ಗುರುವಾರ , ಮೇ 19, 2022
20 °C

ಮುರುಘಾ ಶರಣರಿಂದ ಶೂನ್ಯ ಪೀಠಾರೋಹಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಇಲ್ಲಿನ ಮುರುಘಾ ಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಶುಕ್ರವಾರ ಶಿವಮೂರ್ತಿ ಮುರುಘಾ ಶರಣರು ಅತ್ಯಂತ ಸರಳವಾಗಿ ಶೂನ್ಯ ಪೀಠಾರೋಹಣ ಮಾಡಿದರು.ಮುರುಘಾಮಠ ಪ್ರಾಂಗಣದ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಕ್ತರಿಂದ ವಚನ ಘೋಷಣೆ, ಜಾನಪದ ಕಲಾ ತಂಡಗಳ ಪ್ರದರ್ಶನ ನಡುವೆ ಸಡಗರ, ಸಂಭ್ರಮದೊಂದಿಗೆ ಚಿನ್ನದ ಕೀರಿಟ ಹಾಗೂ ರತ್ನ ಖಚಿತ ಸಿಂಹಾಸನದ ಬದಲಾಗಿ ಬಸವಾದಿ ಶರಣರ ವಚನಗ್ರಂಥ ಹಿಡಿದು, ರುದ್ರಾಕ್ಷಿ ಕಿರೀಟ ಧರಿಸಿ ಮರದ ಕುರ್ಚಿಯಲ್ಲಿ ಶರಣರು ಪೀಠಾರೋಹಣ ಮಾಡಿದರು. ಹಿಂದಿನ ಸ್ವಾಮೀಜಿಗಳು ಧರಿಸುತ್ತಿದ್ದ ಚಿನ್ನದ ಕಿರೀಟವನ್ನು ಸಾಂಕೇತಿಕವಾಗಿ ಪಕ್ಕದಲ್ಲೊಬ್ಬರು ಹಿಡಿದುಕೊಂಡಿದ್ದರು.ಸಹಸ್ರಾರು ಭಕ್ತಾದಿಗಳು ಜಯಘೋಷ ಮೊಳಗಿಸಿದರು. ಈ ಸಂದರ್ಭದಲ್ಲಿ ಶಿವಮೂರ್ತಿ ಮುರುಘಾ ಶರಣರು ಭಕ್ತರಿಗೆ ಆಶೀರ್ವಚನ ನೀಡಿ, ಸಕಲ ಜೀವರಾಶಿಗಳಿಗೂ ಲೇಸಾಗಲಿ. ಸರ್ವರ ಸಂಕಷ್ಟ ನಿವಾರಣೆಯಾಗಲಿ, ಸಕಾಲಕ್ಕೆ ಮಳೆ ಬಂದು, ಬೆಳೆ ಬೆಳೆದು ರೈತರ ಬವಣೆ ತಪ್ಪಿ, ಅನ್ನದಾತನಿಂದ ದೇಶಕ್ಕೆ, ನಾಡಿಗೆ ಸುಖ-ಶಾಂತಿ, ನೆಮ್ಮದಿ ದೊರಕಿ ಉತ್ತಮ ಜೀವನ ನಡೆಸುವಂತಾಗಲಿ ಎಂದು ಪ್ರಾರ್ಥನೆ ಮಾಡಿದರು.

ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತಾದಿಗಳು ಸರದಿ ಪ್ರಕಾರ ಶಿವಮೂರ್ತಿ ಮುರುಘಾ ಶರಣರ ದರ್ಶನ ಪಡೆದರು.ನಾಡಿನ ಹಲವು ಮಠಾಧೀಶರು ಹಾಗೂ ಮಾಜಿ ಶಾಸಕ ಮಹಿಮ ಪಟೇಲ್, ಪ್ರೊ.ಎಸ್.ಎಚ್. ಪಟೇಲ್, ಕೆ.ವಿ. ಪ್ರಭಾಕರ್, ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಪ್ರೊ.ಇ. ಚಿತ್ರಶೇಖರ್ ಮತ್ತಿತರರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.