ಮಂಗಳವಾರ, ನವೆಂಬರ್ 12, 2019
20 °C

ಮುಷರಫ್ ಬೆಂಬಿಡದ ಸಂಕಷ್ಟ

Published:
Updated:
ಮುಷರಫ್ ಬೆಂಬಿಡದ ಸಂಕಷ್ಟ

ಲಾಹೋರ್/ಇಸ್ಲಾಮಾಬಾದ್ (ಐಎಎನ್‌ಎಸ್/ಪಿಟಿಐ): ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್, ಎರಡು ವಿಷಯಗಳಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಒಂದೆಡೆ ನಾಮಪತ್ರ ತಿರಸ್ಕೃತವಾದರೆ, ಇನ್ನೊಂದೆಡೆ ತಮ್ಮ ಮೇಲಿನ ದೇಶದ್ರೋಹ ಆರೋಪದ ವಿಚಾರಣೆಗೆ ಸುಪ್ರೀಂಕೋರ್ಟ್ ಮುಂದಾಗಿರುವುದು ಈ ಮಾಜಿ ಸರ್ವಾಧಿಕಾರಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.ಮುಷರಫ್ ವಿರುದ್ಧದ ದೇಶದ್ರೋಹ ಆರೋಪವನ್ನು ವಿಚಾರಣೆಗೆ ಒಳಪಡಿಸುವಂತೆ ಕೋರಿ ರಾವಲ್ಪಿಂಡಿ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ತೌಫಿಕ್ ಆಸಿಫ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮುಖ್ಯನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಅವರನ್ನೊಳಗೊಂಡ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠವು ಸೋಮವಾರ ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಸುಮಾರು ನಾಲ್ಕು ವರ್ಷಗಳ ದೇಶಾಂತರದ ಬಳಿಕ ಮುಷರಫ್ ಮಾರ್ಚ್ 24ರಂದು ಸ್ವದೇಶಕ್ಕೆ ಮರಳಿದ್ದಾರೆ.ಇನ್ನೊಂದು ಬೆಳವಣಿಗೆಯಲ್ಲಿ, ಮೇ 11ರಂದು ನಡೆಯಲಿರುವ ಸಂಸತ್ ಚುನಾವಣೆಗೆ ಕಸೂರ್ ಕ್ಷೇತ್ರದಿಂದ ಮುಷರಫ್ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ. ಮುಷರಫ್ ಉಮೇದುವಾರಿಕೆಗೆ ವಕೀಲ ಜಾವೇದ್ ಕಸೂರಿ ಆಕ್ಷೇಪಿಸಿದ್ದರು. ಕರಾಚಿ, ಇಸ್ಲಾಮಾಬಾದ್, ಚಿತ್ರಾಲ್ ಹಾಗೂ ಕಸೂರ್ ಕ್ಷೇತ್ರಗಳಿಂದ ಸ್ಪರ್ಧಿಸಲು ಮುಷರಫ್ ನಾಮಪತ್ರಗಳನ್ನು ಸಲ್ಲಿಸಿದ್ದರು.ಈ ನಡುವೆ, ಪಿಎಂಎಲ್-ಎನ್ ಕೂಡ ಮುಷರಫ್ ಅವರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗವನ್ನು ಕೋರಿದೆ. 2006ರ ಆಗಸ್ಟ್ 26ರಂದು ನಡೆದ ಅಕ್ಬರ್ ಬುಗ್ತಿ ಕೊಲೆ, 2007ರ ಜುಲೈ 3ರಂದು ಲಾಲ್ ಮಸೀದಿಯಲ್ಲಿ ನಡೆದ ಸೇನಾ ಕಾರ್ಯಾಚರಣೆ, ಬೆನಜೀರ್ ಭುಟ್ಟೊ ಹತ್ಯೆ ಹಾಗೂ ಮುಷರಫ್ ಅವಧಿಯಲ್ಲಿ ಗುಪ್ತಚರ ಸಂಸ್ಥೆಗಳು ರಹಸ್ಯವಾಗಿ ವಶಕ್ಕೆ ಪಡೆದುಕೊಂಡಿದ್ದ ಜನರು ನಾಪತ್ತೆಯಾದ ಘಟನೆ- ಈ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿರುವ ಕಾರಣ ಮುಷರಫ್ ಚುನಾವಣೆಗೆ ಸ್ಪರ್ಧಿಸಲು ಅನರ್ಹರು ಎನ್ನುವುದು ಪಿಎಂಎಲ್-ಎನ್ ವಾದ.ಷರೀಫ್ ಉಮೇದುವಾರಿಕೆಗೆ ಆಕ್ಷೇಪ: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಸಹೋದರ ಶಹಬಾಜ್ ಷರೀಫ್ ಉಮೇದುವಾರಿಕೆಗೆ  ಭ್ರಷ್ಟಾಚಾರ ನಿಗ್ರಹ ಕಣ್ಗಾವಲು ಪಡೆ ಆಕ್ಷೇಪ ವ್ಯಕ್ತಪಡಿಸಿದೆ. `ಇವರಿಬ್ಬರ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ. ಹಾಗಾಗಿ ಇವರು ಚುನಾವಣೆಗೆ ನಿಲ್ಲುವುದು ಸರಿಯಲ್ಲ' ಎಂದು ಅದು ಹೇಳಿದಪ್ರಸ್ತಾವ ಸದ್ಯಕ್ಕಿಲ್ಲ- ಆಯೋಗ: ಮತಪತ್ರದಲ್ಲಿ `ಯಾರಿಗೂ ಮತ ಹಾಕುವುದಿಲ್ಲ' ಎಂಬ ಆಯ್ಕೆ ಪ್ರಸ್ತಾವವನ್ನು ಕಾನೂನು ತೊಡಕಿನ ಕಾರಣ ಸದ್ಯಕ್ಕೆ ಕೈಬಿಡಲಾಗಿದೆ ಎಂದು ಪಾಕಿಸ್ತಾನದ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.ಈ ಪ್ರಸ್ತಾವಕ್ಕೆ ರಾಜಕೀಯ ಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.

ಅಭ್ಯರ್ಥಿಗಳ ಜತೆ ಉಗ್ರರ ಮಾತುಕತೆ

ಪಾಕಿಸ್ತಾನದ ಹಿಂಸಾಚಾರಪೀಡಿತ ಬುಡಕಟ್ಟು ಪ್ರದೇಶದಲ್ಲಿನ ಸರ್ಕಾರದ ಪರ ಉಗ್ರರ ಗುಂಪು ಮೇ 11ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳ ಜೊತೆ ಸಮಾಲೋಚನೆಗೆ ಮುಂದಾಗಿದೆ.ಮುಲ್ಲಾ ನಾಸಿರ್ ತಂಡವು, ಕರಿ ಕೋಟ್ ಬಜಾರ್‌ನಲ್ಲಿರುವ ಕಮಾಂಡರ್ ಐನುಲ್ಲಾ ಕಚೇರಿಗೆ ದಕ್ಷಿಣ ವಜಿರಿಸ್ತಾನದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಗುರುವಾರ ಕರೆಸಿಕೊಂಡು ಸಮಾಲೋಚನೆ ನಡೆಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ಈ ಸಭೆಗೆ ಪತ್ರಕರ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಹಾಗಾಗಿ ಅಲ್ಲಿ ಏನೇನು ಚರ್ಚೆಯಾಗಿದೆ ಎನ್ನುವುದು ತಿಳಿದುಬಂದಿಲ್ಲ.

ಪ್ರತಿಕ್ರಿಯಿಸಿ (+)