ಬುಧವಾರ, ಜುಲೈ 28, 2021
20 °C

ಮುಸ್ಲಿಂ ದರ್ಗಾ ಹಿಂದೂ ಪೂಜಾರಿ!

ಪ್ರಜಾವಾಣಿ ವಾರ್ತೆ/ ವಿಶ್ವರಾಧ್ಯ ಎಸ್‌.ಹಂಗನಹಳ್ಳಿ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ದರ್ಗಾಗಳಲ್ಲಿ ಮುಸ್ಲಿಂ ಧರ್ಮೀಯರೇ ಪೂಜಾರಿ ಕೆಲಸ ಮಾಡುವುದು ಸರ್ವೇ ಸಾಮಾನ್ಯ. ಆದರೆ, ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರದಲ್ಲಿರುವ ಧಾರ್ಮಿಕ ಸೌಹಾರ್ದದ ಕೇಂದ್ರ ಪ್ರಸಿದ್ಧ ಹಾಜಿ ಸರ್ವರ್‌ ದರ್ಗಾದಲ್ಲಿ ಹಿಂದೂಗಳೇ ಮೌಲ್ವಿಗಳು!ಪ್ರತಿ ವರ್ಷ ಐದು ದಿನ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಸೇರುವ ಈ ದರ್ಗಾ 450 ಅಡಿ ಎತ್ತರದ ಗುಡ್ಡದ ಮೇಲಿದೆ. ಹಾಜಿ ಸರ್ವರ್‌ ದರ್ಗಾದಲ್ಲಿ ತಲೆತಲಾಂತರದಿಂದ ಪೂಜಾರಿ (ಮುಜಾವರ್) ಕೆಲಸವನ್ನು ಹಿಂದೂಗಳೇ ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕೊಂದು ಇತಿಹಾಸವೂ ಇದೆ.ವಿವಿಧ ಮಹಾನಗರಗಳಿಗೆ ಗುಳೆ ಹೋಗಿರುವ ಜನರು ಪ್ರತಿವರ್ಷ ಕಡ್ಡಾಯವಾಗಿ ದರ್ಗಾ ಜಾತ್ರೆಗೆ ವಾಪಸಾಗುತ್ತಾರೆ. ಮನೆಗಳಿಗೆ ಸುಣ್ಣ– ಬಣ್ಣ ಬಳಿದು ಶ್ರದ್ಧಾ, ಭಕ್ತಿಯಿಂದ ಜಾತ್ರೆಯಲ್ಲಿ ಪಾಲ್ಗೊಂಡು ಹಾಜಿ ಸರ್ವರ್‌ಗೆ ಹರಕೆ ಸಲ್ಲಿಸುತ್ತಾರೆ. ನೆರೆಯ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ರಾಜ್ಯಗಳಿಂದಲೂ ಸಾಕಷ್ಟು ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಬೇಡಿಕೊಳ್ಳುವ ಹರಕೆ ಯಾವತ್ತೂ ಸುಳ್ಳಾಗುವುದಿಲ್ಲ ಎನ್ನುವುದು ಎಲ್ಲ ಭಕ್ತರ ಅಚಲ ನಂಬಿಕೆ.ಹಿಂದೂ ಪೂಜಾರಿ : ಗ್ರಾಮಸ್ಥರು ಹೇಳುವ ಕಥೆಯ ಪ್ರಕಾರ, ಮುಸ್ಲಿಂ ಮತ್ತು ಹಿಂದೂ ಮಕ್ಕಳಿಬ್ಬರು ಆಟವಾಡುತ್ತಿದ್ದ ಸ್ಥಳಕ್ಕೆ ಬಂದ ಸಂತ ಹಾಜಿ ಸರ್ವರ್‌ ಅವರು ಹಾಲು ತರುವಂತೆ ಹಿಂದೂ ಹುಡುಗನಿಗೆ ಮತ್ತು ನೀರು ತರುವಂತೆ ಮುಸ್ಲಿಂ ಹುಡುಗನಿಗೆ ಸೂಚಿಸಿದರು. ಅದರಂತೆ ಆ ಹುಡುಗರು ನೀಡಿದ ನೀರಿನಿಂದ ಕೈ, ಕಾಲು ಮತ್ತು ಮುಖ ತೊಳೆದು ಹಾಲು ಕುಡಿಯುತ್ತಾರೆ.ಇಬ್ಬರು ಹಿಂತಿರುಗದಂತೆ ಮನೆಗೆ ಹೋಗಿರಿ ಎಂದು ಹಾಜಿ ಸರ್ವರ್‌ ಅವರು ಮಕ್ಕಳಿಗೆ ತಿಳಿಸಿದರು. ಸ್ವಲ್ಪ ದೂರ ಹೋಗಿ ಹುಡುಗರು ಕುತೂಹಲದಿಂದ ಹಿಂತಿರುಗಿ ನೋಡುತ್ತಾರೆ. ಅಷ್ಟೊತ್ತಿಗಾಗಲೇ ಆ ಸಂತ ಐಕ್ಯವಾಗಿ ಆ ಸ್ಥಳದಲ್ಲಿ ಗುಡ್ಡ ಬೆಳೆದಿರುತ್ತದೆ. ಅಂದಿನಿಂದಲೇ ಜಾತ್ರಾ ಮಹೋತ್ಸವ ಪ್ರಾರಂಭವಾಯಿತು. ಸಂತನಿಗೆ ಹಾಲು ನೀಡಿದ್ದು, ಹಿಂದೂ ಹುಡುಗ ಎನ್ನುವ ಕಾರಣಕ್ಕೆ ಹಿಂದೂಗಳೇ ದರ್ಗಾದ ಪೂಜಾರಿಕೆಯನ್ನು ಆರಂಭಿಸಿದರು. ಅದು ಇಂದಿಗೂ ಮುಂದುವರಿದುಕೊಂಡು ಬಂದಿದೆ.ಮುಸ್ಲಿಮರು ಗುಡ್ಡದ ಕೆಳಗಡೆ ಇರುವ ‘ನಗಾರಿ ಕಟ್ಟೆ’ಯ ದರ್ಗಾದಲ್ಲಿ ಪೂಜಾರಿಗಳಾಗಿದ್ದಾರೆ ಎಂದು ಗ್ರಾಮದ ಹಿರಿಯ ಸೋಮಶೇಖರ ಸಾಹುಕಾರ ಮತ್ತು ಹುಸೇನ್‌ಸಾಬ್‌ ಮುಜಾವರ್‌ ಅವರು ವಿವರ ನೀಡಿದರು.‘ಹೈದರಾಬಾದ್‌ ನಿಜಾಮರ ಕಾಲದಲ್ಲಿ ಲಾಡ್ಲಾಪುರದ ‘ನಿಜಾಮನ ಬಂಡೆ’ಯಲ್ಲಿ ವಸೂಲಿ ಮಾಡಿದ ಕಂದಾಯವನ್ನು ಸಂಗ್ರಹಿಸಲಾಗುತ್ತಿತ್ತು. ಜನರು ಹೆಚ್ಚಾಗಿ ಸೇರುತ್ತಿದ್ದರಿಂದ ಈ ಮಾರುಕಟ್ಟೆ ಜಾಗವೇ ಮುಂದೆ ಜಾತ್ರೆ ಜಾಗವಾಗಿ ಮಾರ್ಪಟ್ಟಿತು. ಆಗಿನಿಂದ ಹಾಜಿ ಸರ್ವರ್‌ ಜಾತ್ರೆ ಆರಂಭವಾಯಿತು’ ಎನ್ನುವ ಇನ್ನೊಂದು ಇತಿಹಾಸವನ್ನು ಗ್ರಾಮದ ಮುಖಂಡ ಬಸವರಾಜ ಮಾಲಿ ಪಾಟೀಲ ಹೇಳಿದರು.ಏ.17ರಂದು ದರ್ಗಾ ಜಾತ್ರೆ

ಪ್ರತಿ ವರ್ಷ ದವನದ ಹುಣ್ಣಿಮೆ ನಂತರ ಬರುವ ಗುರುವಾರ ಗಂಧೋತ್ಸವ ನಡೆಸಲಾಗುತ್ತದೆ. ಹೀಗಾಗಿ ಏ.17ರಂದು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ವಿಜೃಂಭಣೆಯಿಂದ ಗಂಧೋತ್ಸವ ನಡೆಯಲಿದೆ. 18ರಂದು ದೀಪೋತ್ಸವ, 19ರಂದು ಸಂಜೆ 4 ಗಂಟೆಯಿಂದ ಕೈಕುಸ್ತಿ ನಡೆಯಲಿದ್ದು, 21ರಂದು ಕಳಸ ಇಳಿಸುವ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವ ಸಮಾರೋಪಗೊಳ್ಳುವುದು. ವಾಡಿ, ಚಿತ್ತಾಪುರ ಮತ್ತು ಯಾದಗಿರಿಯಿಂದಲೂ ಲಾಡ್ಲಪುರಕ್ಕೆ ಬರಬಹುದು. ಯಾದಗಿರಿಯಿಂದ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ.‘ನಿಜಾಮರ ಕೊಡುಗೆ’

‘ನಿಜಾಮರು ಹೆಚ್ಚಾಗಿ ಸ್ಥಳೀಯರಿಗೆ ಆದ್ಯತೆ ನೀಡುತ್ತಿದ್ದರು. ಆದ್ದರಿಂದ ಇಲ್ಲಿ ಹಿಂದೂಗಳೇ ವರ್ಷಪೂರ್ತಿ ದರ್ಗಾದಲ್ಲಿ ಪೂಜೆ ಮಾಡುತ್ತಾರೆ. ಜಾತ್ರೆಯ ಸಮಯದಲ್ಲಿ ಐದು ದಿನ ಮಾತ್ರ ಹಿಂದೂ ಮತ್ತು ಮುಸ್ಲಿಂ ಎರಡೂ ಸಮಾಜದವರು ಪೂಜೆ ಮಾಡಿ ಬಂದ ಕಾಣಿಕೆ ಸಮನಾಗಿ ಹಂಚಿಕೊಳ್ಳುತ್ತಾರೆ’.

–ಬಸವರಾಜ ಮಾಲಿಪಾಟೀಲ, ಗ್ರಾಮದ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.