ಮಂಗಳವಾರ, ನವೆಂಬರ್ 19, 2019
23 °C
ಬೆನಜೀರ್ ಹತ್ಯೆ ಪ್ರಕರಣ: ಎಫ್‌ಐಎ ವಶಕ್ಕೆ ಪಡೆಯಲು ಸಿದ್ಧತೆ

ಮುಷರಫ್ ವಿಚಾರಣೆಗೆ ಅಸ್ತು

Published:
Updated:

ಇಸ್ಲಾಮಾಬಾದ್ (ಪಿಟಿಐ): ಗೃಹ ಬಂಧನದಲ್ಲಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರಿಗೆ ಗುರುವಾರ ಮತ್ತೊಂದು ಸಂಕಷ್ಟ ಎದುರಾಗಿದೆ. ಮಾಜಿ ಪ್ರಧಾನಿ ಬೆನ್‌ಜೀರ್ ಭುಟ್ಟೊ ಹತ್ಯೆ ಸಂಬಂಧ ಮುಷರಫ್ ಅವರನ್ನು ಪ್ರಶ್ನಿಸಲು ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಗುರುವಾರ ವಕೀಲರಿಗೆ ಅವಕಾಶ ನೀಡಿದೆ. ಇದೇ ವೇಳೆ ಅವರನ್ನು ವಿಚಾರಣೆಗೆ ಒಳಪಡಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎಫ್‌ಐಎ)ಯ ಜಂಟಿ ತಂಡಗಳಿಗೂ ಹಸಿರು ನಿಶಾನೆ ದೊರೆತಿದೆ.ಮುಷರಫ್ ಅವರನ್ನು ವಿಚಾರಣೆಗೆ ಒಳಪಡಿಸಲು ಅವಕಾಶ ನೀಡುವಂತೆ ಕೋರಿ ಎಫ್‌ಐಎ ಸಲ್ಲಿಸಿದ್ದ ಮನವಿಯನ್ನು ರಾವಲ್ಪಿಂಡಿಯ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನ್ಯಾಯಮೂರ್ತಿ ಹಬೀಬ್-ಉರ್-ರೆಹಮಾನ್ ಪುರಸ್ಕರಿಸಿದ್ದು, ಮಾಜಿ ಜನರಲ್‌ಗೆ ಮತ್ತೊಂದು ಹಿನ್ನಡೆಯಾದಂತಾಗಿದೆ. ಮಧ್ಯಂತರ ಜಾಮೀನು ಕೋರಿ ಮುಷರಫ್ ಸಲ್ಲಿಸಿದ್ದ ಅರ್ಜಿಯನ್ನು ಲಾಹೋರ್ ಹೈಕೋರ್ಟ್‌ನ ರಾವಲ್ಪಿಂಡಿ ಸಂಚಾರಿ ಪೀಠ ತಿರಸ್ಕರಿಸಿದ ಮರುದಿನವೇ ಈ ಮಹತ್ವದ ಆದೇಶ ಹೊರಬಿದ್ದಿದೆ. ಭದ್ರತಾ ದೃಷ್ಟಿಯಿಂದ ಉಪ ಕಾರಾಗೃಹವಾಗಿ ಪರಿವರ್ತಿಸಿರುವ ಮುಷರಫ್ ತೋಟದ ಮನೆಯಲ್ಲಿಯೇ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ವಿಶೇಷ ಸರ್ಕಾರಿ ಅಭಿಯೋಜಕ ಚೌಧರಿ ಝಲ್ಫಿಕರ್ ಅಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.ಮುಷರಫ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳುವ ಅಥವಾ ನ್ಯಾಯಾಂಗ ವಶಕ್ಕೆ ನೀಡುವ ಕುರಿತಂತೆ ಎಫ್‌ಐಎ ಜಂಟಿ ತನಿಖಾ ತಂಡಗಳು ಇನ್ನಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ. ಭದ್ರತೆಯ ದೃಷ್ಟಿಯಿಂದ ಮುಷರಫ್ ತೋಟದ ಮನೆಯನ್ನೇ ಉಪ ಕಾರಾಗೃಹವನ್ನಾಗಿ ಪರಿವರ್ತಿಸಿ, ಅವರನ್ನು ಗೃಹ ಬಂಧನದಲ್ಲಿ ಇಡಲಾಗಿದೆ. ಹೀಗಾಗಿ ಅವರನ್ನು ತೋಟದ ಮನೆಯಿಂದ ಹೊರಗಡೆ ಕರೆದೊಯ್ಯದೆ ಅಲ್ಲೇ ಪ್ರಶ್ನಿಸುವ ಸಾಧ್ಯತೆ ಇದೆ ಎಂದು ಕಾನೂನು ತಜ್ಞರು ವಿಶ್ಲೇಷಿಸಿದ್ದಾರೆ.ಮುಷರಫ್ ಅವರನ್ನು ತನಿಖೆ ವ್ಯಾಪ್ತಿಗೆ ತರುವ ಔಪಚಾರಿಕ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಎಫ್‌ಐಎ ಅಧಿಕಾರಿಗಳು ಅವರನ್ನು ಪ್ರಶ್ನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)