ಶುಕ್ರವಾರ, ಮೇ 14, 2021
21 °C
ನ್ಯಾಯಾಧೀಶರ ಬಂಧನ ಪ್ರಕರಣ

ಮುಷರಫ್ ಆರೋಪಿ- ಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): 2007ರಲ್ಲಿ ವಿಧಿಸಿದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಲವು ನ್ಯಾಯಾಧೀಶರನ್ನು ಬಂಧನದಲ್ಲಿರಿಸಿದ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ಆರೋಪಿಯೆಂದು ಇಲ್ಲಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಔಪಚಾರಿಕವಾಗಿ ಘೋಷಿಸಿದೆ.69 ವರ್ಷದ ಮುಷರಫ್ ಅವರನ್ನು ಉಪಕಾರಾಗೃಹವಾಗಿ ಸರ್ಕಾರ ಘೋಷಿಸಿರುವ ಚಾಕ್ ಷಾಜಾದ್‌ನಲ್ಲಿನ ಅವರ ತೋಟದ ಮನೆಯಲ್ಲಿ ಶನಿವಾರ ವಿಚಾರಣೆಗೆ ಒಳಪಡಿಸಿದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಕೌಸರ್ ಅಬ್ಬಾಸ್ ಜೈದಿ ಅವರು ಈ ನಿಲುವು ಪ್ರಕಟಿಸಿದರು.ಭಯೋತ್ಪಾದನಾ ನಿಗ್ರಹ ಕಾಯ್ದೆ ಮತ್ತು ಪಾಕಿಸ್ತಾನದ ದಂಡ ಸಂಹಿತೆಯ ವಿಧಿಯಡಿ ಮುಷರಫ್ ಅವರನ್ನು ದೋಷಾರೋಪಿಯೆಂದು ಪರಿಗಣಿಸಲಾಯಿತು.

ತಮ್ಮ ವಿರುದ್ಧದ ಆರೋಪಗಳನ್ನು ಓದಿ ಹೇಳಿದ ನಂತರ ಅವುಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಮುಷರಫ್, ತಾವು ನಿರಪರಾಧಿ ಎಂಬುದಾಗಿ ವಾದಿಸಿದರು.

ತಾವು ದೋಷಾರೋಪಿ ಎನ್ನಲು ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ತಮ್ಮನ್ನು ಆರೋಪ ಮುಕ್ತಗೊಳಿಸಬೇಕೆಂದು ಕೋರಿ ಅವರು ಅರ್ಜಿಯೊಂದನ್ನು ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಜೂನ್ 21ರಂದು ನಡೆಯಲಿರುವ ಮುಂದಿನ ವಿಚಾರಣೆಗೆ 23 ಸರ್ಕಾರಿ ಸಾಕ್ಷಿಗಳನ್ನು ಖುದ್ದು ಹಾಜರಾಗಲು ಕರೆಸುವಂತೆ ನ್ಯಾಯಾಧೀಶರು ಆದೇಶಿಸಿದರು.2009ರ ಆಗಸ್ಟ್‌ನಲ್ಲಿ ಮುಷರಫ್ ವಿರುದ್ಧ ಸಲ್ಲಿಸಲಾದ ಎಫ್‌ಐಆರ್ ಅನ್ವಯ ನ್ಯಾಯಾಧೀಶರುಗಳ ಬಂಧನ ಆರೋಪವನ್ನು ಹೊರಿಸಲಾಗಿದೆ. ಚೌಧರಿ ಮುಹಮ್ಮದ್ ಅಸ್ಲಾಂ ಗುಮ್ಮನ್ ಎಂಬ ವಕೀಲರು ಸಲ್ಲಿಸಿದ ದೂರಿನ ಮೇರೆಗೆ ಈ ಎಫ್‌ಐಆರ್ ದಾಖಲಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.