ಮುಷ್ಕರ: ಅಂಚೆ ಸೇವೆಯಲ್ಲಿ ವ್ಯತ್ಯಯ

7

ಮುಷ್ಕರ: ಅಂಚೆ ಸೇವೆಯಲ್ಲಿ ವ್ಯತ್ಯಯ

Published:
Updated:

ಕಾರವಾರ: ಗ್ರಾಮೀಣ ಅಂಚೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಶುಕ್ರವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಜಿಲ್ಲೆಯಾದ್ಯಂತ ಗ್ರಾಮೀಣ ಭಾಗದ ಅಂಚೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಗ್ರಾಮೀಣ ಭಾಗದಲ್ಲಿ ವಿಲೇವಾರಿ ಆಗಬೇಕಿದ್ದ ಪತ್ರಗಳು ಪ್ರಧಾನ ಅಂಚೆ ಕಚೇರಿಗಳಲ್ಲಿ ರಾಶಿರಾಶಿಯಾಗಿ ಬಿದ್ದಿವೆ.ವೃದ್ಧಾಪ್ಯ ವೇತನ, ವಿದವಾ ವೇತನ ಸೇರಿದಂತೆ ಇನ್ನಿತರ ಸಾಮಾಜಿಕ ಭದ್ರತೆಯಡಿ ಫಲಾನುಭವಿಗಳಿಗೆ ಅಂಚೆಯ ಮೂಲಕ ಬರುತ್ತಿದ್ದ ವೇತನಗಳು ಸದ್ಯ ವಿಲೇವಾರಿ ಆಗುತ್ತಿಲ್ಲ. ಕಂಪೆನಿ ಅಥವಾ ಸರ್ಕಾರದಲ್ಲಿ ವಿವಿಧ ಇಲಾಖೆಗಳು ಅಂಚೆಯ ಮೂಲಕವೇ ಸಂದರ್ಶನ ಪತ್ರಗಳು ಮತ್ತು ನೇಮಕಾತಿ ಆದೇಶಗಳನ್ನು ಕಳುಹಿಸುತ್ತವೆ.ಈ ಸಂದರ್ಶನಪತ್ರ ಮತ್ತು ಆದೇಶಗಳಿಗಾಗಿ ಅಭ್ಯರ್ಥಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಅಂಚೆಯಣ್ಣನ ಸುಳಿವೇ ಇಲ್ಲದಿರುವುದು ಸಂದರ್ಶನ ಪತ್ರ ಮತ್ತು ನೇಮಕಾತಿ ಆದೇಶದ ನಿರೀಕ್ಷೆಯಲ್ಲಿದ್ದವರಲ್ಲಿ ನಿರಾಶೆ ಮೂಡಿಸಿದೆ.`ಗ್ರಾಮೀಣ ಅಂಚೆ ನೌಕರರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸೇವೆ ನೀಡಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸ್ಟೀಡ್ ಪೋಸ್ಟ್‌ಗಳು ಬಂದರೆ ಮೊಬೈಲ್ ನಂಬರ್ ಮೂಲಕ ಸಂಬಂಧಪಟ್ಟ ಗ್ರಾಹಕರನ್ನು ಸಂಪರ್ಕಿಸಲಾಗುತ್ತಿದೆ. ಉಳಿದಂತೆ ಅಂಚೆ ಇಲಾಖೆಯ ಪೋಸ್ಟ್‌ಮನ್‌ಗಳಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ~ ಎಂದು ಇಲ್ಲಿಯ ಪ್ರಧಾನ ಅಂಚೆ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.ಜಿಲ್ಲಾಧಿಕಾರಿಗೆ ಮನವಿ: ನಗರದ ಪ್ರಧಾನ ಅಂಚೆ ಕಚೇರಿಯ ಎದುರು ಪ್ರತಿಭಟನೆ ನಡೆಸುತ್ತಿದ್ದ ಗ್ರಾಮೀಣ ಅಂಚೆ ನೌಕರರು ಶುಕ್ರವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಇಂಕೊಂಗ್ಲಾ ಜಮೀರ್ ಅವರಿಗೆ ಮನವಿ ಸಲ್ಲಿಸಿದರು. ಸಿವಿಲ್ ನೌಕರರೆಂದು ಪರಿಗಣಿಸಲು ಸುಪ್ರೀಂಕೋರ್ಟ್ ನೀಡಿರುವ ಆದೇಶ ಮತ್ತು ನ್ಯಾಯಮೂರ್ತಿ ತಲವಾರ್ ಸಮಿತಿಯ ವರದಿಯಂತೆ ಗ್ರಾಮೀಣ ಅಂಚೆ ನೌಕರರ ಸೇವೆಯನ್ನು ಖಾಯಂಗೊಳಿಸಬೇಕ ಎಂದು ನೌಕರರು ಆಗ್ರಹಿಸಿದರು.ಅಖಿಲ ಭಾರತ ಅಂಚೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಐ.ನಾಯ್ಕ, ಅತುಲ ಆಚಾರಿ, ಸುರೇಶ ನಾಯ್ಕ, ಉಲ್ಲಾಸ ನಾಯ್ಕ, ಕೆ.ಸಿ.ಬಸವರಾಜ, ಜಿ.ಡಿ.ಶೆಟ್ಟಿ, ಮಹೀಂದ್ರಾ ನಾಯ್ಕ, ಸುಧೀರ ಥಾಮಸೆ, ಗೀತಾ ಬಾಂದೇಕರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry