ಸೋಮವಾರ, ಮಾರ್ಚ್ 8, 2021
31 °C
ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಸೆ.2ಕ್ಕೆ; ಜಿಲ್ಲಾಧಿಕಾರಿಗೆ ಸೂಚನಾ ಪತ್ರ ಸಲ್ಲಿಕೆ

ಮುಷ್ಕರ ಬೆಂಬಲಿಸಿ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಷ್ಕರ ಬೆಂಬಲಿಸಿ ಮೆರವಣಿಗೆ

ಕಾರವಾರ: ಕಾರ್ಮಿಕ ಸಂಘಟನೆಗಳು ಸೆ.2ರಂದು ಕರೆ ನೀಡಿರುವ ಒಂದು ದಿನದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಮೆರವಣಿಗೆ ನಡೆಸಿದರು. ಆನಂತರ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರಿಗೆ ಸೂಚನಾ ಪತ್ರ ಸಲ್ಲಿಸಿದರು.ಸುಮಾರು 50ಕ್ಕೂ ಅಧಿಕ ಕಾರ್ಯ ಕರ್ತರು ನಗರದ ಮಿತ್ರಸಮಾಜದಿಂದ ಮೆರವಣಿಗೆ ಹೊರಟು ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಮಾವೇಶಗೊಂಡರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು ಹಾಗೂ ಕಾರ್ಮಿಕರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.‘ಜಿಲ್ಲೆಯ ಆರ್ಥಿಕ ಕ್ಷೇತ್ರ, ಸೇವಾಕ್ಷೇತ್ರ, ಸಂಘಟಿತ ವಲಯ, ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಬ್ಯಾಂಕ್, ವಿಮಾ, ಬಿ.ಎಸ್.ಎನ್.ಎಲ್, ಅಂಚೆ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮತ್ತು ಖಾಸಗಿ ಉದ್ಯೋಗಗಳಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರು, ಯೋಜನಾ ಕಾರ್ಮಿಕರಾದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರು, ಪೌರ, ಹಮಾಲಿ, ಪಂಚಾಯ್ತಿ ನೌಕರರು, ಸಾರಿಗೆ ಮತ್ತು ಜಿಲ್ಲೆಯ ವಿವಿಧೆಡೆ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಕೆಲಸ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಸೂಚನಾ ಪತ್ರದಲ್ಲಿ ಜೆಸಿಟಿಯು ಜಿಲ್ಲಾ ಸಂಚಾಲಕಿ ಯಮುನಾ ಗಾಂವಕರ ತಿಳಿಸಿದ್ದಾರೆ.ಪ್ರಮುಖ ಬೇಡಿಕೆಗಳು: ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಸಾರ್ವತ್ರಿಕ ಸಾರ್ವ ಜನಿಕ ವಿತರಣಾ ವ್ಯವಸ್ಥೆ ಜಾರಿ ಮಾಡಬೇಕು. ಸರಕು ಮಾರುಕಟ್ಟೆಯಲ್ಲಿ ಸಟ್ಟಾ ವ್ಯವಹಾರವನ್ನು ತಡೆಗಟ್ಟಬೇಕು. ನಿರುದ್ಯೋಗವನ್ನು ತಡೆಗಟ್ಟಿ ಉದ್ಯೋಗ ಗಳನ್ನು ಸೃಷ್ಟಿಸಲು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲರಿಗೂ ಮಾಸಿಕ

₹ 18 ಸಾವಿರ ಕನಿಷ್ಠ ವೇತನ ನಿಗದಿಯಾ ಬೇಕು. ಮೂಲ ಕಾರ್ಮಿಕ ಕಾನೂನು ಗಳನ್ನು ಯಾವುದೇ ವಿನಾಯಿತಿ ಇಲ್ಲದೇ ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾರ್ಮಿಕ ಕಾನೂನುಗಳಿಗೆ ಕಾರ್ಪೊರೇಟ್‌ ವಲಯದ ಪರ ತಿದ್ದುಪಡಿಗಳನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸಿನಂತೆ ಕೇಂದ್ರ ಸರ್ಕಾರವು ಸ್ಕೀಂ ಕೆಲಸಗಾರರಾದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ಕೆಲಸಗಾರರನ್ನು ಗೌರವಧನ ವ್ಯಾಪ್ತಿಯಿಂದ ತೆಗೆದು ಕಾರ್ಮಿಕರೆಂದು ಪರಿಗಣಿಸಬೇಕು. ಅವರಿಗೆ ಕನಿಷ್ಠ ಕೂಲಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಉತ್ತರಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಮೂಲಸೌಕರ್ಯಕ್ಕೆ ಆದ್ಯತೆ ಕಲ್ಪಿಸಬೇಕು. ಭೂಮಿ ಹಕ್ಕು ಎಲ್ಲರಿಗೂ ಸಿಗಬೇಕು. ಸಾಗುವಳಿ ಯೋಗ್ಯ ಮತ್ತು ವಸತಿ ಕಾರಣಕ್ಕೆ ಅರಣ್ಯ ಮತ್ತು ಸರ್ಕಾರಿ ಭೂಮಿ ಒತ್ತುವರಿ ಮಾಡಿದವರಿಗೆ ಭೂಮಿ ಸಕ್ರಮ ಮಾಡಬೇಕು. ಜಿಲ್ಲೆಯಲ್ಲಿ ಪ್ರವಾಸೋ ದ್ಯಮಕ್ಕೆ ಉತ್ತಮ ಅವಕಾಶವಿದ್ದು, ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಸಮರ್ಪಕ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಆರ್‌.ಶಾನಬಾಗ, ಖಜಾಂಚಿ ಉದಯ ನಾಯ್ಕ, ಜಿಲ್ಲಾ ಘಟಕದ ಅಧ್ಯಕ್ಷ ತಿಲಕಗೌಡ, ಮುಖಂಡರಾದ ಹರೀಶ್‌ ನಾಯ್ಕ, ನಾಗಪ್ಪ ನಾಯ್ಕ, ಡಿ.ಸ್ಯಾಮಸನ್‌ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.