ಸೋಮವಾರ, ಮೇ 16, 2022
24 °C

`ಮುಸುಕಿನ ಜೋಳಕ್ಕೆ ಮುಂಗಾರು ಸೂಕ್ತ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಜಿಲ್ಲೆಯಲ್ಲಿ 65,816 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬೆಳೆಯಲಾಗುತ್ತಿದ್ದು, ಇದನ್ನು ಎಲ್ಲ ಕಾಲದಲ್ಲಿ ಬೆಳೆಯಬಹುದಾದರೂ, ಮುಂಗಾರು ಹಂಗಾಮು ಈ ಬೆಳೆಗೆ ಹೆಚ್ಚು ಸೂಕ್ತ' ಎಂದು ಕಂದಲಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಬಿ.ಎಸ್. ಬಸವರಾಜು ನುಡಿದರು.ಮುಸುಕಿನ ಜೋಳ ಬೆಳೆಯುವ ರೈತರಿಗಾಗಿ ಹಮ್ಮಿಕೊಂಡಿರುವ ಮೂರು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಮುಸುಕಿನ ಜೋಳ ಬೆಳೆಯಬಹುದಾದರೂ ಇದರಿಂದ ನಿರೀಕ್ಷಿತ ಇಳುವರಿ ಬರುವುದಿಲ್ಲ. ಚಳಿಗಾಲ ಈ ಬೆಳೆಗೆ ಸೂಕ್ತವಲ್ಲ. ಹೆಚ್ಚು ಉಷ್ಣಾಂಶ (1050 ಫ್ಯಾರನ್‌ಹೀಟ್‌ಗಿಂತ ಹೆಚ್ಚು) ಇರುವ ಪ್ರದೇಶದಲ್ಲಿ ಪರಾಗಸ್ಪರ್ಶ ಸಮರ್ಪಕವಾಗಿ ನಡೆಯದೆ ಅಂಥ ಪ್ರದೇಶಗಳಲ್ಲಿ ಈ ಬೆಳೆ ಬೆಳೆಯುವುದು ಸೂಕ್ತವಲ್ಲ ಎಂದು ತಿಳಿಸಿದರು.ವಿಜ್ಞಾನಿ ಡಾ.ಆರ್. ವಿನಯ್‌ಕುಮಾರ್ ಮಾತನಾಡಿ, `ಚೆನ್ನಾಗಿ ನೀರು ಬಸಿಯುವ ಮರಳು ಮಿಶ್ರಿತ ಗೋಡು ಮತ್ತು ಕಪ್ಪುಮಣ್ಣು ಈ ಬೆಳೆಗೆ ಉತ್ತಮ ' ಎಂದರು.ವಿಜ್ಞಾನಿ ಡಾ.ಎಸ್. ಚೆನ್ನಕೇಶವ ಬೆಳೆಯ ಬಿತ್ತನೆ, ಗೊಬ್ಬರ ಕೊಡುವುದು ಮುಂತಾದ ವಿಚಾರಗಳ ಬಗ್ಗೆ ಬಗ್ಗೆ ರೈತರಿಗೆ ಸಲಹೆ ಸೂಚನೆಗಳನ್ನು ನೀಡಿದರು. ಕೇಂದ್ರದ ವಿಜ್ಞಾನಿಗಳಾದ ಡಾ.ಓ.ಆರ್. ನಟರಾಜು ಮತ್ತು ಡಾ.ಎಂ. ಶಿವಶಂಕರ್, ಬೇಲೂರು ತಾಲ್ಲೂಕಿನ ರೈತರು ಪಾಲ್ಗೊಂಡಿದ್ದರು.ಅಲ್ಪಸಂಖ್ಯಾತರ ಸಾಲ ಮನ್ನಾ

ಹಾಸನ: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಹಾಸನ ಜಿಲ್ಲಾ ಕಚೇರಿಯಿಂದ ವಿವಿಧ ಸಾಲ ಯೋಜನೆಯಡಿ ಸಾಲ ಪಡೆದು ಮರುಪಾವತಿ ಮಾಡಲಾಗದಿರುವವರ ಸಾಲವನ್ನು ಮನ್ನಾ ಮಾಡಲಾಗಿದೆ.ಕಚೇರಿಯಿಂದ ಒಟ್ಟು 3834 ಮಂದಿಗೆ ರೂ. 8,51,40,786 ಸಾಲ ನೀಡಲಾಗಿತ್ತು. ಅವರಲ್ಲಿ 1058 ಮಂದಿ ಸಾಲ ಮರುಪಾವತಿ ಮಾಡಿದ್ದರು. ಬಾಕಿ ಉಳಿದ 2776 ಫಲಾನುಭವಿಗಳ ಅಸಲು ಮತ್ತು ಬಡ್ಡಿ ಸೇರಿ ರೂ. 6,12,26,740 ಮನ್ನಾ ಮಾಡಲಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಿ.ಎನ್. ನಾಗೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ

ಹಾಸನ: ಮಾಜಿ ಸೈನಿಕರ ಮಕ್ಕಳಿಗೆ ನೀಡುವ 2013-14ನೇ ಸಾಲಿನ ಶಿಷ್ಯವೇತನ ಹಾಗೂ ಪುಸ್ತಕ ಅನುದಾನಕ್ಕೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.1ನೇ ತರಗತಿಯಿಂದ ಅಂತಿಮ ಪದವಿ ಮತ್ತು ಡಿಪ್ಲೊಮಾ ಕೋರ್ಸ್‌ವರೆಗೆ ವ್ಯಾಸಂಗ ಮಾಡುತ್ತಿರುವ ಮಾಜಿ ಸೈನಿಕರ ಮಕ್ಕಳು ಈ ಸೌಲಭ್ಯವನ್ನು ಪಡೆಯಲು ಅರ್ಹರು. ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿರುವ ಮಾಜಿ ಸೈನಿಕರು/ ಅವಲಂಬಿತರು ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶ್ರೀ ವಾಸವಿ ನಿಲಯ, ಶಂಕರೀಪುರಂ, 1ನೇ ಕ್ರಾಸ್, ಬಿ.ಎಂ ರಸ್ತೆ, ಹಾಸನ ಇವರಿಂದ ಅರ್ಜಿ ಪಡೆದು, ಸೆ.30ರೊಳಗೆ ಸಲ್ಲಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.