ಮೂಡಿಗೆರೆ: ಕಾಡಾನೆ ದಾಳಿ, ಬೆಳೆ ನಾಶ

7

ಮೂಡಿಗೆರೆ: ಕಾಡಾನೆ ದಾಳಿ, ಬೆಳೆ ನಾಶ

Published:
Updated:

ಮೂಡಿಗೆರೆ: ತಾಲ್ಲೂಕಿನ ಜೆಕ್ಕಲಿ, ಹೊರಟ್ಟಿ ಭಾಗಗಳಿಗೆ ದಾಳಿ ನಡೆಸಿರುವ ಕಾಡಾನೆಗಳು, ರೈತರು ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ, ಅಡಿಕೆ, ಏಲಕ್ಕಿ, ಬತ್ತದ ಬೆಳೆಗಳನ್ನು ನಾಶ ಮಾಡಿವೆ.ಕೆಂಜಿಗೆ ಭಾಗದಿಂದ ಶನಿವಾರ ಬೆಳಗಿನ ಜಾವ ಮೂರು ಕಾಡಾನೆಗಳು ಜೆಕ್ಕಲಿ ಗ್ರಾಮದತ್ತ ಬಂದಿದ್ದು, ಬೆಳಿಗ್ಗೆ ಬತ್ತದ ಗದ್ದೆಗೆ ನೀರು ಕಟ್ಟಲು ಹೋದ ರೈತರೊಬ್ಬರನ್ನು ಓಡಿಸಿಕೊಂಡು ಬಂದಿವೆ. ತಪ್ಪಿಸಿಕೊಂಡ ರೈತ ಆನೆ ಬಂದಿರುವ ವಿಷಯ ತಿಳಿಸಿದ್ದಾರೆ. ಗ್ರಾಮಸ್ಥರೆಲ್ಲಾ ಸೇರಿ ಕೂಗಾಟ ನಡೆಸಿ ಆನೆ ಓಡಿಸಲು ಪ್ರಯತ್ನಿಸಿದರು ಎಂದು ಸ್ಥಳದಲ್ಲಿದ್ದ ರೈತರೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದರು.ಕೆಂಜಿಗೆ ಮಾರ್ಗವಾಗಿ ಬರುವಾಗ ಸಿಗುವ ಹರೀಶ್ ಎಂಬ ರೈತರ ಕಾಫಿ ತೋಟಕ್ಕೆ ನುಗ್ಗಿದ ಆನೆಗಳು ಸುಮಾರು ಹದಿನೈದು ವರ್ಷಗಳಷ್ಟು ಹಳೆಯದಾದ ಅಡಿಕೆ, ಕಾಫಿ ಗಿಡಗಳನ್ನು ನೆಲಕ್ಕುರುಳಿಸಿ ತುಳಿದು, ಅಡಿಕೆ ಸುಳಿಯನ್ನು ತಿಂದು ಹೋಗಿವೆ.

ಜೆ.ಪಿ. ಹರೀಶ್ ಅವರ ಏಲಕ್ಕಿ ತೋಟಕ್ಕೆ ನುಗ್ಗಿ ಏಲಕ್ಕಿ ಗಿಡಗಳನ್ನು ನಾಶ ಮಾಡಿವೆ. ನಂತರ ಜೆಕ್ಕಲಿ ಗದ್ದೆ ಬಯಲಿಗೆ ಇಳಿದಿರುವ ಆನೆಗಳು ಜೆ.ಪಿ. ಚಂದ್ರೇಗೌಡ ಎಂಬುವವರ ಬತ್ತದ ಗದ್ದೆಯ ಪೈರನ್ನು ತಿಂದು ಗದ್ದೆಯನ್ನು ತುಳಿದು ಹಾಕಿದ್ದು, ಲಕ್ಷಾಂತರ ರೂಪಾಯಿಯ ಬೆಳೆ ಹಾನಿ ಮಾಡಿವೆ.ಇದೇ ಮೊದಲ ಬಾರಿಗೆ ಜೆಕ್ಕಲಿ ಗ್ರಾಮದತ್ತ ಆನೆಗಳು ಬಂದಿರುವುದರಿಂದ ಹೊರಟ್ಟಿ, ಸಬ್ಬನಹಳ್ಳಿ, ಭಾರತೀಬೈಲು, ಬಡವನದಿಣ್ಣೆ, ಹನುಮನಹಳ್ಳಿ ಭಾಗಗಳ ರೈತರು ಆತಂಕಗೊಂಡಿದ್ದಾರೆ. ಆನೆ ಹಾವಳಿಯ ಸುದ್ದಿ ತಿಳಿಯುತ್ತಿದ್ದಂತೆ ತಾಲ್ಲೂಕು ಅರಣ್ಯಾಧಿಕಾರಿ ಸುದರ್ಶನ್ ತಮ್ಮ ಸಿಬ್ಬಂದಿಯನ್ನು ಈ ಪ್ರದೇಶಕ್ಕೆ ಕಳುಹಿಸಿ ಆನೆಗಳನ್ನು ಓಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಕೆಂಜಿಗೆ, ಹೊಸಳ್ಳಿ, ಸಾರಗೋಡು, ಕುಂದೂರು ಭಾಗಗಳಲ್ಲಿ ಕಾಡಾನೆ ಹಾವಳಿ ನಿರಂತರವಾಗಿದ್ದು, ಶಾಶ್ವತ ಪರಿಹಾರ ರೂಪಿಸುವಂತೆ ಸ್ಥಳದಲ್ಲಿದ್ದ ರೈತರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry