ಮಂಗಳವಾರ, ನವೆಂಬರ್ 12, 2019
20 °C
ಇಸ್ಲಾಮಾಬಾದ್ ಹೈಕೋರ್ಟ್‌ನಿಂದ ಪರಾರಿ

ಮುಷರಫ್‌ಗೆ ಬಂಧನ ಭೀತಿ

Published:
Updated:
ಮುಷರಫ್‌ಗೆ ಬಂಧನ ಭೀತಿ

ಇಸ್ಲಾಮಾಬಾದ್ (ಪಿಟಿಐ): ಮೊಕದ್ದಮೆಯೊಂದರ ಕುರಿತಂತೆ ಗುರುವಾರ ಬೆಳಿಗ್ಗೆ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಹಾಜರಾಗಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್, ತಮ್ಮ ಬಂಧನಕ್ಕೆ ನ್ಯಾಯಾಧೀಶರು ಆದೇಶಿಸುತ್ತಿದ್ದಂತೆ ಬಿಗಿಭದ್ರತೆಯ ಕೋರ್ಟ್ ಸಭಾಂಗಣದಿಂದ ಬೆಂಗಾವಲು ಸಿಬ್ಬಂದಿ ನೆರವಿನೊಂದಿಗೆ ಪರಾರಿಯಾದ ನಾಟಕೀಯ ವಿದ್ಯಮಾನ ನಡೆಯಿತು.ಮುಷರಫ್ ಅಧ್ಯಕ್ಷರಾಗಿದ್ದಾಗ 2007ರ ತುರ್ತುಸ್ಥಿತಿ ಅವಧಿಯಲ್ಲಿ 60 ನ್ಯಾಯಾಧೀಶರನ್ನು ಪದಚ್ಯುತಿಗೊಳಿಸಿ ಬಂಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಈಗ ನಡೆಯುತ್ತಿದೆ. ಈ ಸಂಬಂಧ  ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಕೋರ್ಟ್‌ಗೆ ಹಾಜರಾಗಿದ್ದ ಮುಷರಫ್ ಅವರನ್ನು ತಕ್ಷಣ ಬಂಧಿಸಲು ನ್ಯಾಯಾಧೀಶರು ಆದೇಶಿಸಿದರು. ಆದರೆ ಪೊಲೀಸರು ಕೋರ್ಟ್ ಒಳಗೆ ಬರುವ ಮೊದಲೇ ಮುಷರಫ್ ಅಂಗರಕ್ಷಕರು ಹಾಗೂ ಸೇನಾ ಕಮಾಂಡೊಗಳು ಅವರನ್ನು ಅಲ್ಲಿಂದ ಎತ್ತಿಕೊಂಡು ಪರಾರಿಯಾಗುವಲ್ಲಿ ಯಶಸ್ವಿಯಾದರು.ಮುಷರಫ್ ಅವರಿಗೆ ಭದ್ರತೆ ಒದಗಿಸಲು ಕೋರ್ಟ್ ಆವರಣದಲ್ಲಿ ಭಾರಿ ಪೊಲೀಸ್ ಹಾಗೂ ಅರೆಸೇನಾಪಡೆ ತುಕಡಿನಿಯೋಜಿಸಲಾಗಿತ್ತು. ಆದರೆ ಮುಷರಫ್ ಬೆಂಗಾವಲು ಪಡೆ ಹಿಮ್ಮೆಟ್ಟಿಸಲು ಈ ಸಿಬ್ಬಂದಿಗೂ ಆಗಲಿಲ್ಲ. ಬೆಂಗಾವಲು ಸಿಬ್ಬಂದಿ ಜತೆ ಮುಷರಫ್ ವೇಗವಾಗಿ ಹೆಜ್ಜೆ ಹಾಕುತ್ತ ಹೊರ ಬಂದು ಕಪ್ಪು ಕಾರಿನಲ್ಲಿ ಕುಳಿತರು. ನಂತರ  ಇಸ್ಲಾಮಾಬಾದ್ ಹೊರವಲಯದಲ್ಲಿದ ಚಕ್ ಶಾಹಜದ್‌ನಲ್ಲಿರುವ ಅವರ ತೋಟದ ಮನೆಯತ್ತ ಕರೆದೊಯ್ಯಲಾಯಿತು ಎಂದು ಸ್ಥಳೀಯ ಟಿವಿ ವಾಹಿನಿಗಳು ವರದಿ ಮಾಡಿವೆ.ಮುಷರಫ್ ಅವರ ಆಲ್ ಪಾಕಿಸ್ತಾನ ಮುಸ್ಲಿಂ ಲೀಗ್‌ನ ಹಿರಿಯ ನಾಯಕ ಮಹಮ್ಮದ್ ಅಮ್ಜದ್ ಹೇಳಿಕೆ ನೀಡಿ, `ಮುಷರಫ್ ಬಂಧನದ ಆದೇಶದ ಹಿನ್ನೆಲೆಯಲ್ಲಿ ಕಾನೂನು ತಜ್ಞರ ತಂಡ ಸಮಾಲೋಚನೆ ನಡೆಸುತ್ತಿದೆ, ತಂಡದ ಸೂಚನೆಯಂತೆ ಮುಷರಫ್ ನಡೆದುಕೊಳ್ಳುವರು, ಅಗತ್ಯವಾದರೆ ಅವರು ಕೋರ್ಟ್‌ಗೆ ಶರಣಾಗುವರು' ಎಂದರು.

ಪ್ರತಿಕ್ರಿಯಿಸಿ (+)