ಶನಿವಾರ, ಏಪ್ರಿಲ್ 10, 2021
32 °C

ಮೂಡಿಬಂದ ಸ್ಮರಣೀಯ ಕ್ಷಣಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಬಂದ ಸ್ಮರಣೀಯ ಕ್ಷಣಗಳು...

ಲಂಡನ್ (ರಾಯಿಟರ್ಸ್): ಒಲಿಂಪಿಕ್ಸ್ ಕೂಟ ಹಲವು ಸ್ಮರಣೀಯ ಕ್ಷಣಗಳನ್ನು ಬಿಟ್ಟುಹೋಗಿವೆ. ಕ್ರೀಡಾಪಟುಗಳು ತೋರಿದ ಸಾಧನೆ, ಅಲ್ಲಿ ಮೂಡಿಬಂದ ವೈಯಕ್ತಿಕ ಪ್ರದರ್ಶನಗಳು, ತಂಡಗಳು ಹೋರಾಡಿದ ರೀತಿ, ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳ ವೈಭವಗಳನ್ನು ಮರೆಯಲು ಸಾಧ್ಯವಿಲ್ಲ. ಜುಲೈ 27 ರಿಂದ ಆಗಸ್ಟ್ 12ರ ವರೆಗೆ ನಡೆದ ಕೂಟದ ಕೆಲವು ಸ್ಮರಣೀಯ ಕ್ಷಣಗಳ ಕುರಿತ ವಿವರ ಇಲ್ಲಿದೆ...ದಾಖಲೆಯೊಂದಿಗೆ ಫೆಲ್ಪ್ಸ್ ವಿದಾಯ`ಸಾರ್ವಕಾಲೀಕ ಶ್ರೇಷ್ಠ ಒಲಿಂಪಿಯನ್~ ಎಂಬ ಗೌರವ ಹೊಂದಿರುವ ಅಮೆರಿಕದ ಈಜು ಸ್ಪರ್ಧಿ ಮೈಕಲ್ ಫೆಲ್ಪ್ಸ್ ಅವರಿಗೆ ಈ ಒಲಿಂಪಿಕ್ಸ್ ವಿದಾಯ ವೇದಿಕೆ ಎನಿಸಿತು. ಜಗತ್ತು ಕಂಡ ಶ್ರೇಷ್ಠ ಈಜು ಸ್ಪರ್ಧಿ ವೃತ್ತಿಜೀವದ ಕೊನೆಯ ಸ್ಪರ್ಧೆಯಲ್ಲೂ (4x100 ಮೀ. ಮೆಡ್ಲೆ) ಅಮೆರಿಕಕ್ಕೆ ಚಿನ್ನ ಗೆದ್ದುಕೊಟ್ಟರು. ಒಟ್ಟು 22 ಒಲಿಂಪಿಕ್ಸ್ ಪದಕಗಳನ್ನು ಗೆಲ್ಲುವ ಮೂಲಕ ಅವರು ಚಾರಿತ್ರಿಕ ಸಾಧನೆ ಮಾಡಿದರು. `ಈಜುಕೊಳದ ರಾಜ~ನನ್ನು ಮುಂದಿನ ಒಲಿಂಪಿಕ್ಸ್‌ನಲ್ಲಿ ಕಾಣಲು ಸಾಧ್ಯವಿಲ್ಲ.ಉಸೇನ್ ಬೋಲ್ಟ್ ಚಿನ್ನ `ಟ್ರೆಬಲ್~

ವಿಶ್ವದ `ಅತಿವೇಗದ ಮನುಷ್ಯ~ ಹಾಗೂ ಜಮೈಕ ತಂಡ ಕೂಟದಲ್ಲಿ ಮೂರು ಸ್ಮರಣೀಯ ಕ್ಷಣಗಳನ್ನು ನೀಡಿತು. ಬೋಲ್ಟ್ 100 ಮೀ. ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ಲಂಡನ್‌ನಲ್ಲಿ ತಮ್ಮ ಪದಕದ `ಬೇಟೆ~ಗೆ ಚಾಲನೆ ನೀಡಿದರು. ಆ ಬಳಿಕ 200 ಮೀ. ನಲ್ಲೂ ಬಂಗಾರ ಜಯಿಸಿದರು. ಅಷ್ಟು ಮಾತ್ರವಲ್ಲ ಜಮೈಕ ತಂಡ 4x100 ಮೀ. ರಿಲೆನಲ್ಲಿ ಚಿನ್ನ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. 200 ಮೀ. ಓಟದಲ್ಲಿ ಗೆದ್ದ ಬಳಿಕ ಬೋಲ್ಟ್ ಟೀಕಾಕಾರರನ್ನು ಗುರಿಯಾಗಿಸಿ ನೀಡಿದ `ಸಂಕೇತ~ ಕೂಟದ `ಹೈಲೈಟ್ಸ್~ಗಳಲ್ಲೊಂದು.ಆ್ಯಂಡಿ ಮರ‌್ರೆ ಸಾಧನೆ

ಟೆನಿಸ್ ಆಟಗಾರ ಆ್ಯಂಡಿ ಮರ‌್ರೆ ಚಿನ್ನ ಗೆದ್ದು ಆತಿಥೇಯರ ಸಂಭ್ರಮಕ್ಕೆ ಕಾರಣರಾದರು. ವಿಂಬಲ್ಡನ್‌ನ ಸೆಂಟರ್ ಕೋರ್ಟ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಮರ‌್ರೆ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಅವರನ್ನು ಮಣಿಸಿದರು. ಜುಲೈ ತಿಂಗಳಲ್ಲಿ ಇದೇ ಕೋರ್ಟ್‌ನಲ್ಲಿ ನಡೆದಿದ್ದ ವಿಂಬಲ್ಡನ್ ಟೂರ್ನಿಯ ಫೈನಲ್‌ನಲ್ಲಿ ಫೆಡರರ್ ಕೈಯಲ್ಲಿ ಸೋಲು ಅನುಭವಿಸಿದ್ದ ಮರ‌್ರೆ ಕಣ್ಣೀರು ಸುರಿಸಿದ್ದರು. ಆದರೆ ಒಲಿಂಪಿಕ್ಸ್‌ನಲ್ಲಿ ಮುಯ್ಯಿ ತೀರಿಸಿಕೊಂಡರು. ಪಂದ್ಯದ ಬಳಿಕ ಮರ‌್ರೆ ಗ್ಯಾಲರಿಯತ್ತ ತೆರಳಿ ತಾಯಿಯ ಜೊತೆ ಸಂಭ್ರಮ ಆಚರಿಸಿಕೊಂಡ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ.ಮೊಹಮ್ಮದ್ ಫರಾ ಸ್ವರ್ಣ `ಡಬಲ್~

ಮೊಹಮ್ಮದ್ ಫರಾ ಅಥ್ಲೆಟಿಕ್ಸ್‌ನಲ್ಲಿ ತೋರಿದ ಸಾಧನೆ ಬ್ರಿಟನ್‌ನ ಅಥ್ಲೆಟಿಕ್ಸ್ ಇತಿಹಾಸದಲ್ಲೇ ಅತ್ಯದ್ಭುತ ಎಂದು ಬಣ್ಣಿಸಲಾಗಿದೆ. ಸೋಮಾಲಿಯ ಮೂಲದ ಫರಾ 5000 ಮೀ. ಮತ್ತು 10000 ಮೀ. ಓಟದಲ್ಲಿ ಬ್ರಿಟನ್‌ಗೆ ಬಂಗಾರ ತಂದಿತ್ತರು. ದೀರ್ಘದೂರ ಓಟದಲ್ಲಿ ಬ್ರಿಟನ್‌ಗೆ ಒಲಿಂಪಿಕ್ಸ್ ಪದಕ ತಂದಿತ್ತ ಮೊದಲ ಅಥ್ಲೀಟ್ ಎಂಬ ಗೌರವ ಅವರಿಗೆ ಒಲಿಯಿತು. ಫರಾ ಗೆಲುವು ಪಡೆದ ಬಳಿಕ ಪತ್ನಿ ಹಾಗೂ ಪುತ್ರಿಯ ಜೊತೆ ಸಂಭ್ರಮ ಹಂಚಿಕೊಂಡ ಕ್ಷಣ ಬಹುಕಾಲ ನೆನಪಿನಲ್ಲಿ ಉಳಿಯಬಹುದು.ಅಮೆರಿಕ ಮಹಿಳಾ ರಿಲೆ ತಂಡ

ಮಹಿಳೆಯರ 4x100 ಮೀ. ರಿಲೆ ಸ್ಪರ್ಧೆಯಲ್ಲಿ ಅಮೆರಿಕ ತಂಡ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕದ ಸಾಧನೆ ಮಾಡಿತು. ಕಳೆದ ಮೂರು ಒಲಿಂಪಿಕ್ಸ್‌ಗಳಲ್ಲಿ ಅಮೆರಿಕ ಮಹಿಳಾ ತಂಡಕ್ಕೆ ದುರದೃಷ್ಟ ಕಾಡಿತ್ತು. ಒಬ್ಬರು ಇನ್ನೊಬ್ಬರಿಗೆ ಬೇಟನ್ ನೀಡುವ ಸಂದರ್ಭ ಏನಾದರೂ ತಪ್ಪು ಸಂಭವಿಸುತ್ತಿತ್ತು. ಆದರೆ ಈ ಬಾರಿ ಅಂತಹ ತಪ್ಪುಗಳಿಗೆ ಅವಕಾಶ ನೀಡದೆ 40.82 ಸೆ.ಗಳಲ್ಲಿ ಅಗ್ರಸ್ಥಾನ ಪಡೆದು ಚಿನ್ನ ಜಯಿಸಿತು.ಸೌದಿ ಅರೇಬಿಯದ ಮಹಿಳಾ ಅಥ್ಲೀಟ್

ಅರಬ್ ರಾಷ್ಟ್ರ ಸೌದಿ ಇದೇ ಮೊದಲ ಬಾರಿ ಒಲಿಂಪಿಕ್ಸ್‌ಗೆ ಮಹಿಳಾ ಅಥ್ಲೀಟ್‌ಗಳನ್ನು ಕಳುಹಿಸಿತು. ಜೂಡೊ ಸ್ಪರ್ಧಿ ವೊಜ್ದಾನ್ ಸೆರಾಜ್ ಅಬ್ದುಲ್‌ರಹೀಮ್ ಮತ್ತು ಅಥ್ಲೀಟ್ ಸಾರಾ ಅತ್ತರ್ ಸೌದಿ ಅರೇಬಿಯಾವನ್ನು ಪ್ರತಿನಿಧಿಸಿದ ಮಹಿಳಾ ಕ್ರೀಡಾಪಟುಗಳು ಎನಿಸಿದರು. ಇಬ್ಬರೂ ತಮ್ಮ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದರೂ, ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.ಮಹಿಳಾ ಬಾಕ್ಸರ್ ನಿಕೋಲಾ ಆ್ಯಡಮ್ಸ

ಒಲಿಂಪಿಕ್ಸ್‌ನಲ್ಲಿ ಮಹಿಳಾ ಬಾಕ್ಸಿಂಗ್‌ಗೆ ಇದೇ ಮೊದಲ ಬಾರಿಗೆ ಅವಕಾಶ ಲಭಿಸಿತು. ಚಿನ್ನ ಗೆದ್ದ ಮೊದಲ ಮಹಿಳಾ ಬಾಕ್ಸರ್ ಎಂಬ ಗೌರವ ಬ್ರಿಟನ್‌ನ ಫ್ಲೈವೇಟ್ ವಿಭಾಗದ ಸ್ಪರ್ಧಿ ನಿಕೋಲಾ ಆ್ಯಡಮ್ಸಗೆ ಒಲಿಯಿತು. ಹಲವು ವರ್ಷಗಳ ಹೋರಾಟದ ಬಳಿಕ ಒಲಿಂಪಿಕ್ಸ್‌ನಲ್ಲಿ ಮಹಿಳಾ ಬಾಕ್ಸಿಂಗ್‌ಗೆ ಅವಕಾಶ ದೊರೆತಿದೆ.ಡೇವಿಡ್ ರುದಿಶಾ ಮೆರುಗು

ಕೆನ್ಯಾದ ಡೇವಿಡ್ ರುದಿಶಾ 800 ಮೀ. ಓಟದಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದರು. ಅವರ ಓಟವನ್ನು ನೋಡಿದವರು ಬೆರಗಾದದ್ದು ನಿಜ. `ಕೂಟದ ಅದ್ಭುತ ಪ್ರದರ್ಶನ~ ಎಂದು ಈ ಸಾಧನೆಯನ್ನು ಒಲಿಂಪಿಕ್ಸ್ ಸಂಘಟಕ ಸಮಿತಿ ಮುಖ್ಯಸ್ಥ ಸೆಬಾಸ್ಟಿಯನ್ ಕೋ ಬಣ್ಣಿಸಿದ್ದರು. ಒಂದು ನಿಮಿಷ 40.91 ಗಳಲ್ಲಿ ಗುರಿ ತಲುಪಿದ ರುದಿಶಾ ಆ ರಾತ್ರಿ ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ ಮಿಂಚು ಹರಿಸಿದ್ದರು.ಗ್ಯಾಬ್ರಿಯೆಲಾ ಡಗ್ಲಾಸ್

ಜಿಮ್ನಾಸ್ಟಿಕ್ಸ್‌ನಲ್ಲಿ ಮಹಿಳೆಯರ ವೈಯಕ್ತಿಕ ಆಲ್‌ರೌಂಡ್ ವಿಭಾಗದಲ್ಲಿ ಅಮೆರಿಕಕ್ಕೆ ಚಿನ್ನ ತಂದುಕೊಟ್ಟ ಗ್ಯಾಬ್ರಿಯೆಲಾ ಡಗ್ಲಾಸ್ ಹೊಸ ಛಾಪು ಮೂಡಿಸಿದ್ದಾಳೆ. 16ರ ಹರೆಯದ ಡಗ್ಲಾಸ್ ಮೈನವಿರೇಳಿಸುವ ಪ್ರದರ್ಶನದ ಮೂಲಕ ನೆರೆದ ಪ್ರೇಕ್ಷಕರ ಮನಗೆದ್ದಳು. ಈ ಒಲಿಂಪಿಕ್ಸ್‌ನಿಂದಾಗಿ ಅಸಂಖ್ಯಾತ ಅಭಿಮಾನಿಗಳನ್ನು ಪಡೆದಳು. `ಒಂದು ದಿನ ಆಕೆಯನ್ನು ಭೇಟಿಯಾಗಬೇಕು~ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಕೂಡಾ ಹೇಳಿದ್ದಾರೆ.ಕಿರನಿ ಜೇಮ್ಸ ಮತ್ತು ಪಿಸ್ಟೋರಿಯಸ್

ಕಿರನಿ ಜೇಮ್ಸ 400 ಮೀ. ಓಟದಲ್ಲಿ ಪಡೆದ ಚಿನ್ನ ಗ್ರೆನಾಡಾಕ್ಕೆ ಒಲಿಂಪಿಕ್ಸ್‌ನಲ್ಲಿ ದೊರೆತ ಮೊದಲ ಪದಕವೂ ಹೌದು. ಆದರೆ 400 ಮೀ. ಓಟದ ಸೆಮಿಫೈನಲ್ ಬಳಿಕ ಕಿರನಿ ಹಾಗೂ ದಕ್ಷಿಣ ಅಫ್ರಿಕಾದ `ಬ್ಲೇಡ್ ರನ್ನರ್~ ಆಸ್ಕರ್ ಪಿಸ್ಟೋರಿಯಸ್ ಪರಸ್ಪರ ಅಪ್ಪಿಕೊಂಡ ಕ್ಷಣಕ್ಕೆ ಕ್ರೀಡಾಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ದೊರೆತಿದೆ. `ಪಿಸ್ಟೋರಿಯಸ್ ಎಲ್ಲರಿಗೂ ಸ್ಫೂರ್ತಿ~ ಎಂದು ಕಿರನಿ ನುಡಿದಿದ್ದರು.ಯೆ ಶಿವೆನ್ ವಿಶ್ವದಾಖಲೆ

ಚೀನಾದ 16ರ ಹರೆಯದ ಈಜು ತಾರೆ ಯೆ ಶಿವೆನ್ ಎರಡು ಚಿನ್ನ ಗೆದ್ದು ಸುದ್ದಿಯಾದರು. 400 ಮೀ ವೈಯಕ್ತಿಕ ಮೆಡ್ಲೆಯಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಜಯಿಸಿದ್ದು ಅಸಾಮಾನ್ಯ ಸಾಧನೆಯೇ ಸರಿ. ಆದರೆ ಶಿವೆನ್ ಉದ್ದೀಪನ ಮದ್ದು ಸೇವಿಸಿರಬಹುದು ಎಂದು ಕೆಲವು ಮಾಧ್ಯಮಗಳು ಬರೆದವು. ಇದಕ್ಕೆ ಚೀನಾ ಕಠಿಣ ಮಾತುಗಳಲ್ಲಿ ಪ್ರತ್ಯುತ್ತರ ನೀಡಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.