ಮೂತ್ರಪಿಂಡ ಮಾರಲು ಮುಂದಾದ ಪತ್ನಿಯರು
ಹೈದರಾಬಾದ್: `ದುಬೈ ಜೈಲಿನಲ್ಲಿ ರುವ ಗಂಡಂದಿರನ್ನು ಬಿಡಿಸಿಕೊಳ್ಳಲು ಹಣದ ಅವಶ್ಯಕತೆಯಿದೆ. ಆದ್ದರಿಂದ ನಮ್ಮ ಮೂತ್ರಪಿಂಡ ಮಾರಾಟ ಮಾಡಲು ಅನುಮತಿ ಕೊಡಿ~ ಎಂದು ಆಂಧ್ರಪ್ರದೇಶದ ಕರೀಂ ನಗರ ಜಿಲ್ಲೆಯ 6 ಮಹಿಳೆಯರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಎಸ್. ಮಲ್ಲೇಶ್ ಅವರ ಪತ್ನಿ ಶಿವರಾತ್ರಿ ರಾಜವ್ವ, ಎಸ್. ರವಿ ಅವರ ಪತ್ನಿ ಎಸ್. ರೇನಾ, ನಾಂಪೆಳ್ಳಿ ವೆಂಕಟಿ ಪತ್ನಿ ಈಳವ್ವ, ಲಕ್ಷ್ಮಣ ಅವರ ಪತ್ನಿ ಡಿ. ಪದ್ಮಾ, ಹನುಮಂತು ಅವರ ಪತ್ನಿ ಎಸ್.ಪದ್ಮಾ ಮತ್ತು ಸೈಯದ್ ಕರೀಮ್ ಪತ್ನಿ ರೇಷ್ಮಾ ಅವರೇ ಈ ಮಹಿಳೆಯರು.
ಕಟ್ಟಡ ಕೆಲಸಕ್ಕಾಗಿ ದುಬೈಗೆ ತೆರಳಿರುವ ಈ ಮಹಿಳೆಯರ ಪತಿಯಂದಿರು ಅಲ್ಲಿ ನೇಪಾಳಿ ಭದ್ರತಾ ಪಡೆಗೆ ಸೇರಿದ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಐವರಿಗೆ 24 ವರ್ಷ ಜೈಲು ಮತ್ತು ಒಬ್ಬ ವ್ಯಕ್ತಿಗೆ 10 ವರ್ಷ ಶಿಕ್ಷೆಯಾಗಿದೆ.
`ಇವರೆಲ್ಲರೂ ಅಮಾಯಕರು. ಆದರೆ, ಇವರಿಗೆ ಯಾವುದೇ ಕಾನೂನಿನ ನೆರವು ಸಿಕ್ಕಿಲ್ಲ~ ಎಂದು ಈ ಮಹಿಳೆಯರು ಅಲವತ್ತುಕೊಂಡಿದ್ದಾರೆ.
ದುಬೈ ಕಾನೂನಿನ ಪ್ರಕಾರ ಕೊಲೆ ಯಾದ ವ್ಯಕ್ತಿಯ ಸಂಬಂಧಿಕರು ಆರೋಪಿಗಳಿಂದ ಪರಿಹಾರ ಪಡೆದು ಅವರನ್ನು ಕ್ಷಮಿಸಬಹುದು. ಇದನ್ನು `ಬ್ಲಡ್ ಮನಿ~ ಎಂದು ಕರೆಯಲಾಗುತ್ತದೆ. ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಮೃತ ವ್ಯಕ್ತಿಯ ಪತ್ನಿಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದು, ರೂ 15 ಲಕ್ಷ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಹಣದ ಅವಶ್ಯಕತೆಗಾಗಿ ಮೂತ್ರಪಿಂಡ ಮಾರಾಟಕ್ಕೆ ಅನುಮತಿ ಕೋರಲಾಗಿದೆ ಎಂದು ರಾಜವ್ವ ತಿಳಿಸಿದ್ದಾರೆ.
ಈ ಸಂಬಂಧ ರಾಜ್ಯ ಮಾನವ ಹಕ್ಕುಗಳ ಆಯೋಗವು ಆಂಧ್ರ ಸರ್ಕಾರ ಮತ್ತು ಕೇಂದ್ರ ಸಾಗರೋತ್ತರ ವ್ಯವಹಾರಗಳ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿ ಜನವರಿ 17ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.