ಮೂತ್ರ ಪರೀಕ್ಷೆಗೂ ನೀರಿಲ್ಲ!

7

ಮೂತ್ರ ಪರೀಕ್ಷೆಗೂ ನೀರಿಲ್ಲ!

Published:
Updated:
ಮೂತ್ರ ಪರೀಕ್ಷೆಗೂ ನೀರಿಲ್ಲ!

ಹಾಸನ: ನಗರದ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಮೂತ್ರ ಪರೀಕ್ಷೆಗೂ ನೀರಿಲ್ಲ. ನೀರಿನ ಕೊರತೆ ತೀವ್ರವಾಗಿರುವುದರಿಂದ ತುರ್ತು ಶಸ್ತ್ರ ಚಿಕಿತ್ಸೆಯನ್ನೂ ಮುಂದೂಡಲಾಗುತ್ತಿದೆ. ಇದರಿಂದ ಹಲವು ರೋಗಿಗಳು ಶಸ್ತ್ರ ಚಿಕಿತ್ಸೆ ಮತ್ತು ಇತರ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಪಡೆಯುವಂತಾಗಿದೆ.



500 ಹಾಸಿಗೆಗಳ ಈ ಆಸ್ಪತ್ರೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ನಿತ್ಯ ನೂರಾರು ರೋಗಿಗಳು ಬರುತ್ತಾರೆ. ನಗರಪಾಲಿಕೆ ಒದಗಿಸುವ ನೀರನ್ನೇ ಬಹುವಾಗಿ ಅವಲಂಬಿಸಿರುವ ಆಸ್ಪತ್ರೆಗೆ ಕಳೆದ ಕೆಲವು ದಿನಗಳಿಂದ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ.



`ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ನೀರಿನ ಸಮಸ್ಯೆ ಇರುವುದು ಮತ್ತು ಈ ಕಾರಣಕ್ಕಾಗಿಯೇ ಕೆಲವು ಶಸ್ತ್ರ ಚಿಕಿತ್ಸೆಗಳನ್ನು ಮುಂದೂಡಿರುವುದು ನಿಜ~ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಂಕರ್ ತಿಳಿಸಿದ್ದಾರೆ.

ನಗರದ ಪಾರ್ಶ್ವನಾಥ್‌ಗೆ ಗುರುವಾರ ಮೂತ್ರ ಪರೀಕ್ಷೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಅವರು ಪ್ರಯೋಗಾಲಯಕ್ಕೆ ಹೋದರೆ ಅಲ್ಲಿನ  ಸಿಬ್ಬಂದಿ `ಪ್ರಯೋಗಾಲಯದ ಶೌಚಾಲಯದಲ್ಲಿ ನೀರು ಬರುತ್ತಿಲ್ಲ. ಆದ್ದರಿಂದ ಪರೀಕ್ಷೆ ಮಾಡಿಸಲು ಸಾಧ್ಯವಿಲ್ಲ. ಬೇರೆ ದಿನ ಬನ್ನಿ~ ಎಂದು ಕಳುಹಿಸಿದ್ದಾರೆ.



`ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಚಂದ್ರಮ್ಮಗೂ ಇದೇ ಅನುಭವವಾಗಿದೆ. ನೀರಿನ ಸಮಸ್ಯೆ ಇರುವುದರಿಂದ ಇಂದು ಶಸ್ತ್ರ ಚಿಕಿತ್ಸೆ ಮಾಡಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದರು. ಆದರೆ ಅವರಿಗೆ ತುರ್ತಾಗಿ ಚಿಕಿತ್ಸೆ ಮಾಡಬೇಕಾಗಿರುವುದರಿಂದ ಕುಟುಂಬದವರು ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಹೀಗೆ ಇನ್ನೂ ಕೆಲವರು ಶಸ್ತ್ರಚಿಕಿತ್ಸೆ ಹಾಗೂ ಇತರ ಪರೀಕ್ಷೆಗಳನ್ನು ಮುಂದೂಡಿಸಿಕೊಂಡಿದ್ದಾರೆ.



`ಹೇಮಾವತಿ ನದಿಯಿಂದ ನೀರೊದಗಿಸುವ ಪೈಪ್ ಒಡೆದಿದ್ದರಿಂದ ಆಸ್ಪತ್ರೆಗೆ ನೀರು ಸರಬರಾಜು ಆಗಿಲ್ಲ ಎಂದು ನಗರಸಭೆ ಆಯುಕ್ತರು ತಿಳಿಸಿದ್ದರು. ಪರ್ಯಾಯ ವ್ಯವಸ್ಥೆ ಸ್ವಲ್ಪ ವಿಳಂಬವಾಗಿ ಸಮಸ್ಯೆಯಾಗಿದೆ~ ಎಂದು ಉಸ್ತುವಾರಿ ಸರ್ಜನ್ ಡಾ. ಮಧುಸೂದನ ಸೋಮಯಾಜಿ `ಪ್ರಜಾವಾಣಿ~ಗೆ ತಿಳಿಸಿದರು.



`ಕೆಲವು ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಗಳನ್ನು ಮಾತ್ರ ಅನಿವಾರ್ಯವಾಗಿ ಮುಂದೂಡಿದ್ದೇವೆ. ಒಂದೆರಡು ದಿನಗಳ ನಂತರ ಆಪರೇಶನ್ ನಡೆಸಿದರೂ ತೊಂದರೆಯಾಗುವುದಿಲ್ಲ ಎಂಬಂಥ ರೋಗಿಗಳಿಗೆ ಮಾತ್ರ ಬೇರೆ ದಿನ ಬರುವಂತೆ ಸೂಚಿಸಿದ್ದೇವೆ. ತುರ್ತು ಸೇವೆಗಳಿಗೆ ಯಾವುದೇ ತೊಂದರೆಯಾಗದಂತೆ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ~ ಎಂದು ಅವರು ಸ್ಪಷ್ಟಪಡಿಸಿದರು.



~ಆಸ್ಪತ್ರೆಗಾಗಿಯೇ ಐದು ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು. ಈಗ ಆ ಐದೂ ಬಾವಿಗಳು ಬತ್ತಿವೆ. ಪಕ್ಕದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೊಳವೆ ಬಾವಿಯಿಂದ ಕೆಲವು ದಿನಗಳ ಮಟ್ಟಿಗೆ ನೀರು ಪಡೆದೆವು. ಆದರೆ ಅದರಲ್ಲೂ ನೀರು ಕಡಿಮೆಯಾಗಿರುವುದು ಮತ್ತು ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ನೀರು ಬೇಕಾಗಿರುವುದರಿಂದ ಅವರೂ ನೀರು ಕೊಡುವುದನ್ನು ನಿಲ್ಲಿಸಿದರು.



ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ತರಿಸೋಣ ಎಂದರೆ ಎಲ್ಲ ಖಾಸಗಿ ಟ್ಯಾಂಕ್‌ಗಳನ್ನೂ ನಗರಸಭೆಯವರೇ ಬಾಡಿಗೆಗೆ ಪಡೆದಿದ್ದಾರೆ. ಇದರಿಂದ ಸಮಸ್ಯೆಯಾಗಿದೆ. ಶುಕ್ರವಾರ ಟ್ಯಾಂಕರ್ ಮೂಲಕವೇ ಆಸ್ಪತ್ರೆಗೆ ನೀರು ಒದಗಿಸಲಾಗಿದ್ದು, ತಾತ್ಕಾಲಿಕವಾಗಿ ಸಮಸ್ಯೆ ಪರಿಹಾರವಾಗಿದೆ~ ಎಂದು ಸೋಮಯಾಜಿ ತಿಳಿಸಿದ್ದಾರೆ.



ಆಸ್ಪತ್ರೆಗೆ ನೀರು ಸರಬರಾಜು ಮಾಡುವ ಸಲುವಾಗಿಯೇ ಸಮೀಪದ ಸಿಲ್ವರ್ ಜ್ಯುಬಿಲಿ ಪಾರ್ಕ್‌ನಲ್ಲಿ ಒಂದು ಕೊಳವೆ ಬಾವಿ ತೆಗೆದಿದ್ದರೂ ಅಲ್ಲಿಂದ ಈವರೆಗೆ ಆಸ್ಪತ್ರೆಗೆ ಸಂಪರ್ಕ ಕಲ್ಪಿಸಿಲ್ಲ. ಆಸ್ಪತ್ರೆಗಾಗಿಯೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಒಂದು ಟ್ಯಾಂಕ್ ಕಟ್ಟಿಸಲಾಗಿದ್ದು, ಅದರಲ್ಲೂ ಸರಿಯಾಗಿ ನೀರು ತುಂಬುತ್ತಿಲ್ಲ. ಆಸ್ಪತ್ರೆ ಮಾತ್ರವಲ್ಲ ಸುತ್ತಮುತ್ತಲಿನ ಕೆಲವು ಬಡಾವಣೆಗಳಲ್ಲೂ ನೀರಿನ ಸಮಸ್ಯೆ ಇದೆ ಎಂದು ಸ್ಥಳೀಯರು ಹಲವು ಬಾರಿ ದೂರಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry