ಮುಲಾಯಂ ನ್ಯಾಯದ ಭರವಸೆ

7
ಮುಜಾಫರ್‌ನಗರ ಹಿಂಸಾಚಾರ

ಮುಲಾಯಂ ನ್ಯಾಯದ ಭರವಸೆ

Published:
Updated:

ಆಗ್ರಾ (ಪಿಟಿಐ): ಉತ್ತರ ಪ್ರದೇಶದ ಮುಜಾಫರ್‌ನಗರ, ಸುತ್ತಲಿನ ಪ್ರದೇಶಗಳಲ್ಲಿ ನಡೆದ ಗಲಭೆ ಹಾಗೂ  ಗುಜರಾತ್‌ನಲ್ಲಿ  2002ರಲ್ಲಿ ನಡೆದಿದ್ದ  ಗೋಧ್ರಾ ಹತ್ಯಾಕಾಂಡದ ನಡುವಿನ ಸಾಮತ್ಯೆಗಳನ್ನು ಗುರುವಾರ ತಳ್ಳಿ ಹಾಕಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್, ಸಂತ್ರಸ್ತರಿಗೆ `ನ್ಯಾಯ' ಒದಗಿಸುವ ಹಾಗೂ ತಪ್ಪಿತಸ್ಥರ ವಿರುದ್ಧ `ಕಠಿಣ ಕ್ರಮ' ಜರುಗಿಸುವ ಭರವಸೆ ನೀಡಿದ್ದಾರೆ.

`ಗುಜರಾತ್‌ನಲ್ಲಿ ನ್ಯಾಯ ದೊರಕಿಲ್ಲ. ಆದರೆ, ಉತ್ತರ ಪ್ರದೇಶದಲ್ಲಿ ನ್ಯಾಯ ಸಿಗಲಿದೆ. ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ನಾನು ಯಾವತ್ತೂ ರಾಜಕೀಯ ಮಾಡಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ನೆರವು ಕಲ್ಪಿಸಲಾಗುವುದು' ಎಂದು ಇಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದಲ್ಲಿ ಯಾದವ್ ತಿಳಿಸಿದ್ದಾರೆ.

ಮತ ಲಾಭಕ್ಕಾಗಿ ಗುಜರಾತ್‌ನಲ್ಲಿ ಮೋದಿ ಏನು ಮಾಡಿದ್ದರೋ ಅದನ್ನೇ ಸಮಾಜವಾದಿ ಪಕ್ಷ ಮಾಡುತ್ತಿತ್ತು ಎಂದು ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್ ಸಿಂಗ್ ಮಾಡಿದ ಟೀಕೆಗೆ ಅವರು  ಪ್ರತಿಕ್ರಿಯಿಸಿದ್ದಾರೆ.

`ಗುಜರಾತ್‌ನಲ್ಲಿ ಮೋದಿ ಏನು ಮಾಡಿದ್ದರು ಎಂದು ನೀವು ಹಿಂದಿರುಗಿ ನೋಡಿದರೆ ಅವರು ತಟಸ್ಥರಾಗಿದ್ದರು.   ಯಾವುದೇ ಕ್ರಮಗಳನ್ನು ಕೈಗೊಳ್ಳದಂತೆ ಪೊಲೀಸರನ್ನು ಅವರು ತಡೆದರು. ಅದೇ ಈಗ ಉತ್ತರ ಪ್ರದೇಶದಲ್ಲಿ ನಡೆಯುತ್ತಿದೆ' ಎಂದು ಅಜಿತ್ ಸಿಂಗ್ ಟೀಕಿಸಿದ್ದರು.

ವಿರೋಧ ಪಕ್ಷಗಳ ಆರೋಪವನ್ನು ಅಲ್ಲಗಳೆದ ಯಾದವ್, `ತಪ್ಪಿತಸ್ಥರು   ಮತ್ತೆ ಇಂತಹ ಕೃತ್ಯವನ್ನು ಎಂದಿಗೂ ಎಸೆಗದಂತೆ' ಅವರ ವಿರುದ್ಧ ತಮ್ಮ ಪಕ್ಷದ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.ಗಲಭೆ ನಿಯಂತ್ರಿಸುವ ನಿಟ್ಟಿನಲ್ಲಿ ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದೇ ಕೆಲ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರು ಎಂಬ ಆರೋಪದ ಬಗೆಗಿನ ಪ್ರಶ್ನೆಗೆ ಯಾದವ್, `ನಿರ್ಲಕ್ಷ್ಯ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು' ಎಂದು ಉತ್ತರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry