ಮಂಗಳವಾರ, ನವೆಂಬರ್ 12, 2019
19 °C

ಮುರ್ಕಿ ಪಂಚಾಯಿತಿ ಸಿಬ್ಬಂದಿ ಪ್ರತಿಭಟನೆ

Published:
Updated:

ಕಮಲನಗರ: ಕಳೆದ ಇಪ್ಪತ್ತೈದು ತಿಂಗಳ ವೇತನ ಪಾವತಿ ಮಾಡುವಂತೆ ಆಗ್ರಹಿಸಿ ಇಲ್ಲಿಗೆ ಸಮೀಪದ ಮುರ್ಕಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಸಂದೀಪ ಮೆನಗುಳೆ ನೇತೃತ್ವದಲ್ಲಿ ಪಂಚಾಯಿತಿ ಎದುರು ಕಳೆದ ಶನಿವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.ಮುರ್ಕಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಿಲ್ ಕಲೆಕ್ಟರ್, ವಾಟರ್‌ಮನ್, ಸಿಪಾಯಿ, ರಸ್ತೆ ಸ್ವಚ್ಛಗೊಳಿಸುವ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕಳೆದ 25 ತಿಂಗಳಿನಿಂದ ಸಂಬಳ ನೀಡಿಲ್ಲ. ಜೀವನ ನಡೆಸುವುದು ತುಂಬಾ ಕಷ್ಟವಾಗುತ್ತಿದೆ ಎಂದು ಪ್ರತಿಭಟನಾ ನಿರತರು ತಿಳಿಸಿದ್ದಾರೆ.

ಸಂಬಳ ಇಂದಲ್ಲ ನಾಳೆ ಬರಬಹುದೆಂಬ ಭರವಸೆಯಿಂದ ದಿನ ಬಳಕೆ ವಸ್ತುಗಳನ್ನು ಸಾಲ ಮಾಡಿ ತಂದಿದ್ದೇವೆ. ಆದರೆ ಸಾಲದ ಮೊತ್ತ ತುಂಬಾ ಹೆಚ್ಚಳವಾಗಿದ್ದು, ಇದೀಗ ಸಾಲ ಮರುಪಾವತಿಗೆ ಒತ್ತಡ ಹೆಚ್ಚಾಗುತ್ತಿದೆ. ದಿಕ್ಕು ತೋಚದಂತಹ ಸ್ಥಿತಿ ನಮ್ಮದಾಗಿದೆ ಎಂದು ಸಿಬ್ಬಂದಿ ಅಲವತ್ತುಕೊಂಡಿದ್ದಾರೆ.ಕೂಡಲೇ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಪಂಚಾಯಿತಿ ಸಿಬ್ಬಂದಿ ಆಗ್ರಹಿಸಿದ್ದಾರೆ. ಪ್ರತಿಭಟನೆ ವಾಪಸ್: ಮುಖಂಡ ಶಿವಾನಂದ ವಡ್ಡೆ, ಗ್ರಾಮ ಪಂಚಾಯಿತಿ ಪಿಡಿಒ ವಿಜಯಕುಮಾರ ಬಿರಾದಾರ್ ಅವರು ನಡೆಸಿದ ಮಾತಿನ ಫಲವಾಗಿ ಭಾನುವಾರ ಪಂಚಾಯಿತಿ ಸಿಬ್ಬಂದಿ ಪ್ರತಿಭಟನೆ ಹಿಂತೆಗೆದುಕೊಂಡರು.ಶೀಘ್ರದಲ್ಲಿ 10 ತಿಂಗಳ ಬಾಕಿ ವೇತನ ಬಿಡುಗಡೆ ಮಾಡಲಾಗುವುದು. ಪಂಚಾಯಿತಿಗೆ ಬರಬೇಕಾದ ಕರ ವಸೂಲಿ ಸಂಗ್ರಹವಾದ ನಂತರ ಉಳಿದ ವೇತನ ಬಿಡುಗಡೆ ಮಾಡಲಾಗುವುದು ಎಂದು ಪಿಡಿಒ ವಿಜಯಕುಮಾರ ಬಿರಾದಾರ್ ಪ್ರತಿಭಟನಾ ನಿರತರಿಗೆ ಭರವಸೆ ನೀಡಿದರು. ಮುಖಂಡ ಸಂಜೀವಕುಮಾರ ಬಿರಾದಾರ್, ನಾಗೇಶ ಪತ್ರೆ, ನಾಗನಾಥ ಸಗರ್, ಗೋವಿಂದರಾವ್ ಹಿಲಾಲಪುರ್, ಸಂತೋಷ ಬಾರೋಳೆ ಇದ್ದರು.

ಪ್ರತಿಕ್ರಿಯಿಸಿ (+)