ಮುಳಮುತ್ತಲದ ಮಹಾತಾಯಿಗೆ ನಾಲ್ಕು ಮಕ್ಕಳು!

7

ಮುಳಮುತ್ತಲದ ಮಹಾತಾಯಿಗೆ ನಾಲ್ಕು ಮಕ್ಕಳು!

Published:
Updated:

ಧಾರವಾಡ: ತಾಲ್ಲೂಕಿನ ಮುಳಮುತ್ತಲ ಗ್ರಾಮದ ಸವಿತಾ ಸದಾಶಿವ ಡೊಣ್ಣಿ (24) ಇಲ್ಲಿಯ ಜಿಲ್ಲಾ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳಿಗೆ ಮಂಗಳವಾರ ಜನ್ಮ ನೀಡಿದ್ದು, ಈ ಪೈಕಿ ಏಕೈಕ ಗಂಡುಮಗು ಸಂಜೆ ಕೊನೆಯುಸಿರೆಳೆಯಿತು.ಸವಿತಾಗೆ ಇದು ಎರಡನೇ ಹೆರಿಗೆ. ಎರಡು ವರ್ಷಗಳ ಹಿಂದೆ ಹೆಣ್ಣು ಮಗುವಿಗೆ ಆಕೆ ಜನ್ಮ ನೀಡಿದ್ದರು. ಈಗ ನಾಲ್ಕು ಮಕ್ಕಳನ್ನು ಹೆತ್ತ ಸಂತಸ ಒಂದೆಡೆಯಾದರೆ, ಹುಟ್ಟಿದ ನಾಲ್ಕು ಮಕ್ಕಳಲ್ಲಿ ಗಂಡುಮಗು ಕೊನೆಯುಸಿರೆಳೆದದ್ದು ದಂಪತಿಗೆ ನೋವುಂಟು ಮಾಡಿದೆ.

ಗ್ರಾಮದಲ್ಲಿ ಮನೆಯೊಂದನ್ನು ಬಿಟ್ಟರೆ ಈ ದಂಪತಿಗೆ ಜಮೀನು ಅಥವಾ ಇತರೆ ಯಾವುದೇ ಆಸ್ತಿಯೂ ಇಲ್ಲ. ಪತಿ ಸದಾಶಿವ ಕೂಲಿ ಮಾಡುತ್ತಾರೆ.`ಕೆಲ ದಿನಗಳ ಹಿಂದೆ ಸವಿತಾಗೆ ಸ್ಕ್ಯಾನಿಂಗ್ ಮಾಡಿಸಿದಾಗ ಮೂವರು ಮಕ್ಕಳು ಇರುವುದು ಖಚಿತವಾಗಿತ್ತು. ಆದರೆ ಹೆರಿಗೆಯಾದ ಮೇಲಷ್ಟೇ ನಾಲ್ಕು ಮಕ್ಕಳು ಇರುವುದು ಗೊತ್ತಾಯಿತು' ಎಂದು ಸವಿತಾ ತಾಯಿ ಯಲ್ಲವ್ವ ತಿಳಿಸಿ ದರು. ನಾಲ್ಕು ಶಿಶುಗಳಿಗೂ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಯಿತಾದರೂ ಸಂಜೆ 5ರ ವೇಳೆಗೆ ಗಂಡುಮಗು ಅಸುನೀಗಿತು. ಉಳಿದ ಮೂರು ಹೆಣ್ಣು ಶಿಶುಗಳನ್ನು ಆರೈಕೆಗೆ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಣಂತಿ ಸವಿತಾ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕಿಮ್ಸ ವೈದ್ಯರು ತಿಳಿಸಿದ್ದಾರೆ.ಬೆಳಿಗ್ಗೆ 9.20ಕ್ಕೆ ಮೊದಲ ಮಗು ಜನಿಸಿತು. 11.05ಕ್ಕೆ ಎರಡನೇ ಮಗು, 11.20ಕ್ಕೆ ಮೂರನೇ ಶಿಶು ಹಾಗೂ 11.25ಕ್ಕೆ ನಾಲ್ಕನೇ ಮಗುವಿಗೆ ಸವಿತಾ ಜನ್ಮ ನೀಡಿದರು. ಈ ಬಗ್ಗೆ ಸಂತಸ ಹಂಚಿಕೊಂಡ  ಮಕ್ಕಳ ತಂದೆ ಸದಾಶಿವ, `ದೇವರು ಕೊಟ್ಟಿದ್ದನ್ನು ಬೇಡ ಎನ್ನಲ್ಲ. ಮನೆಯಲ್ಲಿ ಬಡತನ ಇದೆ ಎಂದು ಈ ಮಕ್ಕಳನ್ನು ಬೇರೆಯವರಿಗೆ ದತ್ತು ಕೊಡುವುದಿಲ್ಲ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೇ?' ಎನ್ನುತ್ತಾರೆ  ತಂದೆ ಸದಾಶಿವ.ಮಕ್ಕಳ ಪಾಲನೆಗೆ ನೆರವು ನೀಡುವಂತೆ ಅವರು ಕೋರಿದ್ದಾರೆ. ದಾನಿಗಳು ಸವಿತಾ ಡೊಣ್ಣಿ ಅವರ ಸಿಂಡಿಕೇಟ್ ಬ್ಯಾಂಕ್ (ನರೇಂದ್ರ ಶಾಖೆ, ತಾ. ಧಾರವಾಡ) ಖಾತೆ ಸಂಖ್ಯೆ 1234 2210 0266 10ಗೆ ಹಣವನ್ನು ಪಾವತಿಸಬಹುದು. ಮಾಹಿತಿಗೆ  ಮೊಬೈಲ್ ಸಂಖ್ಯೆ 99457 11073 ಸಂಪರ್ಕಿಸ ಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry