ಮುಷ್ಕರದಲ್ಲಿ ಬ್ಯಾಂಕ್ ಸಿಬ್ಬಂದಿ ಭಾಗಿ

7
`ಜಿಡಿಪಿ'ಗೆ ರೂ. 20,000 ಕೋಟಿ ನಷ್ಟ: ಅಸೋಚಾಂ ಅಂದಾಜು

ಮುಷ್ಕರದಲ್ಲಿ ಬ್ಯಾಂಕ್ ಸಿಬ್ಬಂದಿ ಭಾಗಿ

Published:
Updated:
ಮುಷ್ಕರದಲ್ಲಿ ಬ್ಯಾಂಕ್ ಸಿಬ್ಬಂದಿ ಭಾಗಿ

ಬೆಂಗಳೂರು: ಕಾರ್ಮಿಕ ಸಂಘಟನೆಗಳ ಕೇಂದ್ರ ಸಮಿತಿ ಕರೆ ಮೇರೆಗೆ ಫೆ. 20 ಮತ್ತು 21ರಂದು ದೇಶಾದ್ಯಂತ ನಡೆಯಲಿರುವ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿರುವುದಾಗಿ `ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘಟನೆ' (ಎಐಬಿಒಎ) ಕರ್ನಾಟಕ ಘಟಕ ಹೇಳಿದೆ.ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ), ಮೈಸೂರ್ ಬ್ಯಾಂಕ್ (ಎಸ್‌ಬಿಎಂ), ವಿಜಯ ಬ್ಯಾಂಕ್, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ 26 ಬ್ಯಾಂಕ್‌ಗಳ ಅಧಿಕಾರಿಗಳ ದೊಡ್ಡ ಸಮೂಹ ಮುಷ್ಕರದಲ್ಲಿ ಭಾಗವಹಿಸಲಿದೆ ಎಂದು `ಎಐಬಿಒಎ' ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆರ್‌ಬಿಐ ಸಿಬ್ಬಂದಿ

ಕೋಲ್ಕತಾ (ಪಿಟಿಐ):
ದೇಶದಾದ್ಯಂತ ಬುಧವಾರ-ಗುರುವಾರ ನಡೆಯಲಿರುವ ಮುಷ್ಕರದಲ್ಲಿ ತಮ್ಮ ಸಂಘಟನೆ ಸದಸ್ಯರೂ ಭಾಗಿಯಾಗುವರು ಎಂದು `ಅಖಿಲ ಭಾರತ ರಿಸರ್ವ್ ಬ್ಯಾಂಕ್ ಉದ್ಯೋಗಿಗಳ ಸಂಘಟನೆ'(ಎಐಆರ್‌ಬಿಇಎ) ಹೇಳಿದೆ.ರೂ.20,000 ಕೋಟಿ ನಷ್ಟ

ದೇಶಕ್ಕೆ ಎರಡು ದಿನದ ಮುಷ್ಕರದಿಂದ ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ(ಜಿಡಿಪಿ)ಯ ರೂ.20,000 ಕೋಟಿಯಷ್ಟು ನಷ್ಟವಾಗಲಿದೆ ಎಂದು `ಅಸೊಚಾಂ' ಕಳವಳ ವ್ಯಕ್ತಪಡಿಸಿದೆ.ದೇಶ ಆರ್ಥಿಕವಾಗಿ ಹಿನ್ನಡೆ ಅನುಭವಿಸುತ್ತಿರುವ ಇಂಥ ಸಂದಿಗ್ಧ ಸಂದರ್ಭದಲ್ಲಿ ಎರಡು ದಿನ ಮುಷ್ಕರ ನಡೆಸುವುದು ಸರಿಯಲ್ಲ. ಕಾರ್ಮಿಕ ಸಂಘಟನೆಗಳು ಮುಷ್ಕರ ಕೈಬಿಡಬೇಕು ಎಂದು `ಅಸೊಚಾಂ'  ಅಧ್ಯಕ್ಷ ರಾಜ್‌ಕುಮಾರ್ ಧೂತ್‌ಮಂಗಳವಾರ ಮನವಿ ಮಾಡಿದ್ದಾರೆ.ಕೇಂದ್ರ ಅಂಕಿ-ಅಂಶಗಳ ಸಂಸ್ಥೆ(ಸಿಎಸ್‌ಒ) ಇತ್ತೀಚೆಗೆ ಪ್ರಕಟಿಸಿದ ಮಾಹಿತಿ ಪ್ರಕಾರ ಪ್ರಸಕ್ತ ಹಣಕಾಸು ವರ್ಷದ `ಜಿಡಿಪಿ' ಒಟ್ಟು ರೂ.95 ಲಕ್ಷದಷ್ಟಿದೆ. ಅಂದರೆ, ಒಂದು ದಿನದ `ಜಿಡಿಪಿ' ರೂ.26,000 ಕೋಟಿ. ಮುಷ್ಕರದಿಂದ ಶೇ 30ರಿಂದ 40ರಷ್ಟು ಮಾನವ ಸಂಪನ್ಮೂಲದ ದುಡಿಮೆ (ಎರಡು ದಿನಕ್ಕೆ ಒಟ್ಟು ರೂ.20,000 ಕೋಟಿ) ನಷ್ಟವಾದಂತೆ ಎಂದು ಧೂತ್ ಗಮನ ಸೆಳೆದಿದ್ದಾರೆ.ಸರ್ಕಾರದ ಮನವಿ

ನವದೆಹಲಿ (ಪಿಟಿಐ):
ಕಾರ್ಮಿಕ ಸಂಘಟನೆಗಳ ಕರೆ ಮೇರೆಗೆ ನಡೆಯುತ್ತಿರುವ ಎರಡು ದಿನದ ಮುಷ್ಕರದಿಂದ ದೂರವುಳಿಯುವಂತೆ ಬ್ಯಾಂಕ್‌ಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೇಂದ್ರ ಹಣಕಾಸು ಸಚಿವಾಲಯ ಮಂಗಳವಾರ ಮನವಿ ಮಾಡಿದೆ.ಈಗಿನ ಮುಷ್ಕರಕ್ಕೂ, ಬ್ಯಾಂಕ್ ನೌಕರರಿಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ನೀಡಿರುವ ಕಾರಣವೇ ಬೇರೆ. ಬ್ಯಾಂಕ್ ಸಿಬ್ಬಂದಿ ಸಂಘಟನೆಗಳ ಬೇಡಿಕೆಗೂ ಇದಕ್ಕೂ ಹೊಂದಿಕೆಯೇ ಇಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry