ಮುಳ್ಯಕಜೆ: ದೈವದ ಭಂಡಾರ ಆಗಮನ ವೇಳೆ ಅಮಾನವೀಯ ಪದ್ಧತಿಗೆ ಕೊನೆಗೂ ಮುಕ್ತಿ

7
`ಈ ವರ್ಷದಿಂದ ದಲಿತರು ಕಾಲೊನಿ ತೊರೆಯಬೇಕಿಲ್ಲ'

ಮುಳ್ಯಕಜೆ: ದೈವದ ಭಂಡಾರ ಆಗಮನ ವೇಳೆ ಅಮಾನವೀಯ ಪದ್ಧತಿಗೆ ಕೊನೆಗೂ ಮುಕ್ತಿ

Published:
Updated:

ಸುಳ್ಯ: ಸುಳ್ಯ ಚೆನ್ನಕೇಶವ ದೇವಸ್ಥಾನ ಜಾತ್ರೆ ಸಂದರ್ಭ ಬಜಪ್ಪಿಲ ದೈವದ ಭಂಡಾರ ಆಗಮಿಸುವ ದಾರಿಯಲ್ಲಿರುವ ಮುಳ್ಯಕಜೆ ದಲಿತ ಕಾಲೊನಿ ನಿವಾಸಿಗಳು ಮನೆ ಬಿಡುವ ಕೆಟ್ಟ ಪದ್ಧತಿ ಈ ವರ್ಷದಿಂದ ಕೊನೆಗೊಂಡಿದೆ.ಸುಳ್ಯ ಜಾತ್ರೋತ್ಸವದ ಸಂದರ್ಭ ಮಂಡೆಕೋಲು ಗ್ರಾಮದ ಪೇರಾಲು ಬಜಪ್ಪಿಲ ಉಳ್ಳಾಕುಲು ದೈವಸ್ಥಾನದಿಂದಲೂ ಭಂಡಾರ ತರಲಾಗುತ್ತದೆ. ಭಂಡಾರ ಸಾಗಿ ಬರುವಾಗ ಈ ದಾರಿಯಲ್ಲಿರುವ ಅಜ್ಜಾವರ ಗ್ರಾಮದ ಮುಳ್ಯಕಜೆಯ ದಲಿತ ಕಾಲೊನಿಯವರು ಒಂದು ದಿನಪೂರ್ತಿ ಮನೆ ಬಿಡಬೇಕು ಎಂಬ ಸಂಪ್ರದಾಯ 21ನೇ ಶತಮಾನದಲ್ಲೂ ಚಾಲ್ತಿಯಲ್ಲಿತ್ತು.ಭಂಡಾರ ತರುವ ದಿನ ಕಾಲನಿಯ ಆದಿ ದ್ರಾವಿಡ ಸಮುದಾಯಕ್ಕೆ ಸೇರಿದ 38 ಮನೆಯವರು ಮನೆ ಬಿಟ್ಟು ತೆರಳುತ್ತಿದ್ದರು. ಭಂಡಾರ ಬರುವ ಮುನ್ನ ಮನೆ ಬಿಟ್ಟರೆ ಮರು ದಿನ ಭಂಡಾರ ಹಿಂತಿರುಗಿದ ಮೇಲೆಯೇ ಅವರು ಮನೆಗೆ ಮರಳುತ್ತಿದ್ದರು.  ಸುಮಾರು 400 ವರ್ಷಗಳಿಂದ ನಡೆದುಕೊಂಡು ಬಂದಿದ್ದ, ಜಾತಿ ಆಧಾರಿತ ಕೆಟ್ಟ ಪದ್ಧತಿಗೆ ಇತಿಶ್ರೀ ಹಾಡಲು ಗ್ರಾಮಸ್ಥರು ಮುಂದಾಗಿದ್ದಾರೆ. ಕಾಲೊನಿ ಬಿಡದಿದ್ದರೆ ದೋಷ ಉಂಟಾಗುತ್ತದೆ ಎಂಬ ಭೀತಿಯನ್ನು ದೂರ ಮಾಡುವ ಸಲುವಾಗಿ ಪರಿಹಾರೋಪಾಯವನ್ನೂ ಸ್ಥಳೀಯರು ಕಂಡುಕೊಂಡಿದ್ದಾರೆ. ಪರಿಹಾರಕ್ಕಾಗಿ ಧಾರ್ಮಿಕ ವಿಧಿಗಳ ಮೂಲಕ ಪ್ರಾಯಶ್ಚಿತ ಕಾರ್ಯಗಳು ನಡೆದು ಕಾಲೊನಿ ನಿವಾಸಿಗಳು ದೈವದ ಪ್ರಸಾದ ಸ್ವೀಕರಿಸಿದ್ದಾರೆ.`ಹಿಂದೆ ಈ ದಲಿತ ಕಾಲೊನಿಯ ಜನತೆಯ ಪೂರ್ವಜರು ಭಂಡಾರ ಬರುವ ಸಮಯದಲ್ಲಿ ಜಗಳ ಮಾಡುತ್ತಿದ್ದರಂತೆ. ಎಲುಬಿನಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾಗ ಎಲುಬಿನ ತುಂಡು ಬಂದು ದೇವರ ಭಂಡಾರದ ಮೇಲೆ ಬಿತ್ತಂತೆ. ಅಂದು ಕೋಪಗೊಂಡ ದೈವದ ಶಾಪದಿಂದ ಕಾಲೊನಿಯೇ ನಾಶವಾಗಿತ್ತಂತೆ. ಬಳಿಕ ದೈವ ಭಯದಲ್ಲಿ ಕಾಲೊನಿಯ ಜನರು ಭಂಡಾರ ಬರುವ ಸಂದರ್ಭ ಮನೆ ಬಿಡುತ್ತಿದ್ದರು' ಎಂದು ಸ್ಥಳೀಯರು ತಿಳಿಸಿದರು.ಶತಮಾನಗಳು ಉರುಳಿದರೂ ಕಾಲೊನಿಯನ್ನೇ ತೊರೆಯುವ ಸಂಪ್ರದಾಯ ಮುಂದುವರಿದಿತ್ತು. ಮನೆ ಬಿಡಲು ಮನಸ್ಸಿಲ್ಲದಿದ್ದರೂ ಕಾಲೊನಿಯ ದಲಿತರು ದೈವದ ಭಯದಿಂದ ಅನಿವಾರ್ಯವಾಗಿ ಮನೆ ಬಿಡಬೇಕಾದ ಇಕ್ಕಟ್ಟಿಗೆ ಸಿಲುಕಿದ್ದರು. ಮಾತ್ರವಲ್ಲ,  ಈ ಕಾಲೊನಿಯ ಜನರಿಗೆ ಬಜಪ್ಪಿಲ ದೈವಸ್ಥಾನಕ್ಕೆ ಹೋಗಲು, ಭಂಡಾರಕ್ಕೆ ಹರಕೆ ಅರ್ಪಿಸಲು ಅವಕಾಶವೂ ಇರಲಿಲ್ಲ. ಕಾಣಿಕೆಯನ್ನು ಬೇರೆಯವರ ಮೂಲಕ ಪಾವತಿಸುತ್ತಿದ್ದರು.ನೂರಾರು ವರ್ಷಗಳಿಂದ ಪದ್ಧತಿ ಜಾರಿಯಲ್ಲಿದ್ದ ಈ ಪದ್ಧತಿ ಬಗ್ಗೆ 2011 ಜನವರಿಯಲ್ಲಿ ಕೆಲವು ಪತ್ರಿಕೆಗಳು ಬೆಳಕು ಚೆಲ್ಲಿದ್ದವು. ಬಳಿಕ ಈ ವಿಚಾರ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಯಿತು. ಇದನ್ನು ನಿಲ್ಲಿಸಬೇಕೆಂದು ಪತ್ರಕರ್ತ ಹರೀಶ್ ಬಂಟ್ವಾಳ್ ನೇತೃತ್ವದಲ್ಲಿ ಆದಿ ದ್ರಾವಿಡ ಸಮಾಜ ಸಂಘದ ಅಧ್ಯಕ್ಷ ಕೆ.ಎಂ.ಬಾಬು, ಗ್ರಾಮ ಪಂಚಾಯಿತಿ ಸದಸ್ಯ ಸೋಮನಾಥ ಮುಳ್ಯಕಜೆ ಮತ್ತಿತರರ ನೇತೃತ್ವದಲ್ಲಿ ಪ್ರಯತ್ನ ನಡೆಸಿದರು.ಅದರಂತೆ ಬಜಪ್ಪಿಲ ದೈವಸ್ಥಾನದ ಆಡಳಿತ ಮೊಕ್ತೇಸರ ಶಂಕರನಾರಾಯಣ ಗೌಡರನ್ನು, ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ಅವರನ್ನು ಸಂಪರ್ಕಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಂಕರನಾರಾಯಣ ಗೌಡರು `ದೈವದ ಹಿತವನ್ನು ತಿಳಿದು ಮುನ್ನಡೆಯುವಂತೆ ಸೂಚಿಸಿದರು. ಆ ಪ್ರಕಾರ ಬಜಪ್ಪಿಲ ದೈವಸ್ಥಾನದಲ್ಲಿ ತಾಂಬೂಲ ಪ್ರಶ್ನೆಯನ್ನು ಇಡಲಾಗಿತ್ತು. ಅದರಂತೆ ಕಂಡು ಬಂದ ಪರಿಹಾರ ಕ್ರಮಗಳನ್ನು ಕೈಗೊಂಡು ಮುಂದಿನ ವರ್ಷದಲ್ಲಿ ಮನೆ ಬಿಡದಂತೆ ಮಾಡಲು ನಿರ್ಧರಿಸಲಾಯಿತು.ಬಜಪ್ಪಿಲ ದೈವಸ್ಥಾನದಲ್ಲಿ 2011ರ ಏಪ್ರಿಲ್ 28ರಂದು ನಡೆಸಲಾದ ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದ ಧಾರ್ಮಿಕ ಪರಿಹಾರವನ್ನು ಮಾಡಿ ಜನರ ಮನಸ್ಸಿನ ಭಯವನ್ನು ಹೋಗಲಾಡಿಸಿ ಅವರನ್ನು ಮನೆ ಬಿಡುವ ಸಂಕಷ್ಟದಿಂದ ತಪ್ಪಿಸಲು ನಿರ್ಧರಿಸಲಾಗಿತ್ತು.ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದ ಪರಿಹಾರದಂತೆ ಬಜಪ್ಪಿಲ ದೈವಸ್ಥಾನಕ್ಕೆ ಕಾಲೊನಿಯವರು ಆಳೆತ್ತರದ ಒಂದು ಕಂಚಿನ ದೀಪವನ್ನು ಸಮರ್ಪಿಸಬೇಕು. ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯುವ ರಂಗಪೂಜೆಯಲ್ಲಿ ಭಾಗವಹಿಸಿ ತಮ್ಮ ಪಾಲನ್ನು ಸಮರ್ಪಿಸಬೇಕು ಮತ್ತು ಬೂಡು ಭಗವತಿ ದೈವಸ್ಥಾನಕ್ಕೆ ಎಣ್ಣೆ ಸಮರ್ಪಿಸಬೇಕು. ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸೋಮವಾರ ಪೂಜೆ ನಡೆಸಬೇಕು ಎಂದು ಕಂಡು ಬಂದಿತ್ತು.ತಮ್ಮ ಹಿರಿಯರು ತಪ್ಪು ಮಾಡಿದ್ದಲ್ಲಿ ದೋಷ ಪರಿಹಾರಕ್ಕೆ ತಾವು ಪ್ರಾಯಶ್ಚಿತಕ್ಕೆ ಬದ್ಧ ಎಂದು ಮುಳ್ಯ ಕಜೆ ನಿವಾಸಿಗಳು ಈ ಎಲ್ಲಾ ಧಾರ್ಮಿಕ ಪರಿಹಾರ ಕಾರ್ಯಗಳನ್ನು ನಡೆಸಿದ್ದರು. ಬುಧವಾರ ಬಜಪ್ಪಿಲದಲ್ಲಿ ನಡೆದ ವಾರ್ಷಿಕ ತೊಡಕ ಜಾತ್ರೆ ಸಂದರ್ಭ ಕಾಲೊನಿಯ ಹಿರಿಯರಾದ ಪುತ್ರ ಎಂಬವರ ನೇತೃತ್ವದಲ್ಲಿ ದೀಪ ಸಮರ್ಪಣೆ ನಡೆಯಿತು. ಕಾಲೊನಿ ನಿವಾಸಿಗಳು ದೈವದ ಎದುರು ಹಾಜರಾಗಿ ಪ್ರಸಾದವನ್ನೂ ಸ್ವೀಕರಿಸಿದರು. ಜನವರಿಯಲ್ಲಿ ನಡೆಯುವ ಸುಳ್ಯ ಜಾತ್ರೆಗೆ ದೈವದ ಭಂಡಾರ ಬರುವಾಗ ಕಾಲೊನಿಯವರು ಇನ್ನು ಮುದೆ ತಮ್ಮ ಮನೆಯಲ್ಲಿಯೇ ಉಳಿದು ದೈವಕ್ಕೆ ಶ್ರದ್ಧೆಯಿಂದ ನಡೆದುಕೊಳ್ಳಬೇಕು ಎಂದು ದೈವ ಹರಸಿದೆ. ದೈವಸ್ಥಾನಕ್ಕೆ ಎಲ್ಲಾ ಜಾತಿ-ವರ್ಗದವರೂ ಬರಬೇಕು ಎಂಬುದೇ ತಮ್ಮ ಅಪೇಕ್ಷೆ ಎಂದು ದೈವಸ್ಥಾನದ ಆಡಳಿತ ಮೊಕ್ತೇಸರ ಶಂಕರನಾರಾಯಣ ಗೌಡ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry