ಸೋಮವಾರ, ಏಪ್ರಿಲ್ 19, 2021
23 °C

ಮೂಡಿಗೆರೆ: ಭತ್ತದಗದ್ದೆ ಮೀನುಕೃಷಿ ಲಾಭದಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ: ಭತ್ತದ ಗದ್ದೆಗಳಲ್ಲಿ ಮೀನು ಕೃಷಿ ಕೈಗೊಳ್ಳುವುದರಿಂದ ಎರಡೂ ಕೃಷಿಗಳ ನಡುವೆ ಸಾಮರಸ್ಯ ಸಹಬಾಳ್ವೆ ಏರ್ಪಟ್ಟು ಅಧಿಕ ಲಾಭಗಳಿಸಬಹುದು ಎಂದು ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಪ್ರಾಧ್ಯಾಪಕ  ಡಾ. ಶಿವಕುಮಾರ್ ತಿಳಿಸಿದರು.    ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಮೀನು ಕೃಷಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಲೆನಾಡಿನಲ್ಲಿ ಮೀನಿಗೆ ಬೇಡಿಕೆ ಹೆಚ್ಚಾಗಿದ್ದು, ಸಾವಯವ ಪದ್ಧತಿಯಲ್ಲಿ ಭತ್ತ ಬೆಳೆಯುವ ಗದ್ದೆಗಳಲ್ಲಿ ಪಟ್ಲೆ, ಅರ್ಜು, ಮೆಲಾನ್ ಬಾರ್ಟ ಮುಂತಾದ ಲಾಭದಾಯಕ ಮೀನುಗಳನ್ನು ಸಾಕುವುದರ ಮೂಲಕ  ಲಾಭಗಳಿಸಬಹುದು ಎಂದು ತಿಳಿಸಿದರು.   ಮಲೆನಾಡಿನಲ್ಲಿ ಸ್ಥಳೀಯವಾಗಿ ಗದ್ದೆ, ಹಳ್ಳಗಳಲ್ಲಿ ಯಥೇಚ್ಛವಾಗಿ ದೊರಕುವ ಮಳಲಿ ಮೀನುಗಳನ್ನು ಆಹಾರ ಬಳಕೆಯ ಉದ್ದೇಶಕ್ಕೆ ಬದಲಾಗಿ ಅಲಂಕಾರಿಕ ಮೀನುಗಳಾಗಿ ಸಾಕಿ ದುಪ್ಪಟ್ಟು ಲಾಭಗಳಿಸಬಹುದು ಎಂದು ಹೇಳಿದರು.  ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಸಹಪ್ರಾಧ್ಯಾಪಕ ಡಾ. ರಾಮಚಂದ್ರ ನಾಯಕ್ ಮಾತನಾಡಿ, ಇಂದು ಬ್ಯೂಟಿ ಪಾರ್ಲರ್‌ಗಳಲ್ಲಿ `ಪೆಡಿಕ್ಯೂರ್~ ಪದ್ಧತಿಗಾಗಿ ದುಬಾರಿ ವೆಚ್ಚ ಮಾಡಿ ಶ್ರೀಲಂಕಾ, ಮಲೇಷ್ಯಾದಿಂದ ಮೀನುಗಳನ್ನು ಅಮದು ಮಾಡಿಕೊಳ್ಳುತ್ತಿದ್ದು, ಅಂತಹ ಮೀನುಗಳನ್ನು ಸ್ಥಳೀಯವಾಗಿಯೇ ಉತ್ಪಾದಿಸಬಹುದು ಎಂದರು.  ಡಾ. ಸುಕನ್ಯಾ ಮಾತನಾಡಿ, ಮೀನು ಕೃಷಿ ಸ್ವಾವಲಂಬನೆಯ ಕೃಷಿಯಾಗಿದ್ದು, ಕೃಷಿ ನಡೆಸಲು ಜಮೀನು ಇಲ್ಲದ ರೈತರು ಸಹ ತಮ್ಮ ಮನೆಯಂಗಳದಲ್ಲಿಯೇ ಬಣ್ಣದ ಮೀನುಗಳನ್ನು ಬೆಳೆಸಿ ಆರ್ಥಿಕ ಲಾಭಗಳಿಸಬಹುದು ಎಂದು ತಿಳಿಸಿದರು.ಸಮಾರಂಭದಲ್ಲಿ ಜಿಲ್ಲೆಯ ಹಲವು ಫಲಾನು ಭವಿಗಳಿಗೆ ಮೀನು ಸಾಕಣಿಕೆಯ ಪರಿಕರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರದ ಸಂಶೋಧಕ ಎ.ವಿ.ಸ್ವಾಮಿ, ಮೀನುಗಾರಿಕೆ ಇಲಾಖೆಯ ತಾಲ್ಲೂಕು ಅಧಿಕಾರಿ ಕುಪ್ಪಣ್ಣ, ನರೇಶ್,  ಶ್ರಿಕಾಂತ್, ಹರೀಶ್, ವನಜಾಕ್ಷಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.