ಶನಿವಾರ, ಮೇ 8, 2021
18 °C

`ಮುಸ್ಲಿಮರ ತಲ್ಲಣ ಬಿಂಬಿಸುವ ಸಾಹಿತ್ಯ ರಚಿಸಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಒಂದು ಸಮುದಾಯದ ಒಳಗಿರುವ ತಲ್ಲಣ ಹೊರ ಹಾಕುವಂತಹ ಕವಿಗಳು ಹುಟ್ಟಬೇಕು ಎಂದು ಸಾಹಿತಿ ಡಾ.ಎಚ್.ಎಸ್. ಅನುಪಮಾ ಹೇಳಿದರು.ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಅಭಿರುಚಿ ಪ್ರಕಾಶನ ಮತ್ತು ಲಡಾಯಿ ಪ್ರಕಾಶನ ಬಾಲಾಜಿ ಪಬ್ಲಿಕೇಷನ್ ವತಿಯಿಂದ ಲೇಖಕಿ ಬಾನು ಮುಷ್ತಾಕ್ ಅವರ ಬಡವರ ಮಗಳು ಹೆಣ್ಣಲ್ಲ (ಕಥಾ ಸಂಕಲನ), ಇಬ್ಬನಿಯ ಕಾವು (ಲೇಖನಗಳ ಸಂಗ್ರಹ) ಹಾಗೂ ಕೌಟಂಬಿಕ ದೌರ್ಜನ್ಯ ಕಾಯಿದೆ (ಕಾನೂನು ಕೃತಿ) ಬಿಡುಗಡೆಗೊಳಿಸಿ ಮಾತನಾಡಿದರು.`ಪ್ರಸ್ತುತ ದಿನಗಳಲ್ಲಿ ಮುಸ್ಲಿಂ ಕವಯತ್ರಿಗಳು ಹೆಚ್ಚು ಸಾಹಿತ್ಯ ಲೋಕದಲ್ಲಿ ತೊಡಗಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಆಂತರಿಕ ಬಿಕ್ಕಟ್ಟು ಹಾಗೂ ಅಸಮಾನತೆಯನ್ನು ಹೋಗ ಲಾಡಿಸುವಂತಹ ಕೃತಿಗಳು ಹೆಚ್ಚು ರಚನೆಯಾಗಬೇಕಿದೆ. ಕವಿಗಳು ಸೃಜನಶೀಲ ಬರವಣಿಗೆಗಳ ಮೂಲಕ ತಮ್ಮ ಕೃತಿಗಳನ್ನು ರಚಿಸಬೇಕು ಹಾಗೂ ಒಂದು ಘಟನೆಯ ವಸ್ತುಸ್ಥಿತಿಯ ಸಾಧಕ ಬಾಧಕಗಳ ಕುರಿತು ಬರೆಯುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು.ಮುಸ್ಲಿಂ ಯುವಕ-ಯುವತಿಯರಿಗೆ ಕನ್ನಡ ಭಾಷೆಯನ್ನು ಕಲಿಸುವ ಮೂಲಕ ಅವರುಗಳನ್ನು ಸರ್ಕಾರಿ ಕನ್ನಡ ಶಾಲೆಗೆ ಬರುವಂತೆ ಮಾಡಬೇಕಿದೆ. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರನ್ನು ಕಡೆಗಣಿಸಲಾಗಿದ್ದು, ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು' ಎಂದು ಹೇಳಿದರು.ಸಾಹಿತಿ ಡಾ. ಅರುಣ್ ಜೋಳದ ಕೂಡ್ಲಗಿ ಅವರು ಬಾನು ಮುಷ್ತಾಕ್ ಅವರ ಬಡವರ ಮಗಳು ಹೆಣ್ಣಲ್ಲ ಎಂಬ ಕಥಾ ಸಂಕಲನದ ಕುರಿತು ಮಾತನಾಡಿ `ಬಾನು ಮುಷ್ತಾಕ್ ಅವರ ಕೃತಿಗಳು ಗಟ್ಟಿತನದಿಂದ ಕೂಡಿದ್ದು, ಅವರ ಈ ಕೃತಿಯಲ್ಲಿ ಹೆಣ್ಣಿನ ಬದುಕಿನ ಬಗ್ಗೆ ಹಾಗೂ ಹೆಣ್ಣಿನ ಸ್ಥಿತಿಗತಿಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ' ಎಂದರು.ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್. ಜನಾರ್ದನ್, ಲೇಖಕಿ ಬಾನು ಮುಷ್ತಾಕ್, ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.