ಸೋಮವಾರ, ಜನವರಿ 27, 2020
15 °C

ಮುಸ್ಲಿಂ ಸಮಾವೇಶದಲ್ಲಿ ಗಲಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಇಲ್ಲಿನ ಲೈನ್ ಬಜಾರದ ಸೌದಾಗರ್ ಮಸೀದಿಯ ಶಾದಿಹಾಲ್‌ನಲ್ಲಿ ಸಾಚಾರ ಕಮಿಟಿ ಹಾಗೂ ರಂಗನಾಥ ಮಿಶ್ರಾ ಸಮಿತಿ ಶಿಪಾರಸುಗಳ ಅನುಷ್ಠಾನಕ್ಕೆ ಒತ್ತಾಯಿಸುವ ನಿಟ್ಟಿನಲ್ಲಿ ಶನಿವಾರ ನಡೆದ ಮುಸ್ಲಿಂ ಬಾಂಧವರ ಸಮಾವೇಶದಲ್ಲಿ ಗಲಾಟೆ ನಡೆದ ಪ್ರಸಂಗ ಜರುಗಿತು.ಮಾಜಿ ಸಚಿವ ಜಬ್ಬಾರಖಾನ್ ಹೊನ್ನಳ್ಳಿ ನೇತೃತ್ವದಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ ತಮಾಟಗಾರ ಬೆಂಬಲಿ ಗರು ಗಲಾಟೆ ಆರಂಭಿಸಿದರು. ಅಂಜು ಮನ್ ಅಧ್ಯಕ್ಷರಿಗೆ ಮಾಹಿತಿ ತಿಳಿಸದೇ ಸಭೆ ನಡೆಸುತ್ತಿರುವುದು ಸರಿಯಲ್ಲ ಎಂದು ತಮಾಟಗಾರ ಬೆಂಬಲಿಗರು ಗಲಾಟೆ ನಡೆಸಿ, ಬ್ಯಾನರ್ ಹರಿದು ಹಾಕಿದರು. ಹೊನ್ನಳ್ಳಿ ಅವರನ್ನು ಎಳೆದಾಡಿದರು ಎಂದು ಪ್ರತ್ಯಕ್ಷ ದರ್ಶಿಗಳು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಸಭೆ ಆರಂಭವಾಗುತ್ತಿದ್ದಂತೆ ವೇದಿಕೆಗೆ ಹೊನ್ನಳ್ಳಿ ಹಾಗೂ ಮಾಜಿ ಮೇಯರ್ ಐ.ಎಂ.ಜವಳಿ ಅವರನ್ನು ಕರೆಯುತ್ತಿದ್ದಂತೆ ವಿರೋಧ ವ್ಯಕ್ತವಾಯಿತು. ಧಾರ ವಾಡಕ್ಕೆ ಬಂದು ರಾಜಕೀಯ ಮಾಡಬಾರದು ಎಂದು ಹೊನ್ನಳ್ಳಿ ಅವರಿಗೆ ತಮಾಟಗಾರ ಬೆಂಬಲಿಗರು ತಾಕೀತು ಮಾಡಿದರೆನ್ನಲಾಗಿದೆ. ಸಭೆ ಮೊಟಕುಗೊಳಿಸಿ ಹೊನ್ನಳ್ಳಿ ತಮ್ಮ ಬೆಂಬಲಿಗರ ಜೊತೆಗೆ ಪ್ರತ್ಯೇಕ ವಾಗಿ ಚರ್ಚೆ ನಡೆಸಿದರು. ನಿಜಾಮುದ್ದೀನ್ ಶೇಖ್, ಐ.ಎಂ.ಜವಳಿ ಹೊನ್ನಳ್ಳಿ ಜೊತೆಗಿದ್ದರು. ಪೊಲೀಸರು ಮಧ್ಯ ಪ್ರವೇಶಿಸಿ ಎರಡೂ ಕಡೆಯವರನ್ನು ಸಮಾಧಾನಗೊಳಿಸಿದರು. ಎರಡೂ ಕಡೆಯವರು ಅಲ್ಲಿಂದ ಹೊರಡುವವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.`ಇಸ್ಮಾಯಿಲ್ ತಮಾಟಗಾರ ಹಾಗೂ ಇತರೆ ಸ್ಥಳೀಯ ನಾಯಕರ ನಡುವೆ ಭಿನ್ನಾಭಿಪ್ರಾಯಗಳಿವೆ. ಇವುಗಳ ಬಗ್ಗೆ ನನಗೆ ಗೊತ್ತಿರಲಿಲ್ಲ. ಇಂದಿನ ಸಮಾವೇಶಕ್ಕೆ 400 ಮಂದಿ ಮುಸ್ಲಿಮರು ಆಗಮಿಸಿದ್ದರು. ಆದರೆ ತಮಾಟಗಾರ ಬೆಂಬಲಿಗರು ಆಗಮಿಸಿ ಗಲಾಟೆ ನಡೆಸಿ ಸಭೆ ನಡೆಸಲು ಅವಕಾಶ ನೀಡಲಿಲ್ಲ. 15 ದಿನಗಳ ನಂತರ ಮತ್ತೊಮ್ಮೆ ಎಲ್ಲರನ್ನೂ ಸೇರಿಸಿ ಸಭೆ ನಡೆಸುತ್ತೇನೆ~ ಎಂದು ಮಾಜಿ ಸಚಿವ ಜಬ್ಬಾರಖಾನ್ ಹೊನ್ನಳ್ಳಿ `ಪ್ರಜಾವಾಣಿ~ಗೆ ತಿಳಿಸಿದರು.`ನನಗೆ ಸಭೆ ಬಗ್ಗೆ ಮಾಹಿತಿ ನೀಡಿಲ್ಲ. ಸ್ಥಳೀಯ ಅಂಜುಮನ್ ಅಧ್ಯಕ್ಷರನ್ನು ಕರೆದು ಸಭೆ ಮಾಡುವ ಸಂಪ್ರದಾಯ ಮುಸ್ಲಿಂ ಸಮಾಜದಲ್ಲಿದೆ. ನನಗೆ ಮಾಹಿತಿ ನೀಡಿದ್ದರೆ, ಅಂಜುಮನ್ ಆವರಣದಲ್ಲಿಯೇ ಸಮಾವೇಶ ಮಾಡಬಹುದಿತ್ತು. ಆದರೆ ಹೊನ್ನಳ್ಳಿ ಅವರು ಈ ಬಗ್ಗೆ ಮಾಹಿತಿ ನೀಡದೆ, ಸಾಚಾರ್ ಕಮಿಟಿ ಹೆಸರಿನಲ್ಲಿ ರಾಜಕೀಯ ಮಾಡಲು ಇಲ್ಲಿಗೆ ಬಂದಿದ್ದಾರೆ~ ಎಂದು ಇಸ್ಮಾಯಿಲ್ ತಮಾಟಗಾರ ತಿಳಿಸಿದರು.

ಪ್ರತಿಕ್ರಿಯಿಸಿ (+)