ಬುಧವಾರ, ನವೆಂಬರ್ 13, 2019
28 °C

ಮುಷರಫ್‌ಗೆ ನ್ಯಾಯಾಂಗ ಬಂಧನ: ಮನೆಯೇ ಜೈಲು

Published:
Updated:
ಮುಷರಫ್‌ಗೆ ನ್ಯಾಯಾಂಗ ಬಂಧನ: ಮನೆಯೇ ಜೈಲು

ಇಸ್ಲಾಮಾಬಾದ್ (ಐಎಎನ್‌ಎಸ್, ಪಿಟಿಐ): ಪೊಲೀಸ್ ಬಂಧನದಲ್ಲಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ಇಲ್ಲಿನ ಭಯೋತ್ಪಾದಕ ನಿಗ್ರಹ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಶನಿವಾರ ಆದೇಶ ಹೊರಡಿಸಿದೆ.



ಈ ಮಧ್ಯೆ ಮುಷರಫ್ ಅವರ ತೋಟದ ಮನೆಯನ್ನು ಉಪ ಕಾರಾಗೃಹವೆಂದು ಘೋಷಿಸಲಾಗಿದ್ದು, ಅದೇ ಸ್ಥಳದಲ್ಲೇ ಅವರನ್ನು ಬಂಧಿಸಿ ಇಡುವ ಸೂಚನೆಗಳಿವೆ.

ನ್ಯಾಯಮೂರ್ತಿ ಕೌಸರ್ ಅಬ್ಬಾಸ್ ಜೈದಿ ನ್ಯಾಯಾಂಗ ಬಂಧನದ ಆದೇಶ ನೀಡಿದ್ದು, ಆ ಪ್ರಕಾರ ಮುಷರಫ್ ಅವರನ್ನು ಮೇ 4ರಂದು ಮತ್ತೆ ನ್ಯಾಯಾಲಯದ ಎದುರು ಹಾಜರಪಡಿಸಲಾಗುತ್ತದೆ ಎಂದು `ಡಾನ್' ಪತ್ರಿಕೆ ವರದಿ ಮಾಡಿದೆ.



ಪ್ರಕರಣ ಕುರಿತು ಶನಿವಾರ ನಡೆದ ವಿಚಾರಣೆ ವೇಳೆ ಪೊಲೀಸರು ಮುಷರಫ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಿದರು. ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಅಷರಫ್ ಗುಜ್ಜಾರ್ ಅವರು, ಮುಷರಫ್ ಅವರನ್ನು ದೈಹಿಕವಾಗಿ ಬಂಧಿಸಬೇಕೆಂದು ನ್ಯಾಯಮೂರ್ತಿಯವರಲ್ಲಿ ಮನವಿ ಮಾಡಿದ್ದರು. ಮಾಜಿ ಅಧ್ಯಕ್ಷರನ್ನು ಭಾರಿ ಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ಕರೆತಂದ ಬಗ್ಗೆಯೂ ಗುಜ್ಜಾರ್ ಆಕ್ಷೇಪಿಸಿದ್ದರು.



2007ರಲ್ಲಿ  ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿ ಜಾರಿಯಿದ್ದಾಗ 60 ನ್ಯಾಯಮೂರ್ತಿಗಳನ್ನು ಪದಚ್ಯುತಿ ಹಾಗೂ ಬಂಧನ ಪ್ರಕರಣದಲ್ಲಿ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದರು. ನಂತರ ಸ್ಥಳೀಯ ನ್ಯಾಯಾಲಯ ಮುಷರಫ್ ಅವರನ್ನು ಎರಡು ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು.



ಆಗಸ್ಟ್ 2009ರಲ್ಲಿ ವಕೀಲ ಚೌಧರಿ ಮೊಹಮ್ಮದ್ ಅಸ್ಲಾಮ್ ಘುಮ್ಮಾನ್ ಅವರು ನೀಡಿದ ದೂರಿನ ಅನ್ವಯ ಮುಷರಫ್ ವಿರುದ್ಧ ಪ್ರಕರಣ ದಾಖಲಾಗಿತ್ತು.ವಿಚಾರಣೆಗೆ ತ್ರಿಸದಸ್ಯ ಪೀಠ: 2007ರಲ್ಲಿ ತುರ್ತುಪರಿಸ್ಥಿತಿ ಹೇರಿ, ಸಂವಿಧಾನವನ್ನು ಬುಡಮೇಲು ಮಾಡಿದ್ದಕ್ಕಾಗಿ ರಾಷ್ಟ್ರದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ವಿರುದ್ಧ  ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವ ಬಗ್ಗೆ ನಿರ್ದೇಶನ ಕೋರುವ ಅರ್ಜಿಗಳ ವಿಚಾರಣೆಗಾಗಿ ಪಾಕಿಸ್ತಾನದ ಸುಪ್ರೀಂಕೋರ್ಟ್ ಶನಿವಾರ ತ್ರಿಸದಸ್ಯ ಪೀಠವೊಂದನ್ನು ರಚಿಸಿತು.



ನ್ಯಾಯಮೂರ್ತಿ ಜವ್ವಾದ್ ಎಸ್. ಖ್ವಾಜಾ ಅವರರ ನೇತೃತ್ವದ ಈ ಪೀಠವು ನ್ಯಾಯಮೂರ್ತಿಗಳಾದ ಖಿಲ್ಜಿ ಅರಿಫ್ ಹುಸೇನ್ ಹಾಗೂ ಏಜಾಜ್ ಅಫ್ಜಲ್ ಖಾನ್ ಅವರನ್ನು ಒಳಗೊಂಡಿರುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿಕೆ ತಿಳಿಸಿದೆ. ಪೀಠವು ಸೋಮವಾರ ಈ ಸಂಬಂಧ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಲಿದೆ.



ಅರ್ಜಿಗಳ ಕುರಿತು ಆಲಿಸಲು ಮತ್ತು ನಿರ್ಧರಿಸಲು ಪೂರ್ಣ ಪೀಠ ಅಥವಾ ವಿಶಾಲ ಪೀಠವನ್ನು ರಚಿಸಬೇಕು ಎಂದು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಅವರನ್ನು ಕೋರಿರುವ ಮುಷರಫ್ ಪರ ವಕೀಲರು, ವಿಷಯಕ್ಕೆ ಸಂಬಂಧಿಸಿದ ಪ್ರಮುಖ ಆಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಅಪೇಕ್ಷಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.



ಮುಷರಫ್ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕೇ ಎಂಬ ಸುಪ್ರೀಂಕೋರ್ಟ್ ಪ್ರಶ್ನೆಗೆ ಸರ್ಕಾರ ಇನ್ನೂ ಉತ್ತರ ನೀಡಿಲ್ಲ. ಸರ್ಕಾರ ಸೋಮವಾರ ಈ ಬಗ್ಗೆ ಉತ್ತರ ಸಲ್ಲಿಸುವ ಸಾಧ್ಯತೆಗಳಿವೆ ಎಂದು ವಾರ್ತಾ ಸಚಿವ ಅರಿಫ್ ನಿಝಾಮಿ ಹೇಳಿದರು.



ಹಂಗಾಮಿ ಸರ್ಕಾರದ ಅಧಿಕಾರ ಸೀಮಿತ. ಆದ್ದರಿಂದ ಅದು ಮೇ 11ರ ಸಂಸದೀಯ ಚುನಾವಣೆಯ ಮೇಲೆ ಹೆಚ್ಚು ಗಮನ ನೀಡಬಯಸುತ್ತದೆ ಎಂದು ಅಟಾರ್ನಿ ಜನರಲ್ ಅವರು ಸುಪ್ರೀಂಕೋರ್ಟಿಗೆ ಈ ಹಿಂದೆ ತಿಳಿಸಿದ್ದರು. ಏನಿದ್ದರೂ ಉಸ್ತುವಾರಿ ಸರ್ಕಾರ ಪ್ರಕರಣವನ್ನು ದಾಖಲಿಸಬಹುದು ಎಂದು ನ್ಯಾಯಮೂರ್ತಿಗಳು ಹೇಳಿದ್ದರು.



ಮುಷರಫ್ ವಿರುದ್ಧ 2007ರಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನು ಬುಡಮೇಲು ಮಾಡಿದ್ದಕ್ಕಾಗಿ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಶುಕ್ರವಾರ ಸೆನೆಟ್ ನಿರ್ಣಯ ಅಂಗೀಕರಿಸಿತ್ತು.

ಪ್ರತಿಕ್ರಿಯಿಸಿ (+)