ಮುಷ್ಕರ: ಬ್ಯಾಂಕಿಂಗ್ ವ್ಯವಹಾರ ಸ್ಥಗಿತ

7

ಮುಷ್ಕರ: ಬ್ಯಾಂಕಿಂಗ್ ವ್ಯವಹಾರ ಸ್ಥಗಿತ

Published:
Updated:

 


ಮಂಗಳೂರು: ಕೇಂದ್ರ ಸರ್ಕಾರದ ಜನವಿರೋಧಿ ಮತ್ತು ಬ್ಯಾಂಕ್ ಸಿಬ್ಬಂದಿ ವಿರೋಧಿ ಸುಧಾರಣಾ ಕ್ರಮಗಳನ್ನು ಖಂಡಿಸಿ ರಾಷ್ಟ್ರದಾದ್ಯಂತ ಗುರುವಾರ ನೀಡಿದ ಮುಷ್ಕರದ ಕರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ತೀವ್ರ ಸ್ಪಂದನ ವ್ಯಕ್ತವಾಗಿದ್ದು, ಬ್ಯಾಂಕಿಂಗ್ ವ್ಯವಹಾರ ಸಂಪೂರ್ಣ ಸ್ಥಗಿತಗೊಂಡಿತ್ತು.ಎಐಬಿಇಎ, ಎಐಬಿಒಎ, ಬಿಇಎಫ್‌ಐ ಸಂಘಟನೆಗಳು ಈ ಮುಷ್ಕರಕ್ಕೆ ಕರೆ ನೀಡಿದ್ದವು. ನಗರದ ಸ್ಟೇಟ್‌ಬ್ಯಾಂಕ್ ಬಳಿ ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಸಾವಿರಾರು ಬ್ಯಾಂಕ್ ಸಿಬ್ಬಂದಿ, ಅಧಿಕಾರಿಗಳು ಪಾಲ್ಗೊಂಡರು. ಜತೆಗೆ ಇತರ ರಾಷ್ಟ್ರೀಕೃತ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳ ಪ್ರಮುಖ ಕಚೇರಿಗಳ ಎದುರಲ್ಲೂ ಪ್ರತಿಭಟನಾ ಪ್ರದರ್ಶನ ನಡೆಯಿತು.ಸರ್ಕಾರ ತರಲುದ್ದೇಶಿಸುವ ಸುಧಾರಣೆಗಳ ಗುರಿ ಬ್ಯಾಂಕ್‌ಗಳ ಸಂಪನ್ಮೂಲವನ್ನು ಕಾರ್ಪೊರೇಟ್‌ಗಳಿಗೆ ನೀಡುವುದಾಗಿದೆ. ಎನ್‌ಪಿಎ ಖಾತೆಗಳನ್ನು ಡಿಫಾಲ್ಟರ್‌ಗಳ ಈಕ್ವಿಟಿ ಎಂಬುದಾಗಿ ಪರಿಗಣಿಸಲು ಹೊರಟಿರುವುದು ಸಹ ಅಪಾಯಕಾರಿ ಬೆಳವಣಿಗೆ ಎಂದು ಆಕ್ಷೇಪಿಸಲಾಯಿತು.ಖಾಸಗಿ ಬ್ಯಾಂಕ್‌ಗಳಲ್ಲಿ ಷೇರುದಾರರ ಮತದಾನದ ಹಕ್ಕನ್ನು ಈಗಿನ ಶೇ 10ರಿಂದ ಶೇ 26ಕ್ಕೆ ಹೆಚ್ಚಿಸುವುದು, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಇದನ್ನು ಶೇ1ರಿಂದ 10ಕ್ಕೆ ಹೆಚ್ಚಿಸುವ ಸರ್ಕಾರದ ಪ್ರಸ್ತಾಪವೂ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಾರಕ. ಇಂತಹ ಸುಧಾರಣೆಗಳಿಗೆ ಹಲವು ಪಕ್ಷಗಳ ವಿರೋಧ ಇದ್ದರೂ ಸರ್ಕಾರ  ಬೆಲೆ ಕೊಡದೆ ಇರುವುದನ್ನು ಖಂಡಿಸಲಾಯಿತು.ಬಲ್ಮಠದ ಕೆನರಾ ಬ್ಯಾಂಕ್ ವೃತ್ತ ಕಚೇರಿ ಮುಂಭಾಗ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ದ.ಕ.ಜಿಲ್ಲಾ ಬ್ಯಾಂಕ್ ಉದ್ಯೋಗಿಗಳ ಸಂಘದ ಅಧ್ಯಕ್ಷ ಪಿ.ಆರ್.ಕಾರಂತ ಮಾತನಾಡಿದರು. ಗ್ರಾಹಕರ ಪರದಾಟ: ಬ್ಯಾಂಕಿಂಗ್ ವ್ಯವಹಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಗುರುವಾರ ಗ್ರಾಹಕರು ಪರದಾಡಿದರು. ಎಟಿಎಂಗಳಲ್ಲಿ ದುಡ್ಡು ಸಿಗುತ್ತಿದ್ದುದು ಬಿಟ್ಟರೆ ಇತರ ವಹಿವಾಟು ನಡೆಸಲು ಸಾಧ್ಯವಾಗದೆ ಜನರು ತೊಂದರೆಗೆ ಸಿಲುಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry