ಸೋಮವಾರ, ಜೂನ್ 21, 2021
29 °C

ಮೂತ್ರಪಿಂಡ ಸ್ವರ್ಗಕ್ಕೊಯ್ಯಬೇಡಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಮ್ಮ ದೇಹದ ಅಂಗಗಳನ್ನು ಸ್ವರ್ಗಕ್ಕೆ ತೆಗೆದುಕೊಂಡು ಹೋಗಬೇಡಿ. ಅವುಗಳ ಅಗತ್ಯ ನಮಗೆ ಇಲ್ಲಿದೆ ಎಂದು ಸ್ವರ್ಗ ಅರಿತಿದೆ. ಮೂತ್ರಪಿಂಡ ದಾನದ ಕುರಿತು ಒಂದಿಷ್ಟು ಮಾಹಿತಿ...ಆರೋಗ್ಯಕರ ಮೂತ್ರಪಿಂಡಗಳು ದೇಹದಲ್ಲಿ ರಕ್ತವನ್ನು ಶುದ್ಧಪಡಿಸುವುದಲ್ಲದೆ ಹೆಚ್ಚಿನ ದ್ರವ, ತ್ಯಾಜ್ಯ ಮತ್ತು ಖನಿಜಗಳನ್ನು ತೆಗೆದುಹಾಕುತ್ತವೆ. ಮೂಳೆಗಳನ್ನು ದೃಢವಾಗಿ ಮತ್ತು ರಕ್ತವನ್ನು ಆರೋಗ್ಯವಾಗಿ ಇರಿಸಲು ಅಗತ್ಯವಾದ ಹಾರ್ಮೊನ್‌ಗಳನ್ನು ಅವು ಬಿಡುಗಡೆ ಮಾಡುತ್ತವೆ. ಮೂತ್ರಪಿಂಡಗಳ ವೈಫಲ್ಯವಾದಾಗ ದೇಹದಲ್ಲಿ ಹಾನಿಕಾರಕ ತ್ಯಾಜ್ಯ ಸೇರಿಕೊಳ್ಳುತ್ತದೆ.ರಕ್ತದೊತ್ತಡ ಹೆಚ್ಚುತ್ತದೆ. ಹೆಚ್ಚಿನ ದ್ರವ ದೇಹದೊಳಕ್ಕೆ ಉಳಿಯುತ್ತದೆ ಜೊತೆಗೆ ಸೂಕ್ತ ಪ್ರಮಾಣದ ಕೆಂಪು ರಕ್ತಕಣಗಳ ಉತ್ಪಾದನೆ ಆಗುವುದಿಲ್ಲ. ಹೀಗಾದಾಗ ವಿಫಲವಾಗಿರುವ ಮೂತ್ರಪಿಂಡಗಳ ಬದಲಾವಣೆಯ ಚಿಕಿತ್ಸೆ ಅಗತ್ಯವಾಗುತ್ತದೆ.ಡಯಾಲಿಸಿಸ್ ಮತ್ತು ಮೂತ್ರಪಿಂಡ ಕಸಿ ಉನ್ನತ ಮಟ್ಟದ ಕಾಯಂ ಮೂತ್ರಪಿಂಡ ವೈಫಲ್ಯ (ಅಂತಿಮ ಹಂತದ ಮೂತ್ರಪಿಂಡ ರೋಗ-ಇಎಸ್‌ಕೆಡಿ)ದಲ್ಲಿ ಚಿಕಿತ್ಸೆಯ ಆಯ್ಕೆಗಳಾಗಿವೆ.1954ರಲ್ಲಿ ಪ್ರಥಮ ಜೀವಂತ ದಾನಿಯಿಂದ ಪಡೆದ ಮೂತ್ರಪಿಂಡ ಕಸಿಯನ್ನು ಬೋಸ್ಟನ್ ಯುಎಸ್‌ಎನಲ್ಲಿ ನಡೆಸಲಾದಾಗಿನಿಂದ ಕಸಿ ಕಾರ‌್ಯವನ್ನು ಯಶಸ್ವಿಯಾಗಿಸಲು ಅಗತ್ಯವಾಗುವ ಬಹಳಷ್ಟು ಜ್ಞಾನವನ್ನು ಈಗ ಸಂಗ್ರಹಿಸಲಾಗಿದೆ.

 

ಯಶಸ್ವಿ ಮೂತ್ರಪಿಂಡ ಕಸಿ ಸಮನ್ವಯ ಸಾಂಘಿಕ ಕಾರ‌್ಯದ ಫಲವಾಗಿರುತ್ತದೆ. ಈ ತಂಡದಲ್ಲಿ ಮೂತ್ರಪಿಂಡ ತಜ್ಞರು, ಕಸಿ ಶಸ್ತ್ರಕ್ರಿಯಾ ತಜ್ಞರು, ಕಸಿ ಸಮನ್ವಯಕಾರರು, ಕಸಿ ತಜ್ಞ ದಾದಿಯರು, ಔಷಧ ತಜ್ಞರು, ಸಾಮಾಜಿಕ ಕಾರ‌್ಯಕರ್ತರು ಸೇರಿರುತ್ತಾರೆ. ಆದರೆ ಅತ್ಯಂತ ಪ್ರಮುಖ ಸದಸ್ಯರೆಂದರೆ ರೋಗಿ ಮತ್ತು ಅವರ ಕುಟುಂಬವಾಗಿರುತ್ತದೆ.ದೇಹವನ್ನು ಸಂಪೂರ್ಣವಾಗಿ ಆರೋಗ್ಯವಾಗಿಸಲು ಒಂದು ಮೂತ್ರಪಿಂಡ ಸಾಕು ಎನ್ನುವ ವಾಸ್ತವಾಂಶ ಈಗಾಗಲೇ ನಿರೂಪಿತವಾಗಿದೆ. ಪ್ರಸ್ತುತ ಲಭ್ಯವಿರುವ ಸಾಕ್ಷಿಗಳ ಪ್ರಕಾರ ಮೂತ್ರಪಿಂಡ ದಾನದಿಂದ ವ್ಯಕ್ತಿಗೆ ಮೂತ್ರಪಿಂಡ ರೋಗ ಬರುವ ಅಪಾಯ ಹೆಚ್ಚುವುದಾಗಲಿ ಅಥವಾ ಜೀವನದ ಅವಧಿ ಕುಗ್ಗುವುದಾಗಲಿ ನಡೆಯುವುದಿಲ್ಲ ಎಂದು ತಿಳಿದುಬಂದಿದೆ.ಅಥವಾ ಇತರೆ ಯಾವುದೇ ಪ್ರಮುಖ ಶಸ್ತ್ರಕ್ರಿಯೆಯಲ್ಲಿರುವ ರಕ್ತಸ್ರಾವ ಅಥವ ಸೋಂಕಿನಂತಹ ಆರೋಗ್ಯ ತೊಂದರೆಗಳು ಅಷ್ಟಾಗಿ ಇರುವುದಿಲ್ಲ. ಮೂತ್ರಪಿಂಡ ದಾನದಿಂದ ಉಂಟಾಗುವಂತಹ ಸಾವು ಅತ್ಯಂತ ವಿರಳ. ಶಸ್ತ್ರಕ್ರಿಯೆಯಿಂದ ಚೇತರಿಸಿಕೊಂಡ ನಂತರ ದಾನಿಯು ತನ್ನ ಸಾಮಾನ್ಯ ಕೆಲಸ, ವಾಹನ ಚಾಲನೆ, ವ್ಯಾಯಾಮ, ಕ್ರೀಡೆಗಳಲ್ಲಿ ಭಾಗವಹಿಸುವುದು ಮುಂತಾದವುಗಳನ್ನು ಮಾಡಬಹುದು.

ಆದರೆ, ರಗ್ಬಿ, ಫುಟ್ಬಾಲ್‌ನಂತಹ ದೇಹಕ್ಕೆ ಘಾಸಿಯಾಗುವಂತಹ ಆಟಗಳನ್ನು ಶಿಫಾರಸ್ಸು ಮಾಡಲಾಗದು.ದಾನಿಯು ಯಾವುದೇ ರೀತಿಯ ಉದ್ಯೋಗವನ್ನು ಮುಂದುವರಿಸಬಹುದಾಗಿದೆ. ದಾನಿಯಾಗಿರುವುದರಿಂದ ವ್ಯಕ್ತಿಗೆ ತಂದೆಯಾಗುವ ಸಾಮರ್ಥ್ಯದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಆದರೆ ಮಹಿಳೆಯರು ಮೂತ್ರಪಿಂಡ ದಾನ ಮಾಡಿದ ನಂತರ ಗರ್ಭಿಣಿಯಾಗಲು ಕನಿಷ್ಠ ಆರು ತಿಂಗಳು ಕಾಯಬೇಕಾಗುತ್ತದೆ.ಕಸಿ ಮಾಡುವ ಮೂತ್ರಪಿಂಡದ ಮೂಲಗಳು

ಕಸಿ ಮಾಡಲು ಬಳಸುವ ಮೂತ್ರಪಿಂಡಗಳನ್ನು ಆರೋಗ್ಯಯುತ ಜೀವಂತ ವ್ಯಕ್ತಿ (ಬದುಕಿರುವ ದಾನಿ) ಅಥವಾ ಇತ್ತೀಚೆಗೆ ಮೃತಪಟ್ಟ (ಮೃತದಾನಿ) ವ್ಯಕ್ತಿಯಿಂದ   ಪಡೆಯಬಹುದಾಗಿದೆ.

ಸಾಮಾನ್ಯವಾಗಿ ಮೃತದಾನಿಗಿಂತ ಜೀವಂತ ದಾನಿ ಹೆಚ್ಚು ನೆಚ್ಚಿನ ಆಯ್ಕೆಯಾಗಿರುತ್ತದೆ.ಏಕೆಂದರೆ

ದಾನ ಸ್ವೀಕರಿಸುವವರು ಮೃತ ದಾನಿಯ ಮೂತ್ರಪಿಂಡಕ್ಕಾಗಿ ದೀರ್ಘಕಾಲ ಕಾಯಬೇಕಾಗಿರುವುದಿಲ್ಲ.ಮೂತ್ರಪಿಂಡವನ್ನು ಅತ್ಯಂತ ಶ್ರೇಷ್ಠ ಸ್ಥಿತಿಗಳಲ್ಲಿ ತೆಗೆಯಲಾಗುತ್ತದೆ.ಕಸಿ ಮಾಡಿದ ತಕ್ಷಣವೇ ಮೂತ್ರಪಿಂಡ ಕಾರ‌್ಯಾರಂಭ ಮಾಡುತ್ತದೆ.ಸ್ವೀಕರಿಸಿದವರ ದೇಹ ಮೂತ್ರಪಿಂಡವನ್ನು ತಿರಸ್ಕರಿಸುವ ಸಾಧ್ಯತೆ ಬಹಳ ಕಡಿಮೆ.ಸ್ವೀಕರಿಸಿದವರಲ್ಲಿ ಮೂತ್ರಪಿಂಡ ಸುದೀರ್ಘ ಕಾಲ ಕಾರ‌್ಯನಿರ್ವಹಿಸುತ್ತದೆ.
ಜೀವಂತ ದಾನಿ

ಮೂತ್ರಪಿಂಡ ದಾನ ಕಡ್ಡಾಯವಾಗಿ ಸ್ವಯಂ ಇಚ್ಛೆಯಿಂದ ಮಾಡುವ ಕಾರ‌್ಯವಾಗಿರಬೇಕು. ಹತ್ತಿರದ ಕುಟುಂಬದ ಸದಸ್ಯರು ಮತ್ತು ಪತ್ನಿ, ತಂದೆ, ತಾಯಿ, ಸಹೋದರ, ಸಹೋದರಿ, ಮಗಳು, ತಾತ, ಅಜ್ಜಿ ಅಥವ ಪತಿ ಇವರು ಕಾನೂನಿನ ಪ್ರಕಾರ ಜೀವಂತದಾನಿಗಳಾಗಬಹುದಾಗಿದೆ. ರಕ್ತದ ಗುಂಪು ಹೊಂದಿಕೊಳ್ಳುವುದು ಕಡ್ಡಾಯವಾಗಿರುತ್ತದೆ.ಮೃತ ದಾನಿ

ಮೃತ ದಾನಿಗಳಿಂದ ಗಮನಾರ್ಹ ಸಂಖ್ಯೆಯ ಮೂತ್ರಪಿಂಡಗಳನ್ನು ದಾನವಾಗಿ ಪಡೆಯಲಾಗುತ್ತದೆ. ತಮ್ಮ ಪ್ರೀತಿಪಾತ್ರರ ಆಕಾಂಕ್ಷೆಗಳ ಬಗ್ಗೆ  ಕುಟುಂಬದ ಸದಸ್ಯರಿಗೆ ತಿಳಿದಿರದ ಕಾರಣ ಅನೇಕ ಮೂತ್ರಪಿಂಡಗಳು ಬಳಕೆಗೆ ಬರುವುದಿಲ್ಲ.

 

ಅಂಗಗಳನ್ನು ದಾನ ನೀಡುವ ಆಸೆ ಹೊಂದಿರುವ ವ್ಯಕ್ತಿಗಳು ಇದರ ಬಗ್ಗೆ ತಮ್ಮ ಕುಟುಂಬದವರೊಂದಿಗೆ ಮಾತುಕತೆ ನಡೆಸಬೇಕು. ಝೆಡ್‌ಸಿಸಿಕೆ, ಮೋಹನ್ ಫೌಂಡೇಷನ್‌ನಂತಹ ಹಲವಾರು ಸಂಸ್ಥೆಗಳು ಅಂಗಗಳನ್ನು ದಾನ ಮಾಡಲು ಡೋನರ್ ಕಾರ್ಡ್‌ಗಳನ್ನು ಸಾವಿನ ನಂತರ ತಮ್ಮ ಅಂಗಗಳನ್ನು ಜೀವ ಉಳಿಸುವ ಕೊಡುಗೆಗಳಾಗಿ ನೀಡಲು ಇಚ್ಛಿಸುವ ಜನರಿಗೆ ನೀಡುತ್ತವೆ.ಜೀವಂತ ದಾನಿಯ ಪರೀಕ್ಷೆ

ಎಲ್ಲಾ ಸಂಭಾವ್ಯ ದಾನಿಗಳು ವೈದ್ಯಕೀಯ ಇತಿಹಾಸ ಪರೀಕ್ಷೆ ಮತ್ತು ದೈಹಿಕ ತಪಾಸಣೆಗಳಿಗೆ ಒಳಗಾಗಬೇಕು. ಯಾವುದೇ ಆತಂಕಕಾರಿ ಆರೋಗ್ಯ ತೊಂದರೆಗಳು ಇಲ್ಲವೆಂಬುದನ್ನು ಖಾತ್ರಿ ಮಾಡಿಕೊಳ್ಳಲಾಗುತ್ತದೆ.

 

ಹಲವಾರು ಪ್ರಯೋಗಾಲಯದ ಪರೀಕ್ಷೆಗಳು, ಎಕ್ಸರೆಗಳು, ಇಸಿಜಿಯನ್ನು ಮೂತ್ರಪಿಂಡದ ಕಾರ್ಯ, ಹೆಪಟೈಟೀಸ್, ಹೃದಯ ರೋಗಗಳು, ಮಧುಮೇಹ ಹಾಗೂ ಈ ಹಿಂದೆ ವೈರಲ್ ಸೋಂಕಿಗಾಗಿ ನಡೆಸಲಾಗುತ್ತದೆ.

 

ಮೂತ್ರಪಿಂಡಗಳಿಗಾಗಿ ಅಲ್ಟ್ರಾಸೋನೊಗ್ರಾಮ್ ಮತ್ತು ಡಿಟಿಪಿಎ ಸ್ಕ್ಯಾನ್‌ಗಳನ್ನು ನಡೆಸಿ ದಾನಿಯ ಎರಡು ಮೂತ್ರಪಿಂಡಗಳು ಸಾಮಾನ್ಯವಾಗಿ ಕೆಲಸ ಮಾಡುತ್ತಿವೆಯೇ ಎಂಬುದರ ಖಾತ್ರಿ ಮಾಡಿಕೊಳ್ಳಲಾಗುತ್ತದೆ.  ಪ್ಯಾಪ್ ಸ್ಮಿಯರ್, ಮ್ಯೋಮೊಗ್ರಾಮ್, ಕೋಲೊನೊಸ್ಕೋಪಿ ಮುಂತಾದವುಗಳನ್ನು ನಡೆಸಿ ಯಾವುದೇ ದಾನಿ ಆರೋಗ್ಯಕರವಾಗಿರುವುದರ ಖಾತ್ರಿ ಮಾಡಿಕೊಳ್ಳಲಾಗುತ್ತದೆ.  ಎಚ್‌ಎಲ್‌ಎ ಪರೀಕ್ಷೆ ಮತ್ತು ಕ್ರಾಸ್ ಮ್ಯೋಚ್ ಪರೀಕ್ಷೆಯನ್ನು ಎಲ್ಲಾ ರೋಗಿಗಳ ಮೇಲೆ ನಡೆಸಲಾಗುತ್ತದೆ.ಅಂತಿಮ ಹೆಜ್ಜೆಯಾಗಿ ಸಿಟಿ ಏಂಜಿಯೋಗ್ರಾಮ್‌ನ್ನು ನಡೆಸಲಾಗುತ್ತದೆ. ಇಲ್ಲಿ ಕಾಂಟ್ರ್ಯಾಸ್ಟ್‌ಅನ್ನು ರಕ್ತನಾಳದ ಮೂಲಕ ಸೇರಿಸಲಾಗುತ್ತದೆ. ಈ ಕಾಂಟ್ರ್ಯಾಸ್ಟ್ ಮೂತ್ರಪಿಂಡ ಮತ್ತು ಮೂತ್ರನಾಳಗಳ ಮೂಲಕ ಹರಿಯುವಾಗ ಸಿಟಿ ಸ್ಕ್ಯಾನ್ ನಡೆಸಲಾಗುತ್ತದೆ.ಇದು ಮೂತ್ರಪಿಂಡಗಳು, ಮೂತ್ರನಾಳಗಳು  ಸಾಮಾನ್ಯ ರೀತಿಯಲ್ಲಿವೆ ಎಂಬುದನ್ನು ನಿರೂಪಿಸುತ್ತದೆ. ಶಸ್ತ್ರಕ್ರಿಯಾ ತಜ್ಞರೊಂದಿಗೆ ಭೇಟಿಯಲ್ಲಿ ಮಾನಸಿಕವಾಗಿ ಸಂಪೂರ್ಣ ಮೌಲ್ಯೀಕರಣ ನಡೆಸಲಾಗುತ್ತದೆ.

 

ಎಲ್ಲಾ ಫಲಿತಾಂಶಗಳು ಲಭ್ಯವಾದ ನಂತರ ಬಹು ವಿಭಾಗೀಯ ತಂಡ ಇವುಗಳನ್ನು ಪರಿಷ್ಕರಿಸಿ ದಾನ ಮತ್ತು ಕಸಿ ಪ್ರಕ್ರಿಯೆ ಕೈಗೊಳ್ಳುವುದು ಸುರಕ್ಷಿತವೇ ಎಂಬುದನ್ನು ನಿರ್ಧರಿಸುತ್ತದೆ.  ಭಾರತದಲ್ಲಿ ರಾಜ್ಯದೊಳಗೆ ಇದಕ್ಕಾಗಿ ನೇಮಕವಾಗಿರುವ ಸಮಿತಿಗೆ ಅರ್ಜಿಯನ್ನು ಕಳುಹಿಸಬೇಕು.ಸಮಿತಿ ದಾನಿಯನ್ನು ಪರೀಕ್ಷಿಸಿ ಸಂದರ್ಶನದ ನಂತರ ಕಸಿ ಶಸ್ತ್ರಚಿಕಿತ್ಸೆಗೆ ಅಧಿಕೃತ ಒಪ್ಪಿಗೆ ನೀಡುತ್ತದೆ. ಅಧಿಕೃತವಾಗಿ ಒಪ್ಪಿಗೆಯ ಪತ್ರ ಸ್ವೀಕರಿಸಿದ ನಂತರ ಆಸ್ಪತ್ರೆ ಕಸಿ ಕಾರ‌್ಯವನ್ನು ಕೈಗೊಳ್ಳುತ್ತದೆ.ದಾನಿಯ ಶಸ್ತ್ರಚಿಕಿತ್ಸೆ

ದಾನಿಯ ಶಸ್ತ್ರಚಿಕಿತ್ಸೆಯು ತೆರೆದ ಶಸ್ತ್ರಚಿಕಿತ್ಸೆ ಅಥವ ಉದರದರ್ಶಕ ಶಸ್ತ್ರಚಿಕಿತ್ಸೆ ಆಗಿರಬಹುದು.ತೆರೆದ ಶಸ್ತ್ರಚಿಕಿತ್ಸೆ:
ಈ ಶಸ್ತ್ರಚಿಕಿತ್ಸೆಯಲ್ಲಿ ಹೊಟ್ಟೆಯ ಪಕ್ಕದಲ್ಲಿ 5ರಿಂದ 7 ಇಂಚು ಸೀಳುಗಾಯ ಮಾಡಿ 12ನೇ ಎದೆ ಮೂಳೆಯ ತುದಿಯನ್ನು ತೆಗೆದು ಮೂರು ಗಂಟೆಗಳ  ಶಸ್ತ್ರಚಿಕಿತ್ಸೆ ನಡೆಸಿ ಮೂತ್ರಪಿಂಡವನ್ನು ತೆಗೆಯಲಾಗುತ್ತದೆ.

 

ದಾನಿಗಳಿಗೆ ಬಹಳ ದೃಢವಾದ ನೋವು ನಿವಾರಕ ಔಷಧಿಗಳನ್ನು ಶಸ್ತ್ರಕ್ರಿಯೆ ನಂತರ ನೀಡಲಾಗುತ್ತದೆ. ಆಸ್ಪತ್ರೆಯಲ್ಲಿ ಚೇತರಿಕೆಯ ಅವಧಿ 5ರಿಂದ 7 ದಿನಗಳು ಮತ್ತು 8-12 ವಾರಗಳ ಕಾಲ ಕೆಲಸದಿಂದ ದೂರವಿರಬೇಕಾಗುತ್ತದೆ.ಉದರದರ್ಶಕ ಶಸ್ತ್ರಚಿಕಿತ್ಸೆ: ಉದರದರ್ಶಕ ಶಸ್ತ್ರಚಿಕಿತ್ಸೆಯಲ್ಲಿ ಅತ್ಯಂತ ಸಣ್ಣ ಸೀಳುಗಾಯಗಳನ್ನುಂಟು ಮಾಡಲಾಗುತ್ತದೆ. ಈ ರೀತಿಯ ಶಸ್ತ್ರಚಿಕಿತ್ಸೆ ಅದ್ಭುತವಾದ ರೀತಿಯಲ್ಲಿ ದಾನಿಗಳು ಚೇತರಿಸಿಕೊಳ್ಳಲು ನೆರವಾಗುತ್ತದೆ.ಈ ಶಸ್ತ್ರಚಿಕಿತ್ಸೆ ಎರಡರಿಂದ 3 ಗಂಟೆಗಳ ಅವಧಿ ಹಿಡಿಯುತ್ತದೆ. ಚೇತರಿಸಿಕೊಳ್ಳಲು 1ರಿಂದ 3 ದಿನಗಳು ಬೇಕಾಗುತ್ತದೆ. ದಾನಿಗಳು ಸಾಮಾನ್ಯವಾಗಿ 2ರಿಂದ 3 ವಾರಗಳಲ್ಲಿ ತಮ್ಮ ಕೆಲಸಕ್ಕೆ ಹಿಂತಿರುಗಬಹುದಾಗಿರುತ್ತದೆ.ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ದಾನಿಗಳನ್ನು ಮೂತ್ರಪಿಂಡ ತಜ್ಞರು ನಿಗದಿತ ಅವಧಿಯಲ್ಲಿ ತಪಾಸಣೆಗಳಿಗಾಗಿ ಕರೆಯುತ್ತಾರೆ. ಈ ಸಂದರ್ಶನದ ಅವಧಿಗಳಲ್ಲಿ ರಕ್ತದೊತ್ತಡ, ಮೂತ್ರಪಿಂಡ ಕಾರ‌್ಯಗಳನ್ನು ಪರೀಕ್ಷಿಸಿ ಉತ್ತಮ ಆರೋಗ್ಯದ ಖಾತ್ರಿ ಮಾಡಿಕೊಳ್ಳಲಾಗುತ್ತದೆ.ಈ ಲೇಖನ ಮತ್ತೊಂದು ಜೀವಕ್ಕಾಗಿ ಸದ್ದಿಲ್ಲದೆ ಜೀವನವನ್ನು ದಾನವಾಗಿ ನೀಡಿದ ತೆರೆಮರೆಯ ಹೀರೊ(ಅಂಗದಾನಿಗಳು)ಗಳಿಗೆ ಸಲ್ಲಿಸಿರುವ ಗೌರವವಾಗಿದೆ.

(ಮುಖ್ಯ ಮೂತ್ರಪಿಂಡ ಶಾಸ್ತ್ರ ಮತ್ತು ಕಸಿ ತಜ್ಞರು.ಮೊಬೈಲ್-94834 00000)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.