ಮುಬಾರಕ್ ಮೇಲೆ ಒತ್ತಡ ತೀವ್ರ

7

ಮುಬಾರಕ್ ಮೇಲೆ ಒತ್ತಡ ತೀವ್ರ

Published:
Updated:

ಕೈರೊ, (ಪಿಟಿಐ): ಹೆಚ್ಚುತ್ತಿರುವ ಒತ್ತಡಗಳಿಗೆ ಕೊನೆಗೂ ಮಣಿದಿರುವ ಈಜಿಪ್ಟ್ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರು ಸೆಪ್ಟಂಬರ್‌ನಲ್ಲಿ ಪದತ್ಯಾಗ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಇದಕ್ಕೆ ಒಪ್ಪದ ಪ್ರತಿಭಟನಾಕಾರರು ತಕ್ಷಣ ಹುದ್ದೆ ತೊರೆಯುವಂತೆ ಪಟ್ಟು ಹಿಡಿದಿದ್ದು ಶುಕ್ರವಾರದವರೆಗೆ ಗಡುವು ನೀಡಿದ್ದಾರೆ.   

ಈಜಿಪ್ಟ್ ಸರ್ಕಾರದ ವಿರುದ್ಧ ದೇಶದಾದ್ಯಂತ ಸಾರ್ವಜನಿಕರು ಬೀದಿಗಿಳಿದಿರುವ ಹಿನ್ನೆಲೆಯಲ್ಲಿ ಟೆಲಿವಿಷನ್‌ನಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ತಕ್ಷಣ ಅಧಿಕಾರದಿಂದ ಕೆಳಗೆ ಇಳಿಯಲಾರೆ ಎಂದು ಖಂಡತುಂಡವಾಗಿ ಹೇಳಿದ್ದಾರೆ. ಸೆಪ್ಟಂಬರ್‌ನಲ್ಲಿ ತಮ್ಮ ಅಧಿಕಾರವಧಿ ಕೊನೆಗೊಳ್ಳಲಿದ್ದು ಆಗ ರಾಷ್ಟ್ರಾಧ್ಯಕ್ಷರ ಹುದ್ದೆಗೆ ನಡೆಯುವ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಸುಮಾರು ಹತ್ತು ನಿಮಿಷ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರ ಮುಖ ಕಾಂತಿಹೀನವಾಗಿತ್ತಲ್ಲದೇ, ತೀವ್ರ ಖಿನ್ನತೆಗೆ ಒಳಗಾದಂತೆ ಕಂಡು ಬಂದರು. ‘ದೇಶದ ಯುವಕರೇ, ನಿಮಗೆ ಪ್ರತಿಭಟಿಸುವ ಹಕ್ಕು ಇದೆ’ ಎಂದು ಮೆದುವಾಗಿ ಮಾತು ಆರಂಭಿಸಿದ ಅವರು ನಂತರ ತಮ್ಮ ವಿರೋಧಿಗಳ ವಿರುದ್ಧ ಟೀಕಾ ಪ್ರಹಾರ ಮಾಡಿದರು.

 
 ಈಜಿಪ್ಟ್‌ನ ಸದ್ಯದ ಪರಿಸ್ಥಿತಿ ಕುರಿತಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ (ಚಿತ್ರದಲ್ಲಿ ಇಲ್ಲ) ಅವರು ವಾಷಿಂಗ್ಟನ್‌ನಲ್ಲಿ ಬುಧವಾರ ಮಾಡಿದ ಭಾಷಣದ ನೇರಪ್ರಸಾರವನ್ನು ಕೈರೊದ ತೆಹ್ರಿರ್ ಚೌಕದಲ್ಲಿ ಸೇರಿದ್ದ ಸಾವಿರಾರು ಸರ್ಕಾರ-ವಿರೋಧಿ ಪ್ರತಿಭಟನಾಕಾರರು ವೀಕ್ಷಿಸಿದರು. ಅಧ್ಯಕ್ಷ ಹೋಸ್ನಿ ಮುಬಾರಕ್ ಅವರ ಪ್ರತಿಕೃತಿಗಳು ಟ್ರಾಫಿಕ್ ಸಿಗ್ನಲ್‌ಗಳ ಕಂಬಗಳಲ್ಲಿ ನೇತಾಡುತ್ತಿರುವುದನ್ನೂ ಕಾಣಬಹುದು.  -ಎಪಿ ಚಿತ್ರ
ಉಳಿದ ಅಧಿಕಾರ ಅವಧಿ ಪೂರ್ಣಗೊಂಡ ನಂತರ  ತಾವಾಗಿಯೇ ಸುಗಮ ರೀತಿಯಲ್ಲಿ ಅಧಿಕಾರ ಹಸ್ತಾಂತರ ಮಾಡುವುದಾಗಿ ಹೇಳಿದ ಅವರು, ಅಧ್ಯಕ್ಷೀಯ ಚುನಾವಣೆ ಕಾನೂನುಗಳಿಗೆ ಸೂಕ್ತ ತಿದ್ದುಪಡಿ ತರುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು.ಸುಮಾರು ಮೂರು ದಶಕಗಳ ನಿರಂತರವಾಗಿ ಈಜಿಪ್ಟ್‌ನಲ್ಲಿ ಆಡಳಿತ ನಡೆಸಿದ 82 ವರ್ಷದ ಮುಬಾರಕ್, ‘ ಯಾವುದೇ ಕಾರಣಕ್ಕೂ ಈಜಿಪ್ಟ್ ತೊರೆಯುವ ಪ್ರಶ್ನೆಯೇ ಇಲ್ಲ. ಕೊನೆಯುಸಿರು ಇರುವವರೆಗೂ ಇಲ್ಲಿಯೇ ಇರುವೆ. ಸಾಯುವುದಾದರೆ ಅದು ಈ ಮಣ್ಣಿಲ್ಲೇ’ ಎಂದರು.ಶನಿವಾರ ರಾತ್ರಿ ಸಚಿವ ಸಂಪುಟವನ್ನು ವಜಾಗೊಳಿಸಿರುವ ಅವರು, ದೇಶದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಉಪಾಧ್ಯಕ್ಷರೊಬ್ಬರನ್ನು ನೇಮಕ ಮಾಡಿದ್ದಾರೆ.ಶುಕ್ರವಾರದ ಗಡುವು: ಈ ನಡುವೆ ಪ್ರತಿಭಟನಾಕಾರರು ಮುಬಾರಕ್ ಪ್ರಸ್ತಾವವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದು ಅಧಿಕಾರದಿಂದ ನಿರ್ಗಮಿಸುವಂತೆ ಪಟ್ಟು ಹಿಡಿದಿದ್ದಾರೆ. ಶುಕ್ರವಾರದ ಒಳಗಾಗಿ ಪದತ್ಯಾಗ ಮಾಡುವಂತೆ ಗಡುವು ವಿಧಿಸಿದ್ದಾರೆ.ನೊಬೆಲ್ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಅಲ್‌ಬರಾದಿ ಸಹ ಮುಬಾರಕ್ ಭಾಷಣವನ್ನು ‘ಜನರನ್ನು ಮೋಸಗೊಳಿಸುವ ತಂತ್ರ’ ಎಂದು ಟೀಕಿಸಿದ್ದಾರೆ.

 

ಅವರು ತಕ್ಷಣ ಅಧಿಕಾರ ತ್ಯಜಿಸದಿದ್ದರೆ ‘ಜೀವ ಇಲ್ಲದ ಮನುಷ್ಯ ನಡೆದಾಡಿದಂತೆ’ ಎಂದು ಗೇಲಿ ಮಾಡಿದ್ದಾರೆ. ಅಧಿಕಾರದಿಂದ ನಿರ್ಗಮಿಸದೆ ಅವರಿಗೆ ಬೇರೆ ದಾರಿಯೇ ಇಲ್ಲ ಎಂದು ಮುಸ್ಲಿಮ್ ಬ್ರದರ್‌ಹುಡ್ ಸದಸ್ಯ ಸಾದ್ ಅಲ್ ಕತಾನಿ ಅಭಿಪ್ರಾಯಪಟ್ಟಿದ್ದಾರೆ.ಸೇನೆ ಸೂಚನೆ: ಮುಬಾರಕ್ ವಿರುದ್ಧ ಕಳೆದ ಒಂಬತ್ತು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಬುಧವಾರ ಮೊದಲ ಬಾರಿಗೆ ಸೇನೆಯು  ಪ್ರತಿಭಟನೆಯನ್ನು ಅಂತ್ಯಗೊಳಿಸಬೇಕೆಂದು ಸೂಚಿಸಿದೆ. ‘ನಿಮ್ಮ ಬೇಡಿಕೆ ಏನೆಂಬುದು ತಿಳಿದಿದೆ. ನೀವು ಪ್ರತಿಭಟನೆಯನ್ನು ನಿಲ್ಲಿಸಬೇಕು’ ಎಂದು ಸೇನಾ ವಕ್ತಾರ ಇಸ್ಮಾಯಿಲ್ ಎಟ್ಮಾನ್ ಟೆಲಿವಿಷನ್ ಮೂಲಕ ಕರೆ ನೀಡಿದ್ದಾರೆ.ಆದರೆ ಪ್ರತಿಭಟನಕಾರರು ವಾಪಸ್ ಹೋಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದು ಶುಕ್ರವಾರದ ಪ್ರಾರ್ಥನೆ ನಂತರ ಬೃಹತ್ ರ್ಯಾಲಿ ನಡೆಸುವುದಾಗಿ ತಿಳಿಸಿದ್ದಾರೆ.ದೊಡ್ಡಣ್ಣನ ಮಧ್ಯ ಪ್ರವೇಶ: ಮುಬಾರಕ್ ಅವರ ಈ ನಿರ್ಧಾರದ ಹಿಂದೆ ಅಮೆರಿಕದ ತೀವ್ರ ಒತ್ತಡ ಕೆಲಸ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಜತೆ ಸುಮಾರು ಅರ್ಧ ಗಂಟೆ ದೂರವಾಣಿಯಲ್ಲಿ ಮಾತನಾಡಿದ ನಂತರ ಮುಬಾರಕ್ ಅಧಿಕಾರ ತೊರೆಯುವ ದೀಢಿರ್ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.ಅಧಿಕಾರದಲ್ಲಿ ಮುಂದುವರಿಯುವ ಮುಬಾರಕ್ ಅವರ ಆಸೆಗೆ ತಡೆಯೊಡ್ಡಿರುವ ಒಬಾಮ, ತಕ್ಷಣದಿಂದ ಈಜಿಪ್ಟ್‌ನಲ್ಲಿ ಬದಲಾವಣೆ ಗಾಳಿ ಬೀಸಲಿ ಎಂದು ಸಲಹೆ ಮಾಡಿರುವುದಾಗಿ ಹೇಳಿದ್ದಾರೆ.   ಹಂತ ಹಂತವಾಗಿ ನಡೆಯುವ ಈ ಬದಲಾವಣೆ ಅರ್ಥಪೂರ್ಣವಾಗಿರಬೇಕು ಮತ್ತು ಶಾಂತಿಯುತ ವಾತಾವರಣದಲ್ಲಿ ನಡೆಯಬೇಕು ಎಂದು ಸಲಹೆ ಮಾಡಿರುವುದಾಗಿ ಒಬಾಮ, ಮುಬಾರಕ್ ಜತೆ ನಡೆಸಿದ ಮಾತುಕತೆ ವಿವರಗಳನ್ನು ವಾಷಿಂಗ್ಟನ್‌ನಲ್ಲಿ ಬಹಿರಂಗಗೊಳಿಸಿದ್ದಾರೆ.ಮುಂದುವರಿದ ಪ್ರಕ್ಷುಬ್ಧತೆ:  ಮುಬಾರಕ್ ಭಾಷಣದ ನಂತರ ಪ್ರತಿಭಟನೆಯಲ್ಲಿ ತೊಡಗಿರುವ ಸಾರ್ವಜನಿಕರ  ಆಕ್ರೋಶ ಶಮನವಾಗುವ ಬದಲು ಮತ್ತಷ್ಟು ಉಲ್ಬಣಿಸಿದೆ. ಅಲೆಗ್ಝಾಂಡ್ರಿಯಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಮುಬಾರಕ್ ಬೆಂಬಲಿಗರು ಮತ್ತು ವಿರೋಧಿಗಳ ನಡುವಿನ ಸಂಘರ್ಷ ತಾರಕಕ್ಕೆ ಏರಿದ್ದು ಪರಿಸ್ಥಿತಿ ಬಿಗಡಾಯಿಸಿದೆ.ಕಲ್ಲು ತೂರಾಟ, ಗುಂಡಿನ ಚಕಮಕಿ ನಡೆದಿದ್ದು ಗಲಭೆಗ್ರಸ್ತ ಈಜಿಪ್ಟ್‌ನಲ್ಲಿ ಪ್ರಕ್ಷುಬ್ಧ ಸ್ಥಿತಿ ಹಾಗೆಯೇ ಮುಂದುವರಿದಿದೆ. ಘಟನೆಯಲ್ಲಿ ಪ್ರಾಣ ಅಥವಾ ಆಸ್ತಿ, ಪಾಸ್ತಿಗಳಿಗೆ ಯಾವುದೇ ಹಾನಿಯಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry