ಮುಷ್ಕರದಿಂದ ಕಟ್ಟಡ ನಿರ್ಮಾಣ ಕಾಮಗಾರಿಗೆ ಬರೆ

7
ನಗರದಲ್ಲಿ ‘ಲಕ್ಷ’ ಕೊಟ್ಟರೂ ಸಿಗದು ಮರಳು

ಮುಷ್ಕರದಿಂದ ಕಟ್ಟಡ ನಿರ್ಮಾಣ ಕಾಮಗಾರಿಗೆ ಬರೆ

Published:
Updated:

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೂತನ ಮರಳು ನೀತಿಯನ್ನು ವಿರೋಧಿಸಿ ಲಾರಿ ಮಾಲೀಕರು ರಾಜ್ಯದಾದ್ಯಂತ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 14ನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರದಿಂದ ಮರಳು ಕೊರತೆ ಉಂಟಾಗಿದ್ದು, ಮನೆ ಹಾಗೂ ಇತರ ಕಟ್ಟಡ ನಿರ್ಮಾಣ ಕಾಮಗಾರಿ ಕ್ಷೇತ್ರ ತತ್ತರಿಸಿದೆ.ಮರಳಿನ ಬೆಲೆ  ಗಗನಮುಖಿಯಾಗಿದೆ. ಈ ನಡುವೆ ಮರಳಿನ ಕೊರತೆ ಉಂಟಾಗಿದ್ದು, ಕಟ್ಟಡ ಕಾಮಗಾರಿಗಳು ಕ್ರಮೇಣ ಸ್ಥಗಿತಗೊಳ್ಳುತ್ತಿವೆ. ಕೂಲಿಯನ್ನೇ ನಂಬಿಕೊಂಡಿದ್ದ ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ.ರಾಜ್ಯದಲ್ಲಿ ಮರಳು ಸಾಗಣೆ ಮಾಡುವ ಲಾರಿಗಳು 30,000 ಇವೆ. ರಾಜ್ಯಕ್ಕೆ ಪ್ರತಿದಿನ 15,000 ಲೋಡ್‌ ಹಾಗೂ ನಗರಕ್ಕೆ 3,000 ಲೋಡ್‌  ಮರಳು ಬೇಕಿದೆ. ಮುಷ್ಕರದ ಕಾರಣದಿಂದ ಮರಳು ಪೂರೈಕೆ ಬಹುತೇಕ ಸ್ಥಗಿತಗೊಂಡಿದೆ.ಈ ಹಿಂದೆ ಒಂದು ಲೋಡ್‌ ಮರಳು (ಆರು ಚಕ್ರದ ವಾಹನ) ಬೆಲೆ ರೂ. 24,000 ಇತ್ತು. ಇದೀಗ ಅದರ ಬೆಲೆ ರೂ. 70,000ಕ್ಕೆ ಏರಿದೆ. 10 ಚಕ್ರದ ವಾಹನದ ಮರಳು ಲೋಡ್‌ ಬೆಲೆ ರೂ. 1,00,000 ಗಡಿ ದಾಟಿದೆ. ಒಂದು ಟ್ರಾಕ್ಟರ್‌ ಮರಳಿನ ಬೆಲೆ ರೂ. 5,000–6,000 ಇತ್ತು. ಇದೀಗ ಅದರ ಬೆಲೆ ರೂ. 14,000ಕ್ಕೆ ಜಿಗಿದಿದೆ. ಸದ್ಯ ಗಣಿಗಾರಿಕೆ ಪ್ರದೇಶಗಳಿಂದ ಮರಳು ಸಾಗಣೆ ಆಗುತ್ತಿಲ್ಲ. ಮುಷ್ಕರದ ನಡುವೆಯೂ ಕಾಳಸಂತೆಯಲ್ಲಿ ಮರಳು ಮಾರಾಟ ಜೋರಾಗಿ ನಡೆಯುತ್ತಿದೆ. ಪ್ರತಿಭಟನೆಯನ್ನೇ ಬಂಡವಾಳವಾಗಿಸಿಕೊಂಡಿರುವ ಕೆಲ ಲಾರಿ ಮಾಲೀಕರು ಫಿಲ್ಟರ್ ಮರಳನ್ನು ಅವ್ಯಾಹತವಾಗಿ ಸಾಗಣೆ ಮಾಡಿ, ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.‘ನೂತನ ಮರಳು ನೀತಿ ಅವೈಜ್ಞಾನಿಕವಾಗಿದೆ. ಮುಷ್ಕರದಿಂದ ಮರಳು ಸಾಗಣೆ ಲಾರಿ ಮಾಲೀಕರು ಪ್ರತಿದಿನ ರೂ. 2 ಕೋಟಿ ನಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರ ದಿನಕ್ಕೆ ರೂ. 4 ಕೋಟಿ ನಷ್ಟ ಅನುಭವಿಸುತ್ತಿದೆ. ಮುಷ್ಕರ ಆರಂಭಿಸುವ ಮೊದಲೇ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಈ ವರೆಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ’ ಎಂದು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್‌.ಷಣ್ಮುಗಪ್ಪ ದೂರಿದರು.‘ಈಗಿನ ಸಮಸ್ಯೆಗೆ ಸರ್ಕಾರವೇ ಕಾರಣ. ರಾಜ್ಯ ಸರ್ಕಾರ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆ ವರೆಗೆ ಮಾತ್ರ ಮರಳು ಸಾಗಣೆಗೆ ಅವಕಾಶ ನೀಡಿದೆ. ಇದು ಸರ್ಕಾರದ ಹಳೆಯ ನಿರ್ಧಾರಕ್ಕೆ ವಿರುದ್ಧವಾಗಿದೆ. ಈ ಹಿಂದೆ ಸರ್ಕಾರ ಭಾರಿ ವಾಹನಗಳಿಗೆ 4 ಗಂಟೆಗಳ ನಿರ್ಬಂಧ ಹೇರಿತ್ತು. ಈ ಆದೇಶ ಸರ್ಕಾರಕ್ಕೆ ಮರೆತು ಹೋಗಿದೆ. ದೇಶದಲ್ಲಿ ಎಲ್ಲಿಯೂ ಇಲ್ಲದ ನೀತಿಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‘ಮುಷ್ಕರದ ಸಂದರ್ಭದಲ್ಲಿ ಮರಳಿನ ಬೆಲೆಯನ್ನು ಬೇಕಾಬಿಟ್ಟಿಯಾಗಿ ಏರಿಸಲಾಗುತ್ತದೆ. ಸಹಜವಾಗಿ ಮುಷ್ಕರ ಮುಗಿದ ಬಳಿಕ ಬೆಲೆ ಇಳಿಯಬೇಕು. ವಾಸ್ತವವಾಗಿ ಹಾಗೆ ಆಗುತ್ತಿಲ್ಲ. ಇದರಿಂದ ಹೆಚ್ಚು ತೊಂದರೆಗೆ ಒಳಗಾಗುವವರು ಜನಸಾಮಾನ್ಯರು. ಈಚಿನ ದಿನಗಳಲ್ಲಿ ಬೆಲೆ ಹೆಚ್ಚಳಕ್ಕೆ ಲಾರಿ ಮಾಲೀಕರು ಮುಷ್ಕರದ ತಂತ್ರ ಅನುಸರಿಸುತ್ತಿದ್ದಾರೆ. ಈಗಿನ ಮುಷ್ಕರ ನ್ಯಾಯೋಚಿತ ಅಲ್ಲ. ಸರ್ಕಾರ ಇಂತಹ ಮುಷ್ಕರಕ್ಕೆ ಮಣಿಯಬಾರದು’ ಎಂದು ಹೊಸಕೆರೆಹಳ್ಳಿಯ ನಿವಾಸಿ ಶ್ರೀನಿವಾಸ್‌ ಅಭಿಪ್ರಾಯಪಟ್ಟರು.ಲಾರಿ ಮಾಲೀಕರ ಬೇಡಿಕೆಗಳೇನು?

ಮರಳು ಸಾಗಣೆಗೆ ಮಾಸಿಕ ಪರವಾನಗಿ (ಪರ್ಮಿಟ್‌) ನೀಡಬೇಕು.

ಲಾರಿ ಮಾಲೀಕರ ಮೇಲೆ ಲೋಕೋಪಯೋಗಿ, ಸಾರಿಗೆ, ಪೊಲೀಸ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯ ತಡೆಯಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.ಅಕ್ರಮ ಮರಳು ಸಾಗಣೆಗೆ  ಕಡಿವಾಣ ಹಾಕಬೇಕು.ಹೊರ ರಾಜ್ಯಗಳಿಗೆ ಮರಳು ಸಾಗಿಸುವುದನ್ನು ನಿಯಂತ್ರಿಸಬೇಕು.ನೇರವಾಗಿ ಮರಳು ಖರೀದಿಸಿ, ಸಾಗಣೆ ಮಾಡಲು ಅನುಮತಿ ನೀಡಬೇಕು.‘ಜನಸಾಮಾನ್ಯರ ಹಿತದೃಷ್ಟಿಯಿಂದ ಸಮಸ್ಯೆ ಬಗೆಹರಿಸಿ’

ಈಗ   ಒಂದು ಲೋಡ್‌ ಮರಳಿಗೆ ರೂ. 1 ಲಕ್ಷ ಬೆಲೆ ಇದೆ. ಇದರಿಂದಾಗಿ ನಿರ್ಮಾಣ ಕಾಮಗಾರಿಯ ವ್ಯವಸ್ಥೆಯೇ ಉಲ್ಟಾ ಪಲ್ಟಾ ಆಗುತ್ತಿದೆ. ಬಹುತೇಕ ಜನರು ಮನೆ ಕಟ್ಟುವುದೇ ಕಷ್ಟದಲ್ಲಿ. ಈಗ  ದುಬಾರಿ ವೆಚ್ಚದಿಂದಾಗಿ ಕಟ್ಟಡ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸುತ್ತಿದ್ದಾರೆ. ಈಗಿನ ಬೆಳವಣಿಗೆಯಿಂದ ಕಾಮಗಾರಿ ಪೂರ್ಣಗೊ ಳ್ಳುವುದು ಕನಿಷ್ಠ ಪಕ್ಷ ಮೂರು ತಿಂಗಳು ವಿಳಂಬವಾಗಲಿದೆ. ಕಟ್ಟಡ ಕಾರ್ಮಿಕರ ಸ್ಥಿತಿ ದಯನೀಯವಾಗಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಸಮಸ್ಯೆಯನ್ನು ಪರಿಹರಿಸಬೇಕು. ಲಾರಿ ಮಾಲೀಕರೊಂದಿಗೆ ಮಾತುಕತೆ ನಡೆಸಿ ಅವರ ಕೆಲವು ಬೇಡಿಕೆಗಳನ್ನು ಈಡೇರಿಸಬೇಕು.

–ಶಿವಕುಮಾರ್‌, ಅಧ್ಯಕ್ಷ, ಎಫ್‌ಕೆಸಿಸಿಐ‘ವಾರದಲ್ಲಿ ನಿರ್ಮಾಣ ಕಾಮಗಾರಿ ಸ್ಥಗಿತ’

ನಗರದಲ್ಲಿ ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿ, ಮೆಟ್ರೊ ಕಾಮಗಾರಿ ಸೇರಿದಂತೆ ನಿರ್ಮಾಣ ಕಾಮಗಾರಿಗೆ ಪ್ರತಿದಿನ 3,500 ಲಾರಿ ಮರಳು ಬೇಕಿದೆ. 3,000 ಲಾರಿ ಮರಳು ಪೂರೈಕೆಯಾಗುತ್ತಿತ್ತು. ಕಾಮಗಾರಿ ನಡೆಸುವವ­ರಲ್ಲಿ ಹೆಚ್ಚಿನವರು ಒಂದು ವಾರಕ್ಕೆ ಬೇಕಾಗುವಷ್ಟು ಮರಳು ಸಂಗ್ರಹ ಮಾಡಿಕೊಂಡಿರುತ್ತಾರೆ. ಮುಷ್ಕರದಿಂದ ಮೊದಲ ಒಂದು ವಾರ ಹೆಚ್ಚಿನ ಸಮಸ್ಯೆ ಆಗಿಲ್ಲ. ಈಗ ನಿಧಾನಕ್ಕೆ ಕಾಮಗಾರಿ ಸ್ಥಗಿತಗೊಳ್ಳಲು ಆರಂಭವಾಗಲಿದೆ. ಇದೇ ಪರಿಸ್ಥಿತಿ ಮುಂದುವರಿದರೆ ವಾರದಲ್ಲಿ ನಿರ್ಮಾಣ ಕಾಮಗಾರಿ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಮುಷ್ಕರದಿಂದ ಮರಳಿನ ಬೆಲೆ ದುಪ್ಪಟ್ಟು ಆಗಿದೆ. ಕಾಮಗಾರಿ ವಿಳಂಬ ವಾಗುತ್ತಿದೆ. ಉದ್ಯಮಿಗಳಿಗೆ ನಿಗದಿತ ಕಾಲಮಿತಿಯಲ್ಲಿ ಯೋಜನೆಯನ್ನು ಪೂರೈಸಿ ಗ್ರಾಹಕರಿಗೆ ಕೊಡಲು ಸಾಧ್ಯವಾ ಗುವುದಿಲ್ಲ. ಉದ್ಯಮಿಗಳು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಮಾತುಕತೆ ಮೂಲಕ ಕೂಡಲೇ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕಿದೆ.

–ಸಿ.ಎನ್‌.ಗೋವಿಂದರಾಜು ಅಧ್ಯಕ್ಷ, ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಸಂಘಟನೆ (ಕ್ರೆಡೈ)‘ಕಾಮಗಾರಿಗೆ ತೊಂದರೆ ಆಗಿಲ್ಲ’

ನೂತನ ಮರಳು ನೀತಿಯನ್ನು ರೂಪಿಸಿದ್ದು ಗಣಿ ಹಾಗೂ ಭೂ ವಿಜ್ಞಾನ  ಇಲಾಖೆ. ಈ ಸಮಸ್ಯೆಗೆ ಗಣಿ ಇಲಾಖೆಯ ಅಧಿಕಾರಿಗಳೇ ಮುಷ್ಕರ ನಿರತರನ್ನು ಮಾತುಕತೆಗೆ ಆಹ್ವಾನಿಸಿ ಪರಿಹಾರ ಸೂಚಿಸಬೇಕಿದೆ. ನಾವು ಒಂದು ರೀತಿ ಗುತ್ತಿಗೆದಾರರು ಇದ್ದಂತೆ. ಇಲ್ಲಿ ನಮ್ಮ ಪಾತ್ರ ಇಲ್ಲ. ಮುಷ್ಕರದಿಂದ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಿಗೆ ಯಾವುದೇ ತೊಂದರೆ ಆಗಿಲ್ಲ.

–ಇ.ವೆಂಕಟಯ್ಯ ಪ್ರಧಾನ ಕಾರ್ಯದರ್ಶಿ ಲೋಕೋಪಯೋಗಿ ಇಲಾಖೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry