಫೋಟೊ ಐಡೆಂಟಿಟಿ), ಜತೆಗೆ ಪಾಸ್‌ಪೋರ್ಟ್ ಅಳತೆಯ ಎರಡು ಬಣ್ಣದ ಭಾವಚಿತ್ರಗಳನ್ನು ಒದಗಿಸಬೇಕಾಗುತ್ತದೆ. ಖಾತೆಯನ್ನು ಸಬ್‌ಸ್ಕ್ರೈಬರ್ ರಿಜಿಸ್ಟ್ರೇಷನ್ ಫಾರ್ಮ್‌ನಲ್ಲಿ ತುಂಬಿ ಆರಂಭಿಸಬೇಕಿರುತ್ತದೆ.ಹೊಸತಾದ `ರಾಷ್ಟ್ರೀಯ ಪಿಂಚಣಿ ಯೋಜನೆ~(ಎನ್‌ಪಿಎಸ್)ಯಲ್ಲಿ ವಾರ್ಷಿಕ ಕನಿಷ್ಠ ರೂ. 6,000 ತುಂಬಬೇಕು. ಇಲ್ಲಿ ಗರಿಷ್ಠ ಮಿತಿ ಎನ್ನುವುದೇ ಇಲ್ಲ. ಪ್ರತಿಸಲ ಹಣ ಕಟ್ಟುವಾಗ ಕನಿಷ್ಠ ರೂ. 500 ತುಂಬಲೇಬೇಕು. ವರ್ಷದಲ್ಲಿ ನಾಲ್ಕು ಬಾರಿ ಮಾತ್ರ ಹಣ ತುಂಬಬಹುದು. ವರ್ಷದಲ್ಲಿ ಯಾವಾಗಬೇಕಾದರೂ ಹಣ ಕಟ್ಟುವ ಅವಕಾಶವಿದೆ. ಚೆಕ್, ಡಿ.ಡಿ. ಪೇ ಆರ್ಡರ್ ಮುಖಾಂತರವೂ ಹಣ ತುಂಬಬಹುದು.ಎರಡನೇ ವಿಧದಲ್ಲಿ, ಅಂದರೆ ಯಾವಾಗ ಬೇಕಾದರೂ ಹಣ ವಾಪಸ್ ಪಡೆಯುವ ಯೋಜನೆಯಲ್ಲಿ ಕನಿಷ್ಠ ರೂ. 1000ವನ್ನು ಪ್ರತಿಸಲ ತುಂಬಬೇಕಾಗುತ್ತದೆ. ಎನ್.ಎ.ವಿ. ಆಧಾರದ ಮೇಲೆ ಯಾವಾಗ ಬೇಕಾದರೂ ಹಣ ವಾಪಸ್ ಪಡೆಯಬಹುದು.ಭಾರತೀಯ ಜೀವ ವಿಮಾ ನಿಗಮ(ಎಲ್.ಐ.ಸಿ. ಆಫ್ ಇಂಡಿಯ), ಸ್ಟೇಟ್ ಬ್ಯಾಂಕ್ ಮತ್ತು ಎಸ್.ಬಿ.ಐ. ಸಮೂಹದ ಎಲ್ಲಾ ಬ್ಯಾಂಕ್‌ಗಳು, ಅಲಹಾಬಾದ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಸೆಕ್ಯೂರಿಟೀಸ್ ಸರ್ವಿಸಸ್ ಲಿ., ಕೊಟಕ್ ಮಹೀಂದ್ರಾ ಬ್ಯಾಂಕ್, ಓರಿಯಂಟಲ್ ಬ್ಯಾಕ್ ಆಫ್ ಕಾಮರ್ಸ್, ಸೌತ್ ಇಂಡಿಯನ್ ಬ್ಯಾಂಕ್, ಸಿಟಿ ಬ್ಯಾಂಕ್ ಎನ್.ಎ., ಕಂಪ್ಯೂಟರ್ ಎಜ್ ಮ್ಯಾನೇಜ್‌ಮೆಂಟ್ ಸರ್ವಿಸಸ್ ಪ್ರೈ.ಲಿ., ರಿಲಯನ್ಸ್ ಕ್ಯಾಪಿಟಲ್ ಹಾಗೂ ಯು.ಟಿ.ಐ. ಅಸೆಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗಳ ಮೂಲಕವೂ ಸಾರ್ವಜನಿಕರು ಹೊಸ ಪಿಂಚಣಿ ಯೋಜನೆಯನ್ನು ಆರಂಭಿಸಿ ಹಣ ಪಾವತಿಸಬಹುದು. ಇತ್ತೀಚೆಗೆ ಭಾರತೀಯ ಅಂಚೆ ಕಚೇರಿಯ ಆಯ್ದ ಶಾಖೆಗಳಲ್ಲಿಯೂ ಎನ್.ಪಿ.ಎಸ್. ಖಾತೆ ತೆರೆಯಬಹುದಾಗಿದೆ.ಎನ್.ಪಿ.ಎಸ್. ಖಾತೆ ಆರಂಭಿಸಲೆಂದೇ ದೇಶದಾದ್ಯಂತ 10,000ಕ್ಕೂ ಅಧಿಕ ಕೇಂದ್ರಗಳು ಇವೆ. ಈ ಖಾತೆ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಕೂಡಾ ಹೊಂದಬಹುದಾಗಿದೆ. ಆದರೆ, ಪಿಂಚಣಿ ಯೋಜನೆಯಲ್ಲಿ ಹಣ ಹೂಡಲು ಪಿಂಚಣಿ ನಿರ್ವಹಣೆ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೂ ಮುನ್ನ ಆ ಸಂಸ್ಥೆ ವಿಧಿಸುವ ನಿಯಮ-ನಿಬಂಧನೆಗಳನ್ನು ಕೇಳಿ ತಿಳಿದಿಕೊಳ್ಳರಿ. ಈ ಜವಾಬ್ದಾರಿ ನಿಮ್ಮದೇ.

ನಿಧಿ ನಿರ್ವಹಣೆಎನ್.ಪಿ.ಎಸ್. ಮೂಲಕ ಸಂಗ್ರಹವಾಗಿರುವ ನಿಧಿಯನ್ನು ಏಳು ಪ್ರತಿಷ್ಠಿತ ಪೆನ್ಷನ್ ಫಂಡ್‌ಗಳಲ್ಲಿ ಕ್ರೋಢೀಕರಿಸುತ್ತಾರೆ. ಐಸಿಐಸಿಐ ಪ್ರುಡೆನ್ಷಿಯಲ್ ಫಂಡ್ಸ್ ಮ್ಯಾನೇಜ್‌ಮೆಂಟ್ ಕಂಪೆನಿ, ಐಡಿಎಫ್‌ಸಿ ಪೆನ್ಷನ್ ಫಂಡ್ ಮ್ಯಾನೇಜ್‌ಮೆಂಟ್ ಕಂಪೆನಿ, ಕೊಟಕ್ ಮಹೀಂದ್ರಾ ಪೆನ್ಷನ್ ಫಂಡ್, ರಿಲಯನ್ಸ್ ಕ್ಯಾಪಿಟಲ್ ಪೆನ್ಷನ್ ಫಂಡ್, ಎಸ್‌ಬಿಐ ಪೆನ್ಷನ್ ಫಂಡ್, ಯುಟಿಐ ರಿಟೈರ್‌ಮೆಂಟ್ ಸಲ್ಯೂಷನ್ ಲಿಮಿಟೆಡ್ ಹಾಗೂ ಎಲ್‌ಐಸಿ ಪೆನ್ಷನ್ ಫಂಡ್... ಹೀಗೆ ಏಳು ಪಿಂಚಣಿ ವಿನಿಯೋಜನೆ ಸಂಸ್ಥೆಗಳಿವೆ. ಎನ್.ಪಿ.ಎಸ್. ಖಾತೆ ಆರಂಭಿಸುವಾಗ ಈ ಏಳು ಕಂಪೆನಿಗಳಲ್ಲಿ ಯಾವುದಾದರೂ ಒಂದು ಕಂಪೆನಿಗೆ ವರ್ಗಾಯಿಸಿಕೊಳ್ಳುವ ಹಕ್ಕು ಹಾಗೂ ಅವಕಾಶ ಖಾತೆದಾರರಿಗೆ ಸದಾ ಲಭ್ಯವಿರುತ್ತದೆ.ಎನ್.ಪಿ.ಎಸ್.ನಲ್ಲಿ ಕ್ರೋಢೀಕರಿಸಲಾದ ಹಣವನ್ನು ಬಿಎಸ್‌ಇ ಹಾಗೂ ಎನ್‌ಎಸ್‌ಇನಲ್ಲಿ ಪ್ರತಿದಿವಸ ವ್ಯವಹಾರವಾಗುವ, ಹೆಚ್ಚಿನ ಆದಾಯ ಬರುವ ಪ್ರತಿಷ್ಠಿತ (ಬ್ಲೂಚಿಪ್ಸ್) ಷೇರುಗಳಲ್ಲಿ, ನಿಶ್ಚಿತ ವರಮಾನ ತರುವ ಸರ್ಕಾರೇತರ ಕಂಪೆನಿಗಳಲ್ಲಿ, ಸರ್ಕಾರಿ ಆಧಾರಿತ ಸಾಲ ಪತ್ರಗಳಲ್ಲಿ ತೊಡಗಿಸಲಾಗುತ್ತದೆ.ಹೂಡಿಕೆದಾರರ ವಯಸ್ಸಿಗೆ ಅನುಗುಣವಾಗಿ ಅಪಾಯ ಅಥವಾ ನಷ್ಟ(ರಿಸ್ಕ್) ಲೆಕ್ಕಹಾಕಿ ಮೊದಲ ಎರಡು ವಿಧಾನದಲ್ಲಿ ಶೇ 50ಕ್ಕೂ ಅಧಿಕ ಪ್ರಮಾಣದಲ್ಲಿ ಪಿಂಚಣಿ ನಿಧಿಯನ್ನು ಹೂಡುವಂತಿಲ್ಲ.ಹೂಡಿಕೆದಾರರು ಗಮನಿಸಬೇಕಾದ ಬಹಳ ಮುಖ್ಯ ವಿಚಾರವೆಂದರೆ, ಮುಂಬೈ ಷೇರು ಪೇಟೆಯ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್) ಹಾಗೂ ಸರ್ಕಾರೇತರ ಕಂಪೆನಿಗಳ ಹೂಡಿಕೆಯಲ್ಲಿ ವರಮಾನ ಬರುವ ವಿಚಾರದಲ್ಲಿ ಏರುಪೇರು ಆಗಬಹುದು ಎನ್ನುವ ದೂರ ದೃಷ್ಟಿಯಿಂದ ವ್ಯಕ್ತಿಯ ವಯಸ್ಸು ಹೆಚ್ಚಾದಂತೆ ಇವೆರಡರಲ್ಲಿ ತೊಡಗಿಸುವ ಶೇಕಡಾವಾರು ಹಣವನ್ನು ಕಡಿಮೆ ಮಾಡಲಾಗುತ್ತಾ ಬರಲಾಗುತ್ತದೆ ಹಾಗೂ ಸರ್ಕಾರಿ ಬಾಂಡ್‌ಗಳಲ್ಲಿ ಹೆಚ್ಚಿನ ಹಣ ತೊಡಗಿಸಲಾಗುತ್ತದೆ. ಎನ್.ಪಿ.ಎಸ್.ನ ಎಲ್ಲಾ ಹೂಡಿಕೆದಾರರೂ ಒಂದೇ ರೀತಿಯ ವರಮಾನ ನಿರೀಕ್ಷಿಸುವಂತಿಲ್ಲ. ಅವರವರು ಕಟ್ಟಿದ ಹಣಕ್ಕನುಸಾರವಾಗಿ ವರಮಾನ ಬರುತ್ತದೆ.ಸದ್ಯ ದೇಶದಲ್ಲಿ ಪ್ರಮುಖ ಏಳು ಪೆನ್ಷನ್ ಫಂಡ್ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಹೂಡಿಕೆದಾರರು ಹಣ ಹೂಡಲು ಆರಿಸಿಕೊಂಡ ಸಂಸ್ಥೆಯ ವಾರ್ಷಿಕ ಕಾರ್ಯನಿರ್ವಹಣೆ (ಪರ್ಫಾರ್ಮೆನ್ಸ್) ಮೇಲೆ ಬರುವ ಆದಾಯದ ಪ್ರಮಾಣ ನಿರ್ಧಾರವಾಗುತ್ತದೆ.ಈ ಕಾರಣದಿಂದಾಗಿ ಹೂಡಿಕೆದಾರರು ಒಂದು ಕಂಪೆನಿಯಿಂದ ಇನ್ನೊಂದು ಕಂಪೆನಿಗೆ ಹೂಡಿಕೆಯನ್ನು ಬದಲಾಯಿಸಿಕೊಳ್ಳಬಹುದು. ಈ ರೀತಿ ಬದಲಾಯಿಸಿಕೊಳ್ಳುವ ಹಕ್ಕು, ಹೂಡಿಕೆದಾರರಿಗೆ ವರ್ಷಕ್ಕೊಮ್ಮೆ ಅಂದರೆ ಪ್ರತಿ ಮೇ ತಿಂಗಳಲ್ಲಿ ಇರುತ್ತದೆ.ಹೂಡಿಕೆದಾರರ ಭವಿಷ್ಯ ಪ್ರತಿಯೊಂದು ಪೆನ್ಷನ್ ಫಂಡ್ ಸಂಸ್ಥೆ, ಆರಿಸಿಕೊಳ್ಳುವ ಕಂಪೆನಿ ಷೇರುಗಳು ಹಾಗೂ ಸರ್ಕಾರೇತರ ಖಾಸಗಿ ಕಂಪೆನಿಗಳ ಮೇಲೆ ಹೊಂದಿಕೊಂಡಿರುತ್ತದೆ. ಇದೇ ವೇಳೆ, ಹಿಂದಿನ ವರ್ಷ ಉತ್ತಮ ಫಲಿತಾಂಶ ತೋರಿರುವ ಸಂಸ್ಥೆ, ಮುಂದಿನ ವರ್ಷವೂ ಅದೇ ಬಗೆಯ ಸಾಧನೆ ತೋರಬಹುದು ಎಂಬುದನ್ನು ಕೂಡಾ ನಿಖರವಾಗಿ ಹೇಳುವಂತಿಲ್ಲ.ಜನ ಸಾಮಾನ್ಯರ ಹಿತಕ್ಕಾಗಿ ಈ ಹೊಸ ಪಿಂಚಣಿ ಯೋಜನೆಯನ್ನು ಭಾರತ ಸರ್ಕಾರ ರೂಪಿಸಿದ್ದು, `ಪೆನ್ಷನ್ ಫಂಡ್ ರೆಗ್ಯುಲಾರಿಟಿ ಅಂಡ್ ಡೆವಲಪ್‌ಮೆಂಟ್ ಅಥಾರಿಟಿ~ ಎನ್ನುವ ಸಂಸ್ಥೆಯ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ.ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿ ಹಾಗೂ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ ಈ ಯೋಜನೆಯ ಟ್ರಸ್ಟಿಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯ ಇದರ ಕಸ್ಟೋಡಿಯನ್ ಆಗಿದ್ದರೆ, ಬ್ಯಾಂಕ್ ಆಫ್ ಇಂಡಿಯ ಈ ಟ್ರಸ್ಟ್‌ನ ಬ್ಯಾಂಕ್ ಆಗಿರುತ್ತದೆ. ಎನ್.ಪಿ.ಎಸ್. ಖಾತೆಯ ನಿರ್ವಹಣಾ ವೆಚ್ಚ ಶೇ 0.0009. ಇದು ಪ್ರಪಂಚದ ಎಲ್ಲಾ ಆರ್ಥಿಕ ಸಂಸ್ಥೆಗಳಲ್ಲಿ ವಿಧಿಸುವ ಖಾತಾ ನಿರ್ವಹಣಾ ವೆಚ್ಚಗಳಿಗಿಂತ ಕನಿಷ್ಠವಾಗಿದೆ.ಎನ್‌ಪಿಎಸ್‌ನ ಪ್ರತಿ ಖಾತೆದಾರರಿಗೆ `ಪರ್ಮನೆಂಟ್ ರಿಟೈರ್‌ಮೆಂಟ್ ಅಕೌಂಟ್~(ಪಿಆರ್‌ಎ) ಸಂಖ್ಯೆ ಕೊಡಲಾಗುತ್ತದೆ. ಈ ಖಾತೆಗೆ ನಾಮ ನಿರ್ದೇಶನ ಸವಲತ್ತು ಹಾಗೂ ಆದಾಯ ತೆರಿಗೆ ವಿನಾಯಿತಿ ಕೂಡಾ ಇರುತ್ತದೆ.55ನೇ ವರ್ಷಕ್ಕೆ ಖಾತೆದಾರರ ಕಡೆಯಿಂದ ವಿನಿಯೋಜನೆ ಕೊನೆಗೊಳ್ಳುತ್ತದೆ. ಖಾತೆದಾರ 56ನೇ ವರ್ಷಕ್ಕೆ ಬರುತ್ತಿದ್ದಂತೆ ಪಿಂಚಣಿಯ ಫಲಾನುಭವಿಯಾಗುತ್ತಾನೆ. ಆತ ಬಯಸಿದಲ್ಲಿ ಮಾಸಿಕ ಪಿಂಚಣಿ ರೂಪದಲ್ಲಿಯೂ ಹಣ ಪಡೆಯುತ್ತಾ ಹೋಗಬಹುದು.ಇಲ್ಲವೇ ಆತನಿಗೆ 60 ವರ್ಷ ದಾಟಿದ ನಂತರ ಶೇ 40ರಷ್ಟು ಹಣವನ್ನು ಪಿಂಚಣಿ ಯೋಜನೆಯಲ್ಲಿಯೇ ಉಳಿಸಿ, ಶೇ 60ರಷ್ಟು ಹಣವನ್ನು ವಾಪಸ್ ಪಡೆಯಬಹುದು. ನಂತರ ಆತನಿಗೆ 70 ವರ್ಷ ಪೂರ್ಣಗೊಳ್ಳುತ್ತಲೇ ಪೂರ್ಣ ಹಣವನ್ನು ವಾಪಸ್ ಪಡೆಯಬಹುದು.ಒಂದೊಮ್ಮೆ ಖಾತೆದಾರರ 55 ವರ್ಷಕ್ಕೂ ಮುನ್ನವೇ ಮೃತನಾದಲ್ಲಿ ಆತ ಎಷ್ಟು ಹಣ ವಿನಿಯೋಜಿಸುತ್ತಾನೆಯೋ ಅಷ್ಟೂ ಹಣಕ್ಕೆ ಷೇರುಪೇಟೆ, ಸರ್ಕಾರಿ ಬಾಡ್ ಮತ್ತಿತರೆ ಬಾಂಡ್‌ಗಳ ಮೂಲಕ ಗಳಿಕೆಯಾದ ಹಣವನ್ನೆಲ್ಲ ಒಟ್ಟುಗೂಡಿಸಿ ಖಾತೆಯ ನಾಮಿನಿಗೆ, ಒಂದೊಮ್ಮೆ ನಾಮನಿರ್ದೇಶನ ಇಲ್ಲದೇ ಇದ್ದರೆ ಖಾತೆದಾರನ ಅವಲಂಬಿತರಿಗೆ ತಕ್ಷಣವೇ ಪಾವತಿಸಲಾಗುತ್ತದೆ.ಯೋಜನೆಗೆ ಸಂಬಂಧಿಸಿ ಖಾತೆದಾರರು ದೂರು ನೋಂದಾಯಿಸಬೇಕಾದಲ್ಲಿ ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿಯ ಕಾಲ್‌ಸೆಂಟರ್‌ನ ಶುಲ್ಕ ರಹಿತ ಕರೆ ಸಂಖ್ಯೆ 1-800-222080ಕ್ಕೆ ಕರೆ ಮಾಡಬಹುದು. ಒಟ್ಟಿನಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ ಕ್ರಮಬದ್ಧವಾದ ದೀರ್ಘಾವಧಿ ಉಳಿತಾಯ ಯೋಜನೆಯಾಗಿದೆ ಎನ್ನಬಹುದು.ಭಾರತದಲ್ಲಿ ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳು ಇರದೇ ಇರುವುದರಿಂದ, ಪ್ರತಿಯೊಂದು ವರ್ಗದ ಜನರೂ ಆರಂಭದಿಂದಲೇ ಒಂದಲ್ಲಾ ಒಂದು ಆರ್ಥಿಕ ಯೋಜನೆಯನ್ನು ಸೃಷ್ಟಿಸಿಕೊಳ್ಳುವುದು ಅವಶ್ಯವಿದೆ. ಇಳಿವಯಸ್ಸಿನಲ್ಲಿ `ವಿನಾ ಧೈನೇನ ಜೀವನ~ದ ಅವಶ್ಯವಿದೆ.ಎಳೆಗರು ಎತ್ತಾಗುವಂತೆ, ಮಿಡಿ ಹಣ್ಣಾಗುವಂತೆ, ಮಾನವನಿಗೆ ಮುಪ್ಪುು ತಪ್ಪಿದ್ದಲ್ಲ. ಹಿಂದಿನ ಕಾಲದ ಪಿಂಚಣಿ ಯೋಜನೆ ಮಾಯವಾಗಿದ್ದು ಸ್ವಯಂಕೃತ ಪಿಂಚಣಿ ಯೋಜನೆ ಪ್ರತಿಯೊಬ್ಬರೂ ಸೃಷ್ಟಿಸಿಕೊಳ್ಳಬೇಕಾಗಿದೆ.ಈ ನಿಟ್ಟಿನಲ್ಲಿ `ಹೊಸ ಪಿಂಚಣಿ ಯೋಜನೆ~ ನಮ್ಮ ಯುವ ಜನಾಂಗಕ್ಕೆ ಉತ್ತಮ ಹೂಡಿಕೆಯ ಮಾರ್ಗವಾಗಿದೆ. `ಹನಿಗೂಡಿ ಹಳ್ಳ, ತೆನೆಗೂಡಿ ಬಳ್ಳ~ ಎನ್ನುವ ಗಾದೆ ಮಾತಿನಂತೆ, ಈ ಯೋಜನೆ ನಿವೃತ್ತಿ ಜೀವನಕ್ಕೆ ದಾರಿದೀಪವಾಗಲಿದೆ, ಹಾಗೂ ಮುಪ್ಪಿನಲ್ಲಿ ನೆಮ್ಮದಿ ತರಲಿದೆ.

 
 

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry