ಮುಸುಕಿದ ಮೋಡ; ಅಲ್ಲಲ್ಲಿ ಜಿಟಿಜಿಟಿ ಮಳೆ; ರೈತರಿಗೆ ಸಂತಸ

ಭಾನುವಾರ, ಜೂಲೈ 21, 2019
27 °C

ಮುಸುಕಿದ ಮೋಡ; ಅಲ್ಲಲ್ಲಿ ಜಿಟಿಜಿಟಿ ಮಳೆ; ರೈತರಿಗೆ ಸಂತಸ

Published:
Updated:

ಬಾಗಲಕೋಟೆ: ಬಿರುಬಿಸಿಲ ನಾಡದಾದ ಬಾಗಲಕೋಟೆ ಜಿಲ್ಲೆಯಾದ್ಯಂತ ಶುಕ್ರವಾರ ಹವಾಮಾನ ವೈಪರಿತ್ಯದಿಂದ ದಟ್ಟ ಮೋಡಗಳು ಮುಸುಕಿದ ವಾತಾವರಣದಿಂದಾಗಿ ಹಗಲಿಡೀ ಸೂರ್ಯನ ದರ್ಶನ ಸಾಧ್ಯವಾಗಲಿಲ್ಲ.ಗುರುವಾರ ರಾತ್ರಿಯಿಂದ ಒಂದೇ ಸಮನೆ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಸಹಜ ಜನಜೀವನಕ್ಕೆ ತೊಂದರೆಯಾಯಿತು. ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆದರೂ ಛತ್ರಿ ಹಿಡಿಯದೇ ಸಂಚರಿಸುತ್ತಿದ್ದ ಜನರು ಇದೀಗ ಕರಾವಳಿ, ಮಲೆನಾಡ ಮಂದಿಯಂತೆ ಮಳೆಯಿಂದ ರಕ್ಷಣೆಗಾಗಿ ಛತ್ರಿ ಹಿಡಿದು ಸಂಚರಿಸುವಂತಹ ವಾತಾವರಣ ನಿರ್ಮಾಣವಾಗಿತ್ತು.`ಮಳೆ ಬಿಡಲಿಲ್ಲ, ಭೂಮಿ ತೊಯ್ಯಲಿಲ್ಲ' ಎಂದು ಜನರು ಮಾತನಾಡಿಕೊಳ್ಳುವಂಥ ಸ್ಥಿತಿ ಎರಡು ದಿನಗಳಿಂದ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಕೃಷಿ ಚಟುವಟುಕೆಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ.ಜಿಟಿಜಿಟಿ ಮಳೆಯಿಂದ ಜಿಲ್ಲೆಯ ಇಳಕಲ್, ಹುನಗುಂದ, ಬಾದಾಮಿ, ಮುಧೋಳ, ಜಮಖಂಡಿ, ಮಹಾಲಿಂಗಪುರ, ಅಮೀನಗಡ, ಬೀಳಗಿ, ಕೆರೂರು ಪಟ್ಟಣಗಳ ರಸ್ತೆ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಕೆಸರುಮಯ ವಾತಾವರಣ ನಿರ್ಮಾಣವಾಗಿದ್ದು, ಪಾದಚಾರಿಗಳು ನಡೆದುಕೊಂಡು ಹೋಗಲು ತೊಂದರೆಯಾಗುವಂತಿದೆ.ನಹಟ್ಟಿಯಲ್ಲಿ

ಬನಹಟ್ಟಿ:  ರಬಕವಿ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಮಧ್ಯಾಹ್ನದಿಂದ ಮಳೆ ಆರಂಭವಾಗಿದೆ.ಶುಕ್ರವಾರ ಬೆಳಗಿನ ಜಾವ ಆರು ಗಂಟೆಗೆ ಆರಂಭಗೊಂಡ ಜಿಟಿ ಜಿಟಿ ಮಳೆ ಸಂಜೆಯಾದರೂ ಸುರಿಯುತ್ತಿತ್ತು. ಶಾಲಾ ಮಕ್ಕಳು ಮಳೆಯಲ್ಲಿ ಛತ್ರಿಗಳನ್ನು ಹಿಡಿದುಕೊಂಡು ಹೊರಟರೆ ಶಾಲೆ ಬಿಟ್ಟ ನಂತರ ಮಳೆಯಲ್ಲಿ ನೆನೆದುಕೊಂಡು ಮನೆಗೆ ಮರಳಿದರು. ಅವಳಿ ನಗರಗಳಲ್ಲಿ ಈಗ ಬಣ್ಣ ಬಣ್ಣದ ಛತ್ರಿಗಳು ಕಾಣುತ್ತಿದ್ದು ತಂಪು ವಾತಾವರಣವಿದೆ.ಈ ಮಳೆಯಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ರೈತ ಮುಖಂಡ ರುದ್ರಪ್ಪ ಆಲಗೂರ ಮತ್ತು ಅಪ್ಪು ಪಾಟೀಲ ತಿಳಿಸಿದರು.ಗುಳೇದಗುಡ್ಡದಲ್ಲಿ

ಗುಳೇದಗುಡ್ಡ: ನಗರ ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಎರಡು ಮೂರು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಲೇ ಇದೆ.

ಎರಡು ಮೂರು ದಿನಗಳಿಂದ ಬೆಳಿಗ್ಗೆಯಿಂದ ಕಪ್ಪು ಮೋಡದ ವಾತಾವರಣ ಇರುವುದರಿಂದ ನಗರದಲ್ಲಿ ಮಲೆನಾಡು ವಾತಾವರಣ ನಿರ್ಮಾಣವಾಗಿದೆ.ಜಂತಿ ಮನೆಗಳು ಜಂಪ್ ಹಿಡಿದಿದ್ದರಿಂದ ಅಲ್ಲಿ ವಾಸಿಸುವ ಜನತೆ ತೊಂದರೆ ಪಡುವಂತಾಗಿದೆ.ಈ ಮಳೆಯಿಂದ ಒಣಗುವ ಹಂತದಲ್ಲಿದ್ದ ಮುಂಗಾರು ಬೆಳೆಗಳು ಹೆಸರು, ತೊಗರಿ ಮತ್ತು ಸೂರ್ಯಪಾನ ಬೆಳೆಗಳಿಗೆ ಜೀವ ಬಂದಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry