ಮೂರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

7

ಮೂರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

Published:
Updated:

ಬೆಂಗಳೂರು: ಕಿರುಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ವೇಳೆ ಮೇಲ್ವಿಚಾರಕರಿಗೆ ಸಿಕ್ಕುಬಿದ್ದ ಕಾರಣ ಪಿಯುಸಿ ವಿದ್ಯಾರ್ಥಿನಿ ಎಸ್.ಶರಣ್ಯಾ (18) ಎಂಬಾಕೆ ಕಾಲೇಜಿನ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ ನಡೆದಿದೆ.ಘಟನೆಯಲ್ಲಿ ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಹಲಸೂರಿನ ಶಂಕರನಾರಾಯಣ ಮತ್ತು ಶೋಭ ದಂಪತಿಯ ಮಗಳು ಶರಣ್ಯಾ ವಿಠ್ಠಲ್‌ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ಗುರುವಾರ ಆಕೆಗೆ ಭೌತಶಾಸ್ತ್ರ ಮತ್ತು ಕನ್ನಡ ವಿಷಯಗಳ ಕಿರುಪರೀಕ್ಷೆ ಇತ್ತು.ಹೀಗಾಗಿ ಬೆಳಿಗ್ಗೆ 8.30ಕ್ಕೆ ಆಕೆ ಕಾಲೇಜಿಗೆ ಬಂದಿದ್ದಳು. ಈ ಮಧ್ಯೆ ಆಕೆ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದುದನ್ನು ಗಮನಿಸಿದ ಕೊಠಡಿ ಮೇಲ್ವಿಚಾರಕರು ಈ ಬಗ್ಗೆ ಆಕೆಗೆ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಅವಮಾನಗೊಂಡು ಆಕೆ ಒಂಬತ್ತು ಗಂಟೆ ಸುಮಾರಿಗೆ ಪರೀಕ್ಷಾ ಕೊಠಡಿಯಿಂದ ಹೊರ ಬಂದು ಕಟ್ಟಡದಿಂದ ಕೆಳಗೆ ಬಿದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.`ಶರಣ್ಯಾ ಪರೀಕ್ಷೆಯಲ್ಲಿ ನಕಲು ಮಾಡಲು ಚೀಟಿ ತಂದಿದ್ದಳು. ಅದನ್ನು ಕಂಡ ಕೊಠಡಿ ಮೇಲ್ವಿಚಾರಕರು ಉತ್ತರ ಪತ್ರಿಕೆಯನ್ನು ಕಸಿದುಕೊಂಡು, ನಕಲು ಮಾಡುತ್ತಿದ್ದುದನ್ನು ಉಪ ಪ್ರಾಂಶುಪಾಲರ ಗಮನಕ್ಕೆ ತರುವುದಾಗಿ ಹೇಳಿ ಹೋದರು. ಅವರ ಹಿಂದೆಯೇ ಶರಣ್ಯಾ ಕೂಡ ಹೋದಳು. ಸ್ವಲ್ಪ ಹೊತ್ತಿನಲ್ಲೇ ಯಾರೋ ಚೀರಿದ ಶಬ್ದ ಕೇಳಿಸಿತು. ಹೊರಗೆ ಬಂದು ನೋಡಿದಾಗ ಆಕೆ ಕೆಳಗೆ ಬಿದ್ದಿದ್ದಳು' ಎಂದು ಶರಣ್ಯಾ ಸಹಪಾಠಿ ಮನೋಜ್ ಹೇಳಿದರು.ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಗಿಲ್ಬರ್ಟ್ ಸಾಲ್ಡಾನಾ, `ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿ ಏಕಾಏಕಿ ಕೊಠಡಿಯಿಂದ ಹೊರಗೆ ಬಂದು ಕಟ್ಟಡದಿಂದ ಕೆಳಗೆ ಬಿದ್ದಿದ್ದಾಳೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ' ಎಂದಿದ್ದಾರೆ.

`ವಿದ್ಯಾರ್ಥಿನಿ ಕೆಳಗೆ ಬಿದ್ದು ಗಾಯಗೊಂಡ ಕೆಲವೇ ನಿಮಿಷದಲ್ಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಘಟನೆಯಿಂದ ಆಘಾತಕ್ಕೊಳಗಾಗಿದ್ದ ಶರಣ್ಯಾ, ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಚೆನ್ನಾಗಿಯೇ ಮಾತನಾಡುತ್ತಿದ್ದಳು. ಈಗ ಆಕೆಯನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದ್ದು ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ' ಎಂದು ಮಲ್ಯ ಆಸ್ಪತ್ರೆ ಅಧ್ಯಕ್ಷ ಕಮಾಡೋರ್ ಇಂದ್ರು ವಾದ್ವಾನಿ ತಿಳಿಸಿದರು.ಆಕೆ ಹುಲ್ಲು ಹಾಸಿನ ಮೇಲೆ ಬಿದ್ದಿದ್ದರಿಂದ ಹೆಚ್ಚಿನ ಅನಾಹುತವಾಗಿಲ್ಲ. ಕೆಳಗೆ ಬೀಳುವಾಗ ಬಲಗೈ ಅನ್ನು ನೆಲಕ್ಕೆ ಊರಿರುವುದರಿಂದ ಬಲತೋಳಿಗೆ ತೀವ್ರ ಪೆಟ್ಟು ಬಿದ್ದಿದೆ. ಅಲ್ಲದೇ, ಮೊಣಕಾಲಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ತಲೆಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಹೇಳಿದರು.`ಶರಣ್ಯಾ ದೇಹವನ್ನು ಸ್ಕ್ಯಾನ್ ಮಾಡಲಾಗಿದ್ದು ದೇಹದ ಯಾವ ಭಾಗಗಳಿಗೂ ಹೆಚ್ಚಿನ ಹಾನಿಯಾಗಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿಲ್ಲ' ಎಂದು ಆಸ್ಪತ್ರೆಯ ವೈದ್ಯಕೀಯ ಮೇಲ್ಚಿಚಾರಕಿ ಡಾ. ಕಾಂಚನ್ ಸಾನ್ಯಲ್ ಮಾಹಿತಿ ನೀಡಿದರು.

ಘಟನೆ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಾಗಿದೆ.

ಸ್ವಯಂಪ್ರೇರಿತ ದೂರು ದಾಖಲು

`ವಿದ್ಯಾರ್ಥಿನಿ ಕಟ್ಟಡದಿಂದ ಕೆಳಗೆ ಬಿದ್ದು ಗಾಯಗೊಂಡಿರುವ ಸಂಬಂಧ ಕಾಲೇಜು ಆಡಳಿತ ಮಂಡಳಿ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ವಿದ್ಯಾರ್ಥಿನಿ ಆತ್ಮಹತ್ಯೆಯ ಉದ್ದೇಶದಿಂದ ಕೆಳಗೆ ಬಿದ್ದಳೋ ಅಥವಾ ಇದು ಅನಿರೀಕ್ಷಿತ ಘಟನೆಯೋ ಎಂಬುದು ಇಲ್ಲಿ ಮುಖ್ಯವಲ್ಲ. ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳದಿರುವುದು ಆಡಳಿತ ಮಂಡಳಿಯ ತಪ್ಪು. ಹೀಗಾಗಿ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಆಯೋಗದ ಸದಸ್ಯರು ಕಾಲೇಜಿಗೆ ಭೇಟಿ ನೀಡಿ, ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅವರು ನೀಡುವ ವರದಿಯನ್ನಾಧರಿಸಿದ ಮುಂದಿನ ಕ್ರಮ ಜರುಗಿಸಲಾಗುವುದು'

ಎಚ್.ಆರ್.ಉಮೇಶಾರಾಧ್ಯ,ಅಧ್ಯಕ್ಷರು,ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಸಮಸ್ಯೆಗಳಿಗೆ ಸಾವೊಂದೇ ಪರಿಹಾರವಲ್ಲ

`ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿ ಬಿದ್ದ ಕಾರಣಕ್ಕೆ ಶರಣ್ಯಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇಂತಹ ಸಣ್ಣ ಪುಟ್ಟ ಕಾರಣಗಳಿಗೆ ವಿದ್ಯಾರ್ಥಿಗಳು ಆತ್ಮಹತ್ಯೆಯ ದಾರಿ ಹಿಡಿಯುತ್ತಿರುವುದು ಆಘಾತ ಉಂಟುಮಾಡಿದೆ. ವಿದ್ಯಾರ್ಥಿಗಳಲ್ಲಿ ತಾಳ್ಮೆಯ ಮನೋಭಾವವನ್ನು ಬೆಳೆಸುವ ಅಗತ್ಯವಿದೆ. ಸಮಸ್ಯೆಗಳಿಗೆ ಸಾವೊಂದೇ ಪರಿಹಾರವಲ್ಲ ಎಂಬುದನ್ನು ಅವರು ಅರಿಯಬೇಕಿದೆ' ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಅಧ್ಯಕ್ಷ ವಾಸುದೇವ ಶರ್ಮ ಅಭಿಪ್ರಾಯಪಟ್ಟರು.`ಶಿಕ್ಷಕರೂ ಮಾನವೀಯತೆ ಗುಣವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ನಕಲು ಮಾಡಿದ್ದರೂ ಕೂಡ, ಮೇಲ್ವಿಚಾರಕರು ಏಕಾಏಕಿಯಾಗಿ ಆಕೆಯನ್ನು ಕೊಠಡಿಯಿಂದ ಹೊರ ಕಳುಹಿಸಿದ್ದು ತಪ್ಪು. ಬದಲಾಗಿ ವಿದ್ಯಾರ್ಥಿನಿ ಜತೆ ಸಮಾಲೋಚನೆ ನಡೆಸಬಹುದಿತ್ತು. ಆಕೆಯ ತಪ್ಪನ್ನು ಮನದಟ್ಟು ಮಾಡಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬಹುದಿತ್ತು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry