ಗುರುವಾರ , ಜೂನ್ 24, 2021
25 °C

ಮುರನಾಳ ಮಳೆರಾಜೇಂದ್ರಸ್ವಾಮಿ ಮಠದ ವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಪ್ರಸಕ್ತ ವರ್ಷ ರೋಹಿಣಿ, ಮೃಗಶಿರಾ, ಆರಿದ್ರಾ, ಮಗಿ, ಹುಬ್ಬಿ ಮತ್ತು ಉತ್ತರಿ ಮಳೆ ಉತ್ತಮವಾಗಿ ಸುರಿಯಲಿವೆ ಎಂಬುದು ಇಲ್ಲಿನ ಮುರನಾಳ ಶ್ರಿ ಮಳೆ ರಾಜೇಂದ್ರಸ್ವಾಮಿ ಮಠದ ವಾಣಿಯಾಗಿದೆ.



ಈ ಭಾಗದ ಕೃಷಿಕರ ಮಠವೆಂದು ಖ್ಯಾತಿ ಪಡೆದಿರುವ  ಮುರನಾಳ ಶ್ರಿಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ ನಡೆದ ಕಡುಬಿನ ಕಾಳಗ (ಮಳೆ ಬೆಳೆ ಸೂಚನೆ) ದಲ್ಲಿ ಈ ಸೂಚನೆ ದೊರೆತಿದೆ.



ಪ್ರಸಕ್ತ ವರ್ಷದ ಮುಂಗಾರಿನಲ್ಲಿ ರೋಹಿಣಿ, ಮೃಗಶಿರಾ ಉತ್ತಮವಾದರೆ ಆರಿದ್ರಾ, ಪುಷ್ಯಾ ಮಳೆಗಳು ಸಾಧಾರಣವಾಗಿ ಬೀಳಲಿವೆ.



ಹಿಂಗಾರಿನಲ್ಲಿ ಮಗಿ, ಹುಬ್ಬಿ ಮತ್ತು ಉತ್ತರಿ ಉತ್ತಮ ವಾದರೆ, ಹಸ್ತಾ,ಚಿತ್ತಿ ಮಳೆ  ಸಾಧಾರಣವಾಗಿ ಸುರಿಯಲಿವೆ ಎಂಬುದು ಶ್ರೀಮಠದ ವಾಣಿಯಾಗಿದೆ.



  ಪ್ರತಿ ವರ್ಷದಂತೆ  ಮುರನಾಳ ಶ್ರಿ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆದಿದ್ದು, ಜಾತ್ರೆಯ ಅಂಗವಾಗಿ ನಡೆಯುವ ಕಡುಬಿನ ಕಾಳಗದ ಬಗ್ಗೆ ಸುತ್ತಮುತ್ತಲಿನ ಗ್ರಾಮಗಳ ರೈತಾಪಿ ಜನರು ಕುತೂಹಲದಿಂದ ಕಾಯುತ್ತಿದ್ದರು.



ಮಳೆ-ಬೆಳೆ ಕುರಿತಂತೆ ಮಠದ ವಾಣಿ ಕೇಳಿದ ರೈತರು ಪ್ರಸಕ್ತ ವರ್ಷದ ಸಾಧಕ - ಬಾಧಕಗಳನ್ನು ತಮ್ಮ ತಮ್ಮಲ್ಲಿಯೆ ಲೆಕ್ಕ ಹಾಕಿದರು.



ಕಡುಬಿನ ಕಾಳಗದ ವೈಶಿಷ್ಟ್ಯ: ಕಡುಬಿನ ಕಾಳಗದ ಮುಂಚೆ ನಡೆದ ಮಳೆರಾಜೇಂದ್ರಸ್ವಾಮಿಗಳ ಮೂರ್ತಿ ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಗ್ರಾಮದ ನೂರಾರು ಮಹಿಳೆಯರು ಆರತಿ ಹಾಗೂ ಪಂಚಬಿಂದಿಗೆಯೊಂದಿಗೆ ಪಾಲ್ಗೊಂಡಿದ್ದರು. 



ನದಿಯವರೆಗೆ ಮೆರವಣಿಗೆಯಲ್ಲಿ ಸಾಗಿದ ಗ್ರಾಮಸ್ಥರು ಗಂಗೆಗೆ ಪೂಜೆ ಸಲ್ಲಿಸಿದ ಬಳಿಕ ಪಂಚ ಬಿಂದಿಗೆಗಳಲ್ಲಿ ಗಂಗೆಯನ್ನು ತುಂಬುತ್ತಾರೆ.



ಹೀಗೆ ತುಂಬಲ್ಪಟ್ಟ ಪ್ರತಿ ಬಿಂದಿಗೆಯ ಮೇಲೆ ಎರಡೆರಡು ಮಳೆ ಹೆಸರನ್ನು ನಮೂದಿಸಲಾಗುತ್ತದೆ. ಪಂಚ ಬಿಂದಿಗೆ ಹೊತ್ತು ನಂತರ ನದಿಯಿಂದ ಪುನ: ಮೆರವಣಿಗೆಯಲ್ಲಿ ರಥೋತ್ಸವ ನಡೆಯುವ ಸ್ಥಳಕ್ಕೆ ಬರುತ್ತಾರೆ.

ರಥೋತ್ಸವ ನಡೆಯುವ ಜಾಗದಲ್ಲಿ ಪಂಚಬಿಂದಿಗೆ ಪೂಜೆ ನಡೆಸಿದ ತರುವಾಯ ಮಳೆ-ಬೆಳೆ ಸೂಚನೆ ನೀಡಲಾಗುತ್ತದೆ.



ಮಳೆಯ ಹೆಸರನ್ನು ಹೊಂದಿರುವ ಬಿಂದಿಗೆಗಳ ಬಸಿಯುವಿಕೆ (ಸೋರಿಕೆ) ಆಧಾರದ ಮೇಲೆ ಯಾವ ಮಳೆ ಹೆಚ್ಚು ಸುರಿಯುತ್ತದೆ ಹಾಗೂ ಯಾವುದು ಕಡಿಮೆಯಾಗುತ್ತದೆ ಎಂಬುದನ್ನು ಹೇಳಲಾಗುತ್ತದೆ.



ರಾತ್ರಿ ಸಂಭ್ರಮದಿಂದ ನಡೆದ ಕಡುಬಿನ ಕಾಳಗದಲ್ಲಿ ಮಠಾಧೀಶ ಬ್ರಹ್ಮಾನಂದ ಸ್ವಾಮೀಜಿ, ವೆಂಕಣ್ಣ ಜಕ್ಕನಗೌಡರ, ಶ್ರೀಕಾಂತ ಕವಳ್ಳಿ, ಹುಚ್ಚಪ್ಪ ಶಿರೂರ, ಮಳೆಯಪ್ಪ ಮಾಸ್ತರ ತೆಗ್ಗಿ, ಶೇಖಪ್ಪ ಓಬಳಿ, ಮಳೆಯಪ್ಪ ಕುಂಬಾರ, ಪ್ರಕಾಶ ದೊಡ್ಡಮನಿ, ಪ್ರಕಾಶ ಬಿಸಾಳಿ, ಮುರುಗೇಶ ದೊಡ್ಡಮನಿ, ಸುರೇಶ ಬಿಸಾಳಿ, ಸುಭಾಷ್ ಸೂಳಿಕೇರಿ, ಈರಪ್ಪ ದೊಡ್ಡ ಮನಿ,ಶೇಖಪ್ಪ ಕರಮೂದಿ, ರುದ್ರಗೌಡ ಪಾಟೀಲ, ಜಗದೀಶ ಪೂಜಾರಿ, ಮಳೆಯಪ್ಪಗೌಡ ಪಾಟೀಲ, ಮಳೆಯಪ್ಪ ಗುಳಬಾಳ, ಬಸವರಾಜ ಗೂಗಿಹಾಳ, ಸೇರಿದಂತೆ ಗ್ರಾಮದ ಹಿರಿಯರು,ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.