ಮೂಢ ಕಂದಾಚಾರ ಕೈಬಿಡಲು ಕರೆ

7

ಮೂಢ ಕಂದಾಚಾರ ಕೈಬಿಡಲು ಕರೆ

Published:
Updated:

ರಿಪ್ಪನ್‌ಪೇಟೆ: ಮೌನಕ್ಕೆ ಶರಣಾಗಿರುವ ಹಾಗೂ ದುಃಖದ ಆಗರ ಆಗಿರುವ ಸ್ಮಶಾನ ಭೂಮಿ  ಸೋಮವಾರ ರಾತ್ರಿ ಶಿವನ ತಪೋಭಂಗ ಆಗುವಂತೆ ಚಿಣ್ಣರ ಆನಂದದ ಕೇಕೆ ಹಾಗೂ ಮಹಿಳೆಯರ ಬಳೆಗಳ ನಿನಾದದೊಂದಿಗೆ ರಂಗೋಲಿಗಳಿಂದ ಶಿಂಗರಿಸಲ್ಪಟ್ಟು  ತನ್ಮೂಲಕ ಶಿವರಾತ್ರಿಯ ಜಾಗರಣೆಯನ್ನು  `ಪ್ರಜಾವಾಣಿ~ ಓದುಗರ ಬಳಗದ ವೇದಿಕೆ ಹಾಗೂ ಶಾಂತಿಧಾಮ ಕ್ರಿಯಾ ಸಮಿತಿ ವತಿಯಿಂದ ನವೀನ ರೀತಿಯಲ್ಲಿ ಆಚರಿಸಿದ ಚಿಂತನ- ಮಂಥನ ಕಾರ್ಯಕ್ರಮ ಸ್ಮರಣೀಯವಾಗಿತ್ತು.ಇದಕ್ಕೆ ಪುಟವಿಟ್ಟಂತೆ ಕವಲೇದುರ್ಗದ ಮಠದ ರಾಜಗುರು ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಾಹಿತ್ಯಿಕ ವೈಚಾರಿಕ-ಜ್ಯೋತಿಷ್ಯ ವಿಚಾರಧಾರೆ ಕೇಳುಗರ ಮನಸೂರೆಗೊಂಡಿತ್ತು.

ಶಿವನ ಕರ್ಮಭೂಮಿಯಾದ ಅಲ್ಲಿ ಹೆಣಗಳನ್ನು ಸುಟ್ಟ ಬೂದಿಯ ರಾಶಿಯೇ ಅಗಲಿ, ದೆವ್ವ- ಭೂತಗಳ ಕಾಟವೇ ಆಗಲಿ ಇಲ್ಲದೇ ಸಭಿಕರ ಗಮನ ಕೇವಲ ವೇದಿಕೆಯತ್ತ ಸೀಮಿತವಾಗಿತ್ತು.ಹಾದಿಯಲ್ಲಿ ಬೀದಿಯಲ್ಲಿ ದೇವರನ್ನು ಸೃಷ್ಟಿಸಿ ಕೊನೆಯಲ್ಲಿ ಅನಾಥವಾಗಿಸುವ ಬದಲು, ಸರಳ ಭಕ್ತಿಗೆ ಒಲಿಯುವ ಶಿವನ ಆವಾಸವಾಗಿರುವ ಸ್ಥಳದಲ್ಲಿ ಶಿವರಾತ್ರಿಯ ಜಾಗರಣೆಗೆ ವೇದಿಕೆ ಸಿದ್ಧಪಡಿಸಿ ಶಿವನನ್ನು ನೆನೆಯುವುವಂತೆ ಮಾಡಿದ ಕಾರ್ಯಕ್ರಮ ಶ್ಲಾಘನೀಯ.  ಕೊಟ್ಟರೂ ಶಿವಾ, ಕೊಡದಿದ್ದರೂ ಶಿವ  ಎಂಬ ಉಕ್ತಿ ಸ್ಮರಿಸಿದರು ರಾಜಗುರು ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ.ಡಾ.ಸರ್ಫ್ರಾಜ್ ಚಂದ್ರಗುತ್ತಿ ಮಾತನಾಡಿ, ಸುಂದರನೂ ಮಂಗಲ ಸ್ವರೂಪನಾದ ಶಿವನು ಭಕ್ತರಿಗೆ ಸುಲಭದಲ್ಲಿ ಒಲಿಯುವ ದೇವರು. ಪೂರ್ವಿಕರು ದೈನಂದಿನ ಜೀವನದಲ್ಲಿ ತಾವು ಮಾಡಿದ ಶಿವನಾಮ ಸ್ಮರಣೆಯ ಸ್ವರೂಪವು ವಚನಗಳಾಗಿ ಮಾರ್ಪಟ್ಟು ಇಂದಿಗೂ ಪ್ರಖ್ಯಾತಿಗೊಂಡಿದೆ ಎಂದರು.ಮೌಢ್ಯತೆ ಬಗ್ಗೆ ಮಾತನಾಡಿದ  ಸರ್ಜಾ ಶಂಕರ ಹರಳೀಮಠ ಅವರು, ಇಂದಿನ ಗಣಕೀಕೃತ ಯುಗದಲ್ಲಿ ಅರ್ಥವಿಲ್ಲದ ಕೆಲವು ಮೂಢ ಕಂದಾಚಾರ ಕೈಬಿಟ್ಟು ಪ್ರಾಮಾಣಿಕತೆಯ ಸೇವೆಯಲ್ಲಿ ತೊಡಗಬೇಕು ಎಂದರು.ಮರ‌್ಗನಳ್ಳಿ ಪ್ರಕಾಶ ಮಾತನಾಡಿ, ಕಳೆದ ಹತ್ತಾರು ಶತಮಾನಗಳಿಂದಲೂ ಸಾಕಷ್ಟು ವಚನಕಾರರು ಶಿವನ ಬಗ್ಗೆ ವಚನಗಳನ್ನು  ಹುಟ್ಟು ಹಾಕಿದರೂ, ಕಾಲಾ ನಂತರದಲ್ಲಿ ಅದು ವಿಶ್ವವ್ಯಾಪ್ತಿಗೆ ಒಳಪಡದೆ. ಅರ್ಥವ್ಯಾಪ್ತಿಯಲ್ಲಿ ವ್ಯತ್ಯಾಸವಾಗಿ ಕೇವಲ ಒಂದು ಜನಾಂಗಕ್ಕೆ ಸೀಮಿತಗೊಂಡಿರುವುದು ವಿಷಾದನೀಯ ಎಂದರು.ಟಿ. ಹರಿಶ್ಚಂದ್ರರಾವ್ ಮಾತನಾಡಿ, ಹಿಂದಿನಿಂದಲೂ ಆಚರಣೆಯಲ್ಲಿ ಇರುವ ಜ್ಯೋತಿಷ ಶಾಸ್ತ್ರವು ಅಮರವಾಗಿದ್ದು, ಜ್ಯೋತಿಷ್ಯಗಾರರ ಬುದ್ಧಿಗೆ ಅನುಗುಣವಾಗಿ ಇಂದು ವ್ಯಾಪಾರೀಕರಣಗೊಂಡ ಹಿನ್ನೆಲೆಯಲ್ಲಿ ಜನತೆಗೆ ಅನುಮಾನಕ್ಕೆಡೆಯಾಗಿದೆಯೇ ಹೊರತು ಮಿಥ್ಯವಂತೂ ಅಲ್ಲ ಎಂದು ಪ್ರತಿಪಾದಿಸಿದರು.

ಮ್ಯಾಥ್ಯೂ ಸುರಾನಿ ಮಾತನಾಡಿ, ಈಶ್ವರನು ಜಗತ್ತಿಗೆ ಈಶ್ವರ ಎಂದು ನಾಮಕರಣಗೊಂಡರೂ ಸರಳ ಸಜ್ಜನಿಕೆಯ ಖನಿಯಾಗಿರುತ್ತಾನೆ ಎಂದರು.ಗಣೇಶ್ ಬೆಳ್ಳಿ ಮಾತನಾಡಿ, ವಿಚಾರಗಳ ಚಿಂತನ-ಮಂಥನ ನಡೆಯುವ ಈ ಕಾಲಘಟ್ಟದಲ್ಲಿ ಉತ್ತಮವಾದ ವಿಚಾರಧಾರೆಗಳು ಜನ ಸಾಮಾನ್ಯರಿಗೂ ತಲುಪುವಂತಾಗಬೇಕು ಎಂದರು.ಗ್ರಾ.ಪಂ. ಅಧ್ಯಕ್ಷೆ ಪದ್ಮಾ ಸುರೇಶ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎನ್. ವರ್ತೇಶ, ಸದಸ್ಯೆ ಗೌರಿ ಅಭಿಮಾನ್ ವೇದಿಕೆಯಲ್ಲಿ ಹಾಜರಿದ್ದರು. ಬಾಲಕ ಶ್ರೀನಿವಾಸ ಪ್ರಾರ್ಥಿಸಿ, ತ.ಮ. ನರಸಿಂಹ ಸ್ವಾಗತಿಸಿದರು, ಭೋಜಪ್ಪ ಕಾರ್ಯಕ್ರಮ ನಿರೂಪಿಸಿದರು, ದೇವದಾಸ್ ಆಚಾರ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry