ಶುಕ್ರವಾರ, ನವೆಂಬರ್ 22, 2019
22 °C

ಮುಳುಗಡೆ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್'

Published:
Updated:

ಬಾಗಲಕೋಟೆ: `ಆಲಮಟ್ಟಿ ಜಲಾಶಯವನ್ನು 524 ಮೀಟರ್‌ಗೆ ಎತ್ತರಿಸುವುದರಿಂದ ಸಂತ್ರಸ್ತರಾಗಲಿರುವ ಬಾಗಲಕೋಟೆಯ   ಸಂತ್ರಸ್ತರ ಪುನರ್ವಸತಿ ಮತ್ತು ಪರಿಹಾರಕ್ಕೆ ಕಾಂಗ್ರೆಸ್ ವಿಶೇಷ ಪ್ಯಾಕೇಜ್ ನೀಡಲಿದೆ ಹಾಗೂ ಬಾಗಲಕೋಟೆ ನಗರವನ್ನು ತೆರಿಗೆ ಮುಕ್ತ ವಲಯವನ್ನಾಗಿ ಪರಿಗಣಿಸಲು ಗಂಭೀರ ಚಿಂತನೆ ನಡೆಸಲಿದೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.`ರಾಜ್ಯದಲ್ಲಿ ಕಾಂಗ್ರೆಸ್‌ಗಾಳಿ ಬೀಸುತ್ತಿದ್ದು, ಜನತೆ  ನಿರೀಕ್ಷೆ ಮೀರಿ ಕಾಂಗ್ರೆಸ್ ಪರ ಒಲವು ವ್ಯಕ್ತಪಡಿಸುತ್ತಿದ್ದಾರೆ' ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.`ಬಿಜೆಪಿಯ ಐದು ವರ್ಷದ ಆಡಳಿತಾವಧಿಯಲ್ಲಿ ನಡೆದಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಹಗರಣದಿಂದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದುಹೋಗಿದೆ. ಜನತೆ ರೋಸಿ ಹೋಗಿದ್ದಾರೆ' ಎಂದರು.

`ಐದು ವರ್ಷದಲ್ಲಿ ಬಿಜೆಪಿ ಒಡೆದು ಮೂರು ಹೋಳಾಗಿದೆ. ಸಿದ್ಧಾಂತದ ಬದಲಿಗೆ ಸ್ವಾರ್ಥ, ಅಧಿಕಾರ ಲಾಲಸೆ, ಅಕ್ರಮ ಸಂಪತ್ತು ರಕ್ಷಣೆಗಾಗಿ ಬಿಜೆಪಿ ಛಿದ್ರವಾಗಿದೆ. 2008ರ ಬಿಜೆಪಿ ಈಗಿಲ್ಲ. ರಾಜ್ಯದಲ್ಲಿ ಈಗಿರುವುದು ದುರ್ಬಲ ಬಿಜೆಪಿ' ಎಂದು ವಾಗ್ದಾಳಿ ನಡೆಸಿದರು.`224 ಕ್ಷೇತ್ರದಲ್ಲೂ ಕಾಂಗ್ರೆಸ್ ಪ್ರಬಲವಾಗಿದೆ. ಪ್ರತಿ ಕ್ಷೇತ್ರದಲ್ಲೂ ಕಾರ್ಯಕರ್ತರು ಇದ್ದಾರೆ. ಬೇರಾವ ಪಕ್ಷವೂ ರಾಜ್ಯವನ್ನು ಸಂಪೂರ್ಣವಾಗಿ ಪ್ರತಿನಿಧಿಸುತ್ತಿಲ್ಲ. ಬಳ್ಳಾರಿ ಮತ್ತು ಗುಲ್ಬರ್ಗಾದಲ್ಲಿ ಬಿಜೆಪಿಗೆ ಶಕ್ತಿ ಇಲ್ಲವಾಗಿದೆ. ಅಭ್ಯರ್ಥಿಗಳಿಲ್ಲದೇ ಜೆಡಿಎಸ್ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಕೆಜೆಪಿ ಕೆಲವೆ ಕ್ಷೇತ್ರಕ್ಕೆ ಸೀಮಿತವಾಗಿದೆ' ಎಂದು ಹೇಳಿದರು.`ಜನತೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ. ಕಾಂಗ್ರೆಸ್130ಕ್ಕೂ ಅಧಿಕ ಸ್ಥಾನವನ್ನು ಗಳಿಸುವ ಮೂಲಕ ಸ್ವಂತ ಶಕ್ತಿ ಮೇಲೆ ಸರ್ಕಾರ ರಚನೆ ಮಾಡಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

`ರಾಜ್ಯದಲ್ಲಿ ಈ ಹಿಂದೆ ಆಗಿ ಹೋಗಿರುವ ಸಮ್ಮಿಶ್ರ ಸರ್ಕಾರವನ್ನು ನೋಡಿರುವ ಜನತೆ ಸಮ್ಮಿಶ್ರ ಸರ್ಕಾರವನ್ನು ಇಷ್ಟ ಪಡುತ್ತಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಕಾರಣಕ್ಕೆ ಜನತೆ ಸ್ಥಿರ ಸರ್ಕಾರ ಮತ್ತು ಸಮರ್ಥ ನಾಯಕತ್ವ ಇರುವ ಕಾಂಗ್ರೆಸ್ ಬೆಂಬಲಿಸಲಿದ್ದಾರೆ' ಎಂದರು.`ಬಾಗಲಕೋಟೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಐದು ಇಲ್ಲವೇ ಆರು ಸ್ಥಾನಗಳಲ್ಲಿ ಸುಲಭ ಗೆಲುವು ಸಾಧಿಸಲಿದೆ. ಬಾಗಲಕೋಟೆ ಕ್ಷೇತ್ರದ ಶಾಸಕ ವೀರಣ್ಣ ಚರಂತಿಮಠ ಅವರ ಸರ್ವಾಧಿಕಾರಿ ವರ್ತನೆಗೆ ಕ್ಷೇತ್ರದ ಜನತೆ ಬೇಸತ್ತು ಹೋಗಿದ್ದಾರೆ. ಕ್ಷೇತ್ರದ ಅಭಿವೃದ್ಧಿ ನಾನೇ ಮಾಡಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ. ಆದರೆ, ಬಾಗಲಕೋಟೆ ಮತದಾರರು ತಮ್ಮಂದಿಗೆ ಗೌರವದಿಂದ ವರ್ತಿಸುವ ವ್ಯಕ್ತಿಯನ್ನು ಆಯ್ಕೆ ಮಾಡಲು ತಿರ್ಮಾನಿಸಿದ್ದಾರೆ. ಎಚ್.ವೈ.ಮೇಟಿಗೆ ಜನತೆ ಮತ ಹಾಕಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.`ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಹೊರತು ಬೇರಾರು ನಾಯಕರಿಲ್ಲ, ಬಿಜೆಪಿಯಲ್ಲೂ ಇದೇ ಸ್ಥಿತಿ ಇರುವುದರಿಂದ ಹಾಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರದ ಈ ಪಕ್ಷಗಳು ಚುನಾವಣಾ ಪೂರ್ವವೇ ಮುಖ್ಯಮಂತ್ರಿಯನ್ನು ಘೋಷಣೆ ಮಾಡಿವೆ. ಆದರೆ, ಕಾಂಗ್ರೆಸ್ ಪ್ರಜಾಪ್ರಭುತ್ವಕ್ಕೆ ಗೌರವ ನೀಡುವ ಪಕ್ಷವಾಗಿದೆ. ಶಾಸಕರ ಅಭಿಪ್ರಾಯದ (ಸಿಎಲ್‌ಪಿ) ಮೇರೆಗೆ ಮುಖ್ಯಮಂತ್ರಿ ಯಾರಾಗಬೇಕೆಂದು ಆಯ್ಕೆ ಮಾಡುತ್ತಾರೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗುವ ಅರ್ಹತೆ ಇರುವವರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ' ಎಂದು ಹೇಳಿದರು.ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ.ಮೇಟಿ, ಜಮಖಂಡಿ ಕ್ಷೇತ್ರದ ಅಭ್ಯರ್ಥಿ ಸಿದ್ದು ನ್ಯಾಮಗೌಡ, ಬೀಳಗಿ ಕ್ಷೇತ್ರದ ಅಭ್ಯರ್ಥಿ ಜೆ.ಟಿ.ಪಾಟೀಲ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸೌದಾಗರ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಡಾ.ದೇವರಾಜ ಪಾಟೀಲ, ಮುತ್ತಣ್ಣ ಬೆಣ್ಣೂರ, ಪ್ರಭು ಹಡಗಲಿ, ಸಂಜೀವ ವಾಡಕರ, ಶಿವು ನಂದಿಕೋಲಮಠ, ಆನಂದ ಜಿಗಜಿನ್ನಿ, ಗೋವಿಂದ ಬಳ್ಳಾರಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ಕಾಂಗ್ರೆಸ್ ಸೇರ್ಪಡೆ: ಸಂಘ ಪರಿವಾರದ ಪ್ರಮುಖ ಡಾ. ಬಾಬು ರಾಜೇಂದ್ರ ನಾಯಕ, ಬಿಜೆಪಿ ಮುಖಂಡರಾದ ವಿಜಯಕುಮಾರ ಅಂಗಡಿ, ಮಲ್ಲು ಜಕಾತಿ, ಶಿವಾನಂದ ಅಬ್ದುಲ್‌ಪುರ, ವಿರೇಶ ಹುಂಡೆಕಾರ, ನಾರಾಯಣಸಾ ಪವಾರ, ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದಿನ್ ಖಾಜಿ ಮತ್ತಿತರರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ಸೇರ್ಪಡೆಯಾದರು.

ಪ್ರತಿಕ್ರಿಯಿಸಿ (+)