ಶುಕ್ರವಾರ, ಮೇ 27, 2022
21 °C

ಮುರಳಿಗೆ ಸಾಮಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯ ಸಾಮಗಾನ ಸಭಾ ಚೊಚ್ಚಲ ‘ಸಾಮಗಾನ ಮಾತಂಗ’ ಪ್ರಶಸ್ತಿಯನ್ನು ಸಂಗೀತ ವಿದ್ವಾನ್ ಡಾ. ಎಂ. ಬಾಲಮುರಳೀಕೃಷ್ಣ ಅವರಿಗೆ ಪ್ರದಾನ ಮಾಡಿತು. ಪ್ರಶಸ್ತಿ ಜತೆಗೆ 1 ಲಕ್ಷ ರೂ ಹಮ್ಮಿಣಿಯನ್ನೂ ನೀಡಿತು. ಇದೇ ಸಂದರ್ಭದಲ್ಲಿ ನಡೆದ ಸಂಗೀತೋತ್ಸವದಲ್ಲಿ ಉನ್ನಿಕೃಷ್ಣನ್ ಅವರು ಕೀರವಾಣಿ ರಾಗವನ್ನು ಆಹ್ಲಾದಕರವಾಗಿ ನಿರೂಪಿಸಿದರು.ಹಾಗೆಯೇ ಒಂದು ಕಾಲದಲ್ಲಿ ಸುಪರಿಚಿತವಾಗಿದ್ದ ‘ವಾಸುದೇವಯನಿ’ ಕೀರ್ತನೆಯನ್ನು ವಿಸ್ತರಿಸಿದ್ದಲ್ಲದೆ ಹೆಚ್ಚಾಗಿ ಬಳಕೆಯಲ್ಲಿ ಇಲ್ಲದ ಗುರ್ಜರಿ ರಾಗದ ಕೃತಿಯನ್ನು ಆರಿಸಿದರು. ಉತ್ತಮ ಕಂಠ, ಲವಲವಿಕೆಯ ನಿರೂಪಣೆ. ಸಾಲದ್ದಕ್ಕೆ ಪಕ್ಕವಾದ್ಯದವರ (ಎಚ್.ಕೆ.ವೆಂಕಟರಾಂ, ಅರ್ಜುನ್ ಕುಮಾರ್ ಹಾಗೂ ಉಳ್ಳೂರು ಗಿರಿಧರ ಉಡುಪ) ಉತ್ತಮ ಕೊಡುಗೆಯೂ ಮಿಳಿತವಾಯಿತು.ಪ್ರೌಢ ಗಾಯನ

ಹಿರಿಯ ಗಾಯಕಿ ಆರ್.ಎ. ರಮಾಮಣಿ ಅವರು ಕರ್ನಾಟಕ ಸಂಗೀತವಲ್ಲದೆ ಫ್ಯೂಷನ್, ಜಾಸ್ ಲೋಕದಲ್ಲೂ ಪ್ರಸಿದ್ಧರು.ಶ್ರೀರಾಮ ಲಲಿತಕಲಾ ಮಂದಿರದ ಆಶ್ರಯದಲ್ಲಿ ನಡೆದ ಸಂಗೀತೋತ್ಸವದಲ್ಲಿ ಪುರಂದರದಾಸರ ಪದಗಳನ್ನೇ ಹೆಚ್ಚಾಗಿ ಆಯ್ದು, ಸಭೆಯ ಮೆಚ್ಚುಗೆಗೆ ಪಾತ್ರರಾದರು.‘ಪೋಗದಿರೆಲೊ ರಂಗ’ ದೇವರನಾಮಕ್ಕೆ ಆಲಾಪನೆ, ಸ್ವರಗಳಿಂದ ಸಂಗೀತ ಮೌಲ್ಯ ತುಂಬಿದರು. ಆ ಮೊದಲು ‘ಸ್ಮರಿಸೊ ಸರ್ವದಾ ಹರಿಯ’ ವಿಸ್ತರಿಸಿದ್ದಲ್ಲದೆ ‘ಪರಮಾತ್ಮುಡು’ ಕೀರ್ತನೆಗೆ ಮಾಡಿದ ರಾಗಾಲಾಪನೆ ರಂಜಕತ್ವದ ಸಂಗತಿಗಳಿಂದ ಕೂಡಿತ್ತು. ‘ಏಟಿಜನ್ಮ’ ಸಹ ಒಂದು ಭಾವಪೂರ್ಣ ಕೃತಿ. ತಮ್ಮ ಅಗಾಧ ಅನುಭವದಿಂದ ಪ್ರೌಢವಾಗಿ ಹಾಡಿದರು. ಪಿಟೀಲಿನಲ್ಲಿ ಸಿ.ಎನ್. ಚಂದ್ರಶೇಖರ್, ಮೃದಂಗದಲ್ಲಿ ಆನೂರು ಅನಂತಕೃಷ್ಣ ಶರ್ಮ ಹಾಗೂ ಘಟದಲ್ಲಿ ಕಾರ್ತಿಕ್ ಮಣಿ ರುಚಿ ತುಂಬಿದರು.ದಾಸರಿಗೆ ನಾದನಮನ

ತಿರುವೆಂಗಡ ಟ್ರಸ್ಟ್‌ನವರು ಪುರಂದರ ದಾಸರ ಆರಾಧನೆಯನ್ನು ಒಂದು ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಗಣೇಶ, ಶಿವ, ರಾಮ, ಕೃಷ್ಣ, ದೇವಿ ಹಾಗೂ ಆತ್ಮೋದ್ಧಾರಗಳ ಕೃತಿಗಳನ್ನು ಭಿನ್ನ ವಿದ್ವಾಂಸರುಗಳಿಂದ ಹಾಡಿಸಿದ್ದು ವೈವಿಧ್ಯತೆಯನ್ನು ತಂದುಕೊಟ್ಟಿತು. ಮೊದಲಿಗೆ ಹಾಡಿದ ಸಂಧ್ಯಾಶಂಕರ್ ದಾಸರ ಪಿಳ್ಳಾರಿ ಗೀತೆಗಳಿಂದ ಪ್ರಾರಂಭಿಸಿ, ‘ಜಯ ಜಾನಕೀಕಾಂತ’ ತೆಗೆದುಕೊಂಡರು. ಸುಶ್ರಾವ್ಯ ಕಂಠದಿಂದ ‘ಆಡಿದನೊ ರಂಗ’ ಹಾಗೂ ‘ಕಲ್ಲು ಸಕ್ಕರೆ ಕೊಳ್ಳಿರೊ’ ನಿರೂಪಿಸಿದರು.ಉಗಾಭೋಗಗಳಿಂದ ಪೀಠಿಕೆ ಹಾಕಿದ್ದೂ ಸಮಯೋಚಿತವಾಗಿತ್ತು. ಸಹಗಾಯನದಲ್ಲಿ ಚೆನ್ನಕೇಶವ ಮತ್ತು ಪಿಟೀಲಿನಲ್ಲಿ ಮತ್ತೂರು ಶ್ರೀನಿಧಿ ನೆರವಾದರು. ಮೃದಂಗ ನುಡಿಸಿದ ಮಾಸ್ಟರ್ ಅಕ್ಷಯ್ ಎಲ್ಲರ ಗಮನ ಸೆಳೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.