ಮುರಿದು ಬಿದ್ದ ಪೂಜಾ ನಿಶ್ಚಿತಾರ್ಥ

7

ಮುರಿದು ಬಿದ್ದ ಪೂಜಾ ನಿಶ್ಚಿತಾರ್ಥ

Published:
Updated:
ಮುರಿದು ಬಿದ್ದ ಪೂಜಾ ನಿಶ್ಚಿತಾರ್ಥ

ಬೆಂಗಳೂರು: ಚಲನಚಿತ್ರ ನಟಿ ಪೂಜಾ ಗಾಂಧಿ ಮತ್ತು ಉದ್ಯಮಿ ಆನಂದ್ ಗೌಡ ಅವರ ನಡುವಿನ ನಿಶ್ಚಿತಾರ್ಥ ಮುರಿದು ಬಿದ್ದಿದೆ. `ಪೂಜಾ ತಾಯಿ ಜ್ಯೋತಿ ಅವರೇ ನಿಶ್ಚಿತಾರ್ಥ ಮುರಿದು ಬೀಳಲು ಕಾರಣ' ಎಂದು ಆನಂದ್ ಆರೋಪಿಸಿದ್ದಾರೆ. `ತಪ್ಪು ನನ್ನ ತಾಯಿಯ ಕಡೆಯಿಂದ ಆಗಿಲ್ಲ. ಆನಂದ್ ಅವರೇ ಇದಕ್ಕೆಲ್ಲ ಕಾರಣ' ಎಂದು ಪೂಜಾ ಹೇಳಿದ್ದಾರೆ.ಇಲ್ಲಿನ ಕತ್ರಿಗುಪ್ಪೆಯಲ್ಲಿರುವ ಪೂಜಾ ಅವರ ನಿವಾಸದಲ್ಲಿ ನವೆಂಬರ್ 15ರಂದು ನಿಶ್ಚಿತಾರ್ಥ ನೆರವೇರಿತ್ತು. 2013ರ ಏಪ್ರಿಲ್‌ನಲ್ಲಿ ಇಬ್ಬರೂ ವಿವಾಹವಾಗಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು.ಪೂಜಾ ಜೊತೆಗಿನ ತಮ್ಮ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿರುವುದು ನಿಜ, ನಿಶ್ಚಿತಾರ್ಥ ಮುರಿದು ಬಿದ್ದಿರುವುದೂ ಹೌದು ಎಂಬುದನ್ನು ಆನಂದ್ ಸ್ಪಷ್ಟಪಡಿಸಿದ್ದಾರೆ.`ಪ್ರಜಾವಾಣಿ' ಜೊತೆ ಮಾತನಾಡಿದ ಅವರು, `ಪೂಜಾ ಅವರ ತಾಯಿ ಸಣ್ಣಪುಟ್ಟ ವಿಷಯಕ್ಕೂ ತಕರಾರು ತೆಗೆಯುತ್ತಿದ್ದರು. ನಾನು ಕಪ್ಪಗಿದ್ದೇನೆ, ಪೂಜಾ ಅವರಿಗೆ ಬಿಳಿ ಬಣ್ಣದ ವರನೇ ಬೇಕು ಎಂದು ಅವರು ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ನಮ್ಮ ಆಹಾರ ಪದ್ಧತಿ ಸರಿಯಿಲ್ಲ ಎಂದೂ ಹೇಳಿದ್ದಾರೆ' ಎಂದು ಆರೋಪಿಸಿದರು.`ಯಾವುದೋ ರಾಜ್ಯದಿಂದ ಬಂದು ಇಲ್ಲಿ ನೆಲೆ ಕಂಡಿರುವ ಅವರಿಗೆ ಇಲ್ಲಿನ ಆಹಾರ ಪದ್ಧತಿ ಕೊಳಕು ಎನಿಸಿದೆ. ಒಂಬತ್ತು ಬೆಡ್‌ರೂಂಗಳಿರುವ ನನ್ನ ಮನೆ ಅವರಿಗೆ ಚಿಕ್ಕದಾಗಿ ಕಂಡಿದೆ. ಅವರ ಆಸೆಬುರುಕತನ ಮತ್ತು ಕೆಟ್ಟ ಮಾತುಗಳಿಂದ ಬೇಸತ್ತಿದ್ದೇನೆ. ಹೀಗಾಗಿ ಈ ಸಂಬಂಧಕ್ಕೆ ತಿಲಾಂಜಲಿ ಇಡುತ್ತಿದ್ದೇನೆ' ಎಂದರು.`ತಾಯಿ ಮಾತ್ರವಲ್ಲ, ಪೂಜಾ ಕೂಡ ಇದೇ ಮನೋಭಾವದವರು. ತಾಯಿಯ ಮಾತಿನಂತೆಯೇ ಅವರು ನಡೆಯುತ್ತಾರೆ. ನಿಶ್ಚಿತಾರ್ಥ ನಡೆಯುವವರೆಗೆ ಎಲ್ಲವೂ ಇಷ್ಟವೆಂಬಂತೆ ವರ್ತಿಸಿ ಈಗ ಬೇರೆ ರೀತಿ ಮಾತನಾಡುತ್ತಿದ್ದಾರೆ. ನಿಶ್ಚಿತಾರ್ಥಕ್ಕೆ ಮೊದಲೇ ನನ್ನ ಬಗ್ಗೆ ಅವರಿಗೆ ತಿಳಿದಿರಲಿಲ್ಲವೆ? ಆಗ ಏಕೆ ಸುಮ್ಮನಿದ್ದರು? ಪೂಜಾ ಅವರ ವೈಯಕ್ತಿಕ, ರಾಜಕೀಯ ಹಾಗೂ ಸಿನಿಮಾ ಬದುಕಿಗೆ ನಾನು ಬೆಂಬಲವಾಗಿ ನಿಂತಿದ್ದೆ. ಹಾಗೆ ಮಾಡಿದ್ದು ತಪ್ಪು ಎಂದು ಈಗ ಅನಿಸುತ್ತಿದೆ' ಎಂದು ಹೇಳಿದರು.`ಪೂಜಾ ಅವರಿಂದ ದೊಡ್ಡ ಮೊತ್ತದ ಹಣ ನನಗೆ ವಾಪಸು ಬರಬೇಕಿದೆ. ಅದು ಬಾರದಿದ್ದರೆ ದಾಖಲೆ ಸಹಿತ ಮಾಧ್ಯಮಗಳ ಎದುರು ಎಲ್ಲವನ್ನೂ ಬಹಿರಂಗಪಡಿಸಲಿದ್ದೇನೆ' ಎಂದು ಆನಂದ್ ತಿಳಿಸಿದರು.

ಈ ವಿದ್ಯಮಾನ ಕುರಿತು ಸುದ್ದಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಪೂಜಾ, `ನನ್ನ ತಾಯಿಯೇ ಮುಂದೆ ನಿಂತು ನಿಶ್ಚಿತಾರ್ಥ ನೆರವೇರಿಸಿದ್ದರು. ಸಂಬಂಧ ಮುರಿದುಬೀಳಲು ಆನಂದ್ ಅವರೇ ಕಾರಣ, ನನ್ನ ತಾಯಿ ಅಲ್ಲ' ಎಂದು ಖಡಾಖಂಡಿತವಾಗಿ ಹೇಳಿದರು.`ಆನಂದ್ ಅವರು ಚಿಕ್ಕಪುಟ್ಟ ವಿಷಯಕ್ಕೂ ನನ್ನ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದರು. ಈ ಕಾರಣಕ್ಕೆ ಸಂಬಂಧ ಮುರಿದುಕೊಳ್ಳಲು ನಾನೇ ನಿರ್ಧರಿಸಿದೆ' ಎಂದೂ ಪೂಜಾ ಅವರು ತಿಳಿಸಿದರು. ರಾಜಕೀಯದಲ್ಲಿ ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದ ಪೂಜಾ, ಇತ್ತೀಚೆಗಷ್ಟೇ ಕೆಜೆಪಿ ಸೇರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry